ಚಳಿಗಾಲದಲ್ಲಿ ಮೈಕೈ ನೋವು ಜಾಸ್ತಿಯಾಗುತ್ತಾ? – ಕೀಲುಗಳ‌ ನೋವಿಗೆ ಈ ದ್ರವ ಕಾರಣ!

ಚಳಿಗಾಲದಲ್ಲಿ ಮೈಕೈ ನೋವು ಜಾಸ್ತಿಯಾಗುತ್ತಾ? – ಕೀಲುಗಳ‌ ನೋವಿಗೆ ಈ ದ್ರವ ಕಾರಣ!

ಚುಮುಚುಮು ಚಳಿಗಾಲವೆಂದರೆ ಬಹಳ ಜನರಿಗೆ ಇಷ್ಟದ ಕಾಲ. ಕೊರೆಯುವ ಚಳಿಯಲ್ಲಿ ಬೆಚ್ಚಗೆ ಮಲಗಲು ತುಂಬಾ ಜನ ಇಷ್ಟಪಡುತ್ತಾರೆ. ಆದ್ರೆ ನಿಮಗೆ ಗೊತ್ತಿರಲಿ, ಅನೇಕರಿಗೆ ಇದು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ತಂದಿಡುವ ಕಾಲವಾಗಿದೆ. ಇದ್ದದ್ದು, ಇಲ್ಲದಿದ್ದದು ಎಲ್ಲ ಬಗೆಯ ನೋವುಗಳೂ ಕಾಣಿಸಿಕೊಂಡು ಹಿಂಸೆ ಮಾಡುತ್ತವೆ.

ಹೌದು ಚಳಿಗಾಲ ನೋವುಗಳನ್ನು ಉಲ್ಬಣಗೊಳಿಸುತ್ತದೆ. ಅದರಲ್ಲೂ ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಚಳಿಗಾಲ ಇನ್ನಷ್ಟು ಕಷ್ಟ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿನ ಕೀಲುಗಳ ಸುತ್ತಲಿನ ರಕ್ತನಾಳಗಳು ಗಟ್ಟಿಯಾಗುವುದರಿಂದ ಸಾಕಷ್ಟು ನೋವು ಎದುರಿಸಬೇಕಾಗುತ್ತದೆ. ಮೊಣಕಾಲು, ಕಾಲು ಅಥವಾ ಇತರೆ ಕೀಲು ನೋವು ಹೊಂದಿರುವ ಜನರಿಗೆ ಚಳಿಗಾಲದಲ್ಲಿ ಈ  ಸಮಸ್ಯೆಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: ಗೀಸರ್ ನೀರಲ್ಲಿ ಬ್ಯಾಕ್ಟೀರಿಯಾ..! – ಚಳಿಗಾಲದಲ್ಲಿ ಗೀಸರ್ ತಾಪಮಾನ ಎಷ್ಟಿದ್ದರೆ ಸೇಫ್?

ಹೌದು, ಶೀತ ವಾತಾವರಣದಲ್ಲಿ, ನರಗಳು- ಗಾಯಗಳು, ಊತ ಅಥವಾ ಇತರ ಕಾರಣಗಳಿಂದ ಅತಿಸೂಕ್ಷ್ಮವಾಗಬಹುದು. ಇದರಿಂದಾಗಿ ಚಳಿಗಾಲದಲ್ಲಿ ಕೀಲುಗಳಲ್ಲಿ ನೋವು ಉಂಟುಮಾಡುತ್ತದೆ. ಇನ್ನು ಕೀಲುಗಳಲ್ಲಿ ಇರುವ ಸೈನೋವಿಯಲ್ ದ್ರವವು ಆಘಾತ-ಅಬ್ಸಾರ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ. ತಾಪಮಾನ ಕಡಿಮೆಯಾದಾಗ, ದ್ರವವು ದಪ್ಪವಾಗುತ್ತದೆ ಮತ್ತು ಸರಿಯಾಗಿ ಕೀಲುಗಳ ನಡುವೆ ಹರಿಯುವುದಿಲ್ಲ. ಇದರಿಂದಾಗಿ ಕೀಲುಗಳು ಗಟ್ಟಿಯಾಗುತ್ತದೆ ಮತ್ತು ನೋವು ಹೆಚ್ಚಾಗುತ್ತದೆ.

ಇದರ ಜೊತೆಗೆ ಚಳಿಗಾಲದ ದಿನಗಳಲ್ಲಿ ಸೋಮಾರಿತನದಿಂದಾಗಿ, ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಮೊದಲೇ ಕೀಲು ನೋವಿನಿಂದ ಬಳಲುತ್ತಿರುವ ಜನರ ನೋವು ಹೆಚ್ಚಾಗುತ್ತದೆ. ಆದ್ದರಿಂದ ನಿತ್ಯವೂ ಪ್ರಾಣಾಯಾಮ, ಯೋಗ ಮತ್ತು ವ್ಯಾಯಾಮ ಮಾಡುತ್ತಿರಬೇಕು. ಹೀಗೆ ಮಾಡೋದರಿಂದ‌ ದೇಹ ಬಿಸಿಯಾಗಿ, ನೋವು ನಿವಾರಣೆಯಾಗುತ್ತದೆ. ಇದಕ್ಕಾಗಿ ಚಳಿಗಾಲದಲ್ಲಿ ದೈನಂದಿನ ದಿನಚರಿಯನ್ನು ಸುಧಾರಿಸಬೇಕು. ಅಲ್ಲದೆ ಚಳಿಗಾಲದ ವೇಳೆ ದೇಹದಲ್ಲಿ ನೀರಿನ ಪ್ರಮಾಣ ಕೊರತೆಯಾಗಲು ಬಿಡಬೇಡಿ. ಇವೆಲ್ಲವೂ ಕೀಲು‌ನೋವು ನಿವಾರಣೆಗೆ ಅತ್ಯಗತ್ಯ.

Shwetha M