ಬೆಂಗಳೂರು ತಂಡಕ್ಕೆ ಕೋಚ್ ಆಗ್ತಾರಾ ಎಬಿ ಡಿವಿಲಿಯರ್ಸ್..? – ಕೊಹ್ಲಿ ಆಸೆ ಕೊನೆಗೂ ಈಡೇರಿತಾ?

ಬೆಂಗಳೂರು ತಂಡಕ್ಕೆ ಕೋಚ್ ಆಗ್ತಾರಾ ಎಬಿ ಡಿವಿಲಿಯರ್ಸ್..? – ಕೊಹ್ಲಿ ಆಸೆ ಕೊನೆಗೂ ಈಡೇರಿತಾ?

ತಮ್ಮ ತಂಡದ ಕ್ರಿಕೆಟ್ ಆಟಗಾರರನ್ನ ಮನೆ ದೇವರಂತೆ ಪೂಜೆ ಮಾಡೋ ಯಾವುದಾದ್ರೂ ಟೀಂ ಇದ್ರೆ ಅದು ಆರ್​ಸಿಬಿ ಮಾತ್ರ. ಜಗತ್ತಿನಾದ್ಯಂತ ಬೇರೆ ಬೇರೆ ಆಟಗಾರರು, ಅಭಿಮಾನಿಗಳು ಇದ್ರೆ ಈ ಥರ ಇರ್ಬೇಕಪ್ಪ ಅನ್ನೋ ಅಷ್ಟರ ಮಟ್ಟಿಗೆ ಪ್ರೀತಿಸ್ತಾರೆ, ಆರಾಧಿಸ್ತಾರೆ. ಕಪ್ ಗೆಲ್ಲದೇ ಇದ್ರೂ ನಮ್ಮ ಆರ್​ಸಿಬಿ ಟೀಮ್​ಗೆ ಕೊಡೋ ಸಪೋರ್ಟ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇದೇ ಕಾರಣಕ್ಕೆ ಲಾಯಲ್ ಅನ್ನೋ ಪದಕ್ಕೆ ಅರ್ಥ ಕೇಳಿದ್ರೆ ಆರ್​ಸಿಬಿ ಫ್ಯಾನ್ಸ್ ಅಂತಾರೆ. ತಂಡದ ಕೆಲ ಆಟಗಾರರಂತೂ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅದ್ರಲ್ಲಿ ಟಾಪ್ ಪ್ಲೇಸ್​ನಲ್ಲಿರೋದು ನಮ್ಮ ಕಿಂಗ್ ವಿರಾಟ್ ಕೊಹ್ಲಿ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಗೂ ಆರ್​ಸಿಬಿಯ ಆಪತ್​ಬಾಂಧವ ಎ.ಬಿ ಡಿವಿಲಿಯರ್ಸ್. ಮಿಸ್ಟರ್ 360 ಅಂತಾನೇ ಕರೆಸಿಕೊಳ್ಳೋ ಎಬಿಡಿ ಆರ್​ಸಿಬಿ ಪಾಲಿಗೆ ಹೀರೋ ಆಗಿದ್ದೇಗೆ..? ಬೆಂಗಳೂರು ತಂಡಕ್ಕೆ ಕೋಚ್ ಆಗ್ತಾರಾ..? ಫ್ಯಾನ್ಸ್ ಕೇಳೋದೇನು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಕೊಹ್ಲಿಗೆ RCBಯೇ ಉಸಿರು! – ಆರ್‌ಸಿಬಿ ಸೋಲಿನ ನೋವಲ್ಲಿ ಏಕಾಂಗಿಯಾದ್ರಾ ವಿರಾಟ್ ಕೊಹ್ಲಿ?

ಆರ್​ಸಿಬಿ ಟೀಂ ಸೋತಾಗ್ಲೆಲ್ಲಾ ಫ್ಯಾನ್ಸ್ ಮೊದಲು ನೆನಪು ಮಾಡಿಕೊಳ್ಳೋದೇ ಎಬಿ ಡಿವಿಲಿಯರ್ಸ್ ಅವ್ರನ್ನ. ಎಬಿಡಿ ಇದ್ದಿದ್ರೆ ಒಂದು ಚಾನ್ಸ್ ಇರ್ತಿತ್ತು ಗುರು, ಮತ್ತೆ ಟೀಮ್​ಗೆ ವಾಪಸ್ ಬಾ ಗುರು ಅಂತೆಲ್ಲಾ ಪೋಸ್ಟರ್ ಹಿಡಿದು ಸ್ಟೇಡಿಯಮ್​ಗೆ ಬರ್ತಾರೆ. ಎಬಿಡಿ ಫೋಟೋ ಸಮೇತ ವಿ ಮಿಸ್ ಯು ಅಂತಾ ಈಗ್ಲೂ ನೆನಪು ಮಾಡಿಕೊಳ್ತಾರೆ. ಆದ್ರೀಗ ಎಬಿಡಿ ಮತ್ತೆ ಆರ್​ಸಿಬಿ ಸೇರಿಕೊಳ್ತಾರೆ ಅನ್ನೋ ಹಾಟ್ ಟಾಪಿಕ್ ಬಿಸಿ ಬಿಸಿ ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ಅವ್ರೇ ನೀಡಿರುವ ಸ್ಟೇಟ್​ಮೆಂಟ್. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಎಬಿಡಿ ನಾನು ಈಗಲೂ ಆರ್​ಸಿಬಿ ಸೇರಲು ಸಿದ್ಧನಿದ್ದೇನೆ. ನನ್ನನ್ನ ಕರೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಲು ಸಿದ್ಧನಿದ್ದೇನೆ ಎಂದಿದ್ದಾರೆ. ಅಷ್ಟೇ ಯಾಕೆ ಸೀಸನ್ 17ನಲ್ಲೇ ಎಬಿಡಿ ಆರ್​ಸಿಬಿಗೆ ಕೋಚ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್ ತಂಡದ ಕೋಚ್ ಆಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಎಬಿ ಡಿವಿಲಿಯರ್ಸ್ ಅವ್ರನ್ನ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಎಇಬಿಡಿ ಮುಂದೆ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಆರ್​ಸಿಬಿಯೊಂದಿಗಿನ ಒಡನಾಟ ಅವಿಸ್ಮರಣೀಯವಾಗಿದೆ. ಇದರಿಂದ ಆರ್ಸಿಬಿ ಕೋಚ್ ಆಗುವ ಅವಕಾಶ ಸಿಕ್ಕರೆ ನಿರಾಕರಿಸುವುದಿಲ್ಲ. ನನ್ನ ಹೃದಯ ಆರ್​ಸಿಬಿ ಜೊತೆಗಿದೆ, ಹಲವು ವರ್ಷಗಳಿಂದ ನಾನು ಅಲ್ಲಿ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಭಾಂದವ್ಯವಿದೆ. ನಾನು ಯಾವುದನ್ನೂ ಖಚಿತಪಡಿಸಲಾರೆ. ಆದರೆ ಭವಿಷ್ಯದಲ್ಲಿ ನನ್ನನ್ನು ಆರ್​ಸಿಬಿ ತಂಡದಲ್ಲಿ ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದರು. ಅಲ್ಲಿಗೆ ಎಬಿಡಿ ಆರ್​ಸಿಬಿ ಸೇರಲು ಯಾವುದೇ ಕ್ಷಣದಲ್ಲೂ ರೆಡಿ ಇದ್ದಾರೆ ಅನ್ನೋದು ಕನ್ಫರ್ಮ್. ಅಲ್ದೇ ಈ ಸೀಸನ್​ನಲ್ಲಿ ಆರ್‌ಸಿಬಿ ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್‌ ಹೇಸನ್‌ ಹಾಗೂ ಕೋಚ್ ಸಂಜಯ್‌ ಬಾಂಗರ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಕೈ ಬಿಟ್ಟಿತ್ತು. ಇದರ ಬೆನ್ನಲ್ಲೇ ಹೆಡ್‌ ಕೋಚ್‌ ಸ್ಥಾನಕ್ಕೆ ಜಿಂಬಾಬ್ವೆ ದಿಗ್ಗಜ ಆಂಡಿ ಫ್ಲವರ್‌ ಅವರನ್ನು ಆರ್‌ಸಿಬಿ ನೇಮಿಸಿಕೊಂಡಿದೆ. ಇದರ ಹೊರತಾಗಿಯೂ ಆರ್‌ಸಿಬಿ ಮೆಂಟರ್‌ ಆಗಿ ಎಬಿ ಡಿವಿಲಿಯರ್ಸ್ ಸೇರ್ಪಡೆಯಾಗಲಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದ್ರೆ ಅದು ಸಾಧ್ಯವಾಗಿಲ್ಲ.

ಡಿವಿಲಿಯರ್ಸ್ ಮತ್ತು ಆರ್​ಸಿಬಿ ನಡುವೆ ಇರುವ ಸಂಬಂಧ ಬರೀ ಆಟಗಾರನಾಗಿ ಮಾತ್ರ ಅಲ್ಲ.  ಡೆಲ್ಲಿ ಡೇರ್ ಡೆವಿಲ್ಸ್‌ ಪರ ಐಪಿಎಲ್‌ ವೃತ್ತಿ ಜೀವನ ಆರಂಭಿಸಿದ್ದ ಎಬಿ ಡಿವಿಲಿಯರ್ಸ್ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ರು. 2011ರಿಂದ 2021ರವರೆಗೆ ಎಬಿಡಿ ಬರೋಬ್ಬರಿ 11 ವರ್ಷಗಳ ಕಾಲ ಆರ್​ಸಿಬಿಯಲ್ಲೇ ಇದ್ದರು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರು ಬೆಂಗಳೂರು ಫ್ರಾಂಚೈಸಿಯಲ್ಲಿ ಮುಂದುವರಿದಿದ್ದರು. 2016ರ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ ತಲುಪುವಲ್ಲಿ ಎಬಿ ಡಿ ವಿಲಿಯರ್ಸ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ಆವೃತ್ತಿಯಲ್ಲಿ ಬರೋಬ್ಬರಿ 687 ರನ್‌ಗಳನ್ನು ಸಿಡಿಸಿದ್ದರು. ಆರ್‌ಸಿಬಿ ಪರ ಎಬಿಡಿ ಎರಡು ಶತಕಗಳು ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 4522 ರನ್‌ಗಳನ್ನು ಗಳಿಸಿದ್ದಾರೆ.

ಆರ್​ಸಿಬಿ ಪರ 11 ಐಪಿಎಲ್ ಆವೃತ್ತಿಗಳನ್ನು ಆಡಿದ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ 184 ಪಂದ್ಯಗಳನ್ನು ಆಡಿದ್ದಾರೆ. 40 ಅರ್ಧಶತಕ, 3 ಬಾರಿ ಸೆಂಚುರಿ ಸೇರಿದಂತೆ ಒಟ್ಟು 5162 ರನ್​ಗಳನ್ನ ಕಲೆ ಹಾಕಿದ್ದಾರೆ. ಆರ್​ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಹೊಂದಿದ್ದಾರೆ. ಹಾಗೆಯೇ ಆರ್​ಸಿಬಿ ಪರ ವಿರಾಟ್‌ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಇನ್ನು ಆರ್​ಸಿಬಿ ಪರ 2011ರಿಂದ 2021ರವರೆಗೆ 157 ಪಂದ್ಯಗಳನ್ನ ಆಡಿದ್ದು, 133 ಅವ್ರ ಹೈಯೆಸ್ಟ್ ಸ್ಕೋರ್ ಆಗಿದೆ. ಇನ್ನು ಡೇ ಒನ್​ನಿಂದ ಆರ್​ಸಿಬಿಗಾಗಿ ಆಡ್ತಿರೋ ಕೊಹ್ಲಿ 8 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಡಿವಿಲಿಯರ್ಸ್ ಅದೆಂಥಾ ಆಟಗಾರ ಅಂದ್ರೆ  ತಮ್ಮ ಎಲ್ಲಾ 25 ಏಕದಿನ ಶತಕಗಳನ್ನು 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ. ಡಿವಿಲಿಯರ್ಸ್ 2015 ರ ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 150 ರನ್ ಸಿಡಿಸಿದ ದಾಖಲೆ ನಿರ್ಮಿಸಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 63 ಎಸೆತಗಳಲ್ಲಿ 150 ರನ್‌ ಕಲೆಹಾಕಿದ್ದರು.  ಅಲ್ಲದೆ 1,480 ದಿನಗಳ ಕಾಲ ಐಸಿಸಿಯ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದರು.

ಇನ್ನು ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಎಷ್ಟೇ ದೊಡ್ಡ ಟಾರ್ಗೆಟ್ ಇದ್ದರೂ ಎಬಿಡಿ ಮೈದಾನಕ್ಕಿಳಿದರೆ ಆರ್​ಸಿಬಿ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಎಬಿಡಿ ತಂಡದಲ್ಲಿರುವಾಗ ಆರ್​ಸಿಬಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಐಪಿಎಲ್ ಸೀಸನ್-17 ಆರಂಭಕ್ಕೂ ಮುನ್ನವೇ ಈ ಬಾರಿ ಕಪ್ ಗೆಲ್ಲುವ ತಂಡ ಯಾವುದೆಂದು ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದರು, ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ಲಾಗಿಯೇ ಟ್ರೋಫಿ ಎತ್ತಿ ಹಿಡಿಯಲಿದೆ ಎಂದಿದ್ದರು. ಕಳೆದ 16 ಸೀಸನ್​ಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದರೂ ಆರ್​ಸಿಬಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ 17ನೇ ಸೀಸನ್​ನಲ್ಲೂ ಆರ್​ಸಿಬಿ ಪ್ಲೇಆಫ್​ಗೆ ಹೋಗೋದೂ ಡೌಟಿದೆ.

ಒಟ್ನಲ್ಲಿ 2021 ರ ನವೆಂಬರ್​ನಲ್ಲಿ ಐಪಿಎಲ್​ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡಿವಿಲಿಯರ್ಸ್ ಅಂದಿನಿಂದ ಯಾವುದೇ ಲೀಗ್​ಗಳಲ್ಲಿ ಕಾಣಿಸಿಕೊಂಡಿಲ್ಲ. ಡಿವಿಲಿಯರ್ಸ್ ಐಪಿಎಲ್​ಗೆ ವಿದಾಯ ಹೇಳಿದ ಬಳಿಕ ತಂಡಕ್ಕೆ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಆರ್‌ಸಿಬಿ ಕಳೆದ ವರ್ಷ ತನ್ನ ಹಾಲ್ ಆಫ್ ಫೇಮ್‌ನಲ್ಲಿ ಡಿವಿಲಿಯರ್ಸ್‌ರನ್ನು ಸೇರಿಸಿಕೊಂಡಿತ್ತು. ಕಳೆದ ವರ್ಷ ಐಪಿಎಲ್‌ನಲ್ಲೂ ಡಿವಿಲಿಯರ್ಸ್ ಕಾಮೆಂಟರಿ ಮಾಡಿದ್ದರು. ಈ ಬಾರಿಯ ಐಪಿಎಲ್​ಗೆ ಆರ್​ಸಿಬಿ ತಂಡಕ್ಕೆ ಎಬಿಡಿಯನ್ನ ಕರೆತರುವ ಬಗ್ಗೆ ಕಿಂಗ್ ವಿರಾಟ್ ಕೊಹ್ಲಿ ಕೂಡ ಪ್ರಸ್ತಾಪ ಮಾಡಿದ್ದರು. ಇದನ್ನ ಎಬಿಡಿಯವ್ರೇ ಹೇಳಿಕೊಂಡಿದ್ದರು. ಆದ್ರೆ ಕೊನೆಗೂ ಅದು ಸಾಧ್ಯವಾಗಿಲ್ಲ. ಸದ್ಯ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್​ಸಿಬಿ ತಂಡದ ಆಪತ್ಭಾಂದವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಬಾರಿ ಅಹಮದಾಬಾದ್​ನಲ್ಲಿ ಗುಜರಾತ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿಲ್ ಜಾಕ್ಸ್ ಆರ್​ಸಿಬಿ ಪರ 41 ಬಾಲ್​ಗಳಲ್ಲಿ ಸೆಂಚುರಿ ಹೊಡೆದಿದ್ದರು. ಈ ವೇಳೆ ಅಭಿಮಾನಿಗಳು ಎಬಿಡಿಯನ್ನೇ ನೆನಪು ಮಾಡಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಎಬಿಡಿಯವರ ಸಕ್ಸಸೇಯರ್ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಹೀಗಾಗಿ ಮುಂದಿನ ಸೀಸನ್​ಗಾದ್ರೂ ಎಬಿ ಡಿವಿಲಿಯರ್ಸ್ ಕೋಚ್ ಆಗಿ ಆರ್​ಸಿಬಿ ತಂಡ ಸೇರಿಕೊಳ್ಳಲಿ ಅಂತಾ ಫ್ಯಾನ್ಸ್ ಕೇಳಿಕೊಳ್ತಿದ್ದಾರೆ. ಎಬಿಡಿ ಕೂಡ ಅದೇ ಚಾನ್ಸ್ ಗೆ ಕಾಯ್ತಿದ್ದಾರೆ.

 

 

Sulekha