ಹವಾಯಿ ದ್ವೀಪದಲ್ಲಿ ಕಾಳ್ಗಿಚ್ಚಿನ ರೌದ್ರಾವತಾರ – ಸಾವಿನ ಸಂಖ್ಯೆ 93ಕ್ಕೇರಿಕೆ, ಇನ್ನೂ ಉರಿಯುತ್ತಲೇ ಇದೆ ಜ್ವಾಲೆ
ಅಮೆರಿಕಾದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪ ಪ್ರದೇಶ ಕಾಡ್ಗಿಚ್ಚಿಗೆ ಬೆಂದುಹೋಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಐತಿಹಾಸಿಕ ಮಾಯಿ ಪಟ್ಟಣ ಬೆಂಕಿಯ ಕುಲುಮೆಗೆ ಅಕ್ಷರಶಃ ಬೆಂದು ಹೋಗಿದೆ. ಕಾಳ್ಗಿಚ್ಚಿನಿಂದ ಸತ್ತವರ ಸಂಖ್ಯೆ ಬರೋಬ್ಬರಿ 93ಕ್ಕೆ ಏರಿಕೆಯಾಗಿದೆ. ಕಾಳ್ಗಿಚ್ಚಿನಿಂದ ಸತ್ತವರ ಗುರುತು ಸಿಗಲಾರದಷ್ಟು ದೇಹಗಳು ಬೆಂದು ಹೋಗಿದ್ದು, ಅಧಿಕಾರಿಗಳು ಮೃತದೇಹವನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ 7 ಮಂದಿ ಬಲಿ – ಮೂವರು ನಾಪತ್ತೆ
ಆಗಸ್ಟ್ 9ರಂದು ಕಾಣಿಸಿಕೊಂಡ ಕಾಡ್ಗಿಚ್ಚು ಐತಿಹಾಸಿಕ ದ್ವೀಪ ರಾಜ್ಯವಾದ ಭೀಕರ ಸ್ವರೂಪ ಪಡೆದಿದೆ. ಸದ್ಯ ಕಾಳ್ಗಿಚ್ಚಿನ ಜ್ವಾಲೆ ಹಾಗೂ ಡೋರಾ ಚಂಡಮಾರುತ ದಕ್ಷಿಣ ಮಾರ್ಗವಾಗಿ ಸಾಗುತ್ತಿದೆ. ಹವಾಯಿ ದ್ವೀಪದ ಲಹೈನಾ ಪಟ್ಟಣದಲ್ಲಿ ವ್ಯಾಪಿಸಿದ ಕಾಳ್ಗಿಚ್ಚು ಈವರೆಗೆ 93 ಜನರನ್ನ ಬಲಿ ಪಡೆದುಕೊಂಡಿದೆ. ಆದರೆ, ಸತ್ತವರ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ಸಾವಿರಾರು ಜನರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದಾರೆ. ಶವಗಳ ಶೋಧಕ್ಕಾಗಿ ಶ್ವಾನ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಮಾಯಿಯ ಕೆಲವು ಭಾಗಗಳನ್ನು ಕಾಡ್ಗಿಚ್ಚು ದಹಿಸಿದೆ. ಈಗಲೂ ಕೂಡಾ ಕಾಡ್ಗಿಚ್ಚು ಉರಿಯುತ್ತಲೇ ಇದೆ. ಮತ್ತೊಂದೆಡೆ ಬೆಂಕಿಯನ್ನು ನಂದಿಸಲು ಸಮರೋಪಾದಿಯಲ್ಲಿ ಕಾರ್ಯ ಮುಂದುವರೆದಿದ್ದು, ಲಹೈನಾ ಮತ್ತು ಅಪ್ಕಂಟ್ರಿ ಮಾಯಿಯಲ್ಲಿ ಅಗ್ನಿಶಾಮಕ ದಳದ ನೂರಾರು ವಾಹನಗಳು ಬೀಡು ಬಿಟ್ಟಿವೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹವಾಯಿ ಗವರ್ನರ್ ಜೋಶ್ ಗ್ರೀನ್, ಹವಾಯಿ ಎದುರಿಸಿದ ಅತ್ಯಂತ ಕೆಟ್ಟ ನೈಸರ್ಗಿಕ ವಿಕೋಪಗಳಲ್ಲಿ ಇದು ಒಂದಾಗಿದ್ದು, ನಮ್ಮ ಕೈಲಿ ಸಾಧ್ಯವಾದಷ್ಟು ಜನರನ್ನು ರಕ್ಷಿಸುವ ಮೂಲಕ ಅವರಿಗೆ ವಸತಿ, ಆರೋಗ್ಯ ಮತ್ತು ರಕ್ಷಣೆಯನ್ನು ನೀಡುತ್ತಿದ್ದೇವೆ. ಬೆಂಕಿ ಭಯಾನಕ ರೀತಿಯಲ್ಲಿ ವ್ಯಾಪಿಸುತ್ತಿದೆ. ಇನ್ನೂ 5 ಚದರ ಮೈಲಿ ಪ್ರದೇಶದಲ್ಲಿ ಹುಡುಕಾಟ ನಡೆಸಲು ಬಾಕಿ ಇದೆ. ಈಗಾಗಲೇ ಪತ್ತೆಯಾಗಿರುವ ಮೃತದೇಹಗಳನ್ನು ಗುರುತಿಸಲು ಫೋರೆನ್ಸಿಕ್ ಕೆಲಸ ಮುಂದುವರೆದಿದೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಅಧಿಕಾರಿ, ಸತ್ತವರನ್ನು ಗುರುತಿಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ. ನಾವು ಮೃತದೇಹದ ಅವಶೇಷಗಳನ್ನು ಎತ್ತಿಕೊಂಡಾಗ ಅದು ಬೇರ್ಪಡುತ್ತಿದೆ. ಅನೇಕ ದೇಹಗಳು ಸುಟ್ಟು ಬೆಂದು ಕರಕಲಾಗಿದೆ. ಎಂದು ಹೇಳಿದ್ದಾರೆ. ಇನ್ನು ಕಾಳ್ಗಿಚ್ಚು ಆರಂಭವಾದಾಗಿನಿಂದ ಸುಮಾರು 2,200 ಕ್ಕೂ ಹೆಚ್ಚು ಕಟ್ಟಡಗಳು ಭಸ್ಮವಾಗಿವೆ.