ಭ್ರೂಣ ಹತ್ಯೆ ಪ್ರಕರಣ – ಕೊಡಗಿನಲ್ಲಿ ವೈದ್ಯ ಆತ್ಮಹತ್ಯೆ, ಬೆಂಗಳೂರಿನಲ್ಲೂ ಮತ್ತೊಬ್ಬ ವೈದ್ಯ ನೇಣುಬಿಗಿದುಕೊಂಡು ಸತ್ತಿದ್ದು ಯಾಕೆ?
ಭ್ರೂಣ ಹತ್ಯೆ ಪ್ರಕರಣ ಎಷ್ಟು ಭಯಾನಕವಾಗಿದೆಯೋ ಅದರ ಹಿಂದೆ ಇರುವ ಕೈಗಳು ಕೂಡಾ ಈಗ ಭಯದಲ್ಲಿ ನಡುಗುತ್ತಿವೆ. ಇದೇ ಕಾರಣಕ್ಕೆ ಈಗ ಇಬ್ಬರು ವೈದ್ಯರು ಪ್ರಾಣಬಿಡುವಂತಾಗಿದೆ. ಒಬ್ಬರು ಮಾಡಿದ ತಪ್ಪಿಗೆ ಜೀವ ಬಿಟ್ಟರೆ, ಇನ್ನೊಬ್ಬರು ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?
ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿ ನಟರಾಜ್ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನಟರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ನಟರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಹೃದಯಾಘಾತವಾಗಿದ್ದರಿಂದ ನಟರಾಜ್ ವಿಶ್ರಾಂತಿಗಾಗಿ ರಜೆಯಲ್ಲಿದ್ದರು. ನಟರಾಜ್ ಡಿಸೆಂಬರ್ 2ರಂದು ಮಂಡ್ಯಕ್ಕೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಆದರೆ ಮಂಡ್ಯ ಡಿಹೆಚ್ಒ ರಿಪೋರ್ಟ್ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದಾರೆ. ಇದರಿಂದ ಬೇಸತ್ತು ಡಾ.ನಟರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿಂತಿದ್ದ ಕಾರಿನಲ್ಲಿ ವೈದ್ಯ ಡಾ. ಸತೀಶ್ ಹೆಣವಾಗಿ ಪತ್ತೆಯಾಗಿದ್ದರು. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್‌ನಲ್ಲಿ ಇವರ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದರು. ಹೀಗಾಗಿ ಕಾರಿನಲ್ಲಿಯೇ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಶಿವಳ್ಳಿ ನಿವಾಸಿಯಾಗಿರುವ ಡಾ.ಸತೀಶ್, ಪಿರಿಯಾಪಟ್ಟಣ ತಾಲ್ಲೂಕಿನ ಕೊಸನೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಲೆಮನೆಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದಾಗ ಸ್ಥಳೀಯರು ಸತೀಶ್ ಬಗ್ಗೆ ಮಾಹಿತಿ ನೀಡಿದ್ದರು. ಡಾ.ಸತೀಶ್ ವಿಚಾರಣೆ ಮಾಡುವಂತೆ ಆರೋಗ್ಯ ಸಚಿವ ಹೇಳಿದ್ದರು. ಈ ಭಯದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೋಲ್ನೋಟಕ್ಕೆ ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದಾಗ ಕಾರಿನಲ್ಲಿ ಸಿರೆಂಜ್ ಮತ್ತು ಔಷಧಿ ಡಬ್ಬಿ ಪತ್ತೆಯಾಗಿದೆ.