ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಮರಳುತ್ತಾರಾ..? ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳೀತಾರಾ..?
ಕರಾವಳಿ ಕರ್ನಾಟಕದಲ್ಲಿ ಅರುಣ್ ಕುಮಾರ್ ಪುತ್ತಿಲ ಪ್ರಭಾವಿ ನಾಯಕನಾಗಿ ಬೆಳೆದಿದ್ದಾರೆ. ಬಿಜೆಪಿಯಲ್ಲೂ ಕೂಡ ಹಿಂದುತ್ವದ ಅಜೆಂಡಾದಡಿ ಬಲಿಷ್ಠ ನಾಯಕನಾಗಿ ಗುರುತಿಸಿಕೊಂಡಿದ್ರು. ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಬಿಜೆಪಿ ಟಿಕೆಟ್ ಪುತ್ತಿಲ ಕೈ ತಪ್ಪಿತ್ತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಗೆ ಶಾಕ್ ಕೊಟ್ಟಿದ್ರು. ನಂತ್ರ ಸ್ಥಳೀಯ ಚುನಾವಣೆಗಳಲ್ಲೂ ಬಿಜೆಪಿಗೆ ಬಿಸಿ ತುಪ್ಪವಾಗಿದ್ರು. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದು ಒಂದ್ಕಡೆ ಸಂಧಾನದ ಮಾತುಕತೆ ನಡೀತಿದೆ. ಮತ್ತೊಂದೆಡೆ ಪುತ್ತಿಲಗೆ ಬಿಜೆಪಿ ಬಾಗಿಲು ಸಂಪೂರ್ಣವಾಗಿ ಬಂದ್ ಆಗುತ್ತೆ ಎನ್ನಲಾಗ್ತಿದೆ. ಹಾಗಾದ್ರೆ ಪುತ್ತಿಲ ಬಿಜೆಪಿಗೆ ಮರಳುತ್ತಾರಾ..? ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳೀತಾರಾ..? ಸಂಧಾನ ಸಕ್ಸಸ್ ಆಯ್ತಾ, ಫೇಲ್ ಆಯ್ತಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ – ಯತೀಂದ್ರ ಹೊಸ ಬಾಂಬ್!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣ್ ಪುತ್ತಿಲ ಅಪಾರ ಬೆಂಬಲಿಗರ ಪಡೆಯನ್ನ ಹೊಂದಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಪಕ್ಷದಿಂದ ಹೊರ ಬಂದಿದ್ದ ಪುತ್ತಿಲ ಇದೀಗ ಮತ್ತೆ ಪಕ್ಷ ಸೇರೋ ತವಕದಲ್ಲಿದ್ದಾರೆ. ಹೀಗಾಗಿ ಮುನಿಸು ಮರೆತು ಒಂದಾಗಲು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದರು. ಬಿ.ಎಲ್.ಸಂತೋಷ್ ಸೇರಿ ಹಲವು ನಾಯಕರನ್ನ ಭೇಟಿ ಮಾಡಿ ಡಿಮ್ಯಾಂಡ್ ಮಾಡಿದ್ದರು. ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ಬಳಿಕ ಮತ್ತೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಪುತ್ತಿಲ ಪರಿವಾರದ ಮುಖಂಡರು ಸಹ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನ ಭೇಟಿಯಾಗಿ ಬೇಡಿಕೆ ಇಟ್ಟಿದ್ದರು. ಆದರೂ, ಜಿಲ್ಲಾಧ್ಯಕ್ಷ ಸ್ಥಾನವನ್ನು ಪುತ್ತಿಲಗೆ ನೀಡಿಲ್ಲ. ಪುತ್ತಿಲಗೆ ಜಿಲ್ಲಾಧ್ಯಕ್ಷ ಸ್ಥಾನ ಕೈತಪ್ಪೋಕೆ ಕಾರಣವೂ ಇದೆ.
ಪುತ್ತಿಲ ಸೇರ್ಪಡೆಗೆ ವಿರೋಧ!
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ರೆ ಬಂಡಾಯದಿಂದ ಹಿಂದೆ ಸರಿಯೋದಾಗಿ ಪುತ್ತಿಲ ಹೇಳಿದ್ದರು. ಆದರೆ, ಪುತ್ತಿಲಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪುತ್ತಿಲಗೆ ಸ್ಥಾನಮಾನ ನೀಡಲು ಸ್ಥಳೀಯರಿಂದಲೇ ಬಾರೀ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ. ಖಾದರ್ ವಿರುದ್ಧ ಸ್ಪರ್ಧಿಸಿದ್ದ ಸತೀಶ್ ಕುಂಪಲಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವಂತೆ ತಿಳಿಸಿದ್ದರು. ಪುತ್ತೂರು ನಗರಸಭೆ ಉಪಚುನಾವಣೆಯಲ್ಲಿ ಪುತ್ತಿಲ ಬಂಡಾಯವೆದಿದ್ದರು. ಈ ವೇಳೆ ಪುತ್ತಿಲ ಪರಿವಾರ ಎರಡೂ ಸ್ಥಾನಗಳನ್ನೂ ಸೋತಿದ್ದರು. ಆದ್ದರಿಂದ ಪುತ್ತಿಲ ಜಿಲ್ಲಾಧ್ಯಕ್ಷ ಬೇಡಿಕೆಯನ್ನು ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ಮಾಡಿದ್ದಾರೆ. ಅರುಣ್ ಪುತ್ತಿಲ ವಿರುದ್ಧ ಮತ್ತೆ ಡೋಂಟ್ ಕೇರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನ ಕೈ ತಪ್ಪಿದ ಹಾಗೂ ಬಿಜೆಪಿಯಲ್ಲಿ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಪುತ್ತಿಲ ಬಂಡಾಯ ಫಿಕ್ಸ್ ಆಗಿದೆ. ಪುತ್ತಿಲ ಬಂಡಾಯವೆದ್ದರೂ ಸೈಲೆಂಟ್ ಆಗಿರಲು ಬಿಜೆಪಿ ನಿರ್ಧಾರ ಮಾಡಿದೆ. ಪುತ್ತಿಲ ಜತೆ ಸಂಧಾನ ಮಾತುಕತೆ ನಡೆಸದಿರಲು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ. ಆದ್ರೆ ಮತ್ತೊಂದಷ್ಟು ಪ್ರಮುಖ ನಾಯಕರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ.
ಹೆಚ್ಚುತ್ತಲೇ ಇದೆ ಪುತ್ತಿಲ ಪವರ್!
ಅರುಣ್ ಪುತ್ತಿಲಗೆ ಬೆಂಬಲಿಗರ ಪಡೆ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಎರಡನೇ ಸ್ಥಾನ ಪಡೆದಿದ್ರು. ಬಳಿಕ ಪುತ್ತಿಲ ಪರಿವಾರ ಸಂಘಟನೆ ಸ್ಥಾಪನೆಯಾದ ಬಳಿಕವಂತೂ ಅಂತರ ಇನ್ನೂ ಹೆಚ್ಚುತ್ತಲೇ ಹೋಯಿತು. ಪುತ್ತಿಲ ಪರಿವಾರ ಸಂಘಟನೆ ಮೂಲಕ ಹಲವು ಕಾರ್ಯಕ್ರಮಗಳು ನಡೆದವು. ಪುತ್ತಿಲ ಅವರು ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಬಲಪಂಥೀಯ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪುತ್ತಿಲ ಪರಿವಾರದಿಂದಲೂ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಇತ್ತೀಚೆಗೆ ಪುತ್ತಿಲ ಪರಿವಾರದ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸೇರಿದ ಭಕ್ತ ಸಮೂಹ ಇತಿಹಾಸ ಸೃಷ್ಟಿಸಿದೆ.
ಈಗಾಗಲೇ ಪುತ್ತೂರು ನಗರಸಭೆ ಉಪಚುನಾವಣೆ ಹತ್ತಿರ ಬರುವ ಸಂದರ್ಭ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ವಿವಿಧ ಸುತ್ತುಗಳ ಮಾತುಕತೆ ನಡೆದಿದೆ. ಆದ್ರೆ ಬಿಜೆಪಿಗೆ ಮತ್ತೆ ಕರೆತರಬೇಕೋ ಬೇಡವೋ ಎಂಬ ಚರ್ಚೆಯೂ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ರೆ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಪುತ್ತಿಲ ಮತ್ತೊಮ್ಮೆ ಬಿಸಿ ತುಪ್ಪವಾಗಿದ್ದಾರೆ.