‘ಭಾರತದೊಂದಿಗೆ ಯುದ್ಧ ನಡೆದರೆ ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ’ – ಪಾಕಿಸ್ತಾನ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್

ಪಹಲ್ಗಾಮ್ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಆವರಿಸಿದೆ. ಭಾರತ-ಪಾಕಿಸ್ತಾನ ಸಂಘರ್ಷದಿಂದಾಗಿ ಪರಿಸ್ಥಿತಿ ಯುದ್ಧದಂತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್ ಯುದ್ಧದ ಸಂದರ್ಭದಲ್ಲಿ ತಮ್ಮ ಕಾರ್ಯತಂತ್ರವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಪತ್ರಕರ್ತರೊಬ್ಬರು ಶೇರ್ ಅಫ್ಜಲ್ ಖಾನ್ ಮರ್ವಾತ್ ಅವರನ್ನು ಭಾರತದೊಂದಿಗೆ ಯುದ್ಧ ನಡೆದರೆ, ನೀವು ಬಂದೂಕು ಎತ್ತಿಕೊಂಡು ಗಡಿಗೆ ಹೋಗುತ್ತೀರಾ ಎಂದು ಕೇಳುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಮಾರ್ವತ್ ಸ್ಪಷ್ಟವಾಗಿ, “ಭಾರತದೊಂದಿಗೆ ಯುದ್ಧ ನಡೆದರೆ ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ” ಎಂದು ಉತ್ತರಿಸಿದರು. “ನಾವು ಶಸ್ತ್ರಾಸ್ತ್ರ ಹಿಡಿಯುವ ಸೈನಿಕರಲ್ಲ. ಸೈನ್ಯವು ಯುದ್ಧ ಮಾಡುತ್ತದೆ. ನಾವು ಅವರನ್ನು ಹೊಗಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ” ಎಂದು ಅವರು ಹೇಳಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಿಂದೆ ಸರಿಯಬೇಕೆಂದು ನೀವು ಭಾವಿಸುತ್ತೀರಾ ಎಂದು ಪತ್ರಕರ್ತ ಕೇಳಿದಾಗ? ಶೇರ್ ಅಫ್ಜಲ್ ಮಾರ್ವತ್ ವ್ಯಂಗ್ಯವಾಡುವ ಧ್ವನಿಯಲ್ಲಿ, ‘ಮೋದಿ ನನ್ನ ಚಿಕ್ಕಮ್ಮನ ಮಗನಾ, ನನ್ನ ಆಜ್ಞೆಗೆ ಮಣಿಯುತ್ತಾರಾ?’ಎಂದು ಹೇಳಿದರು. ಅವರ ಹೇಳಿಕೆ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಹಾಸ್ಯಪ್ರಜ್ಞೆಯನ್ನು ಹೊಗಳಿದರು. ಆದರೆ ಕೆಲವು ವಿಮರ್ಶಕರು ಅವರನ್ನು ಟೀಕಿಸಿ ‘ಹೇಡಿ’ ಎಂದು ಕರೆದರು. ಅವರ ಹೇಳಿಕೆಯನ್ನು ಟೀಕಿಸುತ್ತಿರುವ ನೆಟ್ಟಿಗರು “ಸಂಸದರೇ ಓಡಿಹೋಗುವ ಬಗ್ಗೆ ಯೋಚಿಸುತ್ತಿರುವಾಗ, ಸೈನಿಕರ ನೈತಿಕ ಸ್ಥೈರ್ಯ ಹೇಗೆ ಹೆಚ್ಚಾಗುತ್ತದೆ?” ಎಂದು ಪ್ರಶ್ನಿಸುತ್ತಿದ್ದಾರೆ.