ಸ್ಟಾರ್ ಬೌಲರ್ ಬುಮ್ರಾಗಿಲ್ಲ ಕ್ಯಾಪ್ಟನ್ಸಿ – ಟೀಂ ಇಂಡಿಯಾದಲ್ಲಿ ಆಟಗಾರ ಅಷ್ಟೇನಾ?
ಮ್ಯಾಜಿಕಲ್ ಸ್ಟಾರ್ಗೆ ಶಾಪವಾಗಿದ್ದೇನು?
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಮಾಡಿದ್ದ ಬಿಸಿಸಿಐ ಅಲ್ಲೊಂದು ಟ್ವಿಸ್ಟ್ ಇಟ್ಟಿದೆ. ಲಂಕಾ ವಿರುದ್ಧದ ಟಿ-20 ಹಾಗೇ ಏಕದಿನ ಸರಣಿಗೆ ಉಪನಾಯಕನನ್ನ ಅನೌನ್ಸ್ ಮಾಡಿದ್ದ ಮ್ಯಾನೇಜ್‌ಮೆಂಟ್ ಟೆಸ್ಟ್ ಸರಣಿಗೆ ಮಾತ್ರ ಯಾರಿಗೂ ಕ್ಯಾಪ್ಟನ್ಸಿ ಜವಾಬ್ದಾರಿ ನೀಡುವ ಗೋಜಿಗೆ ಹೋಗಿಲ್ಲ. 16 ಸದಸ್ಯರ ಟೀಮ್ನಲ್ಲಿ ರೋಹಿತ್ ಶರ್ಮಾರನ್ನ ಮಾತ್ರ ಕ್ಯಾಪ್ಟನ್ ಅಂತಾ ಮೆನ್ಷನ್ ಮಾಡಿದೆ. ಅಷ್ಟಕ್ಕೂ ಇಲ್ಲಿ ಉಪನಾಯಕನ ಸ್ಥಾನ ಖಾಲಿ ಬಿಡೋಕೆ ಕಾರಣ ಜಸ್ಪ್ರೀತ್ ಬುಮ್ರಾ. ನಾಯಕತ್ವದ ಮೇಲೆ ಕಣ್ಣಿಟ್ಟಿರೋ ಮ್ಯಾಜಿಕಲ್ ಬೌಲರ್ ಬುಮ್ರಾರಿಂದಾಗಿಯೇ ಬಿಸಿಸಿಐ ಈ ಜಾಣನಡೆ ಪ್ರದರ್ಶನ ಮಾಡಿದೆ ಅನ್ನೋ ಮಾತು ಕೇಳಿ ಬರ್ತಿದೆ. ಭಾರತದ ಸ್ಟಾರ್ ಪ್ಲೇಯರ್ ಆಗಿದ್ರೂ ಬುಮ್ರಾಗೆ ಯಾಕೆ ಕ್ಯಾಪ್ಟನ್ಸಿ ಹಾಗೂ ವೈಸ್ ಕ್ಯಾಪ್ಟನ್ಸಿ ನೀಡ್ತಿಲ್ಲ ಅಂತಾ ನಿಮಗೆ ಅನ್ನಿಸ್ಬೋದು. ಅದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: ಮುಡಾ ಹಗರಣ.. ಸಿಎಂಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ಏನಾಗಲಿದೆ ಪ್ರಾಸಿಕ್ಯೂಷನ್ ಭವಿಷ್ಯ?
ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾವನ್ನ ಮೂರೂ ಫಾರ್ಮೇಟ್ನಲ್ಲಿ ಸಮರ್ಥವಾಗಿ ನಿಭಾಯಿಸುವ ನಾಯಕನ ಹುಡುಕಾಟದಲ್ಲಿದೆ ಬಿಸಿಸಿಐ. ಶುಭ್ಮನ್ ಗಿಲ್ಗೆ ಮೂರು ಮಾದರಿಯ ನೇತೃತ್ವ ನೀಡಬೇಕು ಅನ್ನೋದು ಸೆಲೆಕ್ಷನ್ ಕಮಿಟಿ ಲೆಕ್ಕಾಚಾರ. ಅದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಹಾಗೂ ಟಿ-20 ಟೂರ್ನಿಗಳಲ್ಲಿ ಗಿಲ್ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಅದೇ ರೀತಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವೈಸ್ ಕ್ಯಾಪ್ಟನ್ ಹುದ್ದೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಇಲ್ಲಿ ಮಾತ್ರ ಬಿಸಿಸಿಐ ಜಾಣ ನಡೆ ಇಟ್ಟಿದೆ. ಕ್ಯಾಪ್ಟನ್ಸಿ ವಿಚಾರದಲ್ಲಿ ಜಸ್ಪ್ರೀತ್ ಬೂಮ್ರಾ ಈಗಾಗ್ಲೇ ಚಕಾರ ಎತ್ತಿದ್ರಿಂದ ಗಿಲ್ಗೆ ಉಪನಾಯಕನ ಪಟ್ಟ ನೀಡಿದ್ರೆ ತಂಡದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಇದೇ ಕಾರಣಕ್ಕೆ ತಂಡ ಪ್ರಕಟ ಮಾಡುವಾಗ ಎಲ್ಲಿಯೂ ಕೂಡ ಉಪನಾಯಕ ಯಾರು ಎಂದು ತಿಳಿಸಿಲ್ಲ. ಅಸಲಿಗೆ ಟೆಸ್ಟ್ ಪಂದ್ಯಗಳಿಗೆ ಈ ಹಿಂದೆ ಬೂಮ್ರಾಗೆ ಉಪನಾಯಕನ ಜವಾಬ್ದಾರಿ ನೀಡಲಾಗುತ್ತಿತ್ತು. ಕಳೆದ ಇಂಗ್ಲೆಂಡ್ ವಿರುದ್ಧದ ಸೀರೀಸ್ನಲ್ಲೂ ಬೂಮ್ರಾ ವೈಸ್ ಕ್ಯಾಪ್ಟನ್ ಆಗಿದ್ದರು. ಬಟ್ ಈ ಬಾರಿ ಬುಮ್ರಾಗೂ ನೀಡಿಲ್ಲ. ಅಷ್ಟಕ್ಕೂ ಬುಮ್ರಾರನ್ನ ಯಾಕೆ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೆ ಆಯ್ಕೆ ಮಾಡ್ತಿಲ್ಲ ಅಂದ್ರೆ ಅದಕ್ಕೆ ಉತ್ತರ ಇಂಜುರಿ.
ಬುಮ್ರಾಗೆ ಇಂಜುರಿಯೇ ಶಾಪ!
2024ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲರ್ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಉಪನಾಯಕನಾಗಿದ್ರು. ಆದರೆ, ಈಗ ಆ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅಷ್ಟಕ್ಕೂ ಬುಮ್ರಾ ಅವರನ್ನು ಉಪನಾಯಕನನ್ನಾಗಿ ಮಾಡದಿರುವುದು ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಭವಿಷ್ಯದ ನಾಯಕನಾಗಿ ನೋಡುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಅಷ್ಟೇ ಅಲ್ಲದೆ ಬುಮ್ರಾರ ಸ್ಟ್ರೆಸ್ ಕಡಿಮೆ ಮಾಡುವ ಮಾರ್ಗವೂ ಆಗಿರಬಹುದು. ಭವಿಷ್ಯದಲ್ಲಿ ಬುಮ್ರಾ ಅವರನ್ನು ಟೀಮ್ ಇಂಡಿಯಾದ ನಾಯಕನನ್ನಾಗಿ ಮಾಡದಿರಲು ಮತ್ತೊಂದು ಪ್ರಮುಖ ಕಾರಣ ಅವರ ಗಾಯಗಳು. ನಾಯಕನು ತಂಡದಲ್ಲಿ ನಿರಂತರವಾಗಿ ಲಭ್ಯವಿರಬೇಕು. ಆದರೆ ಬುಮ್ರಾ ಅವರ ಗಾಯದ ಸಮಸ್ಯೆ ಇದಕ್ಕೆ ಅಡ್ಡಿಯಾಗಲಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ ಭಾರತದ ಉಪನಾಯಕತ್ವದ ವಿಧಾನ ಕೂಡ ಬದಲಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗಿದ್ದು, ಶುಭಮನ್ ಗಿಲ್ ಅವರಿಗೆ ಏಕದಿನ ಮತ್ತು ಟಿ 20 ಎರಡರಲ್ಲೂ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ ಈ ಹಿಂದೆ ಭಾರತವನ್ನು ನಾಯಕರಾಗಿ ಮುನ್ನಡೆಸಿದ್ದರು. 2022ರಲ್ಲಿ ಇಂಗ್ಲೆಂಡ್ ಮತ್ತು 2023ರಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಹೀಗಿದ್ರೂ ಕೂಡ ಭವಿಷ್ಯದಲ್ಲಿ ಅವ್ರನ್ನ ನಾಯಕನನ್ನಾಗಿ ನೇಮಿಸೋಕೆ ಬಿಸಿಸಿಐ ತಯಾರಿಲ್ಲ. ಇದೇ ಕಾರಣಕ್ಕೆ ಬಾಂಗ್ಲಾ ಟೆಸ್ಟ್ ಸರಣಿಗೆ ಗಿಲ್, ಬುಮ್ರಾ ಸೇರಿದಂತೆ ಯಾವ ಆಟಗಾರನಿಗೂ ಉಪನಾಯಕತ್ವ ನೀಡದೆ ಬಿಸಿಸಿಐ ಜಾರಿಕೊಂಡಿದೆ.
ಇನ್ನು ಭಾರತ ಮತ್ತು ಬಾಂಗ್ಲಾದೇಶ ನಡುವೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಇನ್ನು ಮಿಡಲ್ ಆರ್ಡರ್ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವಕಾಶ ಗಿಟ್ಟಿಸಿದ್ರೆ. ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಕೋಟಾದದಲ್ಲಿ ಆರ್.ಅಶ್ವಿನ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಇನ್ನು, ವೇಗಿಗಳಾಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್ ದಯಾಳ್ ಕಾಣಿಸಿಕೊಂಡಿದ್ದಾರೆ.