ಪ್ರತಾಪ್ ಸಿಂಹ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? – ಗಟ್ಟಿ ಪಿಂಡ ನಾನು ಎಂದು ಸಿಂಹ ಘರ್ಜಿಸಿದ್ದೇಕೆ?

ಪ್ರತಾಪ್ ಸಿಂಹ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? – ಗಟ್ಟಿ ಪಿಂಡ ನಾನು ಎಂದು ಸಿಂಹ ಘರ್ಜಿಸಿದ್ದೇಕೆ?

ಬಿಜೆಪಿಯ ಫೈರ್ ಬ್ರ್ಯಾಂಡ್, ಹಿಂದುತ್ವದ ಲೀಡರ್ ಅಂತಾನೇ ಕರೆಸಿಕೊಳ್ತಿದ್ದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಿಲ್ಲವಾದ್ರೂ ಪ್ರತಾಪ್ ಸಿಂಹಗೂ ಈ ಸತ್ಯ ಗೊತ್ತಾಗಿದೆ. ಇದೇ ಕಾರಣಕ್ಕೆ ಸ್ವಪಕ್ಷೀಯರ ವಿರುದ್ಧವೇ ಕೆರಳಿ ಕೆಂಡವಾಗಿರೋ ಸಂಸದರು ಯದುವೀರ್ ಒಡೆಯರ್ ವಿರುದ್ಧವೂ ಬೆಂಕಿಯುಗುಳಿದ್ದಾರೆ. ಅಲ್ಲದೆ ನನಗೆ ಜನಬಲ ಇದೆ ಅನ್ನೋ ಮೂಲಕ ತಮ್ಮ ಮುಂದಿನ ನಡೆ ಬಗ್ಗೆಯೂ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ಪ್ರತಾಪ್ ಸಿಂಹ ಸ್ವಪಕ್ಷೀಯರ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ..? ಪಕ್ಷೇತರವಾಗಿ ಕಣಕ್ಕೀಳೀತಾರಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ:ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತಾ? – ಸಿಂಹ ಮಾಡಿರುವ ಮೂರು ತಪ್ಪುಗಳು ಇದಕ್ಕೆ ಕಾರಣನಾ..!

ಮೈಸೂರು ಕೊಡಗು ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಮಿಸ್ ಆಗಲಿದೆ. ಹಾಗೇ ಟಿಕೆಟ್ ಅನ್ನು ರಾಜವಂಶಸ್ಥ ಯದುವೀರ್ ಒಡೆಯರ್​ ನೀಡಲಾಗುತ್ತೆ ಎನ್ನಲಾಗಿದೆ. ಇದಕ್ಕೆ ಸಿಟ್ಟಾಗಿರುವ  ಸಿಂಹ, ಯದುವೀರ್ ಅವರಿಗೆ ಟಿಕೆಟ್ ಕೊಟ್ಟರೆ ಸ್ವಾಗತಿಸುತ್ತೇನೆ. ಎಸಿ ರೂಮ್‌ ಬಿಟ್ಟು ಪ್ರಜೆಗಳ ರೀತಿ ಬದುಕಲು ಬಂದರೆ ಸ್ವಾಗತ ಅಂತಾ ಟಾಂಗ್ ಕೊಟ್ಟಿದ್ದಾರೆ. ನಾನು ಬ್ಯಾನರ್, ಬಂಟಿಂಗ್ಸ್ ಕಟ್ಟಲೂ ಸಿದ್ಧನಿದ್ದೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡ್ತಿನಿ ಅಂತಾ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ. 25 ಸಂಸದರಲ್ಲಿ ನನ್ನಷ್ಟು ಹಿಂದುತ್ವದ ಕಮಿಟ್​ಮೆಂಟ್ ಇರುವವರು ಬೇರೆ ಯಾರಿದ್ದಾರೆ.? ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರು ಟಚ್ ಮಾಡಲು ಆಗಲ್ಲ. ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು – ಕೊಡಗು ಅಭಿವೃದ್ಧಿಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ? ಎಂದು ಪ್ರಶ್ನಿಸಿದ್ದಾರೆ. ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ? ರಾಜ-ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆ ಜೊತೆ ಇರಲು ಬಂದರೆ ನನ್ನ ಸ್ವಾಗತ ಎಂದು ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಮೈಸೂರು & ಕೊಡಗು ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ & ಜೆಡಿಎಸ್ ನಡುವೆ ನೇರವಾದ ಸ್ಪರ್ಧೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮೈಸೂರು ಮತ್ತು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಾಗಿದೆ. 2014ರಲ್ಲಿ ಪ್ರಧಾನಿ ಮೋದಿ ಹವಾ ಇದ್ದ ಸಮಯದಲ್ಲಿ ಪ್ರತಾಪ್ ಸಿಂಹ ಇಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದರು. 2019ರಲ್ಲಿ ಕೂಡ ಈ ಕ್ಷೇತ್ರದಿಂದ ಸುಲಭವಾಗಿ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದ ಪ್ರತಾಪ್ ಸಿಂಹಗೆ ಈಗ ದೊಡ್ಡ ಟಾಸ್ಕ್ ಎದುರಾಗಿದೆ. ಪ್ರತಾಪ್ ಸಿಂಹ ಜಾಗಕ್ಕೆ ಈಗ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂಟ್ರಿ ಆಗಿದೆ. ಯದುವೀರ್ ಅವರ ಆಯ್ಕೆಯಿಂದ ಬಿಜೆಪಿ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಕೂಡ ಲಾಭವಾಗುವ ನಿರೀಕ್ಷೆ ಇದೆ. ಆದ್ರೆ ಟಿಕೆಟ್ ಕೈ ತಪ್ಪಿದ್ರೆ ಪ್ರತಾಪ್ ಸುಮ್ಮನೆ ಇರ್ತಾರಾ ಅನ್ನೋದೇ ಪ್ರಶ್ನೆ.

ಮೈಸೂರು ಕೊಡಗು ಕ್ಷೇತ್ರದಲ್ಲಿ ಈಗಾಗ್ಲೇ ಪ್ರತಾಪ್ ಸಿಂಹ ಎರಡು ಬಾರಿ ಜಯ ಗಳಿಸಿದ್ದಾರೆ. ಅಲ್ಲದೆ ಬಿಜೆಪಿ ಫೈರ್ ಬ್ರ್ಯಾಂಡ್, ಹಿಂದುತ್ವದ ಕಟ್ಟಾಳು ಎಂದೇ ಕರೆಸಿಕೊಂಡಿದ್ದಾರೆ. 2014ರಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದ ಪ್ರತಾಪ್ ಸಿಂಹ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 2019 ರಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ಮತ ಪಡೆದು 2ನೇ ಸಲ ಎಂಪಿಯಾಗಿ ಸೆಲೆಕ್ಟ್ ಆಗಿದ್ದರು.  ಇದೀಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ ಹೀಗಾಗಿ ಪ್ರತಾಪ್ ಸಿಂಹ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆ ಕೂಡ ಬಲವಾಗಿದೆ. ಅಲ್ದೇ ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಯಾರು ತಲೆ ಕಡೆಸಿಕೊಳ್ಳಬೇಡಿ. ಗಟ್ಟಿ ಪಿಂಡ ನಾನು. ಕೈ ಮುಗಿದು ಬೇಡಿಕೊಳ್ಳುತ್ತೇನೆ ಲೀಡರ್‌ಗಳ ಹಿಂದೆ ಹೋಗಬೇಡಿ. ಪಕ್ಷದ ಜತೆ ಹೋಗಿ. ಅಪಪ್ರಚಾರ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಬಗ್ಗೆಯೂ ಹಿಂಟ್ ಕೊಟ್ಟಿದ್ದಾರೆ.

ಬಿಜೆಪಿ ಪಕ್ಷದ ನಾಯಕರು ಹಾಗೂ ಯದುವೀರ್ ಒಡೆಯರ್ ಬಗ್ಗೆ ಇಷ್ಟೆಲ್ಲಾ ಮಾತನಾಡಿದ್ರೂ ಪ್ರತಾಪ್ ಕೊನೆಗೆ, ಟಿಕೆಟ್ ಕೈ ತಪ್ಪಿದರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಅನ್ನೋದನ್ನ ಮರೆತಿಲ್ಲ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್ ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆಂದು ಹೇಳುವ ಮೂಲಕ ಟಿಕೆಟ್ ಕೈ ತಪ್ಪಿರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಒಟ್ನಲ್ಲಿ ಪ್ರತಾಪ್ ಸಿಂಹ ಅವರ ಸ್ಪರ್ಧೆ ಹಾಗೂ ಮೈಸೂರು & ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗಲು ಇನ್ನೂ ಒಂದೆರಡು ದಿನ ಕಾಯಬೇಕಿದೆ. ಯಾಕಂದ್ರೆ ಬಿಜೆಪಿ ಈಗ ತನ್ನ 2ನೇ ಪಟ್ಟಿ ಪ್ರಕಟಿಸಲಿದ್ದು, ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದೆ. ಹಾಗೇ ಜೆಡಿಎಸ್ ಪಕ್ಷಕ್ಕೆ ಸಿಗಲಿರುವ ಸ್ಥಾನಗಳ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗುತ್ತದೆ.

 

 

Sulekha