ಮತ್ತಿಬ್ಬರು ಪ್ರಬಲ ನಾಯಕರ ಮೇಲೆ ಕೇಸರಿ ಕಲಿಗಳ ಕಣ್ಣು – ಲಕ್ಷ್ಮಣ ಸವದಿ, ಜನಾರ್ದನ ರೆಡ್ಡಿ ಬಿಜೆಪಿ ಸೇರ್ತಾರಾ?
ಯಾವುದೇ ಚುನಾವಣೆ ಬಂದ್ರೂ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಪೂರ್ವ ಮತ್ತು ಚುನಾವಣಾ ನಂತರದ ಆಪರೇಷನ್ ಇದ್ದೇ ಇರುತ್ತೆ. ಇದೀಗ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಕಾರ್ಯಾಚರಣೆ ನಡೀತಿದೆ. ಆಪರೇಷನ್ ಕಮಲ ಅಂತಾನೇ ಫೇಮಸ್ ಆಗಿರೋ ಬಿಜೆಪಿ ನಾಯಕರು ತಮ್ಮ ಹಳೇ ಗೆಳೆಯರನ್ನ ಮರಳಿ ಕರೆಸಿಕೊಳ್ಳೋಕೆ ಕಸರತ್ತು ನಡೆಸ್ತಿದ್ದಾರೆ. ಈಗಾಗ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಅದು ಸಕ್ಸಸ್ ಕೂಡ ಕಂಡಿದೆ. ಮತ್ತಿಬ್ಬರು ಪ್ರಬಲ ನಾಯಕರ ಮೇಲೆ ಕೇಸರಿ ಕಲಿಗಳ ಕಣ್ಣು ಬಿದ್ದಿದೆ. ಅದುವೇ ಒಂದು ಲಕ್ಷ್ಮಣ ಸವದಿ ಮತ್ತೊಬ್ಬರು ಜನಾರ್ದನ ರೆಡ್ಡಿ. ಶೆಟ್ಟರ್ ಎಕ್ಸಿಟ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ಮತ್ತೆ ಯಾರ್ಯಾರು ಕೈ ಕೊಡ್ತಾರೋ ಅನ್ನೋ ಚಿಂತೆ ಕಾಣ್ತಿದೆ. ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲೆಲ್ಲಾ ಇನ್ನೂ ಕೆಲವ್ರು ಕಾಂಗ್ರೆಸ್ ಬಿಟ್ಟು ತಮ್ಮ ಪಕ್ಷಕ್ಕೆ ಬರ್ತಾರೆ ಅಂತಾ ಹೇಳ್ತಿದ್ದಾರೆ. ಈ ಇಬ್ಬರು ನಾಯಕರು ಬಿಜೆಪಿಗೆ ಕರೆಸಿಕೊಳ್ಳೋದ್ರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಹೋದಷ್ಟೇ ಸ್ಪೀಡ್ ಆಗಿ ವಾಪಸ್ ಆದ ಜಗದೀಶ್ ಶೆಟ್ಟರ್ – ‘ಕೈ’ಗೆ ಬೈ ಬೈ ಹೇಳಲು ಕಾರಣವೇನು?
ಲಕ್ಷ್ಮಣ ಸವದಿ ಮತ್ತು ಜನಾರ್ದನ ರೆಡ್ಡಿ ಬಲ!
ಲಕ್ಷ್ಮಣ ಸವದಿ ಬೆಳಗಾವಿಯ ಪ್ರಬಲ ರಾಜಕಾರಣಿ. ವಿಧಾನಸಭಾ ಚುನಾವಣೆ ವೇಳೆ ಅಥಣಿ ಟಿಕೆಟ್ ಸಿಗ್ಲಿಲ್ಲ ಅಂತಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರಿದ್ರು. ಅಲ್ಲಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಗೆದ್ದಿದ್ರು. ಅಲ್ಲದೆ ಜಿಲ್ಲೆಯ ಪ್ರಮುಖ ನಾಯಕರನ್ನ ಕಾಂಗ್ರೆಸ್ ಗೆ ಸೆಳೆಯೋ ಪ್ರಯತ್ನ ಮಾಡಿದ್ದಾರೆ. ಹೀಗಾಗೇ ಸವದಿ ಅವರನ್ನ ಬಿಜೆಪಿಗೆ ಕರೆತರುವಂತೆ ಹೈಕಮಾಂಡ್ ಸ್ಥಳೀಯ ನಾಯಕರಿಗೆ ಸೂಚಿಸಿದೆ. ಇನ್ನು ಕಲ್ಯಾಣ ಕರ್ನಾಟಕದಲ್ಲಿ ರೆಡ್ಡಿ ಶಕ್ತಿಯುತ ನಾಯಕರಾಗಿ ಬೆಳೆದಿದ್ದಾರೆ. ಬಿಜೆಪಿ ಸೇರಿದರೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳದಲ್ಲಿ ಲಾಭ ಆಗುವ ಲೆಕ್ಕಾಚಾರವಿದೆ. ಹೀಗಾಗಿ ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನಗೊಳಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಆದರೆ ಸಿಬಿಐನಲ್ಲಿ ಅಕ್ರಮ ಆಸ್ತಿ ಕೇಸ್ ರೆಡ್ಡಿಗಿರುವ ಕಂಟಕವಾಗಬಹುದು. ರಾಮುಲು ಜೊತೆ ಸಹೋದರರ ಜೊತೆ ಮುನಿಸು ಬೇರೆ ಇದೆ.
ಅಸಲಿಗೆ ಜಗದೀಶ್ ಶೆಟ್ಟರ್ ಜೊತೆಯಲ್ಲೇ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದವರು. ಸವದಿ ಕೂಡ ಬಿಜೆಪಿಗೆ ಹೋಗ್ತಾರೆ ಅನ್ನೋ ಸುದ್ದಿ ಕೇಳ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಟ್ಟಿದ್ರು. ಲಕ್ಷ್ಮಣ ಸವದಿಯವರನ್ನ ಕರೆಸಿ ಮಾತುಕತೆನೂ ನಡೆಸಿ, ಬಿಜೆಪಿಗೆ ಹೋಗದಂತೆ ಬ್ರೈನ್ ವಾಶ್ ಕೂಡ ಮಾಡಿದ್ದರು. ಜೊತೆಗೆ ಉನ್ನತ ಸ್ಥಾನಮಾನದ ಆಫರ್ ಕೂಡ ಕೊಟ್ಟಿದ್ದಾರಂತೆ. …
ಸವದಿಗೆ ಡಿಕೆಶಿ ಆಫರ್!?
ಉತ್ತರ ಕರ್ನಾಟಕದಲ್ಲಿ 2-3 ಲೋಕಸಭೆ ಸ್ಥಾನ ಗೆಲ್ಲಿಸಿಕೊಟ್ರೆ ಲೋಕಸಭೆ ರಿಸಲ್ಟ್ ಬಳಿಕ ನಿಮ್ಮನ್ನ ಮಂತ್ರಿ ಮಾಡ್ತೀವಿ. ಹಾಗೇ ನಿಮ್ಮ ಮಗನಿಗೂ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡುತ್ತೇವೆ. ಜೊತೆಗೆ ನಿಗಮ ಮಂಡಳಿಯಲ್ಲೂ ಸವದಿ ಆಪ್ತರಿಗೆ ಸ್ಥಾನಮಾನ ಕೊಡ್ತೇವೆ ಅಂತಾ ಭರವಸೆ ನೀಡಿದ್ದಾರೆ. ಹಾಗೇ ಬಿಜೆಪಿಯ ಪ್ರಮುಖರನ್ನೂ ಕಾಂಗ್ರೆಸ್ಗೆ ಕರೆತರಬೇಕೆಂದು ಡಿಕೆಶಿ ಟಾಸ್ಕ್ ನೀಡಿದ್ದಾರಂತೆ.
ವಿಧಾನಸಭೆ ಎಲೆಕ್ಷನ್ ಟೈಂನಲ್ಲೇ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದರು. ಆಪ್ತ ಗೆಳೆಯ ಶ್ರಿರಾಮುಲು ಮೂಲಕ ಬಿಜೆಪಿ ಹೈಕಮಾಂಡ್ಗೂ ಒತ್ತಡ ಹಾಕಿಸಿದ್ದರು. ಯಾವುದು ಫಲ ಕೊಡ್ಲಿಲ್ಲ. ಕೊನೆಗೆ ಜನಾರ್ದನ ರೆಡ್ಡಿ KRPP ಪಕ್ಷ ಕಟ್ಟಿದ್ದರು. ಗಂಗಾವತಿಯಿಂದ ನಿಂತು ಶಾಸಕರೂ ಆದರೂ. ಈಗ ಇದೇ ಜನಾರ್ದನ ರೆಡ್ಡಿ ವಾಪಸ್ ಬಿಜೆಪಿಗೆ ಸೇರೋಕೆ ತಯಾರಿ ನಡೆಸಿದ್ದಾರೆ. ಹಾಗೇ ಸವದಿಯವರು ಬಿಜೆಪಿಗೆ ವಾಪಸ್ ಬರ್ತಾರೆ ಎನ್ನಲಾಗ್ತಿದೆ. ರಾಜಕೀಯದಲ್ಲಿ ಯಾವ ನಾಯಕರು ಯಾವಾಗ ಯಾವ ಪಕ್ಷಕ್ಕೆ ಜಿಗಿಯುತ್ತಾರೋ ಹೇಳೋಕೆ ಬರಲ್ಲ.