ಮತ್ತೆ NDA ಸೇರಿಕೊಳ್ತಾರಾ ನಿತೀಶ್ ಕುಮಾರ್? – ಜೆಡಿಯು-ಆರ್ ಜೆಡಿ ಮೈತ್ರಿಯಲ್ಲೂ ಬಿರುಕು?
ಲೋಕಸಭೆ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ರಾಷ್ಟ್ರ ರಾಜಕೀಯದಲ್ಲಿ ಈಗಾಗ್ಲೇ ಸಾರ್ವತ್ರಿಕ ಚುನಾವಣೆಯ ಕಿಚ್ಚು ಹೊತ್ತಿಕೊಂಡಿದೆ. ಎರಡು ಮೈತ್ರಿಕೂಟಗಳ ಮಧ್ಯೆ ಮಹಾಸಮರ ನಡೀತಾ ಇದೆ. ಎನ್ಡಿಎ ಮತ್ತು ಇಂಡಿಯಾ ಅಲಾಯನ್ಸ್ ಈಗಾಗ್ಲೇ ಚುನಾವಣಾ ತಯಾರಿ ಶುರು ಮಾಡಿಕೊಂಡಿವೆ. ಈ ಬಾರಿ ಮೋದಿಯನ್ನ ಮತ್ತೆ ಅಧಿಕಾರಕ್ಕೇರೋಕೆ ಬಿಡಲೇಬಾರದು ಅಂತ 2023ರ ಜುಲೈ 18ರಂದು ವಿಪಕ್ಷಗಳೆಲ್ಲಾ ಸೇರಿಕೊಂಡು ಇಂಡಿಯಾ ಹೆಸರಲ್ಲಿ ಮಹಾಮೈತ್ರಿಯನ್ನ ಮಾಡಿಕೊಂಡಿವೆ. ಮೈತ್ರಿಕೂಟ ರಚನೆಯಾಗಿ ವರ್ಷವಾಗುತ್ತಾ ಬಂದ್ರೂ ಇನ್ನೂ ಕೂಡ ಮಹಾಮೈತ್ರಿಯಲ್ಲಿ ಒಮ್ಮತ ಮೂಡಿಲ್ಲ.. ಮೈತ್ರಿ ನಾಯಕರೆಲ್ಲರೂ ಸಂಪೂರ್ಣವಾಗಿ ಒಟ್ಟಾಗಿಲ್ಲ.. ಸೀಟು ಹಂಚಿಕೆಯೂ ಫೈನಲ್ ಆಗಿಲ್ಲ. ಇಂಡಿಯಾ ಮೈತ್ರಿಕೂಟ ಅನ್ನೋದು ಗೊಂದಲದ ಗೂಡಾಗಿಬಿಟ್ಟಿದೆ. ಚುನಾವಣೆ ಹತ್ತಿರವಾಗುತ್ತಲೇ ಇನ್ನಷ್ಟು ಒಗ್ಗಟ್ಟು ಪ್ರದರ್ಶನ ಮಾಡೋದು ಬಿಟ್ಟು, ಮೈತ್ರಿಕೂಟದಲ್ಲಿ ದಿನಕಳೆದಂತೆ ಒಡಕು ಮೂಡ್ತಾ ಇದೆ. ವಿಪಕ್ಷಗಳ ಮೈತ್ರಿ ಮನೆಯ ಗೋಡೆಯಲ್ಲಿ ಈಗಾಗ್ಲೇ ಹಲವು ಬಿರುಕುಗಳಾಗಿವೆ. ಅದ್ರಲ್ಲೂ ಇಂಡಿಯಾ ಮೈತ್ರಿಕೂಟದ ಇಬ್ಬರು ಪ್ರಬಲ ನಾಯಕರು ಎಲ್ಲಿ ಕೈ ಎತ್ತಿ ಬಿಡ್ತಾರೋ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ರೆ ಆ ಇಬ್ಬರು ನಾಯಕರು ಯಾರು? ಇಂಡಿಯಾ ಮೈತ್ರಿಕೂಟ ಈಗ ಎತ್ತ ಸಾಗ್ತಾ ಇದೆ? ಆಂತರಿಕವಾಗಿ ಏನೆಲ್ಲಾ ಸಮಸ್ಯೆ ಎದುರಿಸ್ತಾ ಇದೆ? ಚುನಾವಣೆ ವೇಳೆಗೆ ಏನಾಗಬಹುದು? ಇವೆಲ್ಲದರ ಬಗ್ಗೆಯೂ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ ಜೋಡೋ ನ್ಯಾಯ ಯಾತ್ರೆಗೆ ಬೀಳುತ್ತಾ ಬ್ರೇಕ್? – ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದಿಂದ ಪ್ರವೇಶ ನಿರಾಕರಣೆ
ಬಿಹಾರ ಸಿಎಂ ನಿತೀಶ್ ಕುಮಾರ್ರಷ್ಟು ದೊಡ್ಡ ಜಂಪಿಂಗ್ ಮಾಸ್ಟರ್ ರಾಷ್ಟ್ರ ರಾಜಕೀಯದಲ್ಲಿ ಸದ್ಯಕ್ಕೆ ಇನ್ಯಾರು ಕೂಡ ಇಲ್ಲ. ರಾಜಕೀಯದಲ್ಲೇನಾದ್ರೂ ಹೈಜಂಪ್ ಸ್ಪರ್ಧೆ ಇಟ್ರೆ ಅಲ್ಲಿ ಗೋಲ್ಡ್ ಮೆಡಲ್ ಸಿಗೋದು ನಿತೀಶ್ ಕುಮಾರ್ ಸಾಹೇಬ್ರಿಗೇನೆ. ಈಗಾಗ್ಲೇ ಒಟ್ಟು 5 ಬಾರಿ ಒಂದು ಮೈತ್ರಿಕೂಟದಿಂದ ಇನ್ನೊಂದು ಮೈತ್ರಿಕೂಟಕ್ಕೆ ಹೈಜಂಪ್ ಮಾಡಿರೋ ನಿತೀಶ್ ಕುಮಾರ್ ಈಗ ಮತ್ತೊಂದು ಜಿಗಿತಕ್ಕೆ ಸಜ್ಜಾಗ್ತಾ ಇದ್ದಾರಾ ಅನ್ನೋ ಅನುಮಾನ ಎದ್ದಿದೆ. ತಮ್ಮ ಅಧಿಕಾರಕ್ಕೆ, ಕುರ್ಚಿಗೆ ಕಂಟಕ ಎದುರಾಗ್ತಿದೆ ಅನ್ನೋವಷ್ಟರಲ್ಲೇ ನಿತೀಶ್ ಕುಮಾರ್ ಕೋರ್ಟ್ ಚೇಂಜ್ ಮಾಡಿಬಿಡ್ತಾರೆ. ಯಾರ ಜೊತೆಗೆ ಸೇರಿಕೊಳ್ಳೋಕೂ ರೆಡಿ, ಪವರ್ ನನ್ನ ಕೈಯಲ್ಲಿರಬೇಕು ಅನ್ನೋದೆ ನಿತೀಶ್ ಕುಮಾರ್ರ ರಾಜಕೀಯ ಮಂತ್ರ. ಪ್ರತಿ ಬಾರಿ ಲೋಕಸಭೆ ಚುನಾವಣೆ ಬಂತು ಅನ್ನೋವಾಗ ನಿತೀಶಣ್ಣ ಪ್ಲೇಟ್ ಬದಲಾಯಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ನಿಂತು, ಪ್ರಚಾರದುದ್ದಕ್ಕೂ ಮೋದಿಯನ್ನ ವಿರೋಧಿಸಿದ್ದ ನಿತೀಶ ಕುಮಾರ್ 2019ರಲ್ಲಿ ಪ್ರಧಾನಿ ಮೋದಿಗೆ ಸಂಪೂರ್ಣ ಸಪೋರ್ಟ್ ಮಾಡಿದ್ರು. ಬಳಿಕ ಬಿಜೆಪಿ ಜೊತೆಗೂಡಿ ಬಿಹಾರದಲ್ಲಿ ಸಿಎಂ ಆಗಿದ್ರು. ಆದ್ರೆ ಕೆಲ ಸಮಯದಲ್ಲೇ ಮೈತ್ರಿ ಮುರಿದುಕೊಂಡು ಅಲ್ಲಿವರೆಗೆ ತಮ್ಮ ಎದುರಾಳಿಯಾಗಿದ್ದ ಲಾಲೂ ಯಾದವ್ ಜೊತೆ ಕೈಜೋಡಿಸಿದ್ರು. ನಂತರ ಇಂಡಿಯಾ ಮೈತ್ರಿಕೂಟದಲ್ಲೂ ಪ್ರಮುಖ ಲೀಡರ್ ಆಗಿ ಗುರುತಿಸಿಕೊಂಡಿದ್ರು. ಇದೀಗ ಲೋಕಸಭೆ ಚುನಾವಣೆ ಹತ್ತಿ ಬರ್ತಿದ್ದ ಹಾಗೆ, ನಿತೀಶ್ ಕುಮಾರ್ ತಲೆಯಲ್ಲಿ ಇನ್ನೇನೋ ಓಡ್ತಾ ಇದೆ. ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇಂಡಿಯಾ ಮೈತ್ರಿಕೂಟದೊಳಗಿದ್ರೂ ನಿತೀಶ್ ಕುಮಾರ್ ಆ್ಯಕ್ಟಿವಿಟಿ ಮಾತ್ರ ಅಷ್ಟಕ್ಕಷ್ಟೇ. ಫಸ್ಟ್ ಆಫ್ ಆಲ್ ಮೈತ್ರಿಕೂಟಕ್ಕೆ ಇಂಡಿಯಾ ಅಂತಾ ಹೆಸರಿಟ್ಟಿರೋದೆ ನಿತೀಶ್ಗೆ ಸಮಾಧಾನವಿಲ್ಲ. ಹಾಗೆಯೇ ಇತ್ತೀಚೆಗಷ್ಟೇ ಇಂಡಿಯಾ ಮೈತ್ರಿಕೂಟದ ಸಂಚಾಲಕರಾಗೋಕೂ ನಿತೀಶ್ ಕುಮಾರ್ ನಿರಾಕರಿಸ್ತಾರೆ. ನಿತೀಶ್ ಕುಮಾರ್ರನ್ನ ಸಂಚಾಲಕರನ್ನಾಗಿ ಮಾಡೋ ಬಗ್ಗೆ ಮಮತಾ ಬ್ಯಾನರ್ಜಿಗೂ ಸಮ್ಮತಿ ಇರಲಿಲ್ಲ ಅನ್ನೋ ಮಾಹಿತಿ ಇದೆ. ಹೀಗಾಗಿ ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆಗೆ ಹೆಗಲಿಗೆ ಇಂಡಿಯಾ ಮೈತ್ರಿಕೂಟದ ನೇತೃತ್ವ ವಹಿಸಲಾಗಿದೆ. ಆದ್ರೆ ಈಗ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ನಡುವೆಯೂ ಹೆಚ್ಚು ಕಡಿಮೆಯಾಗ್ತಿರುವಂತೆ ಕಾಣ್ತಿದೆ. ಯಾಕಂದ್ರೆ ರಾಹುಲ್ ಗಾಂಧಿ 2ನೇ ಹಂತದ ಯಾತ್ರೆ ಕೈಗೊಂಡಿದ್ದು, ಬಿಹಾರಕ್ಕೆ ಕೂಡ ತೆರಳಲಿದ್ದಾರೆ. ಆದ್ರೆ ನಿತೀಶ್ ಕುಮಾರ್ ಅವರು ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಅಂತಾ ಕಾಂಗ್ರೆಸ್ ಆರೋಪಿಸಿದೆ. ಆದ್ರೆ ಕಾಂಗ್ರೆಸ್ ಆರೋಪವನ್ನ ಜೆಡಿಯು ತಿರಸ್ಕರಿಸಿದ್ದು, ರಾಹುಲ್ ಗಾಂಧಿ ಯಾತ್ರೆಗೆ ನಿತೀಶ್ ಕುಮಾರ್ರನ್ನ ಆಹ್ವಾನಿಸಿಯೇ ಇಲ್ಲ ಅಂತಾ ಹೇಳ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜೆಡಿಯು ಮತ್ತು ಕಾಂಗ್ರೆಸ್ ಮಧ್ಯೆ ಏನು ಬೇಕಾದ್ರೂ ಬೆಳವಣಿಗೆಗಳಾಗಬಹುದು.
ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ನಿತೀಶ್ ಕುಮಾರ್ ತಮ್ಮ ಹಳೇ ದೋಸ್ತಿ, ಹಳೇ ವಿರೋಧಿ ಲಾಲೂ ಯಾದವ್ ನೇತೃತ್ವದ ಆರ್ಜೆಡಿ ಜೊತೆಗೆ 2022ರಲ್ಲಿ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚಿಸಿದ್ರು. ನಿತೀಶ್ ಕುಮಾರ್ ಸಿಎಂ, ಲಾಲೂ ಪುತ್ರ ತೇಜಸ್ವಿ ಯಾದವ್ ಡಿಸಿಎಂ ಆಗಿದ್ದಾರೆ. ಆದ್ರೆ, ಹೊರಗಿಂದ ಎಲ್ಲವೂ ಚೆನ್ನಾಗಿದ್ರೂ ಒಳಗೊಳಗೆ ಈ ಮೈತ್ರಿಯಲ್ಲೂ ಒಂದಷ್ಟು ಹುಳುಕುಗಳಿವೆ. ಅದ್ರಲ್ಲೂ ಲೋಕಸಭೆ ಚುನಾವಣೆ ಹತ್ತಿರವಾಗುತ್ತಲೇ ಈ ಹುಳುಕು ಇನ್ನಷ್ಟು ಜಿನುಗೋಕೆ ಶುರುವಾಗಿದೆ. ಸರ್ಕಾರದ ಮೇಲೆ ಲಾಲೂ ಪ್ರಸಾದ್ ಯಾದವ್ ಹಿಡಿತ ಸಾಧಿಸೋಕೆ ನೋಡ್ತಾ ಇದ್ದಾರೆ. ಆರ್ಜೆಡಿ ಡಾಮಿನೇಟ್ ಮಾಡೋ ಪ್ರಯತ್ನ ಮಾಡ್ತಾ ಇದೆ ಅಂತಾ ಕೆಲ ಜೆಡಿಯು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ 2024ರ ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯನ್ನೂ ನಡೆಸೋ ವಿಚಾರದಲ್ಲಿ ನಿತೀಶ್ ಕುಮಾರ್ ಅವರು ಆರ್ಜೆಡಿ ಮೇಲೆ ಒತ್ತಡ ಹೇರ್ತಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಲೋಕಸಭೆ ಜೊತೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಸಿದ್ರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನ ಗೆಲ್ಲಬಹುದು. ಪಾರ್ಟಿಯನ್ನ ಇನ್ನಷ್ಟು ಬಲಪಡಿಸಬಹುದು ಅನ್ನೋದು ಜೆಡಿಯು ಲೆಕ್ಕಾಚಾರವಂತೆ. ಯಾಕಂದ್ರೆ 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ 79 ಕ್ಷೇತ್ರಗಳಲ್ಲಿ ಗೆದ್ದಿತ್ತು. ಜೆಡಿಯು ಕೇವಲ 45 ಸ್ಥಾನಗಳನ್ನಷ್ಟೇ ಪಡೆದುಕೊಂಡಿತ್ತು. ನಿಗದಿ ಪ್ರಕಾರ 2025ರ ಅಕ್ಟೋಬರ್-ನವೆಂಬರ್ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಬೇಕು. ಆದ್ರೆ ಜೆಡಿಯು ಮಂದಿ ಅವಧಿ ಪೂರ್ವ ಚುನಾವಣೆಗೂ ಒತ್ತಡ ಹೇರ್ತಿದ್ದಾರಂತೆ. ಇದ್ರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಜೆಡಿಯು ಮತ್ತು ಆರ್ಜೆಡಿ ಮಧ್ಯೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಜೆಡಿಯು ಮತ್ತು ಆರ್ಜೆಡಿ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿ ಒಮ್ಮತ ಮೂಡುತ್ತಾ ಅನ್ನೋದು ಕೂಡ ಗ್ಯಾರಂಟಿ ಇಲ್ಲ. ಪರಿಸ್ಥಿತಿ ಹೀಗಿರೋವಾಗಲೇ ಜನವರಿ 23ರಂದು ಸಿಎಂ ನಿತೀಶ್ ಕುಮಾರ್ ದಿಢೀರ್ ಅಂತಾ ರಾಜ್ಯಪಾಲರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದು ಅನುಮಾನದ ಹೊಗೆ ಮತ್ತಷ್ಟು ದಟ್ಟವಾಗ್ತಾ ಇದೆ.