ಕಾಟನ್ ಕ್ಯಾಂಡಿ ಬ್ಯಾನ್ ಮಾಡಿದ್ದು ಯಾಕೆ? – ಸರ್ವೆಯಲ್ಲಿ ಗೋಬಿ ಮಂಚೂರಿ ಬಣ್ಣ ಬಯಲು..!
ಕಾಟನ್ ಕ್ಯಾಂಡಿ ಕಂಡ್ರೆ ಸಾಕು ಮಕ್ಕಳಿಗೆ ಅದೇನೋ ಖುಷಿ. ಬಾಯಲ್ಲಿಟ್ರೆ ಕರಗಿ ಹೋಗುವ ಅಚ್ಚುಮೆಚ್ಚಿನ ತಿನಿಸು ಈ ಬಾಂಬೆ ಮಿಠಾಯಿ. ಜಾತ್ರೆ ಸೇರಿದಂತೆ ಹಲವು ಕಡೆ ಇದನ್ನು ಮಾರಾಟ ಮಾಡಲಾಗುತ್ತದೆ. ಉದ್ದನೆಯ ಕೋಲಿಗೆ ಬಾಂಬೆ ಮಿಠಾಯಿಯನ್ನು ಸಿಕ್ಕಿಸಿಕೊಂಡು ಬೀದಿ ಬೀದಿಗಳಲ್ಲಿ ಮಾರಾಟ ಮಾಡುವುದನ್ನ ನಾವು ನೋಡುತ್ತಿರುತ್ತೇವೆ. ಇದೀಗ ಕಾಟನ್ ಕ್ಯಾಂಡಿಯನ್ನು ಕರ್ನಾಟಕದಲ್ಲಿ ಬ್ಯಾನ್ ಆಗಿದೆ. ಇದಕ್ಕೆ ಕಾರಣವೇನು?, ಸರ್ಕಾರದ ಈ ಮಹತ್ವದ ನಿರ್ಧಾರದ ಹಿಂದಿನ ಉದ್ದೇಶವೇನು?, ಈ ಆಹಾರದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳೇನು ಎಂಬ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಕಾಟನ್ ಕ್ಯಾಂಡಿ, ಕೃತಕ ಬಣ್ಣ ಬಳಸಿದ ಗೋಬಿ ಮಂಚೂರಿ ನಿಷೇಧ
ರಾಜ್ಯದಲ್ಲಿ ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲಾಗಿದೆ. ಹಾಗೆಯೇ ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನ ಬಳಸುವಂತಿಲ್ಲ. ಒಂದು ವೇಳೆ ಕಾಟನ್ ಕ್ಯಾಂಡಿ ಮಾರಾಟ ಮಾಡಿದ್ರೆ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಬಣ್ಣವನ್ನ ಬಳಸಿದ್ರೆ 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 59ರ ಅಡಿಯಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತೆ. 10 ಲಕ್ಷ ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ನೀಡಲಾಗುತ್ತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರೂವ್ ಹೇಳಿದ್ದಾರೆ. ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹ ಮಾಡಿದ್ದೇವೆ. ಗೋಬಿ ಮಂಚೂರಿಯ 171 ಮಾದರಿಗಳ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 107 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ. ಇದರಲ್ಲಿ ಟಾರ್ ಟ್ರಾಸೈಲ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೋಸಿನ್ ಪತ್ತೆಯಾಗಿದೆ. ಇನ್ನು ಕಾಟನ್ ಕ್ಯಾಂಡಿಯ 25 ಮಾದರಿಯ ಸಂಗ್ರಹ ಮಾಡಲಾಗಿತ್ತು, 15 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ. ರೋಡ್ ಮೈನ್-ಬಿ ಅಂಶ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಕಂಡು ಬಂದಿರುವ ಕೃತಕ ಬಣ್ಣಗಳ ಮಾದರಿ ಪುಡ್ ಸೇಫ್ಟಿ ಆ್ಯಕ್ಟ್ ಪ್ರಕಾರ ಅಸುರಕ್ಷಿತವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಕಾರಣಗಳೇನು?
ರಾಜ್ಯ ಸರ್ಕಾರ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲು ಮತ್ತು ಗೋಬಿ ಮಂಚೂರಿಗೆ ಬಣ್ಣ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸಲು ಅನೇಕ ಕಾರಣಗಳಿವೆ. ಇತ್ತೀಚೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ಹಾಗೂ ಸಾಂಕ್ರಮಿಕ ಖಾಯಿಲೆ ಏರಿಕೆಯಾಗುತ್ತಿದೆ. ಸರಿಯಾದ ಆಹಾರ ತಯಾರು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹೆಚ್ಚು ಕೊಬ್ಬುಕಾರಕ, ಉಪ್ಪು ಹಾಗೂ ಸಕ್ಕರೆಯ ಆಹಾರ ಬಳಕೆಯಾಗುತ್ತಿದೆ. ಯಾವುದೇ ಬಣ್ಣ ಬಳಸಬಾರದು. ಇದು ಆರೋಗ್ಯಕ್ಕೆ ಹಾನಿಕಾರಕ. ಇದು ಸಂಪೂರ್ಣ ಕಾನೂನು ಬಾಹಿರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇನ್ನು ಸರ್ಕಾರ ಈ ನಿರ್ಧಾರಕ್ಕೆ ಬರುವ ಮೊದಲು ರಾಜ್ಯದ ವಿವಿಧ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಫುಡ್ ಇಲಾಖೆಯಿಂದ ಸರ್ವೆ ನಡೆಸಿದೆ. ಇನ್ನು ಗೋವಾದ ಗೋವಾದ ಮಾಪುಸಾ ನಗರದಲ್ಲೂ ಕೂಡಾ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಗೋವಾದ ಮಾಪುಸಾ ನಗರದಲ್ಲಿನ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಅನ್ನು ಮಾರಾಟ ಮಾಡುವಂತಿಲ್ಲ ಎಂಬ ಆದೇಶವಿದೆ.
ಆರೋಗ್ಯ ದೃಷ್ಟಿಯಲ್ಲಿ ಇವೆರಡು ಆಹಾರವನ್ನು ಸಿದ್ದರಾಮಯ್ಯ ಸರ್ಕಾರ ನಿಷೇಧ ಹೂಡಿದೆ. ಚೀನಾದ ಇವೆರಡು ಆಹಾರಗಳಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾಗಿರುವುದರಿಂದ ರಾಜ್ಯದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ ಅಂತಾನೂ ಸರ್ಕಾರ ತಿಳಿಸಿದೆ.