ವಿಂಬಲ್ಡನ್ ಗ್ರ್ಯಾನ್‌ಸ್ಲಾಂ – ಆಲ್ಕರಜ್, ಜೋಕೋವಿಚ್ ಕ್ವಾರ್ಟರ್ ಫೈನಲ್‌ಗೆ, ಭಾರತದ ಹೋರಾಟ ಅಂತ್ಯ
ಜೋಕೋ ಅಮೋಘ ಪ್ರದರ್ಶನ ಕಣ್ತುಂಬಿಕೊಂಡ ವಿರುಷ್ಕಾ ಜೋಡಿ

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಮತ್ತು ವಿಶ್ವ ನಂ.1 ಅರೈನಾ ಸಬಲೆಂಕಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಜೊತೆಗೆ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸರ್ಬಿಯಾದ ನೋವಾಕ್ ಜೋಕೊವಿಚ್ ಅವರು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾಗಿದ್ದಾರೆ.
ಇದನ್ನೂ ಓದಿ:ಎರಡನೇ ಪಂದ್ಯದಲ್ಲಿ ವರ್ಕ್ ಆಗ್ಲಿಲ್ಲ ಬಾಝ್ ಬಾಲ್ ಮಂತ್ರ – ಇಂಗ್ಲೆಂಡ್ ಗೆ ತಿರುಗು ಬಾಣವಾಯ್ತಾ?
ಟೆನಿಸ್‌ನ ಯುವ ಸೂಪರ್‌ಸ್ಟಾರ್, ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಈ ಬಾರಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವ ನಂ.1 ಅರೈನಾ ಸಬಲೆಂಕಾ ಕೂಡಾ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ 22 ವರ್ಷದ ಆಲ್ಕರಜ್ ಅವರು 14ನೇ ಶ್ರೇಯಾಂಕಿತ, ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ 6-7(5/7), 6-3, 6-4, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.
ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸರ್ಬಿಯಾದ ನೋವಾಕ್ ಜೋಕೊವಿಚ್ ಅವರು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದರು. 24 ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದ ದಾಖಲೆಯನ್ನು ಹೊಂದಿರುವ ನೋವಾಕ್ ಜೋಕೊವಿಚ್ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ನಂತರದ ಮೂರು ಸೆಟ್‌ಗಳಲ್ಲಿ ತಮ್ಮ ಶಿಸ್ತು ಬದ್ಧ ಆಟವನ್ನು ಪ್ರದರ್ಶಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು. 16ನೇ ಸುತ್ತಿನ ಪಂದ್ಯದಲ್ಲಿ ನೋವಾಕ್ 1-6, 6-4, 6-4, 6-4 ರಿಂದ ಆಸ್ಟ್ರೇಲಿಯಾ ಆಟಗಾರನನ್ನು 3 ಗಂಟೆ 19 ನಿಮಿಷಗಳ ಆಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು. ಈ ಮೂಲಕ ಏಳನೆ ಬಾರಿಗೆ ಜೋಕೊ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸನ್ ಸಬಲೆಂಕಾ ಪ್ರಾಬಲ್ಯ ಮುಂದುವರಿಸಿದರು. ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 24ನೇ ಶ್ರೇಯಾಂಕಿತೆ, ಬೆಲ್ಜಿಯಂನ ಎಲೈಸ್ ಮೆರ್ಟನ್ಸ್ ವಿರುದ್ಧ 6-4, 7-6(7/4) ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಅಮೆರಿಕದ 13ನೇ ಶ್ರೇಯಾಂಕಿತ ಅಮಂಡಾ ಅನಿಸಿಮೋವಾ ಅವರು ಚೆಕ್ ಗಣರಾಜ್ಯದ 30ನೇ ಶ್ರೇಯಾಂಕಿತ ಲಿಂಡಾ ನೊಸ್ಕೋವಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ಗೇರಿದರು.
ಈ ಬಾರಿ ವಿಂಬಲ್ಡನ್‌ನಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ. ಕಣದಲ್ಲಿದ್ದ ನಾಲ್ವರ ಪೈಕಿ ಯೂಕಿ ಭಾಂಭ್ರಿ ಕೂಡಾ ಸೋಲನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಜಿಯಾಂಗ್ ಕ್ಷಿನ್‌ಯು ಜೊತೆಗೂಡಿ ಕಣಕ್ಕಿಳಿದಿದ್ದ ಭಾಂಭ್ರಿ, ಭಾನುವಾರ ರಾತ್ರಿ ಪ್ರಿ ಕ್ವಾರ್ಟರ್‌ನಲ್ಲಿ ಸೋತರು. ಪುರುಷರ ಡಬಲ್ಸ್‌ನಲ್ಲಿ ಭಾಂಭ್ರಿ-ಅಮೆರಿಕದ ರಾಬರ್ಟ್ ಗ್ಯಾಲೊವೇ ಜೋಡಿಗೆ ಸೋಮವಾರ ಅಂತಿಮ 16ರ ಘಟ್ಟದಲ್ಲಿ ಸೋಲು ಎದುರಾಯಿತು.
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ನೋವಾಕ್ ಜೋಕೋವಿಕ್ ಮತ್ತು ಅಲೆಕ್ಸ್ ಡಿ ಮಿನೌರ್ ಅವರ ನಡುವಿನ ಪಂದ್ಯವನ್ನು ವಿರುಷ್ಕಾ ಜೋಡಿ ವೀಕ್ಷಿಸಿದ್ದಾರೆ. ಇದಕ್ಕೆ ನೊವಾಕ್ ಜೊಕೊವಿಚ್ ಖುಷಿಯಾಗಿದ್ದು ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

