ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! – ಕಾಫಿ ಬೆಳೆಗಾರನನ್ನು ತುಳಿದು ಕೊಂದ ಆನೆ

ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಇದೀಗ ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾಗಿದ್ದಾರೆ.
ಇದನ್ನೂ ಓದಿ: ಅಮೆರಿಕಾ – ಇರಾನ್ ಕದನ ವಿರಾಮ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ!
ಕಾಡಾನೆ ದಾಳಿಯಲ್ಲಿ ಮೃತಪಟ್ಟವರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ರತ್ತು ಅವರು ಕುರ್ಚಿ-ಕಾಯಿಮಾನಿ ನಡುವೆ ಇರುವ ತಮ್ಮ ಕಾಫಿ ತೋಟಕ್ಕೆ ಎಂದಿನಂತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ಭಾಗದಲ್ಲಿ ಸುಮಾರು 8 ರಿಂದ 10 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಹಗಲು ಹೊತ್ತಿನಲ್ಲೇ ಆನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಆನೆಗಳ ಹಿಂಡನ್ನು ಕಾಡಿಗಟ್ಟಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಿರಿ

