ಮರಳಿ ಬಿಜೆಪಿಗೆ ಸೇರುತ್ತಾರಾ ಅರುಣ್ ಕುಮಾರ್ ಪುತ್ತಿಲ? – ಫೆಬ್ರವರಿ 5ಕ್ಕೆ ಮುಹೂರ್ತ ಫಿಕ್ಸ್?

ಮರಳಿ ಬಿಜೆಪಿಗೆ ಸೇರುತ್ತಾರಾ ಅರುಣ್ ಕುಮಾರ್ ಪುತ್ತಿಲ? – ಫೆಬ್ರವರಿ 5ಕ್ಕೆ ಮುಹೂರ್ತ ಫಿಕ್ಸ್?

ರಾಜ್ಯ ಬಿಜೆಪಿಯಲ್ಲಿ ಈಗ ಘರ್ ವಾಪ್ಸಿ ತಂತ್ರ ಜೋರಾಗಿಯೇ ನಡೀತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗಾಗ್ಲೇ ಕೇಸರಿ ಬ್ರಿಗೇಡ್​ಗೆ ಮರಳಿದ್ದಾರೆ. ನೆಕ್ಸ್​ಟ್ ಲಿಸ್ಟ್​ನಲ್ಲಿ ಲಕ್ಷ್ಮಣ ಸವದಿ ಹಾಗೂ ಜನಾರ್ಧನ ರೆಡ್ಡಿ ಹೆಸರು ಕೇಳಿ ಬರುತ್ತಿರುತ್ತಿದೆ. ಇದ್ರ ನಡುವೆ ಕರಾವಳಿ ಭಾಗದ ಪ್ರಭಾವಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೂಡ ಬಿಜೆಪಿ ಸೇರ್ಪಡೆ ವಿಚಾರ ಸಂಚಲನ ಮೂಡಿಸಿದೆ. ಪುತ್ತಿಲ ಪರಿವಾರದ ಮುಖ್ಯಸ್ಥ ಪುತ್ತಿಲರನ್ನ ಮರಳಿ ಬಿಜೆಪಿಗೆ ಸೇರಿಸಿಕೊಳ್ಳೋಕೆ ವೇದಿಕೆ ಸಿದ್ಧವಾಗ್ತಿದೆ. ರಾಜ್ಯ ಮಟ್ಟದ ನಾಯಕರು ಸೇರ್ಪಡೆಗೆ ಅಸ್ತು ಅಂತಿದ್ರೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಮರಳುತ್ತಾರಾ..? ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳೀತಾರಾ..?

ಕಳೆದ ಎರಡು ದಿನಗಳಿಂದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರದಲ್ಲೇ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕಾರ್ಯಕರ್ತರ ಜೊತೆ ಸಮಾಲೋಚನೆಗೆ ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಫೆಬ್ರವರಿ 5 ರಂದು ಪುತ್ತೂರಿನ ಕೋಟೆಚಾಹಾಲ್ ನಲ್ಲಿ ಸಮಾವೇಶ ನಡೆಯಲಿದೆ. ಪುತ್ತಿಲ ಪರಿವಾರದ ಪ್ರಸನ್ನ ಮಾರ್ತ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ಸೇರಬೇಕಾ ಅನ್ನೋದರ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಲೋಕಸಭೆಗೆ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ಬಿಜೆಪಿಗೆ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.ಇತ್ತ ಬಿಜೆಪಿ ಕಾರ್ಯಕರ್ತರು ಯಾವುದೇ ಷರತ್ತು ಇಲ್ಲದೇ ಪಕ್ಷ ಬರಲಿ ಎಂದು ಹೇಳುತ್ತಿದ್ದಾರೆ. ಬಂದ್ಮೇಲೆ ಪಕ್ಷದ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಭಾಗದ ಬಿಜೆಪಿ ಮುಖಂಡರು ಮತ್ತು ಆರ್​ಎಸ್​ಎಸ್ ಮುಖಂಡರ ಜೊತೆ ಅರುಣ್ ಕುಮಾರ್ ಪುತ್ತಿಲ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರನ್ನು ಮರಳಿ ಕರೆದುಕೊಂಡು ಬರಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಮಾತುಕತೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಆರ್​ಎಸ್​ಎಸ್​ ಪ್ರಮುಖರು ಅರುಣ್ ಕುಮಾರ್ ಪುತ್ತಿಲ ಜೊತೆ ಘರ್ ವಾಪ್ಸಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ 10 ತಿಂಗಳಿನಿಂದ ರಾಜಕೀಯ ವಿರೋಧಿಯಾಗಿರೋ ಪುತ್ತಿಲ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪಕ್ಷಕ್ಕೆ ಸೇರ್ಪಡೆ ಆಗೋದಾದ್ರೆ ಬಿಜೆಪಿಯ ನಿಯಮಗಳನ್ನು ಒಪ್ಪಿಕೊಂಡು ಬರಬೇಕು ಎಂಬ ಕೂಗು ಕೇಳಿ ಬಂದಿದೆ. ಆದ್ರೆ ಬಿಜೆಪಿಯ ಹಿರಿಯ ನಾಯಕರು ಪುತ್ತಿಲರನ್ನ ಮರಳಿ ಬಿಜೆಪಿಗೆ ಸೇರಿಸಿಕೊಳ್ಳೋದ್ರ ಹಿಂದೆ ಕಾರಣವೂ ಇದೆ.

ಅರುಣ್ ಪುತ್ತಿಲಗೆ ಬೆಂಬಲಿಗರ ಪಡೆ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಎರಡನೇ ಸ್ಥಾನ ಪಡೆದಿದ್ರು. ಬಳಿಕ ಪುತ್ತಿಲ ಪರಿವಾರ ಸಂಘಟನೆ ಸ್ಥಾಪನೆಯಾದ ಬಳಿಕವಂತೂ ಅಂತರ ಇನ್ನೂ ಹೆಚ್ಚುತ್ತಲೇ ಹೋಯಿತು. ಪುತ್ತಿಲ ಪರಿವಾರ ಸಂಘಟನೆ ಮೂಲಕ ಹಲವು ಕಾರ್ಯಕ್ರಮಗಳು ನಡೆದವು. ಪುತ್ತಿಲ ಅವರು ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಬಲಪಂಥೀಯ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪುತ್ತಿಲ ಪರಿವಾರದಿಂದಲೂ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೆ ಈ ಬಾರಿಯ ಲೋಕಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸೋ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗೇನಾದ್ರೂ ಪುತ್ತಿಲ ಸ್ಪರ್ಧಿಸಿದ್ರೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುವ ಆತಂಕ ಇದೆ.

ಇನ್ನು ಬಿಜೆಪಿಗೆ ಮರಳಲು ಪುತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪುತ್ತಿಲ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಇದು ಬಿಜೆಪಿ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಯಾಕಂದ್ರೆ ಪುತ್ತಿಲ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಪುತ್ತೂರು ನಗರಸಭೆ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿಯೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಬಿಜೆಪಿಗೆ ಟಕ್ಕರ್ ನೀಡಲಾಗಿತ್ತು. ಇದರ ಜೊತೆಗೆ ಪುತ್ತೂರು ಭಾಗದಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವೆ ರಾಜಕೀಯ ಗುದ್ದಾಟ ಶುರುವಾಗಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆಗೆ ಪುತ್ತಿಲ ಪರಿವಾರದ ಸದಸ್ಯರು ಕಾರಣ ಎಂಬ ಗಂಭೀರ ಆರೋಪ ಸಹ ಕೇಳಿ ಬಂದಿತ್ತು.  ಹೀಗಾಗಿ  ಯಾವುದೇ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಬರುವಂತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಪಕ್ಷ ನೀಡಿದ ಜವಾಬ್ದಾರಿ ಒಪ್ಪಿಕೊಂಡು ಇರುವುದಾದರೆ ಪಕ್ಷಕ್ಕೆ ಸ್ವಾಗತ ಎಂಬುವುದು ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ. ಇತ್ತ ಪುತ್ತಿಲ ತನ್ನ ಪರಿವಾರದ ಜೊತೆ ಫೆಬ್ರವರಿ 5ಕ್ಕೆ ಸಮಾಲೋಚನ ಸಭೆ ಇಟ್ಟುಕೊಂಡಿದ್ದಾರೆ. ಚರ್ಚೆ ಬಳಿಕ ಯಾವ ನಿರ್ಧಾರ ತೆಗೆದುಕೊಳ್ತಾರೆ ಕಾದು ನೋಡ್ಬೇಕು.

Sulekha