ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರುತ್ತಾರಾ? – ಮೈತ್ರಿ ಲೆಕ್ಕಾಚಾರಗಳೇನು?

ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರುತ್ತಾರಾ? – ಮೈತ್ರಿ ಲೆಕ್ಕಾಚಾರಗಳೇನು?

ಹೆಚ್. ಡಿ ದೇವೇಗೌಡ.. ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಹೊಂದಿರುವ ನಾಯಕ. ರಾಜ್ಯ ರಾಜಕೀಯದಲ್ಲಿ ದೊಡ್ಡಗೌಡ್ರ ಕುಟುಂಬ ಬಿಗಿಹಿಡಿತ ಕೂಡ ಹೊಂದಿದೆ. ಇದೀಗ ಹೆಚ್​ಡಿಡಿ ಕುಟುಂಬದ ಮತ್ತೊಬ್ಬ ಸದಸ್ಯರನ್ನ ಚುನಾವಣಾ ಅಖಾಡಕ್ಕಿಳಿಸಲು ವೇದಿಕೆ ಸಿದ್ಧವಾಗ್ತಿದೆ. ಹೆಚ್.ಡಿ ದೇವೇಗೌಡರ ಅಳಿಯ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಅವ್ರನ್ನ ಲೋಕಸಭಾ ಕಣಕ್ಕೆ ಕರೆತರಲು ಸರ್ವತಯಾರಿಯೂ ನಡೆಯುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹೇರಲಾಗ್ತಿದೆ. ಮಂಜುನಾಥ್ ಅವರ ಸ್ಪರ್ಧೆಗೆ ಬಿಜೆಪಿ ಮತ್ತು ಆರ್​ಎಸ್​ಎಸ್ ನಾಯಕರು ಕೂಡ ಒಲವು ತೋರಿದ್ದಾರೆ. ಹಾಗಾದ್ರೆ ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರ್ತಾರಾ..? ಬಂದ್ರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು..? ಬಿಜೆಪಿ ಲೆಕ್ಕಾಚಾರ ಏನು..? ಕಾಂಗ್ರೆಸ್​ಗೆ ಎಫೆಕ್ಟ್ ಆಗುತ್ತಾ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೃದಯಗಳ ಒಡೆಯ ಡಾ.ಸಿ.ಎನ್.ಮಂಜುನಾಥ್ – ಸತತ 17 ವರ್ಷಗಳ ಕಾಲ ನಿಸ್ವಾರ್ಥ ಸೇವೆ, ಜ. 31ರಂದು ಅವಧಿ ಮುಕ್ತಾಯ

ಡಾ.ಸಿ.ಎನ್ ಮಂಜುನಾಥ್ ಈವರೆಗೂ ರಾಜಕೀಯಕ್ಕೆ ಕಾಲಿಡದಿದ್ರೂ ಜನರಿಗೆ ಚಿರಪರಿಚಿತರಾಗಿದ್ದಾರೆ. ಖ್ಯಾತ ಹೃದಯ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದು, ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ. ಇದೀಗ ಮಂಜುನಾಥ್​ರನ್ನ ರಾಜಕಾರಣಕ್ಕೆ ಕರೆತರಲು ಜೆಡಿಎಸ್ ಹಾಗೂ ಬಿಜೆಪಿ ಭರ್ಜರಿ ಕಸರತ್ತು ನಡೆಸುತ್ತಿವೆ. ಹಾಗಾದ್ರೆ ಮಂಜುನಾಥ್ ರಾಜಕಾರಣಕ್ಕೆ ಬಂದ್ರೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು..? ಕ್ಷೇತ್ರದ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ಮೊದಲು ನೋಡೋಣ..

ಹಾಗೇನಾದ್ರೂ ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಒಪ್ಪಿದ್ದೇ ಆದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಅಥವಾ ದಕ್ಷಿಣದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಕಾಂಗ್ರೆಸ್ ನ ಹಾಲಿ ಸಂಸದರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ನಿಂದ ಮತ್ತೆ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ಸೋಲಿಸಲು ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ರೆ ಹೆಚ್ಚು ಲಾಭವಾಗಲಿದೆ ಅನ್ನೋ ಲೆಕ್ಕಾಚಾರವಿದೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯಿಂದ ಹಾಲಿ ಸಂಸದ ಡಿ.ವಿ ಸದಾನಂದಗೌಡ ಇದ್ದಾರೆ. ಆದ್ರೆ ಈಗಾಗ್ಲೇ ಡಿವಿಎಸ್ ಚುನಾವಣೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ತೇಜಸ್ವಿ ಸೂರ್ಯ ಬಿಜೆಪಿ ಸಂಸದರಾಗಿದ್ದಾರೆ. ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ದಿವಗಂತ ಅನಂತ್ ಕುಮಾರ್ ಅವರು ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಹಿಡಿತ ಹೊಂದಿದ್ದರು. ಸದ್ಯ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಅಭ್ಯರ್ಥಿ ಲಿಸ್ಟ್ ನಲ್ಲಿ ಕೇಳಿ ಬರುತ್ತಿದೆಯಾದ್ರೂ ಅಂತಿಮ ನಿರ್ಧಾರ ಹೈಕಮಾಂಡ್​ದೇ ಆಗಿರಲಿದೆ.

ಆರಂಭದಲ್ಲಿ ಹಾಸನದಿಂದ ಡಾ.ಸಿ.ಎನ್ ಮಂಜುನಾಥ್​ರನ್ನ ಕಣಕ್ಕಿಳಿಸಬಹುದು ಎಂದು ಚರ್ಚೆಯಾಗ್ತಿತ್ತು. ಯಾಕಂದ್ರೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಆಡಳಿತವಿರೋಧಿ ಅಲೆ ಇದ್ದು, ಬೇರೆ ಅಭ್ಯರ್ಥಿಯನ್ನ ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರ ಇತ್ತು. ಆದ್ರೀಗ ಬೆಂಗಳೂರು ಗ್ರಾಮಾಂತರ, ಉತ್ತರ ಅಥವಾ ದಕ್ಷಿಣ ಕ್ಷೇತ್ರದ ಹೆಸರು ಕೇಳಿ ಬರ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಸಿ.ಎನ್ ಮಂಜುನಾಥ್ ಲೋಕಸಭೆಗೆ ಸ್ಪರ್ಧೆ ಹಿಂದೆ ಬೇರೆಯದ್ದೇ ಲೆಕ್ಕಾಚಾರಗಳಿವೆ.

ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಡಾ.ಸಿ.ಎನ್. ಮಂಜುನಾಥ್ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ. ವೈದ್ಯಕೀಯ ಲೋಕದಲ್ಲಿ ಒಳ್ಳೆಯ ಹೆಸರಿದ್ದು, ಜನರಿಗೆ ಚಿರಪರಿಚಿತರಾಗಿದ್ದಾರೆ. ಜನವರಿ 31ರಂದು  ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಆದ್ರೆ ಈವರೆಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲ. ಹಾಗೇನಾದ್ರೂ ಲೋಕಸಭಾ ಚುನಾವಣೆಗೆ ಸ್ಪರ್ಧೆ ನಿಶ್ಚಿತವಾದ್ರೆ ಯಾವ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜೆಡಿಎಸ್ ​ನಿಂದಲೇ ಸ್ಪರ್ಧಿಸಿದ್ರೆ ಕುಟುಂಬ ರಾಜಕಾರಣದ ಹಣೆಪಟ್ಟಿ ಅಂಟಿಕೊಳ್ಳುತ್ತೆ. ಬಿಜೆಪಿಯಿಂದ ಸ್ಪರ್ಧಿಸಿದ್ರೆ ಕುಟುಂಬ ರಾಜಕಾರಣ ಹಣೆಪಟ್ಟಿ ಇರಲ್ಲ. ಆದ್ರೆ ಜೆಡಿಎಸ್ ನಿಂದ ತಪ್ಪು ಸಂದೇಶ ರವಾನೆಯಾದಂತಾಗುವ ಆತಂಕ ಇದೆ. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಕ್ಕೂ ಮತಗಳಿವೆ. ಡಾ.ಸಿ.ಎನ್. ಮಂಜುನಾಥ್ ಅಭ್ಯರ್ಥಿ ಆದಲ್ಲಿ ಮತಗಳನ್ನ ಸೆಳೆಯುವುದು ಸುಲಭ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯೂ ಬೂಸ್ಟರ್ ನೀಡಲಿದೆ. ಹಾಗೇ ದೇವೇಗೌಡರ ಆಶೀರ್ವಾದ, ಹೆಚ್ ​ಡಿಕೆ ಬೆಂಬಲ, ಸಿ.ಪಿ. ಯೋಗೇಶ್ವರ್​ ಸಹಕಾರ ಕೂಡ ಸಿಗಲಿದೆ.

ಸದ್ಯ ಈವರೆಗೂ ಎಲ್ಲಿಯೂ ಕೂಡ ಡಾ.ಸಿ.ಎನ್ ಮಂಜುನಾಥ್ ನಾನು ರಾಜಕಾರಣಕ್ಕೆ ಬರ್ತೇನೆ, ಚುನಾವಣೆಗೆ ಸ್ಪರ್ಧಿಸ್ತೇನೆ ಅಂತಾ ಘೋಷಣೆ ಮಾಡಿಲ್ಲ. ಆದ್ರೂ ಕೂಡ ಮೈತ್ರಿ ನಾಯಕರು ಅವ್ರನ್ನ ಒಪ್ಪಿಸೋಕೆ ಹರಸಾಹಸ ಪಡ್ತಿದ್ದಾರೆ. ಇನ್ನು ಡಾ.ಸಿ.ಎನ್ ಮಂಜುನಾಥ್ ಕುಟುಂಬಸ್ಥರ ಜೊತೆ ಮುಂದಿನ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಹೀಗಾಗಿ ಮುಂದೆ ಏನು ನಿರ್ಧಾರ ಕೈಗೊಳ್ತಾರೆ, ಚುನಾವಣೆಗೆ ಸ್ಪರ್ಧಿಸ್ತಾರಾ..? ಸ್ಪರ್ಧಿಸಿದ್ರೆ ಯಾವ ಕ್ಷೇತ್ರ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

Sulekha