PAKಗೆ ಕಾಲಿಡಲ್ಲ ಟೀಂ ಇಂಡಿಯಾ -BCCI ಬೆನ್ನಿಗೆ ICC.. ಹೈಬ್ರಿಡ್​ಗೆ ಅಸ್ತು?
ಚಾಂಪಿಯನ್ಸ್ ಟೂರ್ನಿ ನಡೆಯೋದೆಲ್ಲಿ?

PAKಗೆ ಕಾಲಿಡಲ್ಲ ಟೀಂ ಇಂಡಿಯಾ -BCCI ಬೆನ್ನಿಗೆ ICC.. ಹೈಬ್ರಿಡ್​ಗೆ ಅಸ್ತು?ಚಾಂಪಿಯನ್ಸ್ ಟೂರ್ನಿ ನಡೆಯೋದೆಲ್ಲಿ?

2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಗ್ಗೆ ದಿನಕ್ಕೊಂದು ಅಪ್​ಡೇಟ್ಸ್ ಹೊರ ಬೀಳ್ತಿದೆ. ದಶಕಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆಗೆ ಅನುಮತಿ ಸಿಕ್ಕಿದೆ ಅಂತಾ ಕುಣೀತಿದ್ದ ಪಾಕಿಸ್ತಾನಕ್ಕೆ ಭಾರತ ಕೊಟ್ಟಿರೋ ಏಟನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡೋಕೆ ನಾವು ಪಾಕ್​ಗೆ ಕಾಲಿಡಲ್ಲ ಅಂತಾ ಬಿಸಿಸಿಐ ಪಟ್ಟು ಹಿಡಿದಿರೋದೇ ಪಾಕ್​ಗೆ ನುಂಗಲಾರದ ತುತ್ತಾಗಿದೆ. ದಯವಿಟ್ಟು ಪಾಕ್​ಗೆ ಬನ್ನಿ ಅಂತಾ ಕೆಲ ಆಟಗಾರರು ಬೇಡಿಕೊಂಡ್ರು. ಇನ್ನೂ ಕೆಲವ್ರು ನೀವು ಬರದೇ ಇದ್ರೆ ನಾವೇ ಟೂರ್ನಿ ಆಡ್ತೇವೆ ಅಂತಾ ಗೊಡ್ಡು ಬೆದರಿಕೆ ಹಾಕಿದ್ರು. ಬಟ್ ಇದಕ್ಕೆಲ್ಲಾ ಬಿಸಿಸಿಐ ತಲೆಕೆಡಿಸಿಕೊಳ್ಳೋ ಪ್ರಮೇಯವೇ ಇಲ್ಲ. ವಿಶ್ವಕ್ರಿಕೆಟ್​​ನ ದೊಡ್ಡಣ್ಣನಂತಿರೋ ಬಿಸಿಸಿಐ ಹಠಕ್ಕೆ ಮಣಿದಿರೋ ಐಸಿಸಿ ಪಾಕಿಸ್ತಾನಕ್ಕೆ ಶಾಕ್ ಕೊಡೋಕೆ ಸಿದ್ಧವಾಗಿದೆ. ಏನದು ಶಾಕ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KGF ಸಿನಿಮಾ ಕಥೆ ಕದ್ದಿದ್ದಾ? – 16 ವರ್ಷ ಹಿಂದಿನ ಸ್ಟೋರಿ ಕದ್ರಾ ನೀಲ್‌?

ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡಲಿದೆಯೇ? ಇಲ್ಲವೇ ಅನ್ನೋದು ಇನ್ನೂ ಗೊಂದಲದಲ್ಲೇ ಇದೆ. ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಈ ಮೆಗಾ ಪಂದ್ಯಾವಳಿಯಲ್ಲಿ ಎಂಟು ದೇಶಗಳು ಭಾಗವಹಿಸಲಿವೆ. ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳನ್ನು ಸಹ ಎ ಗುಂಪು ಹೊಂದಿದೆ. ಇನ್ನು ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಈಗಾಗಲೇ ಟೂರ್ನಿಯ ಪ್ರಸ್ತಾವಿತ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಭಾರತದ ಪಂದ್ಯಗಳಿಗೂ ಮೈದಾನವನ್ನು ಅಂತಿಮಗೊಳಿಸಿದೆ. ಆದ್ರೆ ಭಾರತ ಮಾತ್ರ ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದು ಸ್ಟ್ರಿಕ್ಟ್ ಆಗಿ ಹೇಳಿದೆ. ಭಾರತದ ಈ ದಿಟ್ಟ ನಿರ್ಧಾರದಿಂದ ಉರಿದು ಬಿದ್ದಿದ್ದ ಪಾಕ್ ಕ್ರಿಕೆಟರ್ಸ್ ಭಾರತ ಬರಲಿ, ಬರದೇ ಇರಲಿ ನಾವು ನಮ್ಮ ದೇಶದಲ್ಲೇ ಚಾಂಪಿಯನ್ಸ್ ಟ್ರೋಫಿ ನಡೆಸುತ್ತೇವೆ ಎಂದು ಜಂಬ ಕೊಚ್ಚಿಕೊಳ್ತಿದ್ರು. ಬಟ್ ಈಗ ಪಾಕಿಸ್ತಾನಿಗಳ ಅತಿರೇಖಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿದೆ.

ಹೈಬ್ರಿಡ್​ ಗೆ ಐಸಿಸಿ ಸಿದ್ಧತೆ!

ಭದ್ರತೆ ಕಾರಣಗಳಿಂದಾಗಿ ಭಾರತ ತಂಡದ ಪಂದ್ಯಗಳನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ಸ್ಥಳವನ್ನ ನಿಗದಿ ಮಾಡಿದೆ. ಆದರೆ, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗೋ ಮಾತೇ ಇಲ್ಲ. ಈ ಹಿಂದೆ ನಡೆದ ಏಷ್ಯಾಕಪ್‌ನಂತೆ ಭಾರತ ಆಡುವ ಪಂದ್ಯಗಳನ್ನು ಬೇರೆ ಬೇರೆ ದೇಶದಲ್ಲಿ ನಡೆಸಲು ಬಿಸಿಸಿಐ ಬಯಸುತ್ತಿದೆ. ಟೀಂ ಇಂಡಿಯಾದ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಿಸಿಸಿಐ ಮೂಲಗಳು ಐಸಿಸಿಗೆ ಸೂಚಿಸಿದೆ. ಆದ್ರೆ ಈ ಬಗ್ಗೆ ಐಸಿಸಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಭಾರತ ಸರ್ಕಾರದಿಂದ ಅನುಮತಿ ಸಿಕ್ಕಿದ್ರೆ ಮಾತ್ರ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆ. ಇತ್ತೀಚೆಗೆ, ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐಗೆ ಮನವರಿಕೆ ಮಾಡುವ ಜವಾಬ್ದಾರಿಯನ್ನು ಪಿಸಿಬಿ ಐಸಿಸಿಗೆ ವಹಿಸಿದೆ. ಆದ್ರೆ ಪಿಸಿಬಿ ಮಾತಿಗೆ ಸೊಪ್ಪು ಹಾಕದ ಐಸಿಸಿ ಹೊಸ ಹೆಜ್ಜೆ ಇಟ್ಟಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಲು ಐಸಿಸಿ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಇದಕ್ಕೆ ಒಂದಿಷ್ಟು ಹೆಚ್ಚುವರಿ ಫಂಡ್ ಬಿಡುಗಡೆ ಮಾಡಲು ಐಸಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹೈಬ್ರಿಡ್ ಪದ್ಧತಿಯಲ್ಲಿ ಟೂರ್ನಿಯನ್ನು ಬೇರೆ ದೇಶದಲ್ಲಿ ನಡೆಸಬೇಕಾದರೆ ಯಾವುದೇ ತೊಂದರೆಯಾಗದಂತೆ ಐಸಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ತಟಸ್ಥ ಸ್ಥಳಗಳಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಲು ಟೂರ್ನಮೆಂಟ್​ನ ಬಜೆಟ್‌ಗೆ ಮತ್ತಷ್ಟು ಹಣವನ್ನು ಐಸಿಸಿ ನೀಡಲು ಸಿದ್ಧವಾಗಿದೆ. ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ತರಲು ಕೊನೆಯವರೆಗೂ ಪ್ರಯತ್ನಿಸುವುದಾಗಿ ಐಸಿಸಿ ಮೂಲಗಳು ತಿಳಿಸಿವೆ, ಆದರೆ ಅದು ಸಾಧ್ಯವಾಗದಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾಗುತ್ತದೆ.

ಅಷ್ಟಕ್ಕೂ ಭಾರತ ತಂಡಕ್ಕೆ ಪಿಸಿಬಿ ಮತ್ತು ಐಸಿಸಿ ಇಷ್ಟೊಂದು ಪ್ರಾಶಸ್ತ್ಯ ನೀಡ್ತಿರೋದಕ್ಕೆ ಕಾರಣವೂ ಇದೆ. ವಿಶ್ವ ಕ್ರಿಕೆಟ್ ಲೋಕದ ದೊಡ್ಡಣ್ಣನಂತಿರೋ ಬಿಸಿಸಿಐ ಚಿನ್ನದ ಮೊಟ್ಟೆಯಿಡುವ ಕೋಳಿ. ಹಾಗೇನಾದ್ರೂ ಚಾಂಪಿಯನ್ಸ್  ಟೂರ್ನಿಯಲ್ಲಿ ಭಾರತ ಭಾಗವಹಿಸದೇ ಇದ್ದರೆ ಪಿಸಿಬಿ ಹಾಗೂ ಐಸಿಸಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಕಳೆದ ವರ್ಷ ಏಷ್ಯಾ ಕಪ್ ಪಂದ್ಯಾವಳಿ ಸಂದರ್ಭದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ರೂ ಕೂಡ ಹೈಬ್ರಿಡ್ ಮಾದರಿಯನ್ನು ಅಳವಡಿಸಿ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಹೈಬ್ರಿಡ್ ಮಾದರಿಯನ್ನು ಅಳವಡಿಸಲು ಪ್ಲ್ಯಾನ್ ನಡೀತಿದೆ. ಆದ್ರೆ ಇದ್ರಿಂದ ಪಾಕಿಸ್ತಾನ ತನ್ನ ಆದಾಯದಲ್ಲಿ ನಷ್ಟವನ್ನು ಅನುಭವಿಸಬಹುದು. ಯಾಕಂದ್ರೆ ಭಾರತ ತಂಡವು ಪಂದ್ಯಾವಳಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್‌  ಪ್ರವೇಶಿಸಿದ್ರೆ ಈ ಪಂದ್ಯಗಳನ್ನೂ ಸಹ ಪಾಕಿಸ್ತಾನದಿಂದ ಹೊರಗೆ ಆಡಿಸಬೇಕಾಗುತ್ತೆ. ಇದ್ರಿಂದ ಮೈದಾನದ ಹೊರಗೂ ಭಾರತದ ಪ್ರಾಬಲ್ಯ ಹೆಚ್ಚಾಗಲಿದೆ ಮತ್ತು ಪಾಕಿಸ್ತಾನ ಮತ್ತೊಮ್ಮೆ ಹಿನ್ನಡೆ ಅನುಭವಿಸಲಿದೆ. ಇದೇ ಕಾರಣಕ್ಕೆ ಭಾರತವನ್ನ ಪಾಕಿಸ್ತಾನಕ್ಕೆ ಕರೆಸಿಕೊಳ್ಳೋಕೆ ಶತಾಯ ಗತಾಯ ಕಸರತ್ತು ನಡೆಸ್ತಿದೆ. ಆದ್ರೆ ಬಿಸಿಸಿಐ ಪವರ್ ಮುಂದೆ ಐಸಿಸಿಯೂ ತಲೆ ಬಾಗಿದ್ದು ಹೈಬ್ರಿಡ್ ಮಾದರಿ ಟೂರ್ನಿಗೆ ಸಿದ್ಧತೆ ಆರಂಭಿಸಿದೆ.

Shwetha M

Leave a Reply

Your email address will not be published. Required fields are marked *