ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕ ಗಾಂಧಿ? – ಯಾವ ಕ್ಷೇತ್ರದಿಂದ ಸ್ಪರ್ಧೆ?

ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕ ಗಾಂಧಿ? – ಯಾವ ಕ್ಷೇತ್ರದಿಂದ ಸ್ಪರ್ಧೆ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವ್ರನ್ನ ಕರ್ನಾಟಕದಿಂದಲೇ ಗೆಲ್ಲಿಸಿ ಸಂಸತ್ತಿಗೆ ಕಳಿಸೋಕೆ ಭಾರೀ ತಯಾರಿ ನಡೀತಿದೆ. ಪಕ್ಷದ ಹಿರಿಯ ನಾಯಕರ ಸಭೆಯಲ್ಲೂ ಕೂಡ ಇದನ್ನ ಪ್ರಸ್ತಾಪಿಸಲಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಟಾರ್‌ ಪ್ರಚಾರಕರಾಗಿದ್ದ ಪ್ರಿಯಾಂಕಾಗಾಂಧಿ ಕರ್ನಾಟಕದ 20ಕ್ಕೂ ಹೆಚ್ಚು ಕಡೆ ಚುನಾವಣೆ ಪ್ರಚಾರ ಕೈಗೊಂಡಿದ್ದರು. ರೋಡ್‌ಶೋಗಳನ್ನು ಮಾಡಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದರು. ಮಹಿಳೆಯರಿಗೆ ನೀಡಿ ಗೃಹಲಕ್ಷ್ಮಿ ಗ್ಯಾರಂಟಿಯನ್ನೂ ಅವರೇ ಘೋಷಿಸಿದ್ದರು. ಗ್ಯಾರಂಟಿ ಯೋಜನೆ ಘೋಷಣೆ ಕೂಡ ಫಲ ನೀಡಿತ್ತು. ಪ್ರಿಯಾಂಕಾಗಾಂಧಿ ಅವರ ಜನಪ್ರಿಯತೆಯನ್ನು ಲೋಕಸಭೆ ಚುನಾವಣೆಗೂ ವಿಸ್ತರಿಸುವುದಕ್ಕೆ ಪಕ್ಷದ ನಾಯಕರು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಉತ್ತರ ಪ್ರದೇಶದ ಉಸ್ತುವಾರಿಯಿಂದ ಪ್ರಿಯಾಂಕಾ ಅವರನ್ನು ಕೈಬಿಡಲಾಗಿದೆ. ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ಇದನ್ನು ಪ್ರಿಯಾಂಕಾಗೆ ಹಿಂಬಡ್ತಿ ಅಂತಾ ಟೀಕಿಸಿದ್ರೆ ಕಾಂಗ್ರೆಸ್​ನ ಲೆಕ್ಕಾಚಾರವೇ ಬೇರೆ ಇದೆ. ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಸೋಕೆಂದೇ ಉಸ್ತುವಾರಿ ಹೊಣೆಗಾರಿಕೆಯಿಂದ ಮುಕ್ತ ಮಾಡಲಾಗಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಇಲ್ಲಿ ದಕ್ಷಿಣದಿಂದಲೇ ಪ್ರಿಯಾಂಕಾ ಯಾಕೆ ಸ್ಪರ್ಧಿಸಬೇಕು ಅನ್ನೋ ಚರ್ಚೆಯೂ ನಡೀತಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಸರಿಯಿಲ್ಲ. ಈ ಹಿಂದೆ ಗಾಂಧಿ ಕುಟುಂಬದ ಭದ್ರಕೋಟೆ ಆಗಿದ್ದ ಅಮೇಠಿ ಹಾಗೂ ರಾಯ್‌ಬರೇಲಿ ಈಗ ಸುರಕ್ಷಿತ ಕ್ಷೇತ್ರವಾಗಿ ಉಳಿದಿಲ್ಲ. ಇನ್ನು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾರನ್ನು ಕಣಕ್ಕಿಳಿಸಬೇಕು ಎಂಬ ಆಗ್ರಹ ಇದೆಯಾದರೂ, ಅವರ ಮೊದಲ ಚುನಾವಣೆಯಲ್ಲೇ ಇಂಥ ರಿಸ್ಕ್‌ ತೆಗೆದುಕೊಳ್ಳಲು ಪಕ್ಷದ ಮುಖಂಡರಿಗೆ ಇಷ್ಟವಿಲ್ಲ. ಹೀಗಾಗಿ ಪ್ರಿಯಾಂಕಾ ಅವರನ್ನು ಕಾಂಗ್ರೆಸ್‌ ಆಡಳಿತದಲ್ಲಿರುವ ಕರ್ನಾಟಕ ಅಥವಾ ತೆಲಂಗಾಣದ ಯಾವುದಾದರೂ ಸುರಕ್ಷಿತ ಕ್ಷೇತ್ರದಿಂದ ಕಣಕ್ಕಿಳಿಸಿ ಲೋಕಸಭೆಗೆ ಪದಾರ್ಪಣೆ ಮಾಡಿಸುವುದು ಕಾಂಗ್ರೆಸ್‌ ಉದ್ದೇಶ ಎನ್ನಲಾಗಿದೆ. ಇದೇ ವೇಳೆ ಪ್ರಿಯಾಂಕಾ ಸೋದರ ರಾಹುಲ್‌ ಗಾಂಧಿ ಕೂಡ ದಕ್ಷಿಣ ಭಾರತದ ಕೇರಳ ರಾಜ್ಯದ ವಯನಾಡು ಕ್ಷೇತ್ರದ ಸಂಸದರಾಗಿದ್ದಾರೆ. ಸೋದರ-ಸೋದರಿ ಒಂದೇ ಭಾಗ ಪ್ರತಿನಿಧಿಸಿದರೆ ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಉತ್ತರ ಭಾರತದ ಕ್ಷೇತ್ರವೇ ಒಳಿತು ಎಂಬ ಮಾತೂ ಕಾಂಗ್ರೆಸ್‌ನಲ್ಲಿದೆ.

ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲುಗಳಿಗೂ ಚಾಲನೆ

ಹಾಗೇನಾದ್ರೂ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋಕೆ ಒಪ್ಪಿಕೊಂಡ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಅನ್ನೋ ಚರ್ಚೆಯೂ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿ ನಡೀತಿದೆ. ಪ್ರಿಯಾಂಕಾ ಅಜ್ಜಿ ಇಂದಿರಾ ಹಾಗೂ ಪ್ರಿಯಾಂಕಾ ತಾಯಿ ಸೋನಿಯಾ ಕೂಡ ಕರ್ನಾಟಕದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗ ಅಜ್ಜಿ, ತಾಯಿಯಂತೆ, ಕರ್ನಾಟಕದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ. ಈಗಾಗ್ಲೇ ಕಾಂಗ್ರೆಸ್ ಪಾಳಯದಲ್ಲಿ ಯಾವ ಕ್ಷೇತ್ರ ಬೆಸ್ಟ್ ಅನ್ನೋ ಲೆಕ್ಕಾಚಾರವೂ ಶುರುವಾಗಿದೆ.

ಯಾವ ಕ್ಷೇತ್ರದಲ್ಲಿ ಸ್ಪರ್ಧೆ?

ಪ್ರಿಯಾಂಕಾಗಾಂಧಿ ಅವರನ್ನು ಮೈಸೂರು-ಕೊಡಗು ಅಥವಾ ಚಿಕ್ಕಮಗಳೂರು- ಉಡುಪಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿಸುವ ಲೆಕ್ಕಾಚಾರ ಸ್ಥಳೀಯ ನಾಯಕರಲ್ಲಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಹಿಂದೆ ಪ್ರಿಯಾಂಕಾ ಅಜ್ಜಿ ಇಂದಿರಾಗಾಂಧಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈಗ ಚಿಕ್ಕಮಗಳೂರು ಕ್ಷೇತ್ರ ಉಡುಪಿಯೊಂದಿಗೆ ಹಂಚಿಕೊಂಡಿದೆ. ಕರಾವಳಿ, ಮಲೆನಾಡು ಹಾಗೂ ಅರಮಲೆನಾಡಿನ ಭಾಗವಾಗಿರುವ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಲಾಭವಾಗಬಹುದು ಎನ್ನುವ ಲೆಕ್ಕಚಾರಗಳನ್ನು ಇಟ್ಟುಕೊಳ್ಳಲಾಗಿದೆ. ಇಲ್ಲದಿದ್ದರೆ ಮೈಸೂರಿನಿಂದ ಸ್ಪರ್ಧಿಸಿದರೂ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ ಇಲ್ಲಿಂದಲೂ ಗೆಲ್ಲಿಸಬಹುದು ಎನ್ನುವ ಅಭಿಪ್ರಾಯವನ್ನುತಿಳಿಸಿದ್ದಾರೆ.

ಈಗಾಗ್ಲೇ ಕ್ಷೇತ್ರದ ಆಯ್ಕೆ ವಿಚಾರವಾಗಿ ಸ್ಥಳೀಯ ನಾಯಕರ ಜೊತೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ. ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿದ ನಂತರ ಜನವರಿ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಬಹುದು ಎನ್ನಲಾಗುತ್ತಿದೆ. ಅಲ್ಲದೆ ಕರ್ನಾಟಕ ಕಾಂಗ್ರೆಸ್ ನಾಯಕರು ಈ ಬಾರಿ ಭಾರೀ ನಿರೀಕ್ಷೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದು ಕರ್ನಾಟಕದಲ್ಲಿ ಅಧಿಕಾರ ಹಿಡಿದಿದ್ದು, ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಬೇಕು ಎನ್ನುವ ಗುರಿ ಹೊಂದಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಕೂಡ ಇದ್ದಾರೆ. ಅವರೂ ತವರು ರಾಜ್ಯದಿಂದ ಹೆಚ್ಚು ಸ್ಥಾನ ಗೆಲ್ಲಿಸುವ ಲೆಕ್ಕಾಚಾರ ಹೊಂದಿದ್ದಾರೆ.

ಕರ್ನಾಟಕದಲ್ಲಿ ಗಾಂಧಿ ಕುಟುಂಬದವರು ಕರ್ನಾಟಕದಲ್ಲಿ ಸ್ಪರ್ಧಿಸುವುದು ಹೊಸದೇನೂ ಅಲ್ಲ. 1978ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆ ನೇತೃತ್ವ ಹೊತ್ತ ದೇವರಾಜ ಅರಸ್‌ ಇಲ್ಲಿಂದ ಇಂದಿರಾ ಗೆಲ್ಲುವಂತೆ ನೋಡಿಕೊಂಡಿದ್ದರು. ಆಗ ಇಂದಿರಾಗಾಂಧಿ ಅವರಿಗೆ ಡಿ.ಬಿ.ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟಿದ್ದರು. 1999 ರಲ್ಲಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಬಳ್ಳಾರಿಯಿಂದ ಸೋನಿಯಾಗಾಂಧಿ ಸ್ಪರ್ಧಿಸಿದ್ದರು. ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ ಅಮೇಠಿಯಲ್ಲೂ ಸ್ಪರ್ಧೆ ಮಾಡಿದ್ದರು. ಬಳ್ಳಾರಿಯಲ್ಲಿ ಅವರಿಗೆ ಎದುರಾಳಿಯಾಗಿದ್ದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌. ಆದರೆ ಎರಡೂ ಕ್ಷೇತ್ರದಲ್ಲಿ ಸೋನಿಯಾಗಾಂಧಿ ಗೆದ್ದರು. ಕೊನೆಗೆ ಅಮೇಠಿ ಕ್ಷೇತ್ರ ಉಳಿಸಿಕೊಂಡು ಬಳ್ಳಾರಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಸದ್ಯ 2023ರ ವಿಧಾನಸಭಾ ಚುನಾವಣೆ ಗೆದ್ದಂತೆಯೇ ಲೋಕಸಭೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲೋದು ಕಾಂಗ್ರೆಸ್ ಪ್ಲ್ಯಾನ್. ಇದೇ ಕಾರಣಕ್ಕೆ ಸಿದ್ದರಾಮಯ್ಯ, ಡಿಕೆಶಿ ಸಹಿತ ಹಿರಿಯ ನಾಯಕರಿಗೆ ಟಾಸ್ಕ್‌ ನೀಡಿ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚಾದರೂ ಪಡೆಯಬೇಕು ಎನ್ನುವ ಕಾರ್ಯಯೋಜನೆಯನ್ನು ರೂಪಿಸಿಕೊಂಡಿದೆ. ಇದರಲ್ಲಿ ಪ್ರಿಯಾಂಕಾಗಾಂಧಿ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸುವುದೂ ಸೇರಿದೆ. ಆದ್ರೆ ಈ ಪ್ಲ್ಯಾನ್ ವರ್ಕೌಟ್ ಆಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.

Shwetha M