‘ಸಾಧ್ಯವಾದಷ್ಟು’ ಕ್ಷೇತ್ರಗಳಿಗಷ್ಟೇ INDIA ಒಕ್ಕೂಟದ ಅಭ್ಯರ್ಥಿ ಆಯ್ಕೆ – ಲೋಕಸಭಾ ಸಮರಕ್ಕೆ ಮಹಾಮೈತ್ರಿಗೆ ಇರುವ ಸವಾಲುಗಳೇನು?

‘ಸಾಧ್ಯವಾದಷ್ಟು’ ಕ್ಷೇತ್ರಗಳಿಗಷ್ಟೇ INDIA ಒಕ್ಕೂಟದ ಅಭ್ಯರ್ಥಿ ಆಯ್ಕೆ – ಲೋಕಸಭಾ ಸಮರಕ್ಕೆ ಮಹಾಮೈತ್ರಿಗೆ ಇರುವ ಸವಾಲುಗಳೇನು?

ಮೋದಿ ಮೇನಿಯಾ, ಬಿಜೆಪಿ ಅಲೆಯನ್ನ ಹಿಮ್ಮೆಟ್ಟಿಸಿ 2024ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ವಿಪಕ್ಷಗಳೆಲ್ಲಾ ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿವೆ.. ಮಹಾರಾಷ್ಟ್ರದ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಎರಡು ದಿನಗಳ ಇಂಡಿಯಾ ಮಹಾಮೈತ್ರಿಕೂಟದ ಸಭೆ ನಡೆಸಲಾಗಿದೆ. ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಭೆಗೆ ದೇಶದ 26 ಪಕ್ಷಗಳ ನಾಯಕರು ಭಾಗಿಯಾಗಿದ್ರು. ಇದೀಗ ಮುಂಬೈನಲ್ಲಿ ನಡೆದ ಸಭೆಗೆ ಮತ್ತೆರಡು ಪಕ್ಷಗಳ ಬೆಂಬಲ ಸಿಕ್ಕಿದ್ದು ಈ ಮೂಲಕ ಇಂಡಿಯಾ ಒಕ್ಕೂಟದ ಬಲ 28ಕ್ಕೆ ಏರಿಕೆಯಾಗಿದೆ. ಆದ್ರೆ ಬಲ ಹೆಚ್ಚಾದ ಮಾತ್ರಕ್ಕೆ ಇಲ್ಲಿ ಇಂಡಿಯಾ ಒಕ್ಕೂಟಕ್ಕೆ ಲೋಕಸಭಾ ಸಮರವನ್ನ ಗೆಲ್ಲೋದು ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ತಮ್ಮೊಳಗಿನ ಮತ್ಸರವನ್ನ ಮರೆಮಾಚಿ ಒಗ್ಗಟ್ಟಿನ ಹೋರಾಟಕ್ಕೆ ಧುಮುಕಬೇಕಿದೆ.

ಇದನ್ನೂ ಓದಿ : ಶೇಕ್‌ ಹ್ಯಾಂಡ್‌ ಮಾಡೋದು ದೊಡ್ಡ ವಿಚಾರವಲ್ಲ.. ಇಬ್ಬರಿಗೂ ತಿಳುವಳಿಕೆ ಇದೆ.. – ಹುಟ್ಟುಹಬ್ಬದಂದೇ ದರ್ಶನ್‌ ಮುನಿಸು ಬಗ್ಗೆ ಮಾತನಾಡಿದ ಕಿಚ್ಚ!

ಎಲ್ಲಾ ಕ್ಷೇತ್ರಗಳಲ್ಲೂ ಒಮ್ಮತದ ಅಭ್ಯರ್ಥಿಯನ್ನ ಕಣಕ್ಕಿಳಿಸೋದು ಕೂಡ ದೊಡ್ಡ ಸವಾಲು. 2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದಲೇ ಸ್ಪರ್ಧಿಸುವ ನಿರ್ಣಯಗಳನ್ನ ವಿರೋಧಪಕ್ಷಗಳ ಇಂಡಿಯಾ ಮೈತ್ರಿಕೂಟ ಕೈಗೊಂಡಿದೆ. ಹಾಗೇ ಸೀಟು ಹಂಚಿಕೆ ಪ್ರಕ್ರಿಯೆಗೂ ಈಗಲೇ ಮುಂದಾಗಿದ್ದು ಭರ್ಜರಿ ತಂತ್ರಗಾರಿಕೆ ಶುರು ಮಾಡಿದೆ. ಸೆಪ್ಟೆಂಬರ್ 30ರ ಒಳಗೆ ರಾಜ್ಯವಾರು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು ಸೇರಿದಂತೆ ಪ್ರಮುಖ ತೀರ್ಮಾನ ಕೈಗೊಳ್ಳುವ ಅಧಿಕಾರವುಳ್ಳ 14 ಸದಸ್ಯರ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗಿದೆ ಪ್ರಮುಖವಾಗಿ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯವನ್ನು ಬ್ಲಾಕ್ ಪಕ್ಷಗಳು ಅಂಗೀಕರಿಸಿವೆ. ಭಾರತ ಬ್ಲಾಕ್ ಸಮನ್ವಯ ಸಮಿತಿಯಿಂದ ಸೀಟು ಹಂಚಿಕೆ ಸೂತ್ರಗಳನ್ನು ಸೆಪ್ಟೆಂಬರ್ 30 ರೊಳಗೆ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಂದ್ರೆ ಮೇಲ್ನೋಟಕ್ಕೆ ಇವ್ರೆಲ್ಲಾ ಒಗ್ಗಟ್ಟು ಒಗ್ಗಟ್ಟು ಅಂದ್ರು ಕೂಡ ಒಳಗಿನ ಬೆಂಕಿಯ ಬಿಸಿ ಅವ್ರಿಗೆ ತಟ್ಟೇ ತಟ್ಟುತ್ತೆ. ಅಲ್ಲದೆ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಿಗೆ ಮಾತ್ರ ಒಮ್ಮತದ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎನ್ನುವ ಮೂಲಕ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನ ತೆರೆದಿಟ್ಟಿದ್ದಾರೆ. ಯಾಕಂದ್ರೆ ಮೈತ್ರಿಕೂಟದಲ್ಲಿದ್ದುಕೊಂಡು ನಾವೆಲ್ಲಾ ಒಂದೇ ಅಂತಾ ಹೇಳಿದ್ರೂ ಸಾಮಾನ್ಯ ಅಭ್ಯರ್ಥಿಯನ್ನ ನಿಲ್ಲಿಸೋದು ಸುಲಭದ ಮಾತಲ್ಲ. ಈ ಮೈತ್ರಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಸೀಟು ಹಂಚಿಕೆ ವಿಷಯ ಬಂದಾಗ ಕಾಂಗ್ರೆಸ್, ಕೆಲ ಕ್ಷೇತ್ರಗಳನ್ನು ತಮಗೆ ಬಿಟ್ಟು ಕೊಡಬೇಕೆಂದು ಷರತ್ತು ಹಾಕಿದೆ. ಹೀಗಾಗಿ ದೆಹಲಿ, ಪಂಜಾಬ್, ಬಿಹಾರ, ಯುಪಿ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಸಮಸ್ಯೆಯಾಗುವ ಸಾಧ್ಯತೆಯಿದೆ.

ಮೋದಿಯವರ ಹೆಡೆಮುರಿ ಕಟ್ಟಲೇಬೇಕೆಂದು ಪಣತೊಟ್ಟಿರುವ ವಿಪಕ್ಷಗಳು, ತಾವಂದುಕೊಂಡಷ್ಟು ಸುಲಭವಾಗಿ ಗುರಿ ಮುಟ್ಟಲು ಸಾಧ್ಯವಿದೆಯಾ? ಜತೆಗೆ ಈಗ ಆತುರಾತುರವಾಗಿ ಒಂದಾಗಿರುವ ನಾಯಕರುಗಳು ಪ್ರಾದೇಶಿಕ ಮಟ್ಟದಲ್ಲಿ ತಮ್ಮ ಪಕ್ಷಗಳನ್ನು ಇದೇ ರೀತಿ ನೋಡಲು ಸಾಧ್ಯವೇ? ಎಂಬ ಪ್ರಶ್ನೆಗಳೂ ಮೂಡುತ್ತವೆ. ಯಾಕಂದ್ರೆ ಪಂಜಾಬಿನಲ್ಲಿ ಆಪ್ ಪಕ್ಷಕ್ಕೆ ಪ್ರಬಲ ಎದುರಾಳಿ ಅಂದ್ರೆ ಕಾಂಗ್ರೆಸ್‌. ಹಾಗೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವು ಕಾಂಗ್ರೆಸ್ ಮತ್ತು ಸಿಪಿಎಂ ಜತೆ ರಾಜಕೀಯ ವೈರತ್ವ ಹೊಂದಿದೆ. ಮಮತಾ ಬ್ಯಾನರ್ಜಿ ಸದ್ಯಕ್ಕೆ ಮೈತ್ರಿಕೂಟ ಸೇರಿದ್ರೂ ತಳಮಟ್ಟದ ಕಾರ್ಯಕರ್ತರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಬಲ್ಲವರಾರು?. ಹಾಗೇ ಪ್ರಬಲ ಹಿಂದುತ್ವವಾದಿ ಎಂದು ಕರೆಸಿಕೊಂಡಿರುವ ಉದ್ಧವ್ ಠಾಕ್ರೆಯವರ ಶಿವಸೇನೆಯೂ ಮೈತ್ರಿಕೂಟದಲ್ಲಿದೆ.    ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಏಕರೂಪದ ನಾಗರಿಕ ಸಂಹಿತೆಗೆ ಉದ್ಧವ್ ಠಾಕ್ರೆ ಬಣ ಈಗಾಗಲೇ ಬೆಂಬಲ ವ್ಯಕ್ತವಡಿಸಿದೆ. ಇದೇ ವಿಚಾರದಲ್ಲಿ ಶರದ್ ಪವಾರ್ ಅವರ ನಿಲುವು ಕೂಡ ಕುತೂಹಲ ಮೂಡಿಸಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷ, ಬಿಹಾರದ ಆರ್​ಜೆಡಿ ಪಕ್ಷ ಕೂಡ ಕೈಜೋಡಿಸೋದು ಅನುಮಾನ. ಇನ್ನು ಕೇರಳದಲ್ಲಿ ಸಿಪಿಎಂ ಪಕ್ಷ ಪ್ರಾಬಲ್ಯ ಇರೋದ್ರಿಂದ ತಮ್ಮದೇ ಅಭ್ಯರ್ಥಿಯನ್ನ ನಿಲ್ಲಿಸಬೇಕೆಂದು ಪಟ್ಟು ಹಿಡಿಯುತ್ತಾರೆ. ಆಗ ಇತರೆ ಪಕ್ಷಗಳು ಇದನ್ನ ಒಪ್ಪಿಕೊಳ್ಳೋದು ಕಷ್ಟವಾಗುತ್ತೆ. ಹೀಗಾಗಿ ಲೋಕಸಭಾ ಚುನಾವಣೆಗೆ ಹಲವು ಸವಾಲುಗಳು ಇರುವುದನ್ನ ಒಪ್ಪಿಕೊಳ್ಳಲೇಬೇಕಿದೆ.

 

suddiyaana