ಲೋಕಸಭಾ ಅಖಾಡಕ್ಕೆ ಇಳಿಯುತ್ತಾರಾ ಅಣ್ಣಾಮಲೈ – ದಕ್ಷಿಣ ಭಾರತದಲ್ಲಿ ಅಸ್ತಿತ್ವ ಉಳಿಸಿಕೊಳ್ಳುತ್ತಾ ಬಿಜೆಪಿ?
ಲೋಕಸಭಾ ಚುನಾವಣೆಗೆ ಕೆಲವೇ ಕೆಲ ವಾರಗಳಷ್ಟೇ ಬಾಕಿ ಉಳಿದಿವೆ. ತನ್ನ ನೆಲೆಯೇ ಇಲ್ಲದ ತಮಿಳುನಾಡಿನಲ್ಲಿ ಕಮಲ ಅರಳಿಸಲು ಬಿಜೆಪಿ ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ. ದ್ರಾವಿಡ ಚಳುವಳಿ ಮೂಲಕ ಹುಟ್ಟಿದ ಪಕ್ಷಗಳು ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಾ ಬಂದಿವೆ. ಕಾಂಗ್ರೆಸ್ ಒಂದು ಹಂತದಲ್ಲಿ ತನ್ನ ನೆಲೆಯನ್ನು ಹೊಂದಿದ್ದರೂ, ಬಿಜೆಪಿಗೆ ಅಲ್ಲಿ ನೆಲೆಯಿಲ್ಲ. ದ್ರಾವಿಡ ಸಿದ್ಧಾಂತವನ್ನು ನಂಬಿರುವ ತಮಿಳರು ಬಿಜೆಪಿಯ ಕೋಮುವಾದವನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. ಇತ್ತೀಚೆಗೆ, ಬಿಜೆಪಿ ಜೊತೆ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ಎಐಎಡಿಎಂಕೆ ಕೂಟ ಬಿಜೆಪಿ ಜೊತೆಗಿನ ಸಖ್ಯ ತೊರೆದಿದೆ. ಈಗ, ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿದೆ. ತಮಿಳಿಗರನ್ನು ಬಿಜೆಪಿಯತ್ತ ಸೆಳೆಯಲು ಹೊಸ ಹೊಸ ಹೆಜ್ಜೆಗಳನ್ನ ಇಡಲಾಗ್ತಿದೆ. ಆದ್ರೆ ತಮಿಳುನಾಡು ರಾಜ್ಯಾಧ್ಯಕ್ಷರಾಗಿ ಪಕ್ಷದ ಜಬಾವ್ದಾರಿ ಹೊತ್ತಿರುವ ಐಪಿಎಸ್ ಮಾಜಿ ಅಧಿಕಾರಿ ಕೆ.ಅಣ್ಣಾಮಲೈ ಬಿರುಗಾಳಿ ಎಬ್ಬಿಸಿದ್ದಾರೆ.
ಇದನ್ನೂ ಓದಿ: ಜನರಿಂದ ದೂರ ಉಳಿದ ಸಂಸದೆ ಸುಮಲತಾ – ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..?
ಲೋಕಸಭಾ ಅಖಾಡಕ್ಕೆ ಅಣ್ಣಾಮಲೈ
ಬಿಜೆಪಿ ಅದೆಷ್ಟೇ ಸರ್ಕಸ್ ಮಾಡಿದ್ರೂ ಅದೆಷ್ಟೇ ಕಸರತ್ತು ನಡೆಸಿದ್ರೂ ದಕ್ಷಿಣ ಭಾರತದಲ್ಲಿ ನೆಲೆಯೇ ಸಿಗ್ತಿಲ್ಲ. ಕರ್ನಾಟಕದಲ್ಲಿ ಒಂದು ಮಟ್ಟಕ್ಕೆ ಹವಾ ಇದೆ ಅಂದ್ರೂ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸೋಕೆ ಸಾಧ್ಯವಾಗಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಪ್ರಮುಖ ರಾಜ್ಯವಾಗಿ ತಮಿಳುನಾಡಿನಲ್ಲಿ ಗೆಲುವು ದಾಖಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದರಲ್ಲೂ ಕೆ. ಅಣ್ಣಾಮಲೈ ಅವರು ಈಗಾಗಲೇ ತಮಿಳುನಾಡಿನ ಪೂರ್ತಿ ಎನ್ ಮನ್ ಎನ್ ಮಕ್ಕಳ್ ಹೆಸರಲ್ಲಿ ಬೃಹತ್ ಯಾತ್ರೆ ಮಾಡಿ ಬಿಜೆಪಿ ಪಕ್ಷಸಂಘಟನೆ ಮಾಡ್ತಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಧಾನಿ ಮೋದಿ ಅವರಿಂದ ಬಹಿರಂಗವಾಗಿ ಬೆನ್ನು ತಟ್ಟಿಸಿಕೊಂಡಿದ್ದಾರೆ. ಎನ್ ಮನ್ ಎನ್ ಮಕ್ಕಳ್ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಫೆಬ್ರವರಿ 27ರಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಬೃಹತ್ ಯಾತ್ರೆ ಕೊನೆಗೊಂಡಿತ್ತು. ರಾಜ್ಯವ್ಯಾಪಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕೆ. ಅಣ್ಣಾಮಲೈ ಅವರಿಗೆ ಪ್ರಧಾನಿ ಮೋದಿ ಅವರು ಸಾಥ್ ನೀಡಿದ್ದರು. ಈ ವೇಳೆ ವೇದಿಕೆ ಮೇಲೆ ಲಕ್ಷಾಂತರ ಜನರ ಎದುರು ಪ್ರಧಾನಿ ಮೋದಿ ಅವರು ಅಣ್ಣಾಮಲೈ ಅವರ ಬೆನ್ನು ತಟ್ಟಿದರು. ಅಲ್ಲದೆ ಕೈಹಿಡಿದು ಅಣ್ಣಾಮಲೈ ಕಾರ್ಯಕ್ಕಾಗಿ ಭೇಷ್ ಎನ್ನುವಂತೆ ಕುಳಿತಿದ್ದರು.
ಇಷ್ಟೆಲ್ಲಾ ಬೆಳವಣಿಗೆ ಬಳಿಕ ಅಣ್ಣಾಮಲೈ ಲೋಕಸಭಾ ಚುನಾವಣೆಗೆ ಸ್ಪರ್ಧಿಸ್ತಾರೆ ಎಂದೇ ಹೇಳಲಾಗ್ತಿದೆ. ಈ ಬಗ್ಗೆ ಸ್ವತಃ ಅಣ್ಣಾಮಲೈ ಮಾತನಾಡಿದ್ದಾರೆ. ನಮ್ಮದು ಕಾರ್ಯಕರ್ತರ ಪಕ್ಷ, ದೆಹಲಿಯ ನಮ್ಮ ಹಿರಿಯ ನಾಯಕರು ನಮಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಒಂದು ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದರೆ ಅದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ ಎಂದು ಅಣ್ಣಾಮಲೈ, ಚುನಾವಣೆಯ ಸ್ಪರ್ಧೆಯ ವಿಚಾರದಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಆದ್ರೆ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ತಮಿಳುನಾಡಿನಲ್ಲಿ ಕಮಲದ ಅಲೆ ಬೀಸಿದೆ ಅನ್ನೋದನ್ನ ಸಮೀಕ್ಷೆಗಳೇ ಹೇಳ್ತಿವೆ.
ಸಮೀಕ್ಷೆಯಲ್ಲೂ ಬಿಜೆಪಿ ಅಲೆ!
ಫೆಡರಲ್ ಪುತಿಯ ತಲೈಮುರೈ ಸಮೀಕ್ಷೆಯ ಪ್ರಕಾರ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸುಧಾರಿಸಿಕೊಳ್ಳುತ್ತಿದೆ. ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ಎರಡೂ ಪಕ್ಷಗಳ ವೋಟ್ ಶೇರ್ ಇಳಿಕೆಯಾಗಲಿದೆ, ಇನ್ನೊಂದು ಕಡೆ ಬಿಜೆಪಿಯ ಜನಪ್ರಿಯತೆ ಹೆಚ್ಚಾಗಲಿದೆ. ಬಿಜೆಪಿಯ ವೋಟ್ ಶೇರ್ 2019ರಲ್ಲಿ ಶೇ. 3.71 ಇದ್ದದ್ದು 2024ರಲ್ಲಿ ಶೇ. 18.48ರಷ್ಟು ವೃದ್ದಿಯಾಗಲಿದೆ. ಹಾಗೇ ಒಟ್ಟು 39 ಲೋಕಸಭಾ ಸ್ಥಾನಗಳ ಪೈಕಿ, ಡಿಎಂಕೆ – 29 ರಿಂದ 31, ಬಿಜೆಪಿ – 4 ರಿಂದ 6 ಮತ್ತು ಎಐಎಡಿಎಂಕೆ 4 ರಿಂದ 6ಸ್ಥಾನವನ್ನು ಪಡೆಯಬಹುದು ಎಂದು ಹೇಳಲಾಗಿದೆ. ಸೆಂಟ್ರಲ್ ತಮಿಳುನಾಡು ಹೊರತು ಪಡಿಸಿ, ಮಿಕ್ಕ ವಲಯಗಳಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.
ಒಟ್ನಲ್ಲಿ ತಮಿಳುನಾಡು ರಾಜ್ಯಾಧ್ಯಕ್ಷರಾದ ಬಳಿಕ ಅಣ್ಣಾಮಲೈ ಅವರು ತಮಿಳುನಾಡಿನಾದ್ಯಂತ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ದ್ರಾವಿಡ ಪಕ್ಷಗಳ ಆಡಳಿತಾರೂಢ ಡಿಎಂಕೆ ಮತ್ತು ತಮ್ಮ ಸಕ್ಯ ತೊರೆದ ಎಐಎಡಿಎಂಕೆ ಆಡಳಿತದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗೇ ತಮಿಳುನಾಡಿನಲ್ಲಿಯೇ ಹುಟ್ಟಿ ಬೆಳೆದಿದ್ದ ಅಣ್ಣಾಮಲೈ ಸಾಮಾನ್ಯ ತಮಿಳಿಗರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಅಣ್ಣಾಮಲೈ ಹವಾ ಜೋರಾಗೇ ಇದೆ. ಲೋಸಕಭಾ ಚುನಾವಣೆ ಬಳಿಕ ಅಸಲಿ ಪಿಕ್ಚರ್ ಸಿಗಲಿದೆ.