ಗುಜರಾತ್ ಟೈಟಾನ್ಸ್ ತಂಡ ತೊರೆಯುತ್ತಾರಾ ಶುಭ್‌ಮನ್ ಗಿಲ್ ? – ಸ್ಟಾರ್ ಕ್ರಿಕೆಟಿಗನಿಗೆ ಇತರೆ ಫ್ರಾಂಚೈಸಿಗಳಿಂದ ಬಂಪರ್ ಆಫರ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭ್‌ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆಯುತ್ತಾರಾ.. ಹೀಗೊಂದು ವಿಚಾರ ಈಗ ಚರ್ಚೆಯಲ್ಲಿದೆ. ಐಪಿಎಲ್ 2024ರ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಗಿಲ್‌ಗೆ ಇತರೆ ಫ್ರಾಂಚೈಸಿಗಳ ಕಡೆಯಿಂದ ಬರುತ್ತಿರುವ ಭರ್ಜರಿ ಆಫರ್.
ಇದನ್ನೂ ಓದಿ: ʼನಟ ಶಾರುಖ್ ರೀಲ್ ದೇವದಾಸ್, ರಾಹುಲ್ ಗಾಂಧಿ ನಿಜ ಜೀವನದಲ್ಲಿ ದೇವದಾಸ್ʼ! – ಬಿಜೆಪಿ ಲೇವಡಿ
ಶುಭ್ಮನ್ ಗಿಲ್‌ಗೆ ಗುಜರಾತ್ ಟೈಟಾನ್ಸ್ ನೀಡುತ್ತಿರುವುದು 8 ಕೋಟಿ ರೂಪಾಯಿ ಮಾತ್ರ. ಆದರೆ ಇಶಾನ್ ಕಿಶನ್ 15.25 ಕೋಟಿ ರೂ., ಶ್ರೇಯಸ್ ಅಯ್ಯರ್ 12.25 ಕೋಟಿ ರೂ. ಸೇರಿದಂತೆ ಕೆಲ ಆಟಗಾರರು 10 ಕೋಟಿಗಿಂತಲೂ ಅಧಿಕ ಮೊತ್ತ ಪಡೆಯುತ್ತಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗಿಲ್ 17 ಇನ್ನಿಂಗ್ಸ್ ಗಳಲ್ಲಿ 890 ರನ್ ಗಳಿಸಿ ಮಿಂಚಿದ್ದರು. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್ ತಲುಪುವಲ್ಲಿ ಗಿಲ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಇತರೆ ಫ್ರಾಂಚೈಸಿಗಳು ಗಿಲ್ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಯುವ ಆಟಗಾರನನ್ನು ಮಿನಿ ಹರಾಜಿಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇತ್ತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಶುಭ್ಮನ್ ಗಿಲ್ ಅವರ ಖರೀದಿಗಾಗಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದರ ನಡುವೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ಯುವ ಆಟಗಾರನ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಒಲಿಯಬಹುದು. ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ಕೂಡ ಯುವ ಆಟಗಾರನನಿಗೆ ಕ್ಯಾಪ್ಟನ್ ಪಟ್ಟ ನೀಡಬಹುದು. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಶುಭ್ಮನ್ ಗಿಲ್ ಐಪಿಎಲ್ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.