RCB ಸೇರಲು KL ರಾಹುಲ್ ರೆಡಿ? – 1 ಕಲ್ಲು.. 3 ಹಕ್ಕಿ.. ಕನ್ನಡಿಗರಿಗೆ ಗಿಫ್ಟ್
LSGಗೆ ಹೊಸ ಕ್ಯಾಪ್ಟನ್.. ಏನಿದು ಟ್ವಿಸ್ಟ್?

ಒಂದ್ಕಡೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಬ್ಯುಸಿಯಾಗಿದೆ. ಟಿ-20 ವಿಶ್ವಕಪ್, ಜಿಂಬಾಬ್ವೆ ಸರಣಿ, ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಹೀಗೆ ಸಾಲು ಸಾಲು ಗೆಲುವುಗಳನ್ನ ದಾಖಲಿಸ್ತಿದೆ. ಇದ್ರ ನಡುವೆ ಸದ್ದಿಲ್ಲದೆ 2025ರ ಐಪಿಎಲ್ಗೂ ಈಗ್ಲಿಂದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್ನಲ್ಲಿ ನಡೆಯಲಿರಯವ ಹರಾಜು ಪ್ರಕ್ರಿಯೆಯಲ್ಲಿ ಒಂದಷ್ಟು ಬದಲಾವಣೆ ತರೋಕೂ ಕೂಡ ಬಿಸಿಸಿಐ ಪ್ಲ್ಯಾನ್ ಮಾಡಿದೆ. ಹಾಗೇ ಫ್ರಾಂಚೈಸಿಗಳೂ ಕೂಡ ಕೋಚ್, ಮೆಂಟರ್, ಕ್ಯಾಪ್ಟನ್ ಹೀಗೆ ಸಿಬ್ಬಂದಿ ಬದಲಾವಣೆ ಮೂಲಕ ಕಪ್ ಗೆಲ್ಲೋ ಯೋಜನೆ ರೂಪಿಸಿವೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಮೇಜರ್ ಸರ್ಜರಿ ಆಗೋ ಹಿಂಟ್ ಸಿಕ್ಕಿದೆ. ಅದೂ ಕೂಡ ಕ್ಯಾಪ್ಟನ್ ಚೇಂಜ್ ಮಾಡೋ ಯೋಜನೆಯಲ್ಲಿದೆ. ಹಾಗಾದ್ರೆ 2025ರ ಐಪಿಎಲ್ ಟೂರ್ನಿಗೆ ಆರ್ಸಿಬಿಗೆ ಸಾರಥಿ ಯಾರಾಗ್ತಾರೆ? ಕೋಚ್ ಜವಾಬ್ದಾರಿಯನ್ನೂ ಕನ್ನಡಿಗನೇ ಹೊರ್ತಾರಾ? 18ನೇ ಆವೃತ್ತಿಗೆ ಕಪ್ ನಮ್ದೇನಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ ತೊರೆದ ಹಾರ್ದಿಕ್ ಪತ್ನಿ? – ಲಗೇಜ್ ಸಮೇತ ನತಾಶ ಹೋಗಿದ್ದೆಲ್ಲಿಗೆ?
2025ರ ಐಪಿಎಲ್ ಟೂರ್ನಿಗೆ ಈ ವರ್ಷದ ಕೊನೆಯಲ್ಲಿ ಅಂದ್ರೆ ಡಿಸೆಂಬರ್ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡು ಉಳಿದವ್ರನ್ನ ಐಪಿಎಲ್ ಹರಾಜಿಗೆ ಬಿಡಬೇಕಾಗುತ್ತೆ. ಇನ್ನು ಆಟಗಾರರು ಮಾತ್ರವಲ್ಲದೆ ಕೋಚ್, ಮೆಂಟರ್ ಆಯ್ಕೆಯಲ್ಲೂ ಕೂಡ ಸಾಕಷ್ಟು ಬದಲಾವಣೆಗಳಾಗಲಿವೆ. ಈಗಾಗ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಕಿ ಪಾಂಟಿಂಗ್ಗೆ ಕೋಚ್ ಹುದ್ದೆಯಿಂದ ಕೋಕ್ ನೀಡಲಾಗಿದೆ. ಆರ್ಸಿಬಿ ತಂಡದಲ್ಲಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಸೆಲೆಕ್ಟ್ ಆಗಿದ್ದಾರೆ. ಇನ್ನು ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವ್ರನ್ನೂ ತಂಡಕ್ಕೆ ಸೇರಿಸಿಕೊಳ್ಳೋಕೆ ಕೆಕೆಆರ್ ಮತ್ತು ಡಿಸಿ ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸಿವೆ. ಇದ್ರ ನಡುವೆ ಎಲ್‌ಎಸ್‌ಜಿ ತಂಡದಿಂದ ಕನ್ನಡಿಗ ಕೆ.ಎಲ್ ರಾಹುಲ್ ಹೊರಬರೋದು ಫಿಕ್ಸ್ ಎನ್ನಲಾಗಿದೆ. ಈಗಾಗ್ಲೇ ಲಕ್ನೋ ಟೀಂ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಇತ್ತ ರಾಹುಲ್ ಬೆಂಗಳೂರು ತಂಡ ಸೇರಿಕೊಳ್ತಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.
ಆರ್ ಸಿಬಿಗೆ ರಾಹುಲ್ ಎಂಟ್ರಿ?
ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬದಲಾವಣೆ ವಿಚಾರ ವದಂತಿಯೇನೂ ಅಲ್ಲ. ಎಲ್‌ಎಸ್‌ಜಿ ತಂಡದ ಆಟಗಾರ ಅಮಿತ್ ಮಿಶ್ರಾ ಅವರೇ ಈ ಸತ್ಯವನ್ನ ಬಾಯ್ಬಿಟ್ಟಿದ್ದಾರೆ. ಕೆ.ಎಲ್ ರಾಹುಲ್ಗಿಂತ ಉತ್ತಮ ಕ್ಯಾಪ್ಟನ್ಗಾಗಿ ಲಕ್ನೋ ತಂಡ ಕಾಯುತ್ತಿದೆ. ಅಷ್ಟೇ ಅಲ್ಲದೆ ಎಲ್‌ಎಸ್‌ಜಿ ಒಬ್ಬ ಒಳ್ಳೆಯ ಬ್ಯಾಟರ್‌ಗೆ ನಾಯಕತ್ವ ನೀಡಲು ತೀರ್ಮಾನಿಸಿದ್ದಾಗಿ ಮಿಶ್ರಾ ಸುಳಿವು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವನ್ನ ಶೇರ್ ಮಾಡಿದ್ದಾರೆ. ಈ ಮೂಲಕ ಕೆ.ಎಲ್ ರಾಹುಲ್ ಮುಂದಿನ ವರ್ಷದ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರ ಆಡುವುದು ಡೌಟ್ ಎನ್ನುವಂತಾಗಿದೆ. ಅಸಲಿಗೆ ರಾಹುಲ್ಗೂ ಕೂಡ ಎಲ್‌ಎಸ್‌ಜಿ ತಂಡದಲ್ಲಿ ಮುಂದುವರಿಯೋಕೆ ಇಷ್ಟ ಇಲ್ಲ. ಹೀಗಾಗಿ ಲಕ್ನೋ ಕ್ಯಾಪ್ಟನ್ಸಿ ಜೊತೆಗೆ ಎಲ್‌ಎಸ್‌ಜಿ ತಂಡಕ್ಕೆ ಗುಡ್ಬೈ ಹೇಳೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗೇನಾದ್ರೂ ಲಕ್ನೋ ತಂಡ ಬಿಟ್ರೆ ಕೆ.ಎಲ್ ರಾಹುಲ್ ಆರ್ಸಿಬಿ ಸೇರೋದು ಪಕ್ಕಾ ಎಂಬ ಚರ್ಚೆಯಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರೋದು ಪಕ್ಕಾ ಎಂದೇ ಫ್ಯಾನ್ಸ್ ಟ್ರೆಂಡ್ ಮಾಡುತ್ತಿದ್ದಾರೆ. ಮುಂದಿನ ಐಪಿಎಲ್ ಮೆಗಾ ಆಕ್ಷನ್ನಲ್ಲಿ ರಾಹುಲ್ ಅವರನ್ನು ಆರ್ಸಿಬಿ ಖರೀದಿಸಲಿದೆ. ನಾವು ಈ ಸಲ ಕಪ್ ಗೆಲ್ಲಲಿದ್ದೇವೆ ಎಂದು ಬರೆದುಕೊಳ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ರಾಹುಲ್ ಎಲ್‌ಎಸ್‌ಜಿ ತಂಡ ಬಿಡೋಕೆ ಒಂದು ಸ್ಟ್ರಾಂಗ್ ರೀಸನ್ ಕೂಡ ಇದೆ. ಕಳೆದ ಐಪಿಎಲ್ ಪಂದ್ಯದ ವೇಳೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋಲು ಕಂಡಿತ್ತು. ಪಂದ್ಯ ಸೋತ ಬಳಿಕ LSG ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ರು. ಸಾಕಷ್ಟು ಕ್ರಿಕೆಟರ್ಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ರು. ಈ ಘಟನೆ ಕೆಎಲ್ ರಾಹುಲ್ರನ್ನೂ ಸಾಕಷ್ಟು ಮುಜುಗರಕ್ಕೀಡು ಮಾಡಿತ್ತು. ಹೀಗಾಗಿ 2025ಕ್ಕೆ ಗುಡ್ಬೈ ಹೇಳಿ ಹರಾಜಿಗೆ ಬರೋಕೆ ರಾಹುಲ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಕೆಎಲ್ ರಾಹುಲ್ ಆರ್ಸಿಬಿ ಸೇರಿದ್ರೆ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯಬಹುದು. ಒಂದು ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ 2025ರ ಐಪಿಎಲ್ ಟೂರ್ನಿ ಆಡೋದು ಡೌಟ್ ಇದೆ. ಹೀಗಾಗಿ ಫಾಫ್ ನಿವೃತ್ತಿ ಘೋಷಿಸಿದ್ರೆ ಕೆಎಲ್ ರಾಹುಲ್ ನಾಯಕರಾಗಬಹುದು. ಇನ್ನು ಎರಡನೇ ಕಾರಣ ಈಗಾಗ್ಲೇ ಆರ್ಸಿಬಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ವಿದಾಯ ಹೇಳಿದ್ದಾರೆ. ಹೀಗಾಗಿ ರಾಹುಲ್ ವಿಕೆಟ್ ಕೀಪರ್ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸಬಲ್ಲರು. ಇನ್ನೊಂದು ಮೇನ್ ರೀಸನ್ ಅಂದ್ರೆ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಚಾನ್ಸ್ ಸಿಗೋದಿಲ್ಲ ಅನ್ನೋದು ಪ್ರತೀ ಬಾರಿ ಫ್ಯಾನ್ಸ್ಗೆ ಕೊರಗು ಇದ್ದೇ ಇರುತ್ತೆ. ಹೀಗಾಗಿ ಕೆ.ಎಲ್ ರಾಹುಲ್ರನ್ನ ಆರ್ಸಿಬಿಗೆ ಕರೆ ತಂದ್ರೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಂತಾಗುತ್ತೆ. ಅಲ್ದೇ ರಾಹುಲ್ಗೂ ಕೂಡ ಆರ್ಸಿಬಿ ತಂಡ ಹೊಸದೇನೂ ಅಲ್ಲ. ಹೇಳಿ ಕೇಳಿ ರಾಹುಲ್ ಬೆಂಗಳೂರಿನವರು. ಈ ಹಿಂದೆ ಎರಡು ಬಾರಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆಎಲ್ ರಾಹುಲ್, ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಹೀಗಾಗಿ ಕೆ.ಎಲ್ ರಾಹುಲ್ ಬೆಂಗಳೂರು ತಂಡದ ಬೆಸ್ಟ್ ಪ್ಲೇಯರ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹಾಗೇ ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕೂಡ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಬರಲಿದ್ದಾರೆ ಎಂಬ ಚರ್ಚೆ ನಡೀತಿದೆ. ಹಾಗೇನಾದ್ರೂ ರಾಹುಲ್ ಮತ್ತು ರಾಹುಲ್ ಒಂದಾದ್ರೆ ಈ ಸಲ ಕಪ್ ನಮ್ದೇ ಅನ್ನೋದ್ರಲ್ಲಿ ಡೌಟೇ ಇಲ್ಲ.