ಸಂಸದೆ ಸುಮಲತಾ ಮಂಡ್ಯದಿಂದಲೇ ಸ್ಪರ್ಧಿಸ್ತಾರಾ..?- ಕಾಂಗ್ರೆಸ್ ಮಾಡಿಕೊಂಡಿರೋ ಮೆಗಾ ಪ್ಲ್ಯಾನ್ ಏನು..?

ಸಂಸದೆ ಸುಮಲತಾ ಮಂಡ್ಯದಿಂದಲೇ ಸ್ಪರ್ಧಿಸ್ತಾರಾ..?- ಕಾಂಗ್ರೆಸ್ ಮಾಡಿಕೊಂಡಿರೋ ಮೆಗಾ ಪ್ಲ್ಯಾನ್ ಏನು..?

ಇಬ್ಬರ ಜಗಳ ಮೂರನೆಯವನಿಗೆ ಲಾಭ ಅನ್ನೋ ಗಾಧೆ ಮಾತಿದೆ. ಬಹುಶಃ ಈ ಮಾತು ಮಂಡ್ಯ ವಿಚಾರದಲ್ಲಿ ನಿಜವಾಗುತ್ತೆ ಅನ್ಸುತ್ತೆ. ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದ್ರೆ ಈವರೆಗೂ ಮಂಡ್ಯ ಕ್ಷೇತ್ರ ಯಾರಿಗೆ ಅನ್ನೋದು ಫೈನಲ್ ಆಗಿಲ್ಲ. ಸಭೆ ಮೇಲೆ ಸಭೆ, ಹೈಕಮಾಂಡ್ ನಾಯಕರ ಭೇಟಿ ಮಾಡಿದ್ರೂ ಕ್ಲಾರಿಟಿ ಸಿಗ್ತಿಲ್ಲ. ಎರಡೂ ಪಕ್ಷಗಳ ನಾಯಕರು ಮಂಡ್ಯ ನಮಗೇ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಇವ್ರಿಬ್ಬರ ಜಟಾಪಟಿಯನ್ನ ಸೈಲೆಂಟಾಗೇ ನೋಡ್ತಿರೋ ಕಾಂಗ್ರೆಸ್ ಪಡೆ ಭರ್ಜರಿ ರಣತಂತ್ರವನ್ನೇ ಮಾಡ್ತಿದೆ. ಕ್ಷೇತ್ರವನ್ನ ವಶಪಡಿಸಿಕೊಳ್ಳೋಕೆ ಸರ್ವ ವ್ಯೂಹಗಳನ್ನೂ ರಚಿಸುತ್ತಿದೆ. ಹಾಗಾದ್ರೆ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರು..? ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಿಂದಲೇ ಸ್ಪರ್ಧಿಸ್ತಾರಾ..? ಕಾಂಗ್ರೆಸ್ ಮಾಡಿಕೊಂಡಿರೋ ಮೆಗಾ ಪ್ಲ್ಯಾನ್ ಏನು..? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸುಮಲತಾ ಮಂಡ್ಯ ಮತದಾರರ ವಿಶ್ವಾಸ ಕಳೆದುಕೊಂಡ್ರಾ..?- ಮತದಾರರಿಗೆ ಗಗನಕುಸುಮವಾದ ಸುಮಲತಾ!

ವಿಧಾನಸಭಾ ಚುನಾವಣೆಯಲ್ಲಿಯೇ ಕಾಂಗ್ರೆಸ್ ಪಕ್ಷ ಮಂಡ್ಯದಲ್ಲಿ ಮೇಲುಗೈ ಸಾಧಿಸಿದೆ. ಜೆಡಿಎಸ್ ಭದ್ರಕೋಟೆ ಅಂತಾ ಹೇಳ್ಕೊಂಡ್ರು ಕೂಡ ಜಿಲ್ಲೆಯ 7 ಸ್ಥಾನಗಳ ಪೈಕಿ 5 ಕ್ಷೇತ್ರಗಳನ್ನ ಕಾಂಗ್ರೆಸ್ ಗೆದ್ದುಕೊಂಡಿತ್ತು. ಅಲ್ದೇ ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್ ಪರವಾಗೇ ಇದ್ದಾರೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ಕಳೆದ ಬಾರಿ ಪಕ್ಷೇತರ ಸಂಸದೆಯಾಗಿ ಆಯ್ಕೆಯಾಗಿದ್ರೂ ಈ ಸಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ ಮೈತ್ರಿ ಕಾರಣದಿಂದ ಸುಮಲತಾಗೆ ಬಿಜೆಪಿ ಟಿಕೆಟ್ ಸಿಗೋ ಸಾಧ್ಯತೆ ತೀರ ಕಡಿಮೆ ಇದೆ. ಇನ್ನು ಜೆಡಿಎಸ್​ಗೆ ಕ್ಷೇತ್ರ ಸಿಕ್ಕರೂ ಅಭ್ಯರ್ಥಿ ಬಗ್ಗೆ ಗೊಂದಲ ಮುಂದುವರಿದಿದೆ. ಹೀಗಾಗಿ ಎಲ್ಲಾ ಎದುರಾಳಿಗಳು ಕನ್ಫ್ಯೂಷನ್​ನಲ್ಲಿ ಇರುವಾಗ್ಲೇ ಕಾಂಗ್ರೆಸ್ ಅಖಾಡಕ್ಕಿಳಿಯೋಕೆ ಎಲ್ಲಾ ಸಿದ್ಧತೆ ಮಾಡಿಕೊಳ್ತಿದೆ. ಪ್ಲ್ಯಾನ್ ಎ, ಪ್ಲ್ಯಾನ್ ಬಿ, ಪ್ಲ್ಯಾನ್ ಸಿ ಯೋಜನೆಗಳೂ ಸಿದ್ಧಗೊಂಡಿವೆ.

 ಮಂಡ್ಯ ‘ಕೈ’ ವಶಕ್ಕೆ ರಣತಂತ್ರ!

ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಮತ್ತು ಅವ್ರ ಟೀಂ ಲೋಕಸಭಾ ಚುನಾವಣೆಗೆ ಫುಲ್ ಅಲರ್ಟ್ ಆಗಿದೆ. ಈಗಾಗ್ಲೇ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಸಭೆ ನಡೆಸಿದ್ದಾರೆ.  ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿದ್ರೆ ಗೆಲುವಿನ ಸಾಧಕ ಬಾಧಕಗಳೇನು..? ಹೆಚ್​ಡಿ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ ಎದುರಿಸಬೇಕಾದ ಸವಾಲುಗಳೇನು..? ಸುಮಲತಾ ಅಂಬರೀಶ್ ಮತ್ತೆ ಪಕ್ಷೇತರವಾಗಿ ಕಣಕ್ಕಿಳಿದರೆ ಜೆಡಿಎಸ್‌ಗೆ ಆಗುವ ನಷ್ಟ ಏನು..? ಹೀಗೆ ಎಲ್ಲಾ ಆಯಾಮಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಸಚಿವ ಚಲುವರಾಯಸ್ವಾಮಿ ಅವರು ಪ್ಲಾನ್ ಎ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ರೆಡಿ ಮಾಡಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಶತಾಯ ಗತಾಯ ಜೆಡಿಎಸ್‌ ಗೆಲ್ಲದಂತೆ ಎಲ್ಲರೂ ಕೆಲಸ ಮಾಡಬೇಕು. ಮಂಡ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ತಲೆದೋರಬಾರದು. ನಮ್ಮ ಆಂತರಿಕ ಅಸಮಧಾನ ಜೆಡಿಎಸ್‌ಗೆ ವರದಾನವಾಗಬಾರದು ಎಂಬ ಸಂದೇಶವನ್ನು ಸಚಿವರು ರವಾನಿಸಿದ್ದಾರೆ.

ಇನ್ನು ಇದೇ ವೇಳೆ ಜೆಡಿಎಸ್‌ನ ಒಳ ಬೇಗುದಿಯ ಲಾಭ ಪಡೆಯುವ ಬಗ್ಗೆಯೂ ಚಿಂತನೆ ನಡೆದಿದೆ. ಅಹಿಂದ ಮತಗಳು ಚದುರದಂತೆ ಎಚ್ಚರಿಕೆ ವಹಿಸಬೇಕು. ಹಾಗೇನಾದ್ರೂ ಹೆಚ್.ಡಿ ದೇವೇಗೌಡ ಕುಟುಂಬದ ಸದಸ್ಯರು ಸ್ಪರ್ಧಿಸಿದ್ರೆ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಹೀಗೆ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಮೇಲುಗೈ ಸಾಧಿಸೋಕೆ ನಾನಾ ತಂತ್ರಗಾರಿಕೆ ರೂಪಿಸುತ್ತಿದ್ರೆ ಅತ್ತ ಜೆಡಿಎಸ್ ನಲ್ಲಿ ಮಾತ್ರ ಗೊಂದಲ ಮುಂದುವರಿಯುತ್ತಲೇ ಇದೆ. ಯಾಕಂದ್ರೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ.

Sulekha