ಇದೇನು ಕೋಳಿ ಕಟ್ಟವಾ, ಕಂಬಳವಾ? – ಶಿಳ್ಳೆ ಹೊಡೆದಿದ್ದಕ್ಕೆ ರಂಗಸ್ಥಳದಿಂದಲೇ ಬೈದ ಧರ್ಮಸ್ಥಳ ಕಲಾವಿದ !

ಯಕ್ಷಗಾನಕ್ಕೆ ತನ್ನದೇ ಆದ ಮಹತ್ವವಿದೆ. ಗಂಡುಕಲೆಯನ್ನ ಅಭಿಮಾನಿಗಳು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಂಗಸ್ಥಳದಲ್ಲಿ ಕಲಾವಿದನ ಅಭಿನಯಕ್ಕೆ, ಕುಣಿತಕ್ಕೆ, ಭಾಗವತರ ಹಾಡಿಗೆ ಕಲಾರಸಿಕರು ಶಿಳ್ಳೆ, ಚಪ್ಪಾಳೆ ಹೊಡೆಯುವುದು ಸಮಾನ್ಯ. ಆದ್ರೆ ಶಿಳ್ಳೆ ಹೊಡೆದಿದ್ದಕ್ಕೆ ಯಕ್ಷಗಾನವನ್ನ ನಿಲ್ಲಿಸಿ ಕಲಾವಿದ ಬೈದ ಘಟನೆ ನಡೆದಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೇನು ಭಾಗವತರ ಪದ್ಯ ಮುಗಿದು ಅರ್ಥ ಹೇಳಲು ವೇಷಧಾರಿ ಸಿದ್ಧನಾದಾಗ ಪ್ರೆಕ್ಷಕರು ಶಿಳ್ಳೆ ಊದಿದ್ದಾರೆ. ಆಗ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಸಿಟ್ಟಿಗೆದ್ದು ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಗಿದ್ದೇನು?
ಭಾಗವತರ ಹಾಡಿಗೆ ಮನಸೋತ ಅಭಿಮಾನಿಯೊಬ್ಬ ಶಿಳ್ಳೆ ಹೊಡೆದಿದ್ದಾನೆ. ಆಗ ರಂಗಸ್ಥಳದಲ್ಲಿದ್ದ ಅಶೋಕ್ ಭಟ್ ಸಿಟ್ಟಿಗೆದ್ದು ಬೈದಿದ್ದಾರೆ. ‘ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ. ದೊಂಬರಾಟ ಅಲ್ಲ ಇದು. ನಾನು ಆಗಿನಿಂದ ಚೌಕಿಯಲ್ಲಿದ್ದುಕೊಂಡು ಗಮನಿಸುತ್ತಿದ್ದೇನೆ. ಸಭ್ಯ ಸಭೆಯನ್ನು ಬಯಸುತ್ತೇನೆ. ನನಗೆ ದಾಕ್ಷಿಣ್ಯ ಯಾರದ್ದೂ ಇಲ್ಲ. ಇಲ್ಲಿ ಯಾಕೆ ಕುಣಿಯುತ್ತಿದ್ದೇವೆ ಗೊತ್ತುಂಟಾ ನಿಮಗೆ? ಯಾರು ಆಟ ಆಡಿಸುವವರು? ಏನೆಂದು ಯೋಚನೆ ಮಾಡಿದ್ದೀರಿ ನೀವು? ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಗೊತ್ತಿದೆಯಾ ನಿಮಗೆ? ಏನದು ಶಿಳ್ಳೆ? ಕೋಳಿಕಟ್ಟವಾ ಅಲ್ಲ ಕಂಬಳವಾ? ಯಾರದು? ಏನು ಆಲೋಚನೆ ಮಾಡಿದ್ದೀರಿ ನೀವು. ಯಾರದು ಶಿಳ್ಳೆ ಹಾಕಿದವ? ಆಗದಿದ್ದರೆ ಹೋಗು ಬನ್ಸ್ ತಿಂದು. ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ’ ಎಂದು ಉಜಿರೆ ಅಶೋಕ ಭಟ್ ಹೇಳಿದ್ದಾರೆ.
ಇದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ದಯವಿಟ್ಟು ತಪ್ಪು ಮಾಹಿತಿ ಹರಡುವುದು ಸರಿಯಲ್ಲ. ಇದು ಶಿಳ್ಳೆ ಹಾಕಿ ಪ್ರೋತ್ಸಾಹಿಸಿದ್ದಲ್ಲ. ತುಂಬಾ ಹೊತ್ತಿನಿಂದ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದ್ದ ವಿಷಯ. ಚೌಕಿಯಲ್ಲಿರುವಾಗಲೇ ಗಮನಿಸಿದ್ದೆ ಅಂತ ಅಶೋಕ ಭಟ್ರು ಹೇಳಿದ್ರು. ಇದು ಜಾತ್ರೆಗಳಲ್ಲಿ ಮಕ್ಕಳು ಊದುವ ಪೀಪಿ ತಂದು, ಯಕ್ಷಗಾನಕ್ಕೆ ಅಡ್ಡಿ ಮಾಡಿದ್ದು. ಚಪ್ಪಾಳೆ, ಶಿಳ್ಳೆಗೆ ಮಿತಿ ಬೇಕಷ್ಟೆ. ಈ ರೀತಿ ಊದಿದ್ದವರು ಯಕ್ಷಗಾನ ಆಸ್ವಾದಿಸುವವರಲ್ಲ’ ಎಂದು ಫೇಸ್ಬುಕ್ ಪೋಸ್ಟೊಂದಕ್ಕೆ ಕಲಾವಿದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಡಿರಿ

