ಹ್ಯಾಟ್ರಿಕ್ ಬಾರಿಸಿ ಮತ್ತೆ ಪ್ರಧಾನಿಯಾಗುತ್ತಾರಾ ನರೇಂದ್ರ ಮೋದಿ – ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ

ಹ್ಯಾಟ್ರಿಕ್ ಬಾರಿಸಿ ಮತ್ತೆ ಪ್ರಧಾನಿಯಾಗುತ್ತಾರಾ ನರೇಂದ್ರ ಮೋದಿ – ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ

2023ನೇ ವರ್ಷಕ್ಕೆ ಬೈ ಬೈ ಹೇಳಿ 2024ನ್ನು ವೆಲ್ಕಂ ಮಾಡೋಕೆ ದಿನಗಣನೆ ಶುರುವಾಗಿದೆ. ಆದ್ರೆ 2024 ಕೇವಲ ಒಂದು ವರ್ಷವಾಗಿ ಉಳಿಯದೇ ಇಡೀ ಜಗತ್ತಿನ ಮಟ್ಟಿಗೆ ಅತ್ಯಂತ ನಿರ್ಣಾಯಕ ವರ್ಷವಾಗಲಿದೆ. ಯಾಕಂದ್ರೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಚುನಾವಣೆ ಮುಂದಿನ ವರ್ಷವೇ ನಡೆಯಲಿದೆ. ಜನವರಿಯಿಂದ ಹಿಡಿದು ನವೆಂಬರ್ ವರೆಗೆ 40ಕ್ಕೂ ಹೆಚ್ಚು ದೇಶಗಳು ಚುನಾವಣೆ ಎದುರಿಸಲಿವೆ. ವಿಶ್ವದ ಅರ್ಧಕ್ಕಿಂತಲೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಭಾರತದಲ್ಲೂ 2024ಕ್ಕೆ ಲೋಕಸಭಾ ಚುನಾವಣೆ ನಡೆಯಲಿದ್ದು ಮುಂದಿನ 5 ವರ್ಷ ದೇಶವನ್ನು ಆಳುವ ಪಕ್ಷ ಮತ್ತು ನಾಯಕನ ನಿರ್ಧಾರವಾಗುತ್ತೆ.

ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ಮೋದಿಗೆ ಹಿನ್ನಡೆಯಾಗುತ್ತಾ – ಏನಿದು ದಲಿತಾಸ್ತ್ರ ಪ್ರಯೋಗ?

140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಸಾರ್ವತ್ರಿಕ ಚುನಾವಣೆ ಕೂಡ ವಿಶ್ವಮಟ್ಟದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತ ರಕ್ಷಣಾ ಸಾಮರ್ಥ್ಯ, ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲಾ ವಲಯಗಳಲ್ಲೂ ಇತಿಹಾಸ ಬರೆಯುತ್ತಿದೆ. ಇದೇ ಕಾರಣಕ್ಕೆ ಭಾರತಕ್ಕೆ ಮುಂದಿನ ಪ್ರಧಾನಿ ಯಾರಾಗ್ತಾರೆ ಅನ್ನೋ ಕುತೂಹಲ ಇಡೀ ಜಗತ್ತಿಗೇ ಇದೆ. ಅದ್ರಲ್ಲೂ ಎಲ್ಲರ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರತ್ತಲೇ ನೆಟ್ಟಿದೆ. ಭಾರತದ ಮಟ್ಟಿಗಂತೂ 2024ರ ಲೋಕಸಭಾ ಚುನಾವಣೆ ಭಾರೀ ಮಹತ್ವ ಪಡೆದುಕೊಂಡಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಚುನಾವಣೆ ಎದುರಿಸುತ್ತಿದ್ದು, ಸುಮಾರು ಒಂದು ಶತಕೋಟಿ ಭಾರತೀಯರು ಏಪ್ರಿಲ್-ಮೇ ತಿಂಗಳಲ್ಲಿ ಮತ ಚಲಾಯಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ರಾಷ್ಟ್ರೀಯವಾದಿ ಬಿಜೆಪಿ ಪಕ್ಷವು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. 2014ರಿಂದ ಮೋದಿ ಭಾರತದ ಪ್ರಧಾನಿಯಾಗಿದ್ದು, 2024ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ ಮೂರನೇ ಬಾರಿಗೆ ಪಿಎಂ ಪಟ್ಟಕ್ಕೇರಲಿದ್ದಾರೆ. ನಾಲ್ಕು ಬಾರಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಸದ್ಯ 2 ಸಲ ಭಾರತದ ಪ್ರಧಾನಿಯಾಗಿದ್ದಾರೆ.  2014 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಪ್ರಧಾನಿ ಪಟ್ಟಕ್ಕೇರಿದರು. 1950ರಲ್ಲಿ ಹುಟ್ಟಿರುವ  ಮೋದಿಯವರಿಗೆ ಸದ್ಯ 73 ವರ್ಷ ವಯಸ್ಸು. ಮತ್ತೊಂದೆಡೆ ಮೋದಿಯವರನ್ನು ಸೋಲಿಸಲು ವಿಪಕ್ಷಗಳು ಇಂಡಿಯಾ ಹೆಸರಿನಲ್ಲಿ ಮಹಾಮೈತ್ರಿ ಕೂಟ ರಚಿಸಿಕೊಂಡಿವೆ. ಈ ಎಲ್ಲಾ ಕಾರಣಗಳಿಂದ ಭಾರತದ ಲೋಕಸಭಾ ಚುನಾವಣೆ ವಿಶ್ವ ಮಟ್ಟದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಇನ್ನು ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿ ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೇರಿದ ಮೊದಲಿಗ ಮತ್ತು ತಾಯಿ ಬದುಕಿರುವಾಗಲೇ ಪ್ರಧಾನ ಮಂತ್ರಿ ಹೊಣೆಗಾರಿಕೆ ವಹಿಸಿಕೊಂಡ ಮೊದಲಿಗ ಎಂಬ ಕೀರ್ತಿ ಹೊಂದಿದ್ದಾರೆ. ಲೋಕಸಭೆಯಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರತಿನಿಧಿಸುವ ಮೋದಿ ಭಾರತೀಯ ಜನತಾ ಪಾರ್ಟಿ ಅಂದ್ರೆ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಹೀಗಾಗಿ ಭಾರತದ ಸಾರ್ವತ್ರಿಕ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ.

Shantha Kumari