ಸಿಎಂ ಗದ್ದುಗೆಗೆ ಸಿದ್ದರಾಮಯ್ಯ – ಬಿಎಸ್ವೈ, ರಾಮಕೃಷ್ಣ ಹೆಗಡೆಯವರ ದಾಖಲೆ ಮುರಿಯುತ್ತಾರಾ ಸಿದ್ದು?
ಕರ್ನಾಟಕದ ಮಾಸ್ ಲೀಡರ್ ಸಿದ್ದರಾಮಯ್ಯ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 2013 ರಿಂದ 2018ರವರೆಗೂ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದ್ದ ಸಿದ್ದರಾಮಯ್ಯರದ್ದು ಇದು ಸೆಕೆಂಡ್ ಇನ್ನಿಂಗ್ಸ್.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಹಲವು ಮುಖ್ಯಮಂತ್ರಿಗಳ ದಾಖಲೆಗಳನ್ನು ಮುರಿಯಲಿದ್ದಾರೆ. ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ರಾಮಕೃಷ್ಣ ಹೆಗಡೆ ಅವರ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ. ಈ ಬಾರಿ ಎರಡು ವರ್ಷಕ್ಕಿಂತ ಹೆಚ್ಚು ಅಧಿಕಾರ ನಡೆಸಿದರೆ ಅತಿ ಹೆಚ್ಚು ದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದವರಲ್ಲಿ ಸಿದ್ದರಾಮಯ್ಯ ಮೂರನೇ ಸ್ಥಾನಕ್ಕೆ ಏರಲಿದ್ದಾರೆ. ಸದ್ಯ ಸಿದ್ದರಾಮಯ್ಯ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತ್ಯಾಗದ ತೇಪೆ ಹಚ್ಚಿದ ಪರಮೇಶ್ವರ್ – ಎಲ್ಲವೂ ಮುಗಿಯಿತೆಂದು ಸೈಲೆಂಟ್!
ಕರ್ನಾಟಕದ ಸಿಎಂ ಆಗಿ ಅತಿ ಹೆಚ್ಚು ದಿನ ಆಡಳಿತ ನಡೆಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಡಿ. ದೇವರಾಜ ಅರಸು ಅವರು ಇದ್ದಾರೆ. ರಾಜ್ಯದ 9ನೇ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಎರಡು ಪ್ರತ್ಯೇಕ ಅವಧಿಯಲ್ಲಿ 2,790 ದಿನಗಳು ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಬಳಿಕ ಎಸ್.ನಿಜಲಿಂಗಪ್ಪ ಅವರು ಎರಡನೇ ಸ್ಥಾನದಲ್ಲಿದ್ದು 2,729 ದಿನಗಳು ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರು ಕೂಡ ಪ್ರತ್ಯೇಕ ಅವಧಿಯಲ್ಲಿ ಸಿಎಂ ಆಗಿದ್ದರು.
ಇನ್ನು, 1,967 ದಿನ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಆಡಳಿತ ನಡೆಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದು, 1901 ದಿನ ಸಿಎಂ ಆಗಿ ಆಡಳಿತ ನಡೆಸಿರುವ ಬಿ.ಎಸ್ ಯಡಿಯೂರಪ್ಪ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, 1,828 ದಿನ ಸಿಎಂ ಆಗಿದ್ದು ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಸಿದ್ದರಾಮಯ್ಯ ಬಳಿಕ ಎಸ್‌ಎಂ ಕೃಷ್ಣ ಅವರು ಪಟ್ಟಿಯಲ್ಲಿದ್ದು, 1,691 ದಿನ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೆಸಿ ರೆಡ್ಡಿ (1618 ದಿನ), ಕೆಂಗಲ್ ಹನುಮಂತಯ್ಯ (1,603 ದಿನ), ಬಿಡಿ ಜತ್ತಿ (1,393 ದಿನ) ಹಾಗೂ ವೀರೇಂದ್ರ ಪಾಟೀಲ್ (1,337 ದಿನ) ನಂತರದ ಸ್ಥಾನಗಳಲ್ಲಿ ಇದ್ದಾರೆ. ಆದರೆ, ಕಡಿದಾಳ್ ಮಂಜಪ್ಪ ಅವರು ಕೇವಲ 73 ದಿನಗಳ ಕಾಲ ಕರ್ನಾಟಕದ ಸಿಎಂ ಆಗಿ ಆಡಳಿತ ನಡೆಸಿದ್ದರು. ಅರ್ಧಕ್ಕಿಂತ ಹೆಚ್ಚು ಸಿಎಂಗಳು ಎರಡು ವರ್ಷಕ್ಕಿಂತ ಕಡಿಮೆ ಆಡಳಿತ ನಡೆಸಿದ್ದಾರೆ.