ಚೀನಾದ ಸ್ಪೈ ಶಿಪ್ ಮಾಲ್ಡೀವ್ಸ್‌ನತ್ತ ಹೊರಟಿರೋದ್ಯಾಕೆ? – ಚೀನಾದ ಪ್ಲ್ಯಾನ್ ಏನಿರಬಹುದು?

ಚೀನಾದ ಸ್ಪೈ ಶಿಪ್ ಮಾಲ್ಡೀವ್ಸ್‌ನತ್ತ ಹೊರಟಿರೋದ್ಯಾಕೆ? – ಚೀನಾದ ಪ್ಲ್ಯಾನ್ ಏನಿರಬಹುದು?

ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧ ಈಗಾಗ್ಲೇ ಹದಗೆಟ್ಟು ಹಳ್ಳ ಹಿಡಿದಿದೆ. ಭಾರತೀಯರು ಯಾರು ಕೂಡ ಈಗ ಮಾಲ್ಡೀವ್ಸ್​​ಗೆ ಟ್ರಿಪ್​ ಹೋಗ್ತಿಲ್ಲ. ಎಲ್ಲರೂ ಲಕ್ಷಾದ್ವೀಪಕ್ಕೆ ಜೈ ಅಂತಿದ್ದಾರೆ. ಪ್ರಧಾನಿ ಮೋದಿ ಲಕ್ಷಾದ್ವೀಪದಲ್ಲಿ ಹೋಗಿ ಒಂದಷ್ಟು ಹೆಜ್ಜೆ ನಡೆದಾಡಿದ್ರು, ಫೋಟೋಗೆ ಪೋಸ್​​ ಕೊಟ್ಟಿದ್ದಷ್ಟೇ. ಅಷ್ಟಕ್ಕೇ ಮಾಲ್ಡೀವ್ಸ್​ಗೆ ಉರಿ ಹೊತ್ತಿಕೊಂಡು ಬಿಟ್ಟಿತ್ತು. ಸಂಪೂರ್ಣವಾಗಿ ಭಾರತದ ವಿರುದ್ಧವೇ ನಿಂತುಬಿಟ್ಟಿದೆ. ಅಲ್ಲಿರೋ ನಮ್ಮ ಸೈನಿಕರಿಗೂ ಜಾಗ ಖಾಲಿ ಮಾಡುವಂತೆ ಚೀನಾದ ಕೈಗೊಂಬೆಯಾಗಿರೋ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜು ವಾರ್ನಿಂಗ್ ಮಾಡಿದ್ದಾರೆ. ಕ್ಸಿ ಜಿನ್​ಪಿಂಗ್ ಬೆನ್ನಿಗೆ ನಿಂತಿರೋ ಕಾರಣವೇ ಮಾಲ್ಡೀವ್ಸ್ ಅಧ್ಯಕ್ಷನಿಗೆ ಇಂಥದ್ದೊಂದು ಭಂಡ ಧೈರ್ಯ ಬಂದಿರೋದು. ಭಾರತೀಯ ಸೈನಿಕರೂ ಇನ್ನೂ ಕೂಡ ಮಾಲ್ಡೀವ್ಸ್​ನಲ್ಲೇ ಇದ್ದಾರೆ. ಅಷ್ಟರಲ್ಲೇ ಚೀನಾ ಮಾಲ್ಡೀವ್ಸ್​​ನಲ್ಲಿ ಕಾರುಬಾರು ಶುರುಮಾಡಿದೆ. ಚೀನಾ ಸ್ಪೈ ಶಿಪ್ ಅಂದ್ರೆ ಗೂಢಾಚಾರಿ ಹಡಗು ಈಗ ಹಿಂದೂ ಮಹಾಸಾಗರದಲ್ಲಿರೋ ಮಾಲ್ಡೀವ್ಸ್​ನತ್ತ ಹೊರಟಿದೆ. ಇತ್ತ ಮಾಲ್ಡೀವ್ಸ್ ಸರ್ಕಾರ ಚೀನಾದ ಸ್ಪೈ ಶಿಪ್​​ನ್ನ ವೆಲ್​​ಕಮ್​ ಮಾಡಿಕೊಳ್ತಿದೆ. ಅಷ್ಟಕ್ಕೂ ಚೀನಾದ ಸ್ಪೈ ಶಿಪ್​ ಮಾಲ್ಡೀವ್ಸ್​​ನತ್ತ ಹೊರಟಿರೋದ್ಯಾಕೆ? ಇದು ಭಾರತಕ್ಕೆ ಯಾವ ರೀತಿ ಥ್ರೆಟ್ ಆಗಿದೆ? ಚೀನಾದ ಪ್ಲ್ಯಾನ್​​ ಏನಿರಬಹುದು? ಭಾರತ ಸರ್ಕಾರ ಈಗ ಏನ್ಮಾಡುತ್ತೆ? ಇವೆಲ್ಲದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?

ಕ್ಸಿಯಾಂಗ್ ಯಾಂಗ್ ಹಾಂಗ್ 03.. ಇದು ಚೀನಾ ಸೇನೆಯ ಗೂಢಾಚಾರಿಕೆ ಹಡಗು. ಹಿಂದೂ ಮಹಾಸಾಗರವನ್ನ ಮ್ಯಾಪಿಂಗ್​​ ಮಾಡೋಕೆ ಮುಂದಾಗಿರೋ ಈ ಶಿಪ್​​ ಈಗ ಭಾರತದಿಂದ ಕೇವಲ 861 ಕಿಲೋ ಮೀಟರ್​ ದೂರದಲ್ಲಿರೋ ಮಾಲ್ಡೀವ್ಸ್​ನತ್ತ ನುಗ್ಗುತ್ತಿದೆ. ಫೆಬ್ರವರಿ ಮೊದಲನೇ ವಾರದ ವೇಳೆಗೆ ಚೀನಾದ ಹಡಗು ಮಾಲ್ಡೀವ್ಸ್ ರಾಜಧಾನಿ ಮಾಲೆಯನ್ನ ತಲುಪುತ್ತೆ. ಫ್ರೆಂಡ್ಲಿ ದೇಶದ ಹಡಗನ್ನ ನಾವು ವೆಲ್​ಕಮ್ ಮಾಡ್ತೇವೆ ಅಂತಾ ಈಗಾಗ್ಲೇ ಮಾಲ್ಡೀವ್ಸ್ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ, ಚೀನಾದ ಶಿಪ್​ ಮಾಲ್ಡೀವ್ಸ್​​ನಿಂದ ಯಾವುದೇ ಸಂಶೋಧನೆಗಳನ್ನ ಮಾಡೋದಿಲ್ಲ ಅಂತಾ ಕುಂಬಳಕಾಯಿ ಕಳ್ಳನಂತೆ ಸ್ಟೇಟ್​​ಮೆಂಟ್ ಕೊಟ್ಟಿದೆ.

ಆದ್ರೆ ಮಾಲ್ಡೀವ್ಸ್​ನ ಈ ಹಸೀ ಸುಳ್ಳನ್ನ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಯಾವುದೇ ಉದ್ದೇಶ ಇಲ್ಲದೆ 4,300 ಟನ್ ತೂಕದ ಸ್ಪೈ ಶಿಪ್​​ನ್ನ ಕೋಟಿಗಟ್ಟಲೆ ಖರ್ಚು ಮಾಡಿಕೊಂಡು ಮಾಲ್ಡೀವ್ಸ್​ಗೆ ಕಳುಹಿಸೋಕೆ ಚೀನಾಗೆ ಏನು ತಲೆ ಕೆಟ್ಟಿದ್ಯಾ? ಸ್ಪೈ ಶಿಪ್​​ನಲ್ಲೇನು ಮಾಲ್ಡೀವ್ಸ್ ಅಧ್ಯಕ್ಷನ ದೋಸ್ತ್ ಕ್ಸಿ ಜಿನ್​​ಪಿಂಗ್ ಟ್ರಿಪ್ ಹೊರಟಿಲ್ವಲ್ಲಾ. ಕ್ಸಿಯಾಂಗ್ ಯಾಂಗ್ ಹಾಂಗ್ 03 ಅತ್ಯಾಧುನಿಕ ಕ್ಲಾಸಿಫೈಡ್ ರಿಸರ್ಚ್ ಹಡಗು. ನೀರಿನಾಳದಲ್ಲಿ ಭೂಕಂಪ, ನೈಸರ್ಗಿಕ ವಿಕೋಪಗಳನ್ನ ಪತ್ತೆ ಹಚ್ಚುವ ಸಾಮರ್ಥ್ಯವನ್ನ ಈ ಶಿಪ್​ ಹೊಂದಿದೆ. ಈ ಹಡಗಿನಲ್ಲಿರೋ ಟೆಕ್ನಾಲಜಿ ಮೂಲಕ ಡೇಟಾ ಸಂಗ್ರಹಿಸಿ ಸಂಶೋಧನೆ ನಡೆಸಲಾಗುತ್ತೆ. ಸಮುದ್ರದ ಯಾವ ಪ್ರದೇಶದಲ್ಲಿ ಸಬ್​​ಮರೀನ್ ಮತ್ತು ಸಬ್​​ಮರ್ಸಿಬಲ್​ ಡ್ರೋನ್​ಗಳನ್ನ ನಿಯೋಜನೆ ಮಾಡಬಹುದು. ಇವೆಲ್ಲದ್ರ ನಿಯೋಜನೆ ಸಮುದ್ರದ ಯಾವ ಏರಿಯಾ ಅನುಕೂಲವಾಗಿದೆ ಅನ್ನೋ ಬಗ್ಗೆಯೂ ಈ ಶಿಪ್​​​ ಮೂಲಕವೇ ರಿಸರ್ಚ್ ಮಾಡಲಾಗುತ್ತೆ.  ಟೋಟಲಿ ಇದೊಂದು ಸ್ಪೈ ಮತ್ತು ರಿಸರ್ಚ್ ಶಿಪ್. ಹೀಗಾಗಿ ಮಾಲ್ಡೀವ್ಸ್​ಗೆ ಚೀನಾ ಸುಮ್ನೆ ಅಂತೂ ಯಾಂಗ್ ಹಾಂಗ್ 03 ಶಿಪ್​ನ್ನ ಕಳುಹಿಸ್ತಾ ಇಲ್ಲ ಅನ್ನೋದನ್ನ ನಾವಿಲ್ಲೇ ಅರ್ಥ ಮಾಡಿಕೊಳ್ಳಬಹುದು. ಅಸಲಿಗೆ ಚೀನಾ ಮಾಲ್ಡೀವ್ಸ್ ಬಳಿ ತನ್ನ ಸೇನಾ ನೆಲೆಯನ್ನ ಸ್ಥಾಪಿಸೋಕೆ ಪ್ಲ್ಯಾನ್ ಮಾಡ್ತಾ ಇದೆ. ಹಿಂದೂಮಹಾಸಾಗರದ ಮೇಲೆ ಹಿಡಿತ ಸಾಧಿಸೋಕೆ ಮಾಲ್ಡೀವ್ಸ್​​ನ್ನ ಬುಟ್ಟಿಗೆ ಹಾಕಿಕೊಳ್ತಿದೆ. ಇದಕ್ಕಾಗಿ ಭಾರತೀಯ ಸೈನಿಕರನ್ನ ಮೊದಲು ಜಾಗ ಖಾಲಿ ಮಾಡಿಸೋಕೆ ಮಾಲ್ಡೀವ್ಸ್​ ಮೂಲಕ ಒತ್ತಡ ಹೇರ್ತಿದೆ. ಇಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಜು ಸುಮ್ನೆ ಮಾತನಾಡುವ ಗೊಂಬೆಯಷ್ಟೇ. ಭಾರತೀಯರ ಸೈನಿಕರನ್ನ ಓಡಿಸಿ, ತನ್ನ ಸೇನೆಯನ್ನ ನಿಯೋಜಿಸೋದೆ ಚೀನಾದ ವನ್​ ಪಾಯಿಂಟ್ ಅಜೆಂಡಾ.

ಇನ್ನು ಚೀನಾದ ಸ್ಪೈ ಶಿಪ್​​ ಮಾಲ್ಡೀವ್ಸ್​​ನತ್ತ ಬರ್ತಿರೋದನ್ನ ಭಾರತ ಸರ್ಕಾರ ತುಂಬಾ ಸೂಕ್ಷ್ಮವಾಗಿ ಗಮನಿಸ್ತಾ ಇದೆ. ಈ ಬಗ್ಗೆ ಮೋದಿ ಸರ್ಕಾರ ಇದುವರೆಗೂ ಯಾವುದೇ ಸ್ಟೇಟ್​ಮೆಂಟ್​ ಕೊಟ್ಟಿಲ್ಲವಾದ್ರೂ ಚೀನಾ ಮತ್ತು ಮಾಲ್ಡೀವ್ಸ್ ಮಧ್ಯೆ ನಡೀತಾ ಇರೋ ಎಲ್ಲಾ ಡೆವಲಪ್​ಮೆಂಟ್​​ಗಳ ಮೇಲೂ ಭಾರತ ಕಣ್ಣಿಟ್ಟಿದೆ. ಸ್ನೇಹಿತರೇ..ನಿಮಗೆ ಗೊತ್ತಿರಲಿ..ಚೀನಾ ಈ ರೀತಿ ತನ್ನ ಸ್ಪೈ ಶಿಪ್​ನ್ನ ಭಾರತದ ಸುತ್ತಮುತ್ತ ಕಳುಹಿಸ್ತಾ ಇರೋದು ಇದೇ ಮೊದಲೇನಲ್ಲ. 2023ರಲ್ಲಿ ಕೆಂಪು ಸೇನೆಯ ಗೂಢಾಚಾರಿಕಾ ಹಡಗು ಶ್ರೀಲಂಕಾಗೂ ಬಂದಿತ್ತು. 17 ದಿನಗಳ ಕಾಲ ಕೊಲಂಬೋ ಬಂದರಿನಲ್ಲೇ ಝಂಡಾ ಹೂಡಿತ್ತು. ಆಗ ಭಾರತ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಭಾರತ ಮತ್ತು ಅಮೆರಿಕದ ಒತ್ತಡಕ್ಕೆ ಮಣಿದು ಶ್ರೀಲಂಕಾ ಸರ್ಕಾರ ಚೀನಾ ಹಡಗಿಗೆ ನೆಲೆ ನೀಡೋಕೆ ಅನುಮತಿ ನಿರಾಕರಿಸಿತ್ತು. ಬಂಗಾಳ ಕೊಲ್ಲಿ ಸಮುದ್ರ ಭಾಗದಲ್ಲಿರೋ ನೋ ಫ್ಲೈ ಜೋನ್ ಬಳಿಯೂ ಚೀನಾ ಹಡಗು ಬಂದಿತ್ತು. ಆ ಭಾಗದಲ್ಲಿ ಭಾರತೀಯ ಸೇನೆ ಆಗಾಗ ಮಿಸೈಲ್ ಟೆಸ್ಟ್​​ಗಳನ್ನ ಮಾಡ್ತಾ ಇರುತ್ತೆ. ಇದೇ ಕಾರಣಕ್ಕಾಗಿ ಅದನ್ನ ಫ್ಲೈಯಿಂಗ್ ಜೋನ್ ಮಾಡಲಾಗಿದೆ. ಯಾವುದೇ ಹಡಗುಗಳು ಕೂಡ ಅಲ್ಲಿ ಓಡಾಡುವಂತಿಲ್ಲ. ಹೀಗಾಗಿ ಭಾರತ ವಾರ್ನಿಂಗ್ ಮಾಡುತ್ತಲೇ ಚೀನಾ ಶಿಪ್ ಯೂಟರ್ನ್ ಮಾಡಿತ್ತು. ಇತ್ತೀಚೆಗಷ್ಟೇ ಕ್ಸಿಯಾಂಗ್ ಯಾಂಗ್ ಹಾಂಗ್ 03 ಶಿಪ್ ಚೀನಾದ ಸಾನ್ಯ ಬಂದರಿನಿಂದ ಹೊರಟಿದ್ದು, ಜನವರಿ​ 17 ರಂದು ಮಯನ್ಮಾರ್​ನ ತಿಲಾವ ಬಂದರನ್ನ ತಲುಪಿತ್ತು. ಅಲ್ಲಿ ಮಯನ್ಮಾರ್​​ ಜೊತೆಗಗೂಡಿ ಸಾಗರ ಸಂಶೋಧನೆ ನಡೆಸಲಾಗಿತ್ತು. ಕಕೆಲಸ ಮುಗಿಸಿ ಮಯನ್ಮಾರ್​ನಿಂದ ಹೊರಟ ಚೀನಾ  ಜನವರಿ 22ರಂದು ಇದೇ ಹಡಗು ಇಂಡೋನೇಷ್ಯಾದ ಜಕರ್ತಾ ಸಮುದ್ರ ವಲಯದಲ್ಲೂ ಕಾಣಿಸಿಕೊಂಡಿತ್ತು. ಫೆಬ್ರವರಿ ಮೊದಲೇ ವಾರದಲ್ಲಿ ಮಾಲ್ಡೀವ್ಸ್​ಗೆ ರೀಚ್ ಆಗ್ತಿದೆ. ಅಂದ್ರೆ ಇಲ್ಲಿ ಚೀನಾ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ರಿಸರ್ಚ್​ಗೆ ಮುಂದಾಗಿದೆ. ಅಂತೂ ಭಾರತವನ್ನ ಟಾರ್ಗೆಟ್​ ಮಾಡಿಯೇ ನಮ್ಮ ಸುತ್ತಲೂ ಸಮುದ್ರ ವಲಯದಲ್ಲಿ ಚೀನಾ ಇಷ್ಟೆಲ್ಲಾ ಸಂಶೋಧನೆಗಳನ್ನ ನಡೆಸ್ತಾ ಇದೆ.  ​​  ​

ಶ್ರೀಲಂಕಾದಲ್ಲಾಗಲಿ, ಮಯನ್ಮಾರ್​​ನಲ್ಲಾಗಲಿ, ಮಾಲ್ಡೀವ್ಸ್​ನಲ್ಲೇ ಆಗಲಿ ಚೀನಾದ ಈ ಸ್ಪೈ ಶಿಪ್​​ನ್ನ ನಿಯೋಜಿಸಿದ್ರೆ ಭಾರತದ ಕರಾವಳಿ ತೀರ ಮಾತ್ರ ದಕ್ಷಿಣ ಭಾರತದೊಳಗಿರೋ ಸೂಕ್ಷ್ಮ ಪ್ರದೇಶಗಳನ್ನ ಟ್ರ್ಯಾಕ್​​​ ಮಾಡಬಹುದು. ಅಂಥಾ ಪವರ್​​ಫುಲ್ ಸರ್ವೈಲೆನ್ಸ್ ಮತ್ತು ರೇಡಾರ್ ಸಿಸ್ಟಮ್​​ ಚೀನಾದ ಈ ಡೇಂಜರಸ್ ಶಿಪ್​ನಲ್ಲಿದೆ. ಹಡಗಿನಲ್ಲಿ 13 ಸಂಶೋಧನಾ ತಂಡಗಳಿದ್ದು ಒಟ್ಟು 28 ಪ್ರಾಜೆಕ್ಟ್​ಗಳಿಗೆ ಸಂಬಂಧಿಸಿ​​ ರಿಸರ್ಚ್ ನಡೆಸೋಕೆ ಪ್ಲ್ಯಾನ್ ಮಾಡಿವೆ. ಅಂದ್ರೆ ಈಗ ಮಾಲ್ಡೀವ್ಸ್​​ನಲ್ಲಿ ಈ ಶಿಪ್​ನ್ನ ನಿಯೋಜನೆ ಮಾಡಿದ್ರೆ ಅಲ್ಲಿಂದ ಭಾರತದ ಕಾರವಳಿ ತೀರದಲ್ಲಿರೋ ಭದ್ರತಾ ವ್ಯವಸ್ಥೆ ಬಗ್ಗೆ, ಎಲ್ಲೆಲ್ಲಿ ಸಬ್​ಮರೀನ್​​ಗಳನ್ನ, ಯುದ್ಧ ಹಡಗುಗಳನ್ನ ನಿಯೋಜಿಸಲಾಗಿದೆ ಅನ್ನೋ ಬಗ್ಗೆ, ಹಾಗೆಯೇ ನಮ್ಮಲ್ಲಿರೋ ಪರಮಾಣು ಸ್ಥಾವರಗಳ ಬಗ್ಗೆಯೂ ಚೀನಾಗೆ ಇನ್​ಫಾರ್ಮೇಶನ್ ಕಲೆಕ್ಟ್ ಮಾಡಬಹುದು. ಎಲ್ಲೆಲ್ಲಾ ಪರಮಾಣ ಸ್ಥಾವರಗಳಿಗೆವೆ, ನಮ್ಮ ಭದ್ರತಾ ವ್ಯವಸ್ಥೆ ಇವೆಲ್ಲವನ್ನೂ ಈ ಸ್ಪೈ ಶಿಪ್​ ಮೂಲಕ ಚೀನಾಗೆ ಟ್ರ್ಯಾಕ್ ಮಾಡಬಹುದು. ತಮಿಳುನಾಡಿನ ಕಲ್ಪಾಕಮ್​​ನಲ್ಲಿರೋ ನ್ಯೂಕ್ಲಿಯರ್ ಪವರ್ ಸ್ಟೇಷನ್. ತಮಿಳುನಾಡಿನ ಕೂಡಾಂಕುಲಮ್​​ನಲ್ಲಿರೋ ಇನ್ನಿಂದು ನ್ಯೂಕ್ಲಿಯರ್​​ ಪವರ್ ಸ್ಟೇಷನ್, ಕೊಚ್ಚಿನ್​ನಲ್ಲಿರೋ ನೌಕಾ ನೆಲೆ ಮತ್ತು ದಕ್ಷಿಣ ಭಾರತದಲ್ಲಿರೋ ಒಟ್ಟು ಆರು ಬಂದರುಗಳು ಕೂಡ ಚೀನಾ ಸ್ಪೈಶಿಪ್​ನ ರಾಡಾರ್​ನಲ್ಲಿ ಕವರ್ ಆಗುತ್ತೆ. ಇದು ನಿಜಕ್ಕೂ ಭಾರತದ ರಕ್ಷಣಾ ವ್ಯವಸ್ಥೆಗೆ ಎದುರಾಗಿರೋ ದೊಡ್ಡ ಥ್ರೆಟ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇದಿಷ್ಟೇ ಅಲ್ಲ, ಭಾರತದ ಸುತ್ತಲೂ ಸೇರಿದಂತೆ ಜಗತ್ತಿನ ಹಲವೆಡೆ ಚೀನಾ ವಿವಿಧ ದೇಶಗಳ ಬಂದರುಗಳನ್ನ ಅಭಿವೃದ್ಧಿಪಡಿಸ್ತಿದೆ. ಇಲ್ಲಿ ಅಭಿವೃದ್ಧಿ ಅಂದ್ರೆ ಆ ಎಲ್ಲಾ ಬಂದರುಗಳು ಚೀನಾದ ಕಂಟ್ರೋಲ್​​ನಲ್ಲಿದೆ ಅಂತಾನೆ ಅರ್ಥ. ಈ ಬಂದರುಗಳ ಮೂಲಕ ಹಗಲಿನ ಹೊತ್ತಲ್ಲಿ ವ್ಯಾಪಾರ ಮಾಡೋದು. ರಾತ್ರಿ ಹೊತ್ತು ಗೂಢಾಚಾರಿಕೆ ನಡೆಸೋದು. ಇದು ಹಿಂದೂ ಮಹಾಸಾಗರವನ್ನ ಡಾಮಿನೇಟ್ ಮಾಡೋಕೆ ಚೀನಾ ರೆಡಿಮಾಡಿಕೊಂಡಿರೋ ಗ್ರ್ಯಾಂಡ್ ಪ್ಲ್ಯಾನ್. ನೋಡಿ ಪೂರ್ವ ಆಫ್ರಿಕಾದಲ್ಲಿರೋ ಡ್ಜಿಬೋಟಿಯಲ್ಲಿರೋ ಡೊರಾಲೆಹ್​ ಬಂದರನ್ನ ಚೀನಾ ತನ್ನ ಕಂಟ್ರೋಲ್​ನಲ್ಲಿಟ್ಟುಕೊಂಡಿದೆ. ​​ ಕೀನಾದ್ಯದಲ್ಲಿರೋ ಲಾಮು ಬಂದರನ್ನ ಕೂಡ ಅಭಿವೃದ್ಧಿ ಪಡಿಸ್ತಾ ಇದೆ. ತಾಂಜಾನಿಯಾದಲ್ಲಿರೋ ಡರ್-ಎಸ್-ಸಲಾಮ್​ ಪೋರ್ಟ್​​ ಕೂಡ ಚೀನಾ ಸುಪರ್ದಿಯಲ್ಲೇ ಇದೆ. ಇನ್ನು ಪಾಕಿಸ್ತಾನದ ದ್ವಾದರ್ ಬಂದರನ್ನ ಚೀನಾವೇ ಅಭಿವೃದ್ಧಿ ಪಡಿಸ್ತಾ ಇದೆ. ಕರಾಚಿ ಬಂದರಿನಲ್ಲಿ ಡೀಪ್ ವಾಟರ್​ ಟರ್ಮಿನಲ್​​ನ್ನ ನಿರ್ಮಾಣ ಮಾಡ್ತಿದೆ. ಶ್ರೀಲಂಕಾದ ಹಂಬಟೋಟ ಬಂದರನ್ನ 90 ವರ್ಷಗಳಿಗೆ ಲೀಸ್​​ಗೆ ಪಡೆದಿದೆ. ಅಂದ್ರೆ ಇದು ಶಾಶ್ವತವಾಗಿ ಚೀನಾ ಪಾಲಾಯ್ತು ಅಂತಾನೆ ಅರ್ಥ. ಇಷ್ಟೇ ಅಲ್ಲ, ಮಯನ್ಮಾರ್​​ನಲ್ಲಿರೋ ಬಂದರು ಕೂಡ ಚೀನಾದ ಹಿಡಿತದಲ್ಲಿದೆ. ಬಾಂಗ್ಲಾದೇಶದ ಚಿತ್ತಗಾಂಗ್​ ಬಂದರನ್ನ ಕೂಡ ತನ್ನ ಕಂಟ್ರೋಲ್​​ನಲ್ಲಿಟ್ಟುಕೊಂಡಿದೆ. ಇದೀಗ ಮಾಲ್ಡೀವ್ಸ್​​ನ ಬಂದರಿಗೂ ಲಗ್ಗೆ ಇಡ್ತಿದೆ. ಒಟ್ಟು 17 ಬಂದರುಗಳು ಚೀನಾದ ಕಪಿಮುಷ್ಠಿಗೆ ಸಿಕ್ಕಂತಾಗುತ್ತೆ. ಅಲ್ಲಿಗೆ ಭಾರತ ಸಮುದ್ರ ಮಾರ್ಗವಾಗಿ ಎಲ್ಲೆಲ್ಲಾ ವ್ಯವಹಾರ ಮಾಡುತ್ತೋ ಅಷ್ಟೋ ಸಮುದ್ರ ವಲಯದ ಮೇಲೆ ಚೀನಾ ಹದ್ದಿನ ಕನ್ನಿಟ್ಟಂತಾಗುತ್ತೆ. ಕೇವಲ ಕಣ್ಣಿಟ್ಟಿರೋದಷ್ಟೇ ಅಲ್ಲ, ಆಯಕಟ್ಟಿನ ಜಾಗದಲ್ಲಿ ಸೆಟ್ಲ್ ಆಗಿ ಅಗಲೇ ಹೇಳಿದ ಹಾಗೆ ಅರಬ್ಬೀ, ಬಂಗಾಳಕೊಲ್ಲಿ, ಹಿಂದೂಮಹಾಸಾಗರ ಈ ಮೂರೂ ಸಮುದ್ರ ಭಾಗದಲ್ಲಿ ಭಾರತದ ಮೇಲೆ ಡಾಮಿನೇಟ್ ಮಾಡೋಕೆ ಚೀನಾ ಸ್ಕೆಚ್ ಹಾಕಿದೆ.

ನಿಜಕ್ಕೂ ಈಗ ಭಾರತದ ಸುತ್ತಲೂ ಚೀನಾ ತನ್ನ ಚಕ್ರವ್ಯೂಹವನ್ನ ನಿರ್ಮಿಸಿಕೊಳ್ತಾ ಇದೆ. ಇನ್ನು ಭೂಪ್ರದೇಶದಲ್ಲೂ ಚೀನಾ ಇದನ್ನೇ ಮಾಡ್ತಿದ್ಯಲ್ಲಾ. ಪಾಕಿಸ್ತಾನದ ಮೂಲಕ ಜಮ್ಮು-ಕಾಶ್ಮೀರ ಮತ್ತು ಪಂಜಾಬ್​ ಗಡಿಯಲ್ಲಿ ಚೀನಾ ಆಟವಾಡ್ತಾ ಇದೆ. ಪ್ರತಿ ಬಾರಿ ಜಮ್ಮುವಿನ ಉಗ್ರರ ಎನ್​ಕೌಂಟರ್​​ ಆದಾಗಲೂ, ದಾಳಿಯಾದಗಲೂ ಅಲ್ಲಿ ಪತ್ತೆಯಾಗೂ ಚೀನಾ ಮೇಡ್ ವೆಪನ್​ಗಳೇ. ರೈಫಲ್​​ನಿಂದ ಹಿಡಿದು ಗ್ರೆನೇಡ್​ವರೆಗೆ ಮೇಡ್​​ ಚೀನಾದ ಶಸ್ತ್ರಾಸ್ತ್ರಗಳನ್ನ ಉಗ್ರರು ಬಳಸ್ತಾ ಇದ್ದಾರೆ. ಹಾಗಿದ್ರೆ ಏನರ್ಥ..ಭಾರತದ ವಿರುದ್ಧ ಚೀನಾ ಪ್ರಾಕ್ಸಿ ವಾರ್​ ನಡೆಸ್ತಾ ಇದೆ. ಇನ್ನು ಈಚೆಗೆ ಅರುಣುಚಾಲಪ್ರದೇಶ ಗಡಿ ಭಾಗದಲ್ಲೂ ಆಗಾಗ ಚೀನಾ ಸೈನಿಕರು ತಂಟೆ ಮಾಡ್ತಾನೆ ಇದ್ದಾರೆ. ಲಡಾಖ್​​ ಪ್ರದೇಶದಲ್ಲೂ ಅಷ್ಟೇ ಚೀನಾ ಉದ್ಧಟತನ ನಿಂತಿಲ್ಲ. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಭಾರತ ಅರುಣುಚಾಲ ಸೇರಿದಂತೆ ಚೀನಾ ಗಡಿಭಾಗದಲ್ಲಿ ರಸ್ತೆ ಸಂಪರ್ಕ, ಬಂಕರ್​​ ನಿರ್ಮಾಣವನ್ನ ದುಪ್ಪಟ್ಟುಗೊಳಿಸಿದೆ. ಸೈನಿಕರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇನ್ನು ಬಾಂಗ್ಲಾದೇಶವನ್ನ ಕೂಡ ಕಂಟ್ರೋಲ್​​ ಮಾಡೋಕೆ ಚೀನಾ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಆದ್ರೆ ಅಲ್ಲಿ ಸದ್ಯ ಶೇಖ್ ಹಸೀನಾ ಅಧಿಕಾರದಲ್ಲಿರೋದ್ರಿಂದ, ಅವರು ಭಾರತಕ್ಕೆ ಫೇವರ್​ ಆಗಿರೋದ್ರಿಂದ ಬಾಂಗ್ಲಾ ಮೂಲಕ ಭಾರತದ ವಿರುದ್ಧ ಚೀನಾಗೆ ಹೆಚ್ಚು ಕಾರ್​​ಬಾರ್ ಮಾಡೋಕೆ ಆಗ್ತಾ ಇಲ್ಲ. ಆದ್ರೆ ಶೇಖ್ ಹಸೀನಾ ಬಳಿಕ ಮುಂದೆ ಯಾರೇ ಬಂದ್ರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ 360 ಡಿಗ್ರಿಯಲ್ಲೂ ಭಾರತದ ವಿರುದ್ಧ ವ್ಯೂಹ ಹೆಣೀತಾ ಇದೆ. ಯಾವ ಹಂತದಲ್ಲೂ ಭಾರತ ಒಂದು ಕ್ಷಣವೂ ಮೈಮರೆಯುವಂತಿಲ್ಲ.

 

 

Sulekha