ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್‌ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI

ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್‌ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI

ಒಂದು ಟೈಮ್‌ನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದು ಲೆಜೆಂಡರಿ ಆಟಗಾರರಿಬ್ಬರ ನಡುವಿನ ಸಂಬಂಧ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ತಮ್ಮ ಸಿಟ್ಟನ್ನ ಕೇವಲ ಗ್ರೌಂಡ್​​ಗಷ್ಟೇ ಸೀಮಿತಗೊಳಿಸಿಲ್ಲ. ಮ್ಯಾಚ್ ಮುಗಿದ ಬಳಿಕವೂ ಮುಂದುವರೆಸಿಕೊಂಡು ಬಂದಿದ್ರು. ಕೊಹ್ಲಿ ಮತ್ತು ಗಂಭೀರ್ ನಡುವಿನ ಕಲಹ ಅದೆಷ್ಟರಮಟ್ಟಿಗಿತ್ತು ಅಂದರೆ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳೋ ತನಕವೂ ಹೋಗಿತ್ತು. ಕಾಲ ನೋಡಿ. ಹೇಗೆ ಬಂದಿದೆ ಅಂತಾ.. ಈಗ ಟೀಮ್ ಇಂಡಿಯಾಕ್ಕೆ ಗೌತಮ್ ಗಂಭೀರ್ ಕೋಚ್. ಅದೇ ಟೀಮ್ ಇಂಡಿಯಾಕ್ಕೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಇನ್ನು ಮುಂದಕ್ಕೆ ಇವರಿಬ್ಬರೂ ಟೀಮ್ ಇಂಡಿಯಾದ ಆಸ್ತಿಗಳು. ಇವರಿಬ್ಬರ ಸಂಬಂಧ ಮುಂದೆ ಹೇಗೆ ಇರಲಿದೆ?, ಟೀಮ್ ಇಂಡಿಯಾ ಕೋಚ್ ಆಗುವ ಉದ್ದೇಶಕ್ಕಾಗಿಯೇ ಗೌತಮ್ ಗಂಭೀರ್ ತನ್ನೆಲ್ಲಾ ಸೇಡನ್ನು ಮರೆತು ಕೊಹ್ಲಿ ಜೊತೆ ಕೈ ಜೋಡಿಸಿದ್ರಾ? ಗೌತಮ್ ಗಾಗಿ ಕೊಹ್ಲಿಯನ್ನ ಬಿಸಿಸಿಐ ಕಡೆಗಣಿಸಿತ್ತಾ? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಬಿಟ್ಟು ಹೊರನಡೆದ ಸುನಂದಾ – ಸುನೀತಾ ಶೆಟ್ಟಿ ನೋವಿನ ಮಾತು

ಕಿಂಗ್ ಕೊಹ್ಲಿ ಹೇಳಿ ಕೇಳಿ ಅಗ್ರೆಸ್ಸಿವ್ ಆಟಗಾರ. ಇದಕ್ಕೆ ಅಲ್ವಾ ವಿರಾಟ್ ಕೊಹ್ಲಿ ಅಂದ್ರೆ ಫ್ಯಾನ್ಸ್ ಗೂ ಸಿಕ್ಕಾಪಟ್ಟೆ ಕ್ರೇಜ್. ಇನ್ನು ಗೌತಮ್ ಗಂಭೀರ್. ಹೆಸರಿಗೆ ತಕ್ಕಂತೆ ಯಾವಾಗ್ಲೂ ಗಂಭೀರ ವದನದಿಂದಲೇ ಇರೋ ಕ್ರಿಕೆಟ್ ದಿಗ್ಗಜ. ಮುಖದಲ್ಲಿ ಮಂದಹಾಸ ಬೀರೋದು ತುಂಬಾ ಅಪರೂಪ. ಸೋಲು ಮತ್ತು ಸೇಡು ಎರಡನ್ನೂ ಸುಲಭದಲ್ಲಿ ಮರೆಯೋ ವ್ಯಕ್ತಿಯಲ್ಲ. ಆತ್ಮಾಭಿಮಾನಕ್ಕೆ ಭಂಗವಾದ್ರೆ ಹಿಂದೆ ಮುಂದೆ ನೋಡದೇ ನಿಂತ ಜಾಗದಲ್ಲೇ ಕಿರಿಕ್ ಮಾಡೋ ಗಂಭೀರ್ ಕೂಡಾ ಅಗ್ರೆಸ್ಸಿವ್ ಮ್ಯಾನ್. ಇನ್ನೂ ಕೊಹ್ಲಿ ಈ ಜಮಾನಾದ ಕ್ರಿಕೆಟರ್, ಗಂಭೀರ್ ಗಿಂತ ಸ್ವಲ್ಪ ಜಾಸ್ತಿಯೇ ಆಕ್ರಮಣಕಾರಿ. ಇವರಿಬ್ಬರ ಮಧ್ಯೆ ಪ್ಯಾಚ್ ಅಪ್ ಆಗಿದೆ ಅನ್ನೋದು ಸದ್ಯದ ಸಮಾಧಾನದ ವಿಚಾರ. ಆದ್ರೆ, ಇದು ಎಷ್ಟು ಸತ್ಯ, ಗಂಭೀರ್ ಮತ್ತು ಕೊಹ್ಲಿ ನಡುವೆ ಬಾಂಧವ್ಯ ಹೇಗಿದೆ ಎಂಬ ಕುತೂಹಲ ಜೊತೆಗೆ ಆತಂಕವಂತೂ ಇದ್ದೇ ಇದೆ.

ಐಪಿಎಲ್ ಪಂದ್ಯದ ಟೈಮ್‌ನಲ್ಲಿ ನವೀನ್ ಉಲ್ ಹಕ್ ಜೊತೆಗೆ ಶುರುವಾದ ಕೊಹ್ಲಿ ಜಗಳ ನಂತರ ಬಂದು ನಿಂತಿದ್ದು ಗೌತಮ್​ ಗಂಭೀರ್ ವರೆಗೆ. ಆವತ್ತು ಜಗಳ ಬಿಡಿಸಲು ಬಂದ ಗಂಭೀರ್ ಗೆ ಎದೆಯುಬ್ಬಿಸಿ ನಿಂತಿದ್ದು ವಿರಾಟ್ ಕೊಹ್ಲಿ. ಈ ವೇಳೆ ವಿರಾಟ್ ಕೂಗಾಡಿದ್ದು ಗಂಭೀರ್​ರನ್ನ ಕೆರಳಿಸಿದೆ.

ನೇರವಾಗಿ ವಿರಾಟ್ ಕೊಹ್ಲಿ ಬಳಿಗೆ ಬಂದ ಗಂಭೀರ್, ಅದೇನ್ ಹೇಳಬೇಕೋ ಹೇಳು ಅಂತಾ ಗದರಿದ್ದಾರೆ. ಅದಕ್ಕೆ ಕೊಹ್ಲಿ, ನಾನು ನಿಮಗೆ ಏನನ್ನೂ ಹೇಳಿಲ್ಲ. ಮತ್ಯಾಕೆ ನೀವು ಮಧ್ಯಪ್ರವೇಶಿಸ್ತೀರಾ ಅಂತಾ ಅಗ್ರೆಸಿವ್ ಆಗಿಯೇ ಮಾತನಾಡಿದ್ರು. ಕೊಹ್ಲಿ ಮಾತು ಗಂಭೀರ್​​ರನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿದ್ದು, ನನ್ನ ತಂಡದ ಆಟಗಾರರನ್ನ ನೀನು ಹೀಯಾಳಿಸಿದ್ರೆ, ಅದು ನನ್ನ ಕುಟುಂಬವನ್ನೇ ಹೀಯಾಳಿಸಿದಂತೆ ಅಂತಾ ಬೈದಿದ್ದಾರೆ. ಅದಕ್ಕೆ ಕೊಹ್ಲಿ, ಹಾಗಿದ್ರೆ ನೀವು ನಿಮ್ಮ ಪ್ಯಾಮಿಲಿಯನ್ನ ಸರಿಯಾಗಿ ನೋಡಿಕೊಳ್ಳಿ ಅಂತಾ ಕೌಂಟರ್ ಕೊಟ್ಟಿದ್ದಾರೆ. ಇದಕ್ಕೆ ಗಂಭೀರ್, ಓ ಹಾಗಿದ್ರೆ ನಾನೀಗ ನಿನ್ನಿಂದ ಕಲಿಯಬೇಕಾಗಿದ್ಯಾ ಅಂತಾ ಪ್ರಶ್ನಿಸಿದ್ದಾರೆ. ಇಷ್ಟಾಗುತ್ತಲೇ ಲಕ್ನೋ ತಂಡದ ನಾಯಕ ಸೇರಿದಂತೆ ಸಹ ಆಟಗಾರರು ಕೊಹ್ಲಿ ಮತ್ತು ಗಂಭೀರ್​ರನ್ನ ಅಚೆಗೆ ಕರೆದುಕೊಂಡು ಹೋಗಿ ಪರಿಸ್ಥಿತಿ ಶಾಂತಗೊಳಿಸಿದ್ರು.. ಈ ಜಗಳ ನಡೆಯೋ ಸಂದರ್ಭದಲ್ಲಿ ಗಂಭೀರ್ ಲಕ್ನೋ ಟೀಮ್ ನ ಕೋಚ್ ಆಗಿದ್ರು. ನಂತರ ಇಬ್ಬರ ಮಧ್ಯೆ ಸಂದಾನಗಳು ನಡೆಯೋಕೆ ಶುರುವಾದ್ವು. ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಆ ಸಮಯದಲ್ಲಿ ಇಬ್ಬರ ನಡುವೆ ಸಂಧಾನಕ್ಕೆ ನಾನು ಸಿದ್ಧನಾಗಿದ್ದೇನೆ ಅಂತಾ ಹೇಳಿದ್ದರು. ಇಬ್ಬರೂ ಚಾಂಪಿಯನ್ ಆಟಗಾರರು. ಗಂಭೀರ್​ ಎರಡು ವಿಶ್ವಕಪ್​ಗಳನ್ನ ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಐಕಾನ್. ಇಬ್ಬರೂ ದೆಹಲಿಯವರೇ ಆಗಿದ್ದು, ಜೊತೆಗೆ ಕುಳಿತು ಮಾತುಕತೆ ನಡೆಸಿ ಎಲ್ಲದಕ್ಕೂ ಅಂತ್ಯ ಹಾಡಬೇಕು ಅಂತಾ ರವಿಶಾಸ್ತ್ರಿ ಸಲಹೆ ನೀಡಿದ್ದರು. ಜೊತೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಇಬ್ಬರಿಗೂ ಕಿವಿಮಾತು ಹೇಳಿದ್ದರು. ನಮ್ಮ ಟೈಮ್​​ನಲ್ಲಿ ಒಂದಷ್ಟು ಸ್ಲೆಡ್ಜಿಂಗ್, ಮಾತಿಗೆ ಮಾತು ನಡೀತಿತ್ತು. ಆದ್ರೆ ಈಗಿನ ಪ್ಲೇಯರ್ಸ್​ಗಳಂತೆ ಅತಿಯಾಗಿ ಯಾರೂ ವರ್ತನೆ ಮಾಡುತ್ತಿರಲಿಲ್ಲ. ಎಲ್ಲರೂ ಟಿವಿಯಲ್ಲಿ ನೋಡ್ತಾರೆ. ಕ್ಯಾಮರಾ ನನ್ನ ಕಡೆಗೆ ಇರುತೆ ಅನ್ನೋ ಕಾರಣಕ್ಕೆ ಕೆಲ ಆಟಗಾರರು ಓವರ್​​ ಆ್ಯಕ್ಟಿಂಗ್ ಮಾಡ್ತಾರೆ ಅಂತಾ ಮಾತಲ್ಲೇ ತಿವಿದಿದ್ದರು ಗವಾಸ್ಕರ್. ಸಮಯ ಸರಿದಂತೆ ಈ ಇಬ್ಬರು ಆಟಗಾರರು ಪರಸ್ಪರ ಕಚ್ಚಾಡುವುದನ್ನ ಕಡಿಮೆ ಮಾಡುತ್ತಾ ಬಂದ್ರು. ಅದ್ರಲ್ಲೂ ಈ ಬಾರಿ ಐಪಿಎಲ್ ಸೀಸನ್‌ನಲ್ಲಂತೂ ಕೊಹ್ಲಿ ಮತ್ತು ಗಂಭೀರ್ ರಿಲೇಶನ್ ಶಿಪ್ ತುಂಬಾ ಚೆನ್ನಾಗಿತ್ತು. ಇಬ್ಬರೂ ಕೂಡಾ ಮೈದಾನದಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದರು. ಪರಸ್ಪರ ಹಗ್ ಮಾಡಿಕೊಳ್ತಿದ್ರು. ನಗುಮೊಗದಲ್ಲೇ ಒಬ್ಬರಿಗೊಬ್ಬರು ಸ್ವಾಗತ ಕೋರಿಕೊಳ್ತಿದ್ರು. ಇದನ್ನ ನೋಡಿ ಫ್ಯಾನ್ಸ್ ಕೂಡಾ ಸಿಟ್ಟು, ಸೇಡು ಶಾಶ್ವತವಲ್ಲ ಅನ್ನೋದಕ್ಕೆ ಈ ಕ್ರಿಕೆಟ್ ದಿಗ್ಗಜರೇ ಸಾಕ್ಷಿ ಅಂತಿದ್ರು.

ವಿರಾಟ್​ ಕೊಹ್ಲಿ ಅವರ ಆರಂಭಿಕ ಕ್ರಿಕೆಟ್​ ಜರ್ನಿಯಲ್ಲಿ ಗಂಭೀರ್​ ಅವರು ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದರು. ಅಲ್ಲದೆ ಯುವ ಕ್ರಿಕೆಟಿಗರಿಗೆ ಈ ರೀತಿಯ ಗೌರವ ನೀಡಿದರೆ ಅವರು ಮುಂದೆ ಶ್ರೇಷ್ಠ ಕ್ರಿಕೆಟ್​ ಆಟಗಾರರಾಗಿ ಬೆಳೆಯುತ್ತಾರೆ ಎಂದಿದ್ದರು. ಹೌದು. ಈ ಇಬ್ಬರೂ ಕೂಡಾ ದೆಹಲಿಯವರೇ. ಇಬ್ಬರ ಮಧ್ಯೆ ಆರಂಭಿಕ ದಿನಗಳಲ್ಲಿ ರಿಲೇಶನ್ ಶಿಪ್ ಚೆನ್ನಾಗಿಯೇ ಇತ್ತು.

ಇದೀಗ ಕೋಚ್​ ಹುದ್ದೆಗೆ ಗಂಭೀರ್​ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.​ ಕಳೆದ ವರ್ಷದ ಐಪಿಎಲ್​ ವೇಳೆ ಕೊಹ್ಲಿ ಮತ್ತು ಗಂಭೀರ್ ನಡುವೆ ವೈಮನಸ್ಸಿತ್ತು. ಹೀಗಿರುವಾಗ ಬಿಸಿಸಿಐ ಗಂಭೀರ್​ ಅವರನ್ನು ಕೋಚ್​ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು, ಗೌತಮ್ ಗಂಭೀರ್ ಈ ಬಾರಿ ವಿರಾಟ್ ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಇರುವಂತೆ ನಡೆದುಕೊಂಡ ರೀತಿ ಆ ಸಮಯದಲ್ಲಿ ಯಾರಿಗೂ ಏನೂ ಅನ್ನಿಸಿರಲಿಲ್ಲ. ಇಬ್ಬರೂ ಮೊದಲಿನಂತೆ ಒಂದಾಗಿದ್ದಾರೆ ಎಂಬ ಸಮಾಧಾನವಿತ್ತಷ್ಟೇ. ಆದ್ರೀಗ ಗಂಭೀರ್ ಕೋಚ್ ಆಗೋ ಉದ್ದೇಶದಿಂದಲೇ ಕೊಹ್ಲಿ ಜೊತೆ ಚೆನ್ನಾಗಿದ್ದಿರಬಹುದು ಎಂಬ ಮಾತು ಕೇಳಿಬರ್ತಿದೆ. ಆದ್ರೆ, ಕ್ರಿಕೆಟ್ ಅನ್ನೋದು ಬರೀ ಆಟವಷ್ಟೇ. ಅಲ್ಲಿ ಸಿಟ್ಟು, ಸೇಡು, ಮುಯ್ಯಿ ಎಲ್ಲವೂ ಇರುತ್ತದೆ. ಆದ್ರೆ, ಅದನ್ನ ಮೈದಾನದಲ್ಲೇ ಬಿಟ್ಟು ಬರುವವನೇ ನಿಜವಾದ ಕ್ರಿಕೆಟಿಗ. ಈಗ ಕೋಚ್ ಮತ್ತು ಸ್ಟಾರ್ ಬ್ಯಾಟರ್ ಕೂಡಾ ತಮ್ಮ ಮುನಿಸನ್ನು ಮರೆತು ಒಂದಾಗಿದ್ದಾರೆ. ಮುಂದೆಯೂ ಹೀಗೆ ಇರಲಿ ಅಂತಿದ್ದಾರೆ ಫ್ಯಾನ್ಸ್. ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಮಹಾ ಗುರು.  ತಮ್ಮ ಸಿಟ್ಟನ್ನ ಸ್ವಲ್ಪ ಕಂಟ್ರೋಲ್​​ನಲ್ಲಿಟ್ಟುಕೊಂಡೇ ಟೀಮ್ ಇಂಡಿಯಾದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಬೇಕಾದ ಅನಿವಾರ್ಯತೆಯಿದೆ. ಮತ್ತೊಂದೆಡೆ ಕೊಹ್ಲಿಯೂ ಅಷ್ಟೇ. ತಾವೊಬ್ಬ ಹಿರಿಯ ಆಟಗಾರ ಅನ್ನೋದನ್ನ ಮರೀಬಾರದು. ಅದೆಷ್ಟೋ ಯುವಕರಿಗೆ ಕೊಹ್ಲಿಯೇ ರೋಲ್​ ಮಾಡೆಲ್. ಹೀಗಾಗಿ ಕೊಹ್ಲಿ ಕೂಡಾ ಕೋಚ್ ಜೊತೆ ಉತ್ತಮ ಬಾಂಧವ್ಯ ಹೊಂದಿರಲೇಬೇಕು. ಸೋ ಈ ಇಬ್ಬರೂ ಆಟಗಾರರು ತಮ್ಮ ತಮ್ಮ ಸಿಟ್ಟನ್ನ ಪಕ್ಕಕ್ಕಿಟ್ಟು ದೇಶಕ್ಕಾಗಿ ಒಟ್ಟಾಗಿ ಆಡಬೇಕಿದೆ. ಟೀಂ ಇಂಡಿಯಾ ಫ್ಯಾನ್ಸ್ ಆಸೆಯೂ ಇದೇ ಆಗಿದೆ.

suddiyaana