ಕಾಡಾನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ – ಕಾಡಾನೆಗಳನ್ನು ಹೆಡೆಮುರಿ ಕಟ್ಟಲು ಅಭಿಮನ್ಯು ಎಂಟ್ರಿ!

ಕಾಡಾನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ – ಕಾಡಾನೆಗಳನ್ನು ಹೆಡೆಮುರಿ ಕಟ್ಟಲು ಅಭಿಮನ್ಯು ಎಂಟ್ರಿ!

ಕಳೆದ ತಿಂಗಳು ಹಾಸನ ಜಿಲ್ಲೆಯಲ್ಲಿ ನಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಖ್ಯಾತಿಯ ಆನೆ ಅರ್ಜುನ ದಾರುಣವಾಗಿ ಸಾವನ್ನಪ್ಪಿತ್ತು. ಇದಾದ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾಡಾನೆಗಳನ್ನು ಹೆಡೆಮುರಿ ಕಟ್ಟಲು ದಸರಾ ಆನೆ ಅಭಿಮನ್ಯು ಎಂಟ್ರಿ ಕೊಟ್ಟಿದ್ದಾನೆ.

ಇದನ್ನೂ ಓದಿ: ಭಾರತದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಅಂತರಿಕ್ಷ ನಿಲ್ದಾಣ! – 2028ರ ಹೊತ್ತಿಗೆ ಇಸ್ರೋ ಹೊಸ ಮೈಲುಗಲ್ಲು!

ಹೌದು, ದಸರಾ ಖ್ಯಾತಿಯ ಆನೆ ಅರ್ಜುನ ಸಾವನ್ನಪ್ಪಿದ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ, ಕಾಡಾನೆ ಸೆರೆ ಕಾರ್ಯಾಚರಣೆಗೆ ಸಾಕಷ್ಟು ಸಾಕಾನೆಗಳು ಅರಣ್ಯ ಇಲಾಖೆ ಬಳಿ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಸಾಕಷ್ಟು ಸಾಕಾನೆಗಳು ಇಲ್ಲದ ಕಾರಣವೊಡ್ಡಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಸ್ಥಳೀಯರ ಒತ್ತಡಕ್ಕೆ ಮಣಿದ ಇಲಾಖೆ ಮತ್ತೆ ಕಾರ್ಯಾಚರಣೆ ಶುರುಮಾಡಿದೆ. ಹಾಸನ ಜಿಲ್ಲೆಯಲ್ಲಿ ಮುಂದುವರಿದಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇದೀಗ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.

ಗುರುವಾರದಿಂದ ಆರಂಭವಾಗಿರುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದ್ದು, ಇದೀಗ ದಸರಾ ಆನೆ ಅಭಿಮನ್ಯು ಕಾರ್ಯಾಚರಣೆಗೆ ಎಂಟ್ರಿಯಾಗಿದೆ. ಒಟ್ಟು ಎಂಟು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆಯೇ ಆರಂಭವಾಗಿದೆ. ಕಾಡಾನೆ ಸೆರೆಗೆ ಕರೆತಂದಿರುವ ಸಾಕಾನೆಗಳು ಇದೀಗ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರಕ್ಕೆ ಬಂದಿವೆ.

ಕಾರ್ಯಾಚರಣೆಯಲ್ಲಿ ಯಾವೆಲ್ಲ ಆನೆಗಳು ಭಾಗಿ?

ಅಭಿಮನ್ಯು, ಪ್ರಶಾಂತ, ಹರ್ಷ, ಅಶ್ವತ್ಥಾಮ, ಸುಗ್ರೀವ, ಧನಂಜಯ, ಭೀಮ, ಮಹೇಂದ್ರ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಶಾಸಕ ಸುರೇಶ್ ಚಾಲನೆ ನೀಡಿದರು. ಸಿಸಿಎಫ್ ರವಿಶಂಕರ್, ಡಿಸಿಎಫ್ ಸದರನ್ ಕುಮಾರ್ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು.

ಜನವರಿ 4 ರಂದು ಬೇಲೂರು ತಾಲ್ಲೂಕಿನ ಮತ್ತಾವರ ಸಮೀಪ ಕಾರ್ಮಿಕರೊಬ್ಬರನ್ನು ಒಂಟಿ ಸಲಗ ಬಲಿಪಡೆದಿತ್ತು. ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಸ್ಥಳೀಯರ ಹೋರಾಟ ತೀವ್ರಗೊಂಡಿತ್ತು. ಏತನ್ಮಧ್ಯೆ, ಬೇಲೂರು ತಾಲೂಕಿನ ಸಿಂಗ್ರವಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾ ನಿರತರು ಸರ್ಕಾರವನ್ನು ಆಗ್ರಹಿಸಿದ್ದರು. ಜನರ ಹೋರಾಟಕ್ಕೆ ಮಣಿದು ಇದೀಗ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.

Shwetha M