ಹೆಣ್ಣು ಮಕ್ಕಳಿಗೆ ಥೈರಾಯ್ಡ್ ಸಮಸ್ಯೆ ಹೆಚ್ಚು ..!- ಈ ಬಗ್ಗೆ ತಜ್ಞರು ಏನಂತಾರೆ ?
ಇತ್ತೀಚೆಗಿನ ದಿನಗಳಲ್ಲಿ ಜನರಿಗೆ ಅತಿ ಹೆಚ್ಚಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಥೈರಾಯ್ಡ್ ಸಮಸ್ಯೆ ಕೂಡಾ ಒಂದು. ಜಗತ್ತಿನಾದ್ಯಂತ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಜನವರಿ ತಿಂಗಳು ಥೈರಾಯ್ಡ್ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ತಿಂಗಳಾಗಿದೆ. ಈ ನಿಟ್ಟಿನಲ್ಲಿ ಥೈರಾಯ್ಡ್ ಸಮಸ್ಯೆಯ ಕುರಿತು ಮತ್ತು ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಯಾಕೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ ಎಂಬ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಥೈರಾಯ್ಡ್ ಗ್ರಂಥಿ ಇದು ಮಾನವನ ಕುತ್ತಿಗೆಯ ಗಂಟಲಿನ ಕೆಳಗೆ ಒಂದು ಚಿಟ್ಟೆಯ ಆಕಾರದಂತೆ ಇರುತ್ತದೆ. ಆದರೆ ಇದು ಮಾನವನ ದೇಹದ ಬೆಳವಣಿಗೆಗೆ ಮುಖ್ಯವಾಗಿದೆ. ಥೈರಾಯ್ಡ್ ಗ್ರಂಥಿಯು ಥೈರಾಕ್ಸಿನ್( thyroxine ), ಟ್ರೈಯೊಡೋಥೈರಾನೈನ್ (triiodothyronine), ಕ್ಯಾಲ್ಸಿಟಾನಿನ್ (Calcitonin) ಎನ್ನುವ ಹಾರ್ಮೋನ್ ಗಳನ್ನ ಬಿಡುಗಡೆ ಮಾಡುತ್ತದೆ. ಇವುಗಳು ಮಾನವ ದೇಹದ ಮೆಟಬೋಲಿಸಂ ಮತ್ತೂ ಬೆಳವಣಿಗೆಗೆ ಅತೀ ಅವಶ್ಯವಾಗಿವೆ. ಈ ಹಾರ್ಮೋನ್‌ಗಳ ಅಧಿಕ ಉತ್ಪಾದನೆ ಮತ್ತೂ ಕಡಿಮೆ ಉತ್ಪಾದನೆ ನಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಅತಿಯಾದರೆ ‘ಔಷಧ’ವೂ ಅಪಾಯ..! – ಕೆಮ್ಮಿನ ಸಿರಪ್ ಸೇವಿಸುವ ಮುನ್ನ ಈ ವಿಚಾರ ಗೊತ್ತಿರಲಿ..!
ಹೈಪೋಥೈರಾಯಿಡಿಸಂ ಮತ್ತೂ ಹೈಪರ್ ಥೈರಾಯಿಡಿಸಂ, ಥೈರಾಯ್ಡ್ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಕಾಯಿಲೆಗಳು.
ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತೆ ಥೈರಾಯ್ಡ್ ಸಮಸ್ಯೆ!
ಥೈರಾಯ್ಡ್ ಗ್ರಂಥಿ ಬಿಡುಗಡೆ ಮಾಡುವ ಥೈರಾಕ್ಸಿನ್ ಹಾರ್ಮೋನ್ ಮಹಿಳೆಯರ ದೇಹದಲ್ಲಿ ಇರುವ ಈಸ್ಟ್ರೋಜೆನ್ ಹಾರ್ಮೋನ್ ಜೊತೆ ಸಂಬಂಧವಿರುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆಗಳು ಅತೀ ಹೆಚ್ಚು ಮಹಿಳೆಯರಲ್ಲಿ ಕಾಡುತ್ತದೆ. ತಜ್ಞರ ಪ್ರಕಾರ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಪುರುಷರಿಗಿಂತ ಹತ್ತು ಪಟ್ಟು ಜಾಸ್ತಿ ಕಂಡು ಬರುತ್ತವೆ. ಸ್ವಯಂ ನಿರೋಧಕ ಸಮಸ್ಯೆಯಿಂದ ಈ ಸಮಸ್ಯೆಗಳು ಹೆಚ್ಚಾಗಿ ಬರುತ್ತವೆ. ಸ್ವಯಂ ನಿರೋಧಕ ಸಮಸ್ಯೆಯಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯೇ ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡುವ ಸ್ಥಿತಿಯದು. ಆದರೆ ಮಹಿಳೆಯರಲ್ಲಿ ಸ್ವಯಂ ನಿರೋಧಕ ಕಾಯಿಲೆಗಳು (autoimmune disease ) ಹೆಚ್ಚಾಗಿ ಕಂಡು ಬರುವುದು ಯಾಕೆ ಅನ್ನುವ ಬಗ್ಗೆ ನಿರ್ದಿಷ್ಟವಾದ ಕಾರಣವಿಲ್ಲ. ಇನ್ನೂ ಜೀವನ ಶೈಲಿ, ಹವಾಮಾನ ಮತ್ತೂ ಆನುವಂಶಿಕವಾಗಿಯೂ ಈ ಸಮಸ್ಯೆ ಕಾಡುತ್ತದೆ.
ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರಾಗಿರುವ ಡಾ ವಿನೀತ ತಾನೇಜಾ ಅವರ ಅಭಿಪ್ರಾಯದಂತೆ ಮಹಿಳೆಯ ದೇಹದಲ್ಲಿರುವ ಈಸ್ಟ್ರೋಜೆನ್ ಹಾರ್ಮೋನ್, ಥೈರಾಯ್ಡ್ ಗ್ರಂಥಿಯಲ್ಲಿರುವ ಥೈರಾಗ್ಲೋಬುಲಿನ್ ಅಂಶವನ್ನ ಹೆಚ್ಚಿಸುತ್ತದೆ. ಆದರೆ ಮಹಿಳೆಯರ ಜೀವನದ ಹಲವಾರು ಹಂತಗಳಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಏರಿಳಿತವಾಗುತ್ತಾ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಹಾರ್ಮೋನ್‌ಗಳು ನಿಗದಿತ ಪ್ರಮಾಣದಲ್ಲಿ ಬಿಡುಗಡೆಯಾಗುವುದಿಲ್ಲ. ಈ ಕಾರಣದಿಂದ ಥೈರಾಯ್ಡ್ ಸಮಸ್ಯೆಯು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ ಥೈರಾಯ್ಡ್ ಕಾಯಿಲೆಯು ಗುಣಪಡಿಸುವಂತದ್ದು. ಸೂಕ್ತ ಔಷದಿ ಮತ್ತೂ ಉತ್ತಮ ಜೀವನ ಶೈಲಿಯಿಂದ ಥೈರಾಯ್ಡ್ ಸಮಸ್ಯೆಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.