ಪಾಕಿಸ್ತಾನದಲ್ಲಿ 2 ದಿನಗಳಿಂದ ವಿಕಿಪೀಡಿಯಾಗೆ ನಿಷೇಧ – ಬ್ಯಾನ್ ಹಿಂದಿನ ಕಾರಣವೇನು ಗೊತ್ತಾ..!?

ಪಾಕಿಸ್ತಾನದಲ್ಲಿ 2 ದಿನಗಳಿಂದ ವಿಕಿಪೀಡಿಯಾಗೆ ನಿಷೇಧ – ಬ್ಯಾನ್ ಹಿಂದಿನ ಕಾರಣವೇನು ಗೊತ್ತಾ..!?

ಜಗತ್ತಿನ ಪ್ರಮುಖ ಜ್ಞಾನಭಂಡಾರವೆಂದು ಪರಿಗಣಿಸಲಾದ ವಿಕಿಪೀಡಿಯಕ್ಕೆ ಪಾಕಿಸ್ತಾನದಲ್ಲಿ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಪಾಕಿಸ್ತಾನದಲ್ಲಿ ವಿಕಿಪೀಡಿಯ ಓಪನ್‌ ಆಗುತ್ತಿಲ್ಲ. ಯಾವುದಾದರೂ ಪ್ರಮುಖ ಮಾಹಿತಿಗಳನ್ನು ಸರ್ಚ್‌ ಎಂಜಿನ್‌ನಲ್ಲಿ ಹುಡುಕಿದಾಗ ವಿಕಿಪುಟಗಳಲ್ಲಿರುವ ಮಾಹಿತಿಗಳು ಕಾಣಿಸುತ್ತಿಲ್ಲ.

ಇದನ್ನೂ ಓದಿ : ವಿವಾಹಿತೆಯನ್ನ ಮದುವೆಯಾಗುವುದಾಗಿ ಹೇಳಿದ ದೈವನರ್ತಕ – ಪಾತ್ರಿ ನುಡಿ ಕೇಳಿ ಜನ ಕೆರಳಿದ್ದೇಕೆ..!? 

ಫೆಬ್ರವರಿ 3ರ ಶುಕ್ರವಾರ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟ್‌ಗಳನ್ನು ನಿರ್ಬಂಧಿಸಿದೆ. ಈ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ವಿಕಿಮೀಡಿಯ ಫೌಂಡೇಶನ್‌ ಪಾಕಿಸ್ತಾನಕ್ಕೆ ಮನವಿ ಮಾಡಿದೆ. ಪಾಕಿಸ್ತಾನ ಸರ್ಕಾರವು ವಿಕಿಪೀಡಿಯವನ್ನು “ಕಾನೂನುಬಾಹಿರ” ಎಂದು ಪರಿಗಣಿಸಿತ್ತು. ಹಾಗೂ ವಿಕಿಪೀಡಿಯದಲ್ಲಿ ಕಾನೂನುಬಾಹಿರವೆಂದು ಸರ್ಕಾರ ಸೂಚಿಸಿದ ಅಂಶಗಳನ್ನ ತೆಗೆದುಹಾಕಲು ಸೂಚಿಸಿತ್ತು. ಆದರೆ ವಿಕಿಪೀಡಿಯ ತೆಗೆದುಹಾಕದ ಕಾರಣ ವಿಕಿಪೀಡಿಯ ಸೇವೆಗಳನ್ನು 48 ಗಂಟೆಗಳ ಕಾಲ ನಿರ್ಬಂಧಿಸಲಾಗಿದೆ. ಈ ನಿರ್ಬಂಧವಿರುವವರೆಗೆ ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟ್‌ಗಳಿಗೆ ಪಾಕಿಸ್ತಾನದ ಬಳಕೆದಾರರಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ವಿಕಿಪೀಡಿಯಕ್ಕೆ ನಿರ್ಬಂಧ ಹೇರಿರುವುದನ್ನು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಖಚಿತಪಡಿಸಿದೆ.

ಇನ್ನು ವಿಕಿಮೀಡಿಯ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಧರ್ಮನಿಂದನೆಯ ವಿಷಯವಿತ್ತು. ಹೀಗಾಗಿ, ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಪಿಟಿಎಯು 48 ಗಂಟೆಗಳ ಕಾಲ ವಿಕಿಪೀಡಿಯ ಮತ್ತು ವಿಕಿಮೀಡಿಯ ಯೋಜನೆಗಳಿಗೆ ನಿರ್ಬಂಧ ವಿಧಿಸಿದೆ. ಜ್ಞಾನ ಪಡೆಯುವುದು ಮನುಷ್ಯನ ಹಕ್ಕು ಎಂದು ವಿಕಿಮೀಡಿಯ ಅಭಿಪ್ರಾಯಪಟ್ಟಿದೆ. “ಜಗತ್ತಿನ ಜನಸಂಖ್ಯೆಯಲ್ಲಿ ಅಗ್ರ ಐದನೇ ಸ್ಥಾನಹೊಂದಿರುವ ರಾಷ್ಟ್ರವು ಅತಿದೊಡ್ಡ ಉಚಿತ ಜ್ಞಾನದ ಭಂಡಾರವನ್ನು ಪ್ರವೇಶಿಸಲು ಜನರನ್ನು ತಡೆಯುತ್ತಿದೆ. ಇದು ಮುಂದುವರಿದರೆ, ಪಾಕಿಸ್ತಾನದ ಇತಿಹಾಸ ಮತ್ತು ಸಂಸ್ಕೃತಿಯ ಪ್ರವೇಶದಿಂದ ಜನರು ವಂಚಿತರಾಗಲಿದ್ದಾರೆʼʼ ಎಂದು ವಿಕಿಮೀಡಿಯ ಫೌಂಡೇಶನ್‌ ಟ್ವೀಟ್‌ ಮಾಡಿದೆ.

ಪಾಕಿಸ್ತಾನದಲ್ಲಿ ಇಂಗ್ಲಿಷ್‌ ವಿಕಿಪೀಡಿಯವು ತಿಂಗಳಿಗೆ 50 ಮಿಲಿಯನ್‌ಗಿಂತಲೂ ಹೆಚ್ಚು ಪುಟ ವೀಕ್ಷಣೆಗಳನ್ನು ಪಡೆಯುತ್ತಿವೆ. ಬಳಿಕದ ಸ್ಥಾನವನ್ನು ಉರ್ದು ಮತ್ತು ರಷ್ಯಾ ಭಾಷೆಯಲ್ಲಿರುವ ವಿಕಿಪೀಡಿಯ ಪುಟಗಳು ಪಡೆದಿವೆ. ವಿಕಿಪೀಡಿಯ ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರ್ಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ

suddiyaana