ಜಮ್ಮು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗೆ ಅಡಿ ಇಟ್ಟ ಮೋದಿ, ಅಮಿತ್ ಶಾ – ವಿಧಾನಸಭಾ ಚುನಾವಣೆಗೆ ಸಜ್ಜಾಯ್ತು ಅಖಾಡ

ಜಮ್ಮು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗೆ ಅಡಿ ಇಟ್ಟ ಮೋದಿ, ಅಮಿತ್ ಶಾ – ವಿಧಾನಸಭಾ ಚುನಾವಣೆಗೆ ಸಜ್ಜಾಯ್ತು ಅಖಾಡ

ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಮುಕುಟದಂತೆಯೇ ಇದೆ. ಆದ್ರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿಂದ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಮ್ಮದಿ ಅನ್ನೋದೇ ಮರೀಚಿಕೆಯಾಗಿದೆ. ಉಗ್ರರ ಉಪಟಳ,  ಭಯೋತ್ಪಾದನಾ ಕೃತ್ಯ, ಬಾಂಬ್ ಗಳ ಸ್ಫೋಟ, ಸಾಲು ಸಾಲು ಸಾವು, ಭಯದ ಬದುಕಿನಲ್ಲಿ ಜನ ರೋಸಿ ಹೋಗಿದ್ದಾರೆ. ಆದ್ರೀಗ ಜಮ್ಮು ಕಾಶ್ಮೀರವೂ ನೆಮ್ಮದಿಯಾಗಿ ಉಸಿರಾಡುವ ಕಾಲ ಹತ್ತಿರವಾಗುತ್ತಿದೆ. ಈಗಾಗಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ಮಹತ್ತರ ಬದಲಾವಣೆ ತಂದಿದೆ. ಈ ಪೈಕಿ ಪ್ರಮುಖ ಘಟ್ಟ ಆರ್ಟಿಕಲ್ 370 ರದ್ದು. ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ಬಿಲ್ ಲೋಕಸಭೆಯಲ್ಲಿ ಮಂಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಎರಡು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಪೈಕಿ ಮೀಸಲಾತಿ ಮಸೂದೆಯಡಿಯಲ್ಲಿ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಘೋಷಿಸಿದೆ. ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು – ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಜಮ್ಮು ಕಾಶ್ಮೀರ ಹೆಸರು ಕೇಳಿದ್ರೇನೆ ಭಾರತೀಯರ ಮನಸ್ಸಲ್ಲಿ ಒಂದು ಬಗೆಯ ಗೊಂದಲ ಮೂಡುತ್ತದೆ. ಯಾಕಂದ್ರೆ ಜಮ್ಮು ಕಾಶ್ಮೀರ ಭಾರತದ ಭಾಗವೇ ಆಗಿದ್ರೂ ಪಾಕಿಸ್ತಾನದ ಆಟಾಟೋಪದಿಂದ ಉದ್ವಿಘ್ನ ಪರಿಸ್ಥಿತಿ ಮುಂದುವರಿದುಕೊಂಡೇ ಬಂದಿದೆ. ಆದ್ರೀಗ ನಿಧಾನಗತಿಯಲ್ಲಿ ಜಮ್ಮು ಕಾಶ್ಮೀರದ ಸ್ಥಿತಿ ಬದಲಾಗುತ್ತಿದೆ. ಇದೀಗ ಲೋಕಸಭಾ ಕಲಾಪದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ -2023 ಹಾಗೂ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ 2023 ಅನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ರು. ಲೋಕಸಭಾ ಕಲಾಪದ ವೇಳೆ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯನ್ನ ಅಂಗೀಕರಿಸಲಾಗಿದೆ. ಇದರಿಂದಾಗಿ ಜಮ್ಮು ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 37 ರಿಂದ 43 ಕ್ಕೆ ಏರಿಕೆಯಾಗಲಿದೆ. ಹಾಗೇ ಕಾಶ್ಮೀರದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು 46 ರಿಂದ 47 ಕ್ಕೆ ಏರಿಸಲಾಗಿದೆ. ಹಾಗೇ 24 ಸ್ಥಾನಗಳನ್ನು ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆಂದೇ ಮೀಸಲಿಡಲಾಗಿದೆ. ಕಾಶ್ಮೀರಿ ವಲಸಿಗ ಸಮುದಾಯದಿಂದ ಇಬ್ಬರು ಸದಸ್ಯರನ್ನು ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪ್ರತಿನಿಧಿಸುವ ಒಬ್ಬರನ್ನು ಶಾಸಕಾಂಗ ಸಭೆಗೆ ನಾಮನಿರ್ದೇಶನ ಮಾಡಲು ಮಸೂದೆ ಅವಕಾಶ ಮಾಡಿಕೊಡಲಿದೆ. ಲೋಕಸಭೆಯು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಮಸೂದೆ ಅಂಗೀಕಾರ  ಮಾಡುವ ಮೂಲಕ ನೇಮಕಾತಿ ಮತ್ತು ಪ್ರವೇಶದಲ್ಲಿ ಕೋಟಾಕ್ಕೆ ಅರ್ಹರಾಗಿರುವ ಜನರ ಬದಲಾವಣೆಗೆ ಸಹಾಯ ಮಾಡಲಿದೆ. ಈ ಎರಡು ಮಸೂದೆಗಳು 70 ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯವನ್ನು ನೀಡಲಿವೆ. ಒಂದು ಮಸೂದೆ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರಿ ವಲಸಿಗ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ.

Shantha Kumari