ಜೆಡಿಎಸ್ ಹೆಗಲ ಮೇಲೆ ಬಿಜೆಪಿ ನಡಿಗೆ.. ಮಂಡ್ಯದ ಕಡೆಗೆ! – ಮಂಡ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕೊನೆಯಾಗುತ್ತಾ?

ಜೆಡಿಎಸ್ ಹೆಗಲ ಮೇಲೆ ಬಿಜೆಪಿ ನಡಿಗೆ.. ಮಂಡ್ಯದ ಕಡೆಗೆ! – ಮಂಡ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕೊನೆಯಾಗುತ್ತಾ?

ಸದಾ ಹಸಿರಿನಿಂದ ಕಂಗೊಳಿಸುವ ಮಂಡ್ಯ ಕೇಸರಿಮಯವಾಗಿದೆ. ಇದು ರಾಜಕೀಯವಾಗಿ ಹೊಸ ಅಧ್ಯಾಯಕ್ಕೆ ಬರೆಯುತ್ತಿರುವ ಮುನ್ನುಡಿಯಂತೆಯೇ ಕಂಡರೆ ಅದರಲ್ಲಿ ಬಹುಷಃ ಯಾವುದೇ ತಪ್ಪು ಇರಲಾರದು.. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಛತ್ರಿಯ ಅಡಿಯಲ್ಲಿ ಶುರುವಾಗಿರುವ ಮೈತ್ರಿಯ ಬೀಜವನ್ನು ಮಂಡ್ಯದ ನೆಲದಲ್ಲಿ ಬಿತ್ತಲಾಗುತ್ತಿದೆ.. ಹೀಗೆ ಹಾಕಿದ ಬೀಜ ಗಿಡವಾಗಿ ಬೆಳೆದು ತೆನೆ ಕಟ್ಟಿ ಹೂವಾಗಿ ಅರಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿದೆ.. ಅಲ್ಲಿಗೆ ರಾಜ್ಯದಲ್ಲಿ ಒಂದು ರಾಜಕೀಯ ಪಕ್ಷದ ಅಸ್ತಿತ್ವಕ್ಕೆ ಎದ್ದೇಳಲೂ ಸಾಧ್ಯವಾಗದ ಪೆಟ್ಟು ಬೀಳಬಹುದು.. ಅದು ಹೇಗೆ ಮತ್ತು ಯಾಕೆ ಎನ್ನುವುದರ ವಿವರಣೆ ಇಲ್ಲಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ‘ಕೈ’ ಸೈಲೆಂಟ್ ಗೇಮ್ – ಮತ್ತೊಮ್ಮೆ ಚುನಾವಣೆಗೆ ಧುಮುಕಲು ಮೋಹಕ ತಾರೆ ರಮ್ಯಾ ಪ್ಲ್ಯಾನ್

ಇದು ದೋಸ್ತಿಯ ವಿಷಯವೂ ಹೌದು.. ರಾಜಕೀಯದ ವಿಷಯವೂ ಹೌದು.. ಭವಿಷ್ಯದ ವಿಷಯವೂ ಹೌದು.. ಇದು ಅಸ್ತಿತ್ವವನ್ನೇ ಅಲುಗಾಡಿಸುವ ವಿದ್ಯಮಾನವೂ ಹೌದು..  ರಾಜ್ಯದಲ್ಲಿ ಬಿಜೆಪಿ ಎರಡು ಅವಧಿಗಳಲ್ಲಿ 100ಕ್ಕಿಂತ ಹೆಚ್ಚು ಸೀಟು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗಲೂ ಅದಕ್ಕೆ ಒಂದು ಜಿಲ್ಲೆಯ ಠೇವಣಿ ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.. ಅದು ಸಕ್ಕರೆ ನಾಡು ಮಂಡ್ಯ..  ರಾಜ್ಯ ರಾಜಕೀಯದ ದೃಷ್ಟಿಯಿಂದ ನೋಡಿದಾಗ ರಾಜಕೀಯವ ಅತಿಹೆಚ್ಚು ಪಳಗಿರುವ ಜಿಲ್ಲೆ ಮಂಡ್ಯ.. ಮಂಡ್ಯದ ಜನರ ಸ್ವಾಭಿಮಾನ ಮತ್ತು ದೊಡ್ಡವರನ್ನು ಅಹಂಕಾರವನ್ನು ಹೊಡೆದುರುಳಿಸುವ ರಾಜಕೀಯ ಪ್ರಜ್ಞೆ, ಮಂಡ್ಯದ ನೆಲದಲ್ಲಿ ಅನೇಕ ಸ್ಥಿತ್ಯಂತರಗಳಿಗೆ ಕಾರಣವಾಗಿದೆ.. ಕಾಂಗ್ರೆಸ್‌ಗೆ ಪ್ರತಿಯಾಗಿ, ಜನತಾ ಪಕ್ಷ, ರೈತ ಸಂಘ, ಜನತಾ ದಳ ಮತ್ತು ಕಡೆಗೆ ಜೆಡಿಎಸ್‌ ವರೆಗೆ ರಾಜಕೀಯದ ರಂಗಸ್ಥಳವಾಗಿದ್ದು ಇದೇ ಮಂಡ್ಯ.. ಬಿಜೆಪಿ ರಾಜ್ಯದ ಎಲ್ಲೆಡೆಯಲ್ಲೂ ಎಷ್ಟೇ ವೇಗವಾಗಿ ಬೆಳೆದರೂ ಮಂಡ್ಯದ ಫಲವತ್ತಾದ ಭೂಮಿಯಲ್ಲಿ ಅದ್ಯಾಕೋ ಕಮಲ ಅರಳಿಯೇ ಇರಲಿಲ್ಲ.. ಅಂತ ಮಂಡ್ಯದಲ್ಲಿ ಮೊದಲ ಬಾರಿಗೆ ವಿಧಾನಸಬೆಗೊಬ್ಬ ಬಿಜೆಪಿ ಶಾಸಕ ಪ್ರವೇಶಿಸಿದ್ದು 2019ರಲ್ಲಿ ಆಪರೇಷನ್‌ ಕಮಲದ ಮೂಲಕ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ.. ಹಾಗಿದ್ದರೂ 2023ರಲ್ಲಿ ಮತ್ತೆ ಬಿಜೆಪಿ ಶೂನ್ಯ ಸುತ್ತಿತ್ತು.. ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂಬ ಒಕ್ಕಲಿಗರು ಅನ್ನೋವರೆಗೆ ಹಿಂದೂ ಸಂಘಟನೆಗಳು ಇತಿಹಾಸದ ಹೊಸ ಕತೆಗಳನ್ನು ಹೇಳಿದರೂ ಮಂಡ್ಯದಲ್ಲಿ ಬಿಜೆಪಿಗೆ ಗೆಲ್ಲೋದಿಕ್ಕೆ ಸಾಧ್ಯ ಆಗಿರಲಿಲ್ಲ..

ಅಮಿತ್‌ ಶಾ ಟಾರ್ಗೆಟ್‌ ಹಳೆ ಮೈಸೂರು ಫಲ ಕೊಡುತ್ತಿದೆಯೇ?

ಕಳೆದ ಅಸೆಂಬ್ಲಿ ಚುನಾವಣೆ ವೇಳೆ, ಅಮಿತ್‌ ಶಾ, ಟಾರ್ಗೆಟ್‌ ಹಳೆ ಮೈಸೂರು ಎಂಬ ಟಾಸ್ಕ್‌ ಅನ್ನು ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟಿದ್ದರು.. ಆದರೆ ಮಂಡ್ಯಕ್ಕೂ ತಮ್ಮ ಪಕ್ಷಕ್ಕೂ ಆಗಿ ಬರೋದಿಲ್ಲ ಎಂಬ ಧಾಟಿಯಲ್ಲೇ ರಾಜ್ಯ ಬಿಜೆಪಿ ನಾಯಕರಿದ್ದರು.. ಆದರೆ ಅಮಿತ್‌ ಶಾ ಮಾತ್ರ ಇಟ್ಟ ಗುರಿಯನ್ನು ಬದಲಿಸುವ ರಾಜಕಾರಣಿಯೇ ಅಲ್ಲ.. ಇದರಿಂದಾಗಿಯೇ ಮಂಡ್ಯದಲ್ಲಿ ಭರ್ಜರಿ ಪ್ರಚಾರವನ್ನು ಶಾ ಮಾಡಿದ್ದರು.. ಮೋದಿಯವರು ಕೂಡ ಮಂಡ್ಯದಲ್ಲೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಚಾಲನೆ ಕೊಟ್ಟಿದ್ದರು. ಇದೆಲ್ಲವೂ ಟಾರ್ಗೆಟ್ ಹಳೆ ಮೈಸೂರು ಎನ್ನುವ ಮಿಷನ್‌ನ ಭಾಗವಾಗಿಯೇ ಇತ್ತು.. ಇದರ ಫಲವಾಗಿಯೇ ಈ ಬಾರಿ ಕಾಂಗ್ರೆಸ್‌ ಮಂಡ್ಯ ಜಿಲ್ಲೆಯ 7ರಲ್ಲಿ 5 ಸೀಟು ಗೆದ್ದು, ಒಂದು ಸೀಟಿನಲ್ಲಿ ಕಾಂಗ್ರೆಸ್‌ನ ಬೆಂಬಲದೊಂದಿಗೆ ರೈತ ಸಂಘದ ದರ್ಶನ್‌ ಪುಟ್ಟಣ್ಣಯ್ಯ ಗೆಲುವುದು ಸಾಧಿಸಿದ್ದರು. ಜೆಡಿಎಸ್‌ ಕೇವಲ 1 ಸೀಟಿಗೆ ಸೀಮಿತವಾಯಿತು.. ಈ ರಿಸಲ್ಟ್‌ ನೋಡಿದ್ರೆ ಬಿಜೆಪಿಯ ಅಡ್ರೆಸ್‌ ಇಲ್ಲ ಅಂತ ಅನ್ನಿಸೋದು ಸಹಜ.. ಆದರೆ ಮಂಡ್ಯ ಜಿಲ್ಲೆಯ ವಿಧಾನಸಭಾ ಚುನಾವಣೆಯ ಮತಹಂಚಿಕೆ ವಿವರ ನೋಡಿದರೆ, ಬಿಜೆಪಿ ಈ ಬಾರಿ ಠೇವಣಿ ಉಳಿಸಿಕೊಳ್ಳೋದು ಮಾತ್ರವಲ್ಲ, ಜೆಡಿಎಸ್‌ನ ಗೆಲ್ಲುವ ಕನಸಿಗೆ ಎಳ್ಳು ನೀರು ಬಿಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. ಬಿಜೆಪಿಯ ಈ ಮತಗಳಿಕೆಯೇ, ಕಮಲ ಪಕ್ಷದ ಕಾರ್ಯಕರ್ತರಲ್ಲಿ ವಿಶೇಷ ಉತ್ಸಾಹ ತರಿಸಿತ್ತು..

ವಿಧಾನಸಭೆ ಚುನಾವಣೆಯಲ್ಲಿ ಮಕಾಡೆ ಮಲಗಿದ್ದ ಜೆಡಿಎಸ್‌ ನಾಯಕರಿಗೆ, ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಇನ್ನೊಂದು ರಾಜಕೀಯ ಪಕ್ಷದ ಬೆಂಬಲ ಪಡೆಯುವುದು ಅಗತ್ಯವಾಗಿತ್ತು.. ಹೀಗಾಗಿಯೇ ದಳಪತಿಗಳು ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿದ್ದಾರೆ.. ಇದಾದ ಮೇಲೆ ಬಿಜೆಪಿಯ ಆಪರೇಷನ್‌ ಮಂಡ್ಯ ಜೋರಾಗಿದೆ.. ಜೆಡಿಎಸ್‌ನ ಹೆಗಲ ಮೇಲೆ ಕುಳಿತು ಮಂಡ್ಯದ ಕಡೆಗೆ ಬಿಜೆಪಿಯ ಯಾತ್ರೆ ಹೊರಟಿದೆ. ಅದರ ಮುಂದುವರೆದ ಭಾಗವಾಗಿಯೇ ನಡೀತಿರೋದು ಕೆರಗೋಡಿನ ಹನುಮ ಧ್ವಜ ವಿವಾದ ಎನ್ನುವುದು ಪ್ರತಿಯೊಬ್ಬರಿಗೂ ಅರ್ಥವಾಗುವಂತಹ ರಾಜಕೀಯ ಬೆಳವಣಿಗೆ.

ಮಂಡ್ಯದಲ್ಲಿ ಬಿಜೆಪಿಯ ಕೈ ಹಿಡಿಯುತ್ತಾನಾ ಹನುಮ?

ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಹನುಮನ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ.. ಶ್ರೀರಂಗಮಟ್ಟದ ಕೋಟೆಯ ಒಳಗಿರುವ ಟಿಪ್ಪು ಕಾಲದ ಮಸೀದಿಯನ್ನು ಆಂಜನೇಯನ ದೇಗುಲ ಕೆಡವಿ ಕಟ್ಟಲಾಗಿದೆ ಎನ್ನುವುದು ಸಂಘಪರಿವಾರ ಮಾಡುತ್ತಿರುವ ಆರೋಪ. ಇದೇ ವಿಚಾರ ವರ್ಷದಿಂದ ವರ್ಷಕ್ಕೆ ಧ್ವನಿ ಏರಿಸುತ್ತಾ ಸಾಗಿದೆ.. ಇದರ ನಡುವೆ ಕೆರಗೋಡಿನ ಹನುಮ ಧ್ವಜ ಬಿಜೆಪಿಗೆ ಬಯಸಿದ್ದ ರಾಜಕೀಯ ಅವಕಾಶವನ್ನು ಮನೆಯೆದುರು ತಂದು ನಿಲ್ಲಿಸಿದೆ. ಬಿಜೆಪಿಯ ಕೂಗು ಶುರುಮಾಡುತ್ತಿದ್ದಂತೆ, ಮಿತ್ರ ಪಕ್ಷದ ಬೆಂಬಲಕ್ಕೆ ತೊಡೆ ತಟ್ಟಿ ನಿಂತಿರುವ ಜೆಡಿಎಸ್‌ ನಾಯಕರು ಕೂಡ ಹೆಗಲ ಮೇಲೆ ಕೇಸರಿ ಶಾಲು ಏರಿಸಿಯೇ ಅಖಾಡಕ್ಕೆ ಧುಮುಕಿದ್ದಾರೆ.. ಇಷ್ಟು ದಿನ ಮಂಡ್ಯದಲ್ಲಿ ಹಸಿರು ಟವೆಲ್‌ಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಜೆಡಿಎಸ್‌ ನಾಯಕರ ಸ್ಟೈಲ್‌ ಈಗ ಬದಲಾಗಿದೆ.. ಆದರೆ ಇದು ಮೇಲ್ನೋಟಕ್ಕೆ ಕಾಣುತ್ತಿರುವ ಬದಲಾವಣೆ ಏನೋ ಸರಿ.. ಆದರೆ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿಸಿಕೊಂಡಿರುವ ಮತಗಳಿಕೆ ಮತ್ತು ಈಗ ನಡೆಯುತ್ತಿರುವ ಬೆಳವಣಿಗೆ ಗಮನಿಸಿದ್ರೆ, ಮಂಡ್ಯದಲ್ಲಿ ಒಕ್ಕಲಿಗ ಮತಗಳು ಕಮಲ ಪಕ್ಷದ ಕಡೆಗೆ ವಾಲುವ ಲಕ್ಷಣಗಳು ಕಾಣುತ್ತಿವೆ.. ಕುಮಾರಸ್ವಾಮಿಯವರೇ ಹೆಗಲ ಮೇಲೆ ಕೇಸರಿ ಶಾಲು ಧರಿಸಿ, ಥೇಟ್‌ ಬಿಜೆಪಿ ನಾಯಕರ ರೀತಿಯಲ್ಲೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಅಲ್ಲಿಗೆ ಮಂಡ್ಯದಲ್ಲಿ ಇನ್ನು ಮುಂದೆ ಜೆಡಿಎಸ್‌ನ ಹಸಿರು ಟವೆಲ್‌ಗಿಂತ ಬಿಜೆಪಿಯ ಕೇಸರಿ ಶಾಲು ಹೆಚ್ಚು ಪ್ರಸ್ತುತ ಎಂದು ಕುಮರಾಸ್ವಾಮಿಯವರು ಕೂಡ ಪ್ರತಿಪಾದಿಸಿದಂತೆ ಕಾಣುತ್ತಿದೆ. ಆದರೆ ಬಿಜೆಪಿ ಎಲ್ಲಿ ಹೆಚ್ಚು ಪ್ರಾಬಲ್ಯ ಪಡೆಯುತ್ತಾ ಸಾಗಿದೆಯೋ ಆ ಜಿಲ್ಲೆಗಳಲ್ಲಿ ಜನತಾ ಪರವಾರ ಸಂಪೂರ್ಣ ನೆಲಕಚ್ಚಿರುವ ಉದಾಹರಣೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗೋಚರಿಸುತ್ತಿದೆ.. ಅದೇ ಸಾಲಿಗೆ ಸೇರುವ ಜಿಲ್ಲೆಯ ಸ್ವರೂಪದಲ್ಲಿ ಈಗ ಮಂಡ್ಯವೂ ಕಾಣುತ್ತಿದೆ.. ಮಂಡ್ಯದ ಜನರಿಗೆ ಚಳವಳಿಗೂ ಹೊಸದಲ್ಲ.. ರಾಜಕೀಯದ ಸಂಘರ್ಷವೂ ಹೊಸದಲ್ಲ.. ಆದ್ರೀಗ ಧರ್ಮದ ಸುತ್ತಲಿನ ಸಮರಕ್ಕೆ ಮಂಡ್ಯ ತೆರೆದುಕೊಂಡಿದೆ.. ಇದು ನಿಶ್ಚಿತವಾಗಿ ಮಂಡ್ಯದ ರಾಜಕೀಯ ಚಿತ್ರಣಕ್ಕೆ ಹೊಸ ರೂಪ ಕೊಡುವುದಂತೂ ಸ್ಪಷ್ಟ.. ಬಿಜೆಪಿಯ ದೂರದೃಷ್ಟಿಯ ರಾಜಕೀಯ ದಾಳದ ನಡುವೆ ಕುಮಾರಸ್ವಾಮಿಯವರು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತಾ ಎನ್ನುವುದನ್ನು ನೋಡಬೇಕಿದೆ.

Sulekha