3 ಟೀಂ ಬ್ಯಾನ್, 2 ಟೀಂ ಕ್ಯಾನ್ಸಲ್ – IPL ಬ್ಯಾನ್ ಬರೆ RCBಗೆ ಬೀಳುತ್ತಾ?
ಆರ್ಸಿಬಿ ಇಲ್ಲದೇ ಗೆಲ್ಲುತ್ತಾ IPL?

3 ಟೀಂ ಬ್ಯಾನ್, 2 ಟೀಂ ಕ್ಯಾನ್ಸಲ್ –  IPL ಬ್ಯಾನ್ ಬರೆ RCBಗೆ ಬೀಳುತ್ತಾ?ಆರ್ಸಿಬಿ ಇಲ್ಲದೇ ಗೆಲ್ಲುತ್ತಾ IPL?

18 ನೇ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. ಆದ್ರೆ ಕಪ್ ಗೆತ್ತಿ ಹಿಡಿದ ಗಳಿಗೆಯಲ್ಲೇ 11 ಆರ್‌ಸಿಬಿ ಫ್ಯಾನ್ಸ್ ಕಾಲ್ತುಳಿತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಈ ದುರಂತದ ನಂತ್ರ ಆರ್‌ಸಿಬಿ ಟೀಂನ ಬ್ಯಾನ್ ಮಾಡಬೇಕು.. ಆರ್‌ಸಿಬಿ ತಪ್ಪಿನಿಂದಲೇ ಈ ರೀತಿಯ ಘಟನೆ ನಡೆದಿದೆ ಅನ್ನೋ ಮಾತು ಕೇಳಿ ಬರ್ತಿದೆ. ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದೆ. ಆದ್ರೆ ಬ್ಯಾನ್ ಮಾಡೋದು ಅಷ್ಟು ಸುಲಭನಾ? ಅನ್ನೋ ಪ್ರಶ್ನೆ ಕೂಡ ಎದ್ದಿದೆ.   18 ವರ್ಷಗಳಲ್ಲಿ ಐಪಿಎಲ್​ನಲ್ಲಿ ಬರೋಬ್ಬರಿ 15 ತಂಡಗಳು ಕಣಕ್ಕಿಳಿದಿವೆ. ಈ ಹದಿನೈದು ತಂಡಗಳಲ್ಲಿ 3 ಟೀಮ್​​ಗಳು ಬ್ಯಾನ್ ಆದರೆ, 2 ಫ್ರಾಂಚೈಸಿಗಳನ್ನು ರದ್ದುಗೊಳಿಸಲಾಗಿದೆ. ಹಾಗಿದ್ರೆ ಐಪಿಎಲ್​ನಿಂದ ಕಣ್ಮರೆಯಾದ ಆ 5 ತಂಡಗಳಾವುವು ಎಂದು ನೋಡೋಣ…

 ಐಪಿಎಲ್‌ನಿಂದ ಬ್ಯಾನ್ ಆದ ಡೆಕ್ಕನ್ ಚಾರ್ಜರ್ಸ್​

ಚೊಚ್ಚಲ ಐಪಿಎಲ್​ನಲ್ಲಿ ಕಾಣಿಸಿಕೊಂಡ 8 ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಕೂಡ ಒಂದು. ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದ ಡೆಕ್ಕನ್ ಚಾರ್ಜರ್ಸ್ ತಂಡವು 2012ರವರೆಗೆ ಐಪಿಎಲ್​ನಲ್ಲಿ ಕಣಕ್ಕಿಳಿದಿತ್ತು. ಆದರೆ 2012 ರಲ್ಲಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯನ್ನು ಐಪಿಎಲ್ ಆಡಳಿತ ಮಂಡಳಿ ಬ್ಯಾನ್ ಮಾಡ್ತು. ಇದಾದ ಬಳಿಕ ಹೈದರಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ ಸನ್​ ನೆಟ್​ವರ್ಕ್ ಸಂಸ್ಥೆಯು ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಪರಿಚಯಿಸಿದರು.

ಹಣದ ಮುಂದೆ ಕೊಚ್ಚಿ ಹೋದ ಕೊಚ್ಚಿ ಟಸ್ಕರ್ಸ್ ಕೇರಳ  

2011 ರಲ್ಲಿ ಪರಿಚಯಿಸಲಾದ ಹೊಸ ತಂಡಗಳ ಪಟ್ಟಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಕೂಡ ಒಂದು. ಆದರೆ ಮೊದಲ ಸೀಸನ್​ನಲ್ಲೇ ಫ್ರ್ಯಾಂಚೈಸ್ ಶುಲ್ಕದ ಭಾಗವಾಗಿರುವ ಶೇಕಡಾ 10 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಲು ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಮಾಲೀಕರಿಗೆ ಆಗಿಲ್ಲ. ಹೀಗಾಗಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಐಪಿಎಲ್​ನಿಂದ ನಿಷೇಧಿಸಲಾಯಿತು.

2 ವರ್ಷವಿದ್ದ ಪುಣೆ ವಾರಿಯರ್ಸ್ ಇಂಡಿಯಾ

2011 ರಲ್ಲಿ ಐಪಿಎಲ್​ಗೆ ಎಂಟ್ರಿ ಕೊಟ್ಟ ಮತ್ತೊಂದು ತಂಡವೆಂದರೆ ಪುಣೆ ವಾರಿಯರ್ಸ್ ಇಂಡಿಯಾ. ಸಹಾರಾ ಗ್ರೂಪ್ ಸ್ಪೋರ್ಟ್ಸ್ ಲಿಮಿಟೆಡ್ ಒಡೆತನದಲ್ಲಿದ್ದ ಈ ಫ್ರಾಂಚೈಸಿ 2013 ರಲ್ಲಿ  ಹಣಕಾಸಿನ ಸಮಸ್ಯೆಗಳನ್ನು ಎದುರಿಸಿತು. ಹೀಗಾಗಿ 2013ರ ಬಳಿಕ ಪುಣೆ ವಾರಿಯರ್ಸ್ ಇಂಡಿಯಾ ಫ್ರಾಂಚೈಸಿಯನ್ನು ಬಿಸಿಸಿಐ ರದ್ದುಗೊಳಿಸಿತು.

CSK, RR  ಬ್ಯಾನ್‌,  ಗುಜರಾತ್ ಲಯನ್ಸ್‌ಗೆ ಚಾನ್ಸ್   

2016 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಐಪಿಎಲ್​ನಿಂದ ಅಮಾನತುಗೊಂಡ ಪರಿಣಾಮ ಗುಜರಾತ್ ಲಯನ್ಸ್ ತಂಡವನ್ನು ಪರಿಚಯಿಸಲಾಯಿತು. ಅದರಂತೆ ಐಪಿಎಲ್​ನಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಂಡಿದ್ದ ಗುಜರಾತ್ ಲಯನ್ಸ್ ಫ್ರಾಂಚೈಸಿಯನ್ನು CSK ಮತ್ತು RR ತಂಡಗಳ ಮರಳುವಿಕೆಯೊಂದಿಗೆ ಟೂರ್ನಿಯಿಂದ ಕೈ ಬಿಡಲಾಯಿತು. ಮತ್ತೆ 2022ರಲ್ಲಿ ಗುಜರಾತ್ ಹೆಸರಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ಗೆ ಎಂಟ್ರಿ ಕೊಡ್ತು.

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಸಿಎಸ್​ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು 2 ವರ್ಷಗಳ ಕಾಲ ಬ್ಯಾನ್ ಆಗಿದ್ದರಿಂದ ಆ ತಂಡಗಳ ಸ್ಥಾನದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಕಣಕ್ಕಿಳಿಸಲಾಗಿತ್ತು. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಅವರ ಒಡೆತನದಲ್ಲಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫ್ರಾಂಚೈಸಿಯನ್ನು CSK ಮತ್ತು RR ತಂಡಗಳ ಮರಳುವಿಕೆಯೊಂದಿಗೆ ಕೈ ಬಿಡಲಾಯಿತು. ಆದ್ರೆ ಈಗ ಆರ್‌ಸಿಬಿ ಕಪ್ ಗೆದ್ದ ಮೇಲೆ ಕಾಲ್ತುಳಿತವಾಗಿದ್ದು, ಈ ತಂಡವನ್ನೂ ಬ್ಯಾನ್ ಮಾಡಬೇಕು ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೆ ಅದು ಸಾಧ್ಯವೇ ಇಲ್ಲ ಬಿಡಿ. ಆರ್‌ಸಿಬಿ ಇದ್ರೇನೆ ಐಪಿಎಲ್‌ ಅನ್ನೋದು ಇನ್ನೂ ಕೆಲವರ ಮಾತು. ಆರ್‌ಸಿಬಿ ಇಲ್ಲದೇ ಐಪಿಎಲ್ ಯಾವುದೇ ಕಾರಣಕ್ಕೂ ಗೆಲ್ಲೋದಿಲ್ಲ. ಆ ಮಟ್ಟಿಗೆ ಆರ್‌ಸಿಬಿಗೆ ಫ್ಯಾನ್ಸ್ ಇದ್ದಾರೆ. ಆದ್ರೆ ಚಿನ್ನಸ್ವಾಮಿಯ ಘಟನೆ ಆರ್‌ಸಿಬಿಗೆ ಒಂದು ಕಪ್ಪುು ಚುಕ್ಕೆಯಾಗಿದ್ದು ಮಾತ್ರ ನಿಜ.

Kishor KV