ಗಲ್ಫ್ ರಾಷ್ಟ್ರಗಳ ತೈಲ ಉತ್ಪಾದನಾ ಘಟಕಗಳ ಮೇಲೆ ದಾಳಿ – ಭಾರತದಲ್ಲಿ ಹೆಚ್ಚುತ್ತಾ ಪೆಟ್ರೋಲ್, ಗ್ಯಾಸ್ ಬೆಲೆ?

ಮಧ್ಯಪ್ರಾಚ್ಯದ ಎಫೆಕ್ಟ್ ಭಾರತದ ಮೇಲೆ ಮತ್ತಷ್ಟು ಬೀಕರವಾಗಿ ತಟ್ಟುವ ಸಾಧ್ಯತೆ ಇದೆ. ಇದುವರೆಗೆ ಹೊರ್ಮುಝ್ ಜಲಸಂಧಿ ಸಮಸ್ಯೆಯಿಂದ ಅಡಚಣೆ ಉಂಟಾಗಿದೆ ಎನ್ನಲಾಗುತ್ತಿತ್ತು. ಆ ಮಾರ್ಗದ ಮೂಲಕ ಗ್ಯಾಸ್ ತುಂಬಿದ ಹಡಗುಗಳು ಬರುವಂತೆ ಮಾಡಲು ಕೇಂದ್ರ ಸರ್ಕಾರ ಹೇಗೋ ವ್ಯವಸ್ಥೆ ಮಾಡಿದೆ. ಆದರೆ ಇದೀಗ ಗಲ್ಫ್ ರಾಷ್ಟ್ರಗಳ ತೈಲ ಹಾಗೂ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿ ಯಿಂದ ಅನಿಲದ ಕೊರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಲ್ಫ್ ಪ್ರದೇಶದ ಅನೇಕ ತೈಲ ಹಾಗೂ ಗ್ಯಾಸ್ ಘಟಕಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಗಳಾಗಿವೆ. ಸೌದಿ ಅರೇಬಿಯಾದ ಅರಾಮ್ಕೋ, ಕತಾರ್ನ ರಾಸ್ ಲಫಾನ್ ಅನಿಲ ಘಟಕ ಸೇರಿದಂತೆ ಪ್ರಮುಖ ಉತ್ಪಾದನಾ ಕೇಂದ್ರಗಳು ಹಾನಿಗೊಳಗಾಗಿದ್ದು, ಉತ್ಪಾದನೆ ಮತ್ತು ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಇದನ್ನೂ ಓದಿ: ರೆಡ್ ಆರ್ಮಿಯಲ್ಲಿ KING ಹವಾ – ಪಂದ್ಯಗಳಿಗಷ್ಟೇ ಸೀಮಿತವಾದ್ರಾ ಕೊಹ್ಲಿ?
ವಿಶೇಷವಾಗಿ, ಜಗತ್ತಿನ ಅತಿದೊಡ್ಡ ಗ್ಯಾಸ್ ಟು ಲಿಕ್ವಿಡ್ ಘಟಕಗಳಲ್ಲಿ ಒಂದಾದ ಕತಾರ್ನ ‘ಪರ್ಲ್ ಜಿಟಿಎಲ್’ ಘಟಕ ಸ್ಥಗಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಕತಾರ್ ಪ್ರಮುಖ ಎಲ್ಪಿಜಿ ಮತ್ತು ಎಲ್ಎನ್ಜಿ ಪೂರೈಕೆದಾರ ರಾಷ್ಟ್ರವಾಗಿದ್ದು, ಭಾರತದ ಒಟ್ಟು ಗ್ಯಾಸ್ ಅವಶ್ಯಕತೆಯ ಶೇ 40ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
ಪೆಟ್ರೋನೆಟ್ LNG ಮತ್ತು ಸರ್ಕಾರಿ ಸ್ವಾಮ್ಯದ GAIL ಕಂಪನಿಗಳು ಕತಾರ್ ಜತೆ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿವೆ. ಪೆಟ್ರೋನೆಟ್ಗೆ ವರ್ಷಕ್ಕೆ 7.5 ಮಿಲಿಯನ್ ಟನ್ LNG ಪೂರೈಕೆ ಆಗುತ್ತಿದ್ದು, ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೆ 5 ಮಿಲಿಯನ್ ಮೆಟ್ರಿಕ್ ಟನ್ LPG ನೀಡಲಾಗುತ್ತದೆ. 2024-25ರಲ್ಲಿ ಕತಾರ್ ಭಾರತಕ್ಕೆ 6.39 ಬಿಲಿಯನ್ ಡಾಲರ್ ಮೌಲ್ಯದ LNG ಹಾಗೂ 3.21 ಬಿಲಿಯನ್ ಡಾಲರ್ ಮೌಲ್ಯದ LPG ರಫ್ತು ಮಾಡಿತ್ತು.
ಇದಲ್ಲದೆ, ಸೌದಿ ಅರೇಬಿಯಾದ ಯಾನ್ಬು ಪ್ರದೇಶದಲ್ಲಿರುವ SAMREF ತೈಲ ಸಂಸ್ಕರಣಾ ಘಟಕದ ಮೇಲಿನ ದಾಳಿಯಿಂದ ತೈಲ ಪೂರೈಕೆಯ ಮೇಲೂ ಪರಿಣಾಮ ಬಿದ್ದಿದೆ. ಹೊರ್ಮುಝ್ ಜಲಸಂಧಿ ಭಾಗಶಃ ಅಸ್ತವ್ಯಸ್ತವಾಗಿರುವ ಹಿನ್ನೆಲೆ, ಪರ್ಯಾಯ ಮಾರ್ಗಗಳಿಂದ ಸಾಗುತ್ತಿದ್ದ ತೈಲ ಪೂರೈಕೆಯೂ ಈಗ ಅಡಚಣೆಗೆ ಒಳಗಾಗಿದೆ.

ನೋಡಿರಿ

