ಹಾರ್ದಿಕ್ ಪಾಂಡ್ಯ 07:07 ಮೆಸೇಜ್ ಹಿಂದಿರೋ ಸೀಕ್ರೆಟ್ ಏನು? – CSK ತಂಡ ಸೇರ್ತಾರಾ ಮುಂಬೈ ಕ್ಯಾಪ್ಟನ್?

ಹಾರ್ದಿಕ್ ಪಾಂಡ್ಯ 07:07 ಮೆಸೇಜ್ ಹಿಂದಿರೋ ಸೀಕ್ರೆಟ್ ಏನು? – CSK ತಂಡ ಸೇರ್ತಾರಾ ಮುಂಬೈ ಕ್ಯಾಪ್ಟನ್?

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್‌ನಲ್ಲಿ ಸೌಂಡ್ ಮಾಡಲೇ ಇಲ್ಲ. ತಂಡವನ್ನು ಗೆಲ್ಲಿಸಲಾಗದೇ ಒದ್ದಾಡಿದ್ದರು. ಒಂದು ಟೈಮ್‌ನಲ್ಲಿ ಬಲಿಷ್ಠ ಟೀಮ್ ಆಗಿದ್ದ ಮುಂಬೈ ಇಂಡಿಯನ್ಸ್ ಇದೀಗ 9ನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ನಾಯಕತ್ವ ಬದಲಾವಣೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:ಮಳೆಯಿಂದ ಪಂದ್ಯ ರದ್ದಾದ್ರೆ RCBಗೆ ಫೈನಲ್ ಟಿಕೆಟ್ – ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೆಂಗಳೂರಿಗೆ ಚಾನ್ಸ್

ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿದೆ. ಬಲಿಷ್ಠ ತಂಡವಾದ ಮುಂಬೈ ಇಂಡಿಯನ್ಸ್ ಇದೀಗ 9ನೇ ಸ್ಥಾನಕ್ಕಿಳಿದಿರುವುದು ಮುಂಬೈ ಮ್ಯಾನೇಜ್‌ಮೆಂಟ್‌ ಗೂ ತಲೆಬಿಸಿಯಾಗಿದೆ. ಮುಂಬೈ ತಂಡದಲ್ಲಿ ಅರ್ಧ ಟೀಮ್ ಇಂಡಿಯಾ ಆಟಗಾರರೇ ಇದ್ದಾರೆ. ಆದರೂ ಕೂಡಾ ಮುಂಬೈ ಇಂಡಿಯನ್ಸ್ ಈ ಬಾರಿ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ ವಿಚಾರ ಚರ್ಚೆಗೆ ಬಂದಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಪೋಸ್ಟ್ ಹಾಕುವ ಮೂಲಕ ಈ ಚರ್ಚೆಗೆ ಮತ್ತಷ್ಟು ಕುತೂಹಲ ಬರುವಂತೆ ಮಾಡಿದ್ದಾರೆ.

ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಇದರೊಂದಿಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸೋಷಿಯಲ್ ಮೀಡಿಯಾ ಪೋಸ್ಟ್​​ಗಳು ಹರಿದಾಡುತ್ತಿದೆ. ಸೋಮವಾರ (ಮೇ 25)ದಂದು ಹಾರ್ದಿಕ್ ಪಾಂಡ್ಯ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಲ್ಯಾಪ್ ಟಾಪ್, ಮೊಬೈಲ್ ಇತ್ತು. ಆ ಮೊಬೈಲ್ ಸ್ಕ್ರೀನ್ ಮೇಲೆ ಸಮಯ 07:07 ಎಂದು ತೋರಿಸಲಾಗಿತ್ತು. ಕ್ರಿಕೆಟ್ ಲೋಕದಲ್ಲಿ ‘7’ ಎಂದರೆ ಅದು ಎಂ.ಎಸ್. ಧೋನಿ. ಹೀಗಾಗಿ, ಹಾರ್ದಿಕ್ ಪಾಂಡ್ಯ ಬೇಕೆಂದೇ ಧೋನಿ ಅವರ ನಂಬರ್ ಇರುವ ಸಮಯದ ಫೋಟೋ ಹಾಕಿ, ತಾವು CSK ಸೇರುವ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಈ ಬಾರಿಯ ಐಪಿಎಲ್​ ನಡುವೆ  ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್​ಗೆ ಟ್ರೇಡ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಪಾಂಡ್ಯ ಹಂಚಿಕೊಂಡಿರುವ ಪೋಸ್ಟ್​ನಿಂದಾಗಿ ಈ ಸುದ್ದಿಯು ಮಹತ್ವ ಪಡೆದುಕೊಂಡಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್ ಅವರೊಂದಿಗೆ ಮೈದಾನದಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಈ ಮಾತುಕತೆ ಬೆನ್ನಲ್ಲೇ ಸಿಎಸ್​ಕೆ ರುತುರಾಜ್ ಗಾಯಕ್ವಾಡ್ ಅಥವಾ ಶಿವಂ ದುಬೆಯನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಹಂಚಿಕೊಂಡ ಒಂದೇ ಒಂದು ಪೋಸ್ಟ್​ನಿಂದ ಈ ಸುದ್ದಿಗಳು ಮಹತ್ವ ಪಡೆದುಕೊಂಡಿದೆ.

Sulekha

Leave a Reply

Your email address will not be published. Required fields are marked *