4ನೇ ಸ್ಲಾಟ್.. ಶ್ರೇಯಸ್ ಪವರ್HIT – ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರವಾಯ್ತಾ?

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಫಾರ್ಮ್ಗೆ ಮರಳಿದ್ದಾರೆ. ಭಾರತದ ಟಾಪ್ ಆರ್ಡರ್ ಆಟಗಾರರು ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಅದ್ರಲ್ಲೂ ಕೆಲವು ದಿನಗಳಿಂದ ಬಿಸಿಸಿಐ ಕೇಂದ್ರ ಒಪ್ಪಂದದಿಂದ ದೂರ ಇರೋ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಎಲ್ಲರ ಗಮನ ಸೆಳೆದಿದ್ದಾರೆ. ತಮಗೆ ಮ್ಯಾನೇಜ್ಮೆಂಟ್ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಶ್ರೇಯಸ್, ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಕ್ರೀಸ್‌ನಲ್ಲಿ ಟೈಮ್ ಸ್ಪೆಂಡ್ ಮಾಡಿ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಪಂತ್, ಅಯ್ಯರ್ ವೇತನಕ್ಕಿಂತ ಕಡಿಮೆ – ಚಾಂಪಿಯನ್ಸ್ ಟ್ರೋಫಿ ಗೆದ್ದವರಿಗೆ ಬಹುಮಾನ ಎಷ್ಟು?
ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೇ ಚಾಂಪಿಯನ್ಸ್ ಟ್ರೋಫಿಗೆ ಶ್ರೇಯಸ್ ಅಯ್ಯರ್ ಆಯ್ಕೆಯಾದಾಗ ಹಲವರಿಗೆ ಅಚ್ಚರಿ ಮೂಡಿಸಿತ್ತು. ಹೀಗೆ ಅನ್ ಎಕ್ಸ್ಪೆಕ್ಟೆಡ್ ಆಗಿ ಭಾರತ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್, ಇದೀಗ ಸಿಕ್ಕ ಅವಕಾಶವನ್ನು ಚೆನ್ನಾಗೇ ಬಳಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇಂಜುರಿಗೊಂಡ ಕಾರಣದಿಂದಾಗಿ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶ್ರೇಯಸ್ ಮೊದಲ ಪಂದ್ಯದಲ್ಲೇ ಅರ್ಧಶತಕದ ಇನ್ನಿಂಗ್ಸ್ ಆಡಿ ಮಧ್ಯಮ ಕ್ರಮಾಂಕದಲ್ಲಿ ತಾನು ಎಂತಹ ಬ್ಯಾಟ್ಸ್‌ಮನ್ ಎಂಬುದನ್ನು ಮತ್ತೊಮ್ಮೆ ಸಾಭಿತುಪಡಿಸಿದ್ದರು. ಹೀಗಾಗಿ ಅಯ್ಯರ್ಗೆ ಉಳಿದೆರಡು ಪಂದ್ಯಗಳಲ್ಲೂ ಆಡುವ ಅವಕಾಶ ಸಿಕ್ಕಿತ್ತು.
ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ 87.50 ಸರಾಸರಿಯಲ್ಲಿ 175 ರನ್ ಕಲೆಹಾಕಿರುವ ಅಯ್ಯರ್ ಅವರ ಸ್ಟ್ರೈಕ್ ರೇಟ್ 122 ಕ್ಕಿಂತ ಹೆಚ್ಚಾಗಿದೆ. ದೊಡ್ಡ ವಿಷಯವೆಂದರೆ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಈ ಸ್ಟ್ರೈಕ್ ರೇಟ್ ಅನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಅದ್ಭುತವಾಗಿದೆ. ಆಡಿದ ಮೂರು ಪಂದ್ಯಗಳಿಂದ 60ರ ಸರಾಸರಿಯಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ. ಅದ್ರಲ್ಲೂ ಮೂರನೇ ಪಂದ್ಯದಲ್ಲಿ 64 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿದರು. ಇದು ಶ್ರೇಯಸ್ ಅವರ ಏಕದಿನ ಕ್ರಿಕೆಟ್ ಬದುಕಿನ 20ನೇ ಅರ್ಧಶತಕವಾಗಿದೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 25 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಲು 68 ಇನಿಂಗ್ಸ್ ತೆಗೆದುಕೊಂಡಿದ್ರು. ಶ್ರೇಯಸ್ ಅಯ್ಯರ್ ಇದುವರೆಗೆ 65 ಏಕದಿನ ಪಂದ್ಯಗಳ 60 ಇನ್ನಿಂಗ್ಸ್‌ಗಳಲ್ಲಿ 2602 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 5 ಶತಕಗಳು ಮತ್ತು 20 ಅರ್ಧಶತಕಗಳನ್ನು ಗಳಿಸಿದ್ದಾರೆ. 48.18ರ ಸರಾಸರಿ ಮತ್ತು 102.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದೀಗ ಆಂಗ್ಲರ ವಿರುದ್ಧವೂ ಅಬ್ಬರಿಸಿದ್ದು, ನಾಲ್ಕನೇ ಸ್ಲಾಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಲಿದ್ದಾರೆ.
2019 ರ ವಿಶ್ವಕಪ್ ನಂತರ ಭಾರತ ಪರ 4 ನೇ ಕ್ರಮಾಂಕದಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರನೆಂದರೆ ಅದು ಶ್ರೇಯಸ್ ಅಯ್ಯರ್. ಹಾಗೇ 4 ನೇ ಕ್ರಮಾಂಕದಲ್ಲಿ ಉತ್ತಮ ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಶೈ ಹೋಪ್ ನಂತರದ ಸ್ಥಾನ ಅಯ್ಯರ್ಗೆ ಲಭಿಸಿದೆ. 2019 ರ ವಿಶ್ವಕಪ್ ನಂತರ ಅಯ್ಯರ್ 4 ನೇ ಸ್ಥಾನದಲ್ಲಿ 103.3 ರ ಅತ್ಯಧಿಕ ಸ್ಟ್ರೈಕ್ ರೇಟ್ ಹಾಗೂ 53.4 ರ ಸರಾಸರಿ 1550 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದೇ ಕಾರಣಕ್ಕೆ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಸೆಲೆಕ್ಟ್ ಆದಾಗ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದರು.
ದೇಶೀಯ ಟೂರ್ನಿಯಲ್ಲೂ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್, ದುಲೀಪ್ ಟ್ರೋಫಿಯಲ್ಲಿ ಆರು ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ರು. ಆದ್ರೆ ಹೆಚ್ಚು ರನ್ ಸ್ಕೋರ್ ಮಾಡೋಕೆ ಆಗಿರಲಿಲ್ಲ. ಬಟ್ ರಣಜಿ ಟ್ರೋಫಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ರು. 7 ಇನ್ನಿಂಗ್ಸ್‌ಗಳಿಂದ ಎರಡು ಶತಕಗಳು ಸೇರಿದಂತೆ 480 ರನ್‌ಗಳನ್ನು ಗಳಿಸಿದರು. ಹಾಗೇ 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಎಂಟು ಇನ್ನಿಂಗ್ಸ್‌ಗಳಿಂದ 49.28 ಸರಾಸರಿಯಲ್ಲಿ 345 ರನ್‌ಗಳನ್ನು ಗಳಿಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅದೇ ಫಾರ್ಮ್ನಲ್ಲಿ ಆಡಿದ ಶ್ರೇಯಸ್ ಐದು ಇನ್ನಿಂಗ್ಸ್‌ಗಳಿಂದ ಎರಡು ಶತಕಗಳೊಂದಿಗೆ 325 ರನ್‌ಗಳನ್ನು ಕಲೆ ಹಾಕಿದ್ರು. ಹೀಗೇ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಬಿಸಿಸಿಐ ಗಮನ ಸೆಳೆದಿದ್ದ ಶ್ರೇಯಸ್ ಅಯ್ಯರ್ ಈಗ ಟೀಂ ಇಂಡಿಯಾದಲ್ಲೂ ಅಂಥದ್ದೇ ಪರ್ಫಾಮೆನ್ಸ್ ಕೊಡ್ತಿದ್ದಾರೆ.