NZ ವಿರುದ್ಧ IND ಕ್ಲೀನ್ ಸ್ವೀಪ್? – ಬುಮ್ರಾ ಔಟ್.. ರಾಹುಲ್ ಎಂಟ್ರಿ?
3ನೇ ಮ್ಯಾಚ್ ಸೋತ್ರೆ ನಿವೃತ್ತಿ ಯಾರು?
ಕ್ರಿಕೆಟ್ ಲೋಕದ ಬಲಿಷ್ಠ ಟೀಂ ಆಗಿರೋ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಸರಣಿ ಸೋಲು ಕಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸಿರೀಸ್ ಕೈಚೆಲ್ಲಿಕೊಂಡಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಪ್ಲ್ಯಾನ್ ಫ್ಲಾಪ್ ಆಗಿದ್ದು, ಇದೀಗ ಕಿವೀಸ್ ಪಡೆ ವಿರುದ್ಧ ಕ್ಲೀನ್ ಸ್ವೀಪ್ ಆಗುವ ಟೆನ್ಷನ್ ಶುರುವಾಗಿದೆ. ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡು ನಾಲ್ಕು ವರ್ಷಗಳೇ ಕಳೆದಿದೆ. 2020ರ ಬಳಿಕ ಒಂದೇ ಒಂದು ಸರಣಿಯಲ್ಲೂ ವೈಟ್ವಾಷ್ ಆಗಿಲ್ಲ. ಆದ್ರೀಗ ನಮ್ಮದೇ ನೆಲದಲ್ಲಿ ಇಂಥಾದ್ದೊಂದು ಮುಖಭಂಗ ಅನುಭವಿಸೋ ಆತಂಕ ಎದುರಾಗಿದೆ. ಅಷ್ಟಕ್ಕೂ ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ಸೋಲಿನ ಭೀತಿ ಎದುರಾಗಿದ್ದೇಕೆ? ಆಟಗಾರರ ಆಯ್ಕೆಯಲ್ಲಿ ಎಡವಿತಾ ಬಿಸಿಸಿಐ? ಟಾಮ್ ಲ್ಯಾಥಮ್ ನೇತೃತ್ವದ ತಂಡದ ಸ್ಟ್ರಾಟಜಿ ವರ್ಕೌಟ್ ಆಗ್ತಿದ್ಯಾ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಡಾ ಮಾಜಿ ಆಯುಕ್ತ ಮನೆ ಮೇಲೆ ಇಡಿ ದಾಳಿ – ವಾಕಿಂಗ್ ಮಾಡುತ್ತಿದ್ದ ಅಧಿಕಾರಿ ಪರಾರಿ
ಬಲಿಷ್ಠ ಭಾರತ ತಂಡವನ್ನ ಅವ್ರದ್ದೇ ತವರಿನಲ್ಲಿ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳಲ್ಲಿ ಸೋಲಿಸುವಲ್ಲಿ ಕಿವೀಸ್ ಪಡೆ ಸಕ್ಸಸ್ ಆಗಿದೆ. ಎರಡೂ ಪಂದ್ಯಗಳಲ್ಲಿ ಫೇಲ್ಯೂರ್ ಆಗಿದ್ದ ಭಾರತ ಇದೀಗ ಮೂರನೇ ಮ್ಯಾಚನ್ನೂ ಬಿಟ್ಟುಕೊಟ್ಟು ಶರಣಾಗತಿ ಆಗುತ್ತಾ ಅನ್ನೋ ಆತಂಕ ಭಾರತೀಯರನ್ನ ಕಾಡ್ತಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದಿದ್ದು ಬರೋಬ್ಬರಿ 8 ವಿಕೆಟ್ಗಳಿಂದ. ಇನ್ನು ಪುಣೆ ಟೆಸ್ಟ್ನಲ್ಲಿ 113 ರನ್ಗಳ ಅಂತರದಿಂದ ಅಮೋಘ ಗೆಲುವು ದಾಖಲಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ವಿಪರ್ಯಾಸ ಅಂದ್ರೆ ಬೆಂಗಳೂರಿನಲ್ಲಿ ಭಾರತದ ಸೋಲಿನ ಬಳಿಕ ಪುಣೆಯಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತಹ ಸ್ಪಿನ್ ಸ್ನೇಹಿ ಪಿಚ್ ಅನ್ನು ರೂಪಿಸಲಾಗಿತ್ತು. ಆದ್ರೆ ಅಲ್ಲೂ ಕೂಡ ಕಿವೀಸ್ ಪಡೆ ಪರಾಕ್ರಮ ಮೆರೆದಿತ್ತು. ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಿಚ್ ಯಾವ ರೀತಿಯಿದ್ದರೂ ನ್ಯೂಝಿಲೆಂಡ್ ಗೆಲ್ಲುವ ವಿಶ್ವಾಸದಲ್ಲಿದೆ. ಯಾಕಂದ್ರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ನ್ಯೂಝಿಲೆಂಡ್ ಐತಿಹಾಸಿಕ ಸಾಧನೆ ಮಾಡಿದೆ.
ಭಾರತಕ್ಕೆ ನಾಲ್ಕು ವರ್ಷಗಳ ಬಳಿಕ ಕ್ಲೀನ್ ಸ್ವೀಪ್ ಆಘಾತ?
ಹೌದು. ಈಗ ಭಾರತೀಯರನ್ನ ಕಾಡ್ತಿರೋ ಭಯ ಇದೇ. ಈಗಾಗ್ಲೇ ಟೀಂ ಇಂಡಿಯಾದಿಂದ ಸರಣಿಯನ್ನ ಕೈವಶ ಮಾಡಿಕೊಂಡಿರೋ ಕಿವೀಸ್ ಪಡೆ ಭಾರತಕ್ಕೆ ಕ್ಲೀನ್ ಸ್ವೀಪ್ ಸೋಲಿನ ರುಚಿ ತೋರಿಸೋಕೆ ಪಣ ತೊಟ್ಟಿದೆ. ಇಲ್ಲಿ ಇನ್ನೊಂದು ಅಚ್ಚರಿಯ ವಿಷ್ಯ ಅಂದ್ರೆ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಕ್ಲೀನ್ ಸ್ವೀಪ್ ಸೋಲಿನ ರುಚಿ ನೋಡಿದ್ದು ಕೂಡ ಇದೇ ನ್ಯೂಝಿಲೆಂಡ್ ತಂಡದ ವಿರುದ್ಧ. 2020 ರಲ್ಲಿ ನ್ಯೂಝಿಲೆಂಡ್ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಕಿವೀಸ್ ಬಳಗ ಗೆದ್ದುಕೊಂಡಿದೆ. ಇನ್ನು ಕೊನೆಯ ಮ್ಯಾಚ್ನಲ್ಲೂ ಸೋಲುಣಿಸಿ ಸರಣಿಯನ್ನು ವೈಟ್ ವಾಶ್ ಮಾಡಿಕೊಳ್ಳುವ ಜೋಶ್ನಲ್ಲಿದೆ.
ಭಾರತದಲ್ಲಿ 24 ವರ್ಷಗಳಿಂದ ವೈಟ್ ವಾಷ್ ಆಗದ ಭಾರತ!
ಕಳೆದ 12 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಭಾರತ ಇದೀಗ ವೈಟ್ವಾಷ್ ತಪ್ಪಿಸಿಕೊಳ್ಬೇಕು ಅಂದ್ರೆ ಕೊನೆಯ ಪಂದ್ಯವನ್ನ ಗೆಲ್ಲಲೇಬೇಕು. ಒಂದು ವೇಳೆ ಸೋತರೆ 24 ವರ್ಷಗಳ ಬಳಿಕ ಭಾರತ ತಂಡಕ್ಕೆ ತವರಿನಲ್ಲಿ ಕ್ಲೀನ್ ಸ್ವೀಪ್ ಸೋಲಿನ ರುಚಿ ತೋರಿಸಿದ ದಾಖಲೆ ನ್ಯೂಝಿಲೆಂಡ್ ತಂಡದ ಪಾಲಾಗಲಿದೆ. ಅಂದರೆ ಭಾರತ ತಂಡವು ತವರಿನಲ್ಲಿ ಕೊನೆಯ ಬಾರಿ ವೈಟ್ ವಾಶ್ ಸೋಲು ಎದುರಿಸಿದ್ದು 2000ನೇ ಇಸವಿಯಲ್ಲಿ. 24 ವರ್ಷಗಳ ಹಿಂದೆ. ಅಂದು ಸೌತ್ ಆಫ್ರಿಕಾ ತಂಡವು ಭಾರತವನ್ನು 2-0 ಅಂತರದಿಂದ ಮಣಿಸಿ ಇತಿಹಾಸ ಬರೆದಿತ್ತು. ಈ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ ನ್ಯೂಝಿಲೆಂಡ್.
ಮುಂಬೈ ಟೆಸ್ಟ್ ಮ್ಯಾಚ್ ನತ್ತ ಭಾರತೀಯರ ಚಿತ್ತ!
ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಸುವರ್ಣ ಅಧ್ಯಾಯಗಳನ್ನು ಬರೆದ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಕಿವೀಸ್ ವಿರುದ್ಧದ ಮೂರನೇ ಪಂದ್ಯ ನಡೆಯಲಿದೆ. 3 ಸರಣಿಗಳ ಕೊನೆಯ ಟೆಸ್ಟ್ ಪಂದ್ಯವು ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಪಂದ್ಯದ ಗೆಲುವು ಕೇವಲ ಮುಖಭಂಗದಿಂದ ಪಾರಾಗುವುದಕ್ಕೆ ಮಾತ್ರವಲ್ಲ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಸಹ ಅತೀ ಮುಖ್ಯವಾಗಿದೆ. ಆದರೆ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ತರಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
3ನೇ ಪಂದ್ಯಕ್ಕೆ ಬುಮ್ರಾ ಔಟ್.. ರಾಹುಲ್ ಗೆ ಸಿಗುತ್ತಾ ಚಾನ್ಸ್?
ಟೀಂ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಸರಣಿ ಆಡ್ಲೇಬೇಕು. ಹೀಗಾಗಿ ವಿಶ್ರಾಂತಿ ಪಡೆಯೋ ಸಾಧ್ಯತೆ ಇದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ನವೆಂಬರ್ 22ರಿಂದ ಆರಂಭವಾಗಲಿದ್ದು, ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಕಮ್ಬ್ಯಾಕ್ ಮಾಡಬಹುದು. 2ನೇ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿರೋದ್ರಿಂದ ಅವ್ರೇ ಕಂಟಿನ್ಯೂ ಆಗ್ತಾರೆ. ಇನ್ನು ರಿಷಭ್ ಪಂತ್ಗೆ ಮೊಣಕಾಲಿನ ಗಾಯ ಉಂಟಾಗಿರೋದ್ರಿಂದ ಧ್ರುವ್ ಜುರೆಲ್ ಅಥವಾ ಕೆಎಲ್ ರಾಹುಲ್ಗೆ ಸ್ಥಾನ ಸಿಗಬಹುದು.
ಒಟ್ನಲ್ಲಿ ಕಳೆದ 2 ವಾರಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಚಿತ್ರಣವೇ ಬದಲಾಗಿದೆ. ವಿಶ್ವದ ಬಲಿಷ್ಠ ಟೆಸ್ಟ್ ತಂಡ ಎಂದೇ ಕರೆಸಿಕೊಳ್ಳುವ ಭಾರತ ತವರಿನಲ್ಲೇ ಮಕಾಡೆ ಮಲಗಿದೆ. ಅದೂ ಕೂಡ ಕಳೆದ 60-70 ವರ್ಷಗಳಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ ತಂಡ ಟೆಸ್ಟ್ ಪಂದ್ಯ ಗೆದ್ದಿದ್ದು 2 ಮಾತ್ರ. ಇದೀಗ 3ನೇ ಬಾರಿಗೆ ಈ ಸಾಧನೆ ಮಾಡೋಕೆ ಕಿವೀಸ್ ಬಳಗ ಮುಂದಾಗಿದೆ. ಆದ್ರೆ ಸರಣಿ ಕೈತಪ್ಪಿದ್ರೂ ವೈಟ್ ವಾಶ್ ತಪ್ಪಿಸಿಕೊಳ್ಳೋಕೆ ಟೀಂ ಇಂಡಿಯಾ 3ನೇ ಪಂದ್ಯ ಗೆಲ್ಬೇಕಿದೆ. ಏನೆಲ್ಲಾ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.