66 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ! – ಮೇ ತಿಂಗಳಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?
ಬೆಂಗಳೂರು: ರಾಜ್ಯದ ಹಲವೆಡೆ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ರಣ ಮಳೆಗೆ ರಾಜ್ಯದಲ್ಲಿ 8 ಮಂದಿ ಬಲಿಯಾಗಿದ್ದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮಳೆರಾಯನ ಅಬ್ಬರ ಜೋರಾಗಿಯೇ ಇತ್ತು. ಮೇ ತಿಂಗಳಿನಲ್ಲಿ ಸುರಿದ ಮಳೆ ದಾಖಲೆಯನ್ನು ಸೃಷ್ಟಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಸುಮಾರು 30.1 ಸೆಂ.ಮೀ ಮಳೆಯಾಗಿದ್ದು, 66 ವರ್ಷಗಳ ದಾಖಲೆಯನ್ನು ಮುರಿದಿದೆ. ಇದು ಮೇ 1957 ರಲ್ಲಿ ದಾಖಲಾದ 28 ಸೆಂ.ಮೀ.ನ ದೀರ್ಘಾವಧಿಯ ದಾಖಲೆಯನ್ನು ಮುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದತ್ತಾಂಶದಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಮಳೆಗೆ ಭೂಕುಸಿತ ಆತಂಕ -ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಿವಾಸಿಗಳಿಗೆ ಮುನ್ನೆಚ್ಚರಿಕೆ
ಕಳೆದ ಎಂಟು ವರ್ಷಗಳಲ್ಲಿ ಮೇ ತಿಂಗಳ ಸರಾಸರಿ ಮಳೆ 18.5 ಸೆಂ.ಮೀ ಇದೆ. ಕಳೆದ ವರ್ಷ ಅತಿ ಹೆಚ್ಚು ಅಂದ್ರೆ 27 ಸೆಂ.ಮೀ ಮಳೆಯಾಗಿದ್ದು, 2020 ಮತ್ತು 2021ರಲ್ಲಿ ಅತಿ ಕಡಿಮೆ ಅಂದ್ರೆ 13 ಸೆಂ.ಮೀ. ಮಳೆಯಾಗಿತ್ತು. ಈ ವರ್ಷ ಮಾರ್ಚ್ 1 ರಿಂದ ಮೇ 31ರವರೆಗೆ ಬೆಂಗಳೂರು ನಗರದಲ್ಲಿ 343 ಮಿಮೀ ಮಳೆಯಾಗಿದ್ದು, ಸಾಮಾನ್ಯಕ್ಕಿಂತ 173 ಮಿಮೀ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
2015 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ, ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಸುರಿಯುವ ಮಳೆಯು ಸರಾಸರಿ ವರ್ಷಕ್ಕೆ ಒಟ್ಟು 128.7 ಮಿಮೀ ಮಳೆಗಿಂತ ಹೆಚ್ಚಿರುತ್ತದೆ. ಆದರೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿದೆ. ಎಚ್ ಎಎಲ್ ವಿಮಾನ ನಿಲ್ದಾಣದ ಬಳಿ 275 ಮಿ.ಮೀ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 227 ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.