ರೆಬೆಲ್ ಲೇಡಿ ಸುಮಲತಾ ಕಾಂಗ್ರೆಸ್ಸಿಗರ ವಿರುದ್ಧ ಸಿಟ್ಟಾಗಿರೋದೇಕೆ..? ಸಚಿವ ಚಲುವರಾಯಸ್ವಾಮಿ ಕೊಟ್ಟ ತಿರುಗೇಟು ಏನು..?

ರೆಬೆಲ್ ಲೇಡಿ ಸುಮಲತಾ ಕಾಂಗ್ರೆಸ್ಸಿಗರ ವಿರುದ್ಧ ಸಿಟ್ಟಾಗಿರೋದೇಕೆ..? ಸಚಿವ ಚಲುವರಾಯಸ್ವಾಮಿ ಕೊಟ್ಟ ತಿರುಗೇಟು ಏನು..?

ಮಂಡ್ಯ ಲೋಕಸಭಾ ಅಖಾಡ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದ್ರೂ ಈವರೆಗೂ ಯಾವೊಂದು ಪಕ್ಷವೂ ಅಭ್ಯರ್ಥಿ ಹೆಸರನ್ನ ಫೈನಲ್ ಮಾಡಿಲ್ಲ. ಹಾಲಿ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ ಖಚಿತವಾಗಿದ್ರೂ ಅವ್ರು ಬಿಜೆಪಿಯಿಂದ ಸ್ಪರ್ಧಿಸ್ತಾರಾ ಅಥವಾ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳೀತಾರಾ ಅನ್ನೋದು ನಿಗೂಢವಾಗಿಯೇ ಇದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಮಂಡ್ಯ ಕ್ಷೇತ್ರವನ್ನ ವಶಪಡಿಸಿಕೊಳ್ಳೋಕೆ ಭರ್ಜರಿ ಕಸರತ್ತು ಆರಂಭಿಸಿದೆ. ಸ್ಟಾರ್ ಚಂದ್ರುಗೆ ಟಿಕೆಟ್ ಕನ್ಫರ್ಮ್ ಎನ್ನಲಾಗ್ತಿದೆ. ಹೀಗೆ ಮಂಡ್ಯಕ್ಕಾಗಿ ಮೂರು ಪಕ್ಷಗಳು ಮತ್ತು ಸುಮಲತಾ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲೇ ಕಾಂಗ್ರೆಸ್ ನಾಯಕರು ಮತ್ತು ಸಂಸದೆ ಸುಮಲತಾ ನಡುವಿನ ಜಟಾಪಟಿ ತಾರಕಕ್ಕೇರಿದೆ. ಒಂದೇ ವೇದಿಕೆಯಲ್ಲೇ ಸಚಿವ ಚಲುವರಾಯಸ್ವಾಮಿ ಮತ್ತು ಸಂಸದೆ ಸುಮಲತಾ ನಡುವೆ ವಾಕ್ಸಮರ ನಡೆದಿದೆ. ಅಷ್ಟಕ್ಕೂ ರೆಬೆಲ್ ಲೇಡಿ ಸುಮಲತಾ ಕಾಂಗ್ರೆಸ್ಸಿಗರ ವಿರುದ್ಧ ಸಿಟ್ಟಾಗಿರೋದೇಕೆ..? ಸಚಿವ ಚಲುವರಾಯಸ್ವಾಮಿ ಕೊಟ್ಟ ತಿರುಗೇಟು ಏನು..? ಜಟಾಪಟಿ ಹಿಂದಿದ್ಯಾ ಟಿಕೆಟ್ ಫೈಟ್..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರ ವಿರುದ್ಧ ರೊಚ್ಚಿಗೆದ್ದ ಸಂಸದೆ ಸುಮಲತಾ – ಮಂಡ್ಯದಲ್ಲಿ ಶುರುವಾಯ್ತು ಕ್ರೆಡಿಟ್ ವಾರ್

ಮಂಡ್ಯ ಕ್ಷೇತ್ರ ದಶಕಗಳಿಂದಲೂ ರಾಜಕೀಯ ಜಿದ್ದಾಜಿದ್ದಿನ ಕಣ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿ ನಡೆಯುತ್ತಲೇ ಬಂದಿದೆ. ಅದ್ರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಮಂಡ್ಯ ಅಖಾಡಕ್ಕೆ ಧುಮುಕಿದ ಮೇಲಂತೂ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ಕಾಂಗ್ರೆಸ್, ಜೆಡಿಎಸ್ ಜೊತೆಗೆ ಬಿಜೆಪಿ, ಸುಮಲತಾಗೂ ಕ್ಷೇತ್ರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಈ ಸಲ ಶತಾಯಗತಾಯ ಬಿಜೆಪಿ ಚಿಹ್ನೆಯಡಿ ಸ್ಪರ್ಧೆ ಮಾಡ್ಬೇಕು ಅಂತಾ ಸುಮಲತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಸಚಿವ ಚಲುವರಾಯಸ್ವಾಮಿ ಮಾತ್ರ ಕ್ಷೇತ್ರವನ್ನ ವಶಪಡಿಸಿಕೊಳ್ಳೋಕೆ ಒಳಗಿಂದೊಳಗೆ ತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿ ಸೇರಿದಂತೆ ಕಾರ್ಯಕರ್ತರ ಪಡೆಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಸಂಸದೆ ಮತ್ತು ಸುಮಲತಾ ನಡುವೆ ಕಳೆದ ಕೆಲ ವಾರಗಳಿಂದ ವಾಕ್ಸಮರವೂ ಜೋರಾಗಿದೆ.

ಮಂಡ್ಯದಲ್ಲಿ ಗುರುವಾರ ಜಿಲ್ಲೆಯ ಸಮಸ್ಯೆಗಳನ್ನ ಆಲಿಸಲು ಜನಪ್ರತಿನಿಧಿಗಳ ಸಭೆ ನಡೆಸಲಾಯ್ತು. ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿಯಾಗಿದ್ರು. ಹಾಗೇ ರೈತರೂ ಕೂಡ ಹಾಜರಿದ್ದರು. ಆದ್ರೆ ಮೊದಲು ಯಾರು ಮಾತನಾಡಬೇಕು ಎಂಬ ವಿಚಾರವಾಗಿ ಚಲುವರಾಯಸ್ವಾಮಿ ಮತ್ತು ಸುಮಲತಾ ನಡುವೆ ಟಾಕ್​ವಾರ್ ನಡೀತು. ವೇದಿಕೆ ಮೇಲೆಯೇ ಅಕ್ಕ ಪಕ್ಕ ಕುಳಿತು ಜಟಾಪಟಿ ನಡೆಸಿದ್ರು. ಬಳಿಕ ಸಭೆಯಲ್ಲಿ ಹಾಜರಿದ್ದ ರೈತರು ಮೊದಲು ನಮಗೆ ಮಾತಾಡಲು ಅವಕಾಶ ಕೊಡಿ. ಸಮಸ್ಯೆ ಹೇಳಲು ಬಿಡಿ ಎಂದ ಮೇಲೆ ಇಬ್ಬರು ನಾಯಕರು ಸುಮ್ಮನಾದ್ರು. ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ದುಡ್ಡು ಇರೋರಿಗೆ ಕಾಂಗ್ರೆಸ್ ನವರು ಟಿಕೆಟ್ ಕೊಡ್ತಾರೆ ಎಂದಿದ್ದ ಸುಮಲತಾಗೆ ತಿರುಗೇಟು ನೀಡಿದ್ರು. ಸುಮಲತಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಂತಾರೆ. ನಾವು ಹೇಗೆ ಅವ್ರಿಗೆ ಸಪೋರ್ಟ್ ಮಾಡೋಕೆ ಆಗುತ್ತೆ. ಕಾಂಗ್ರೆಸ್ ನಲ್ಲಿ ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೋದನ್ನ ಪಕ್ಷ ಡಿಸೈಡ್ ಮಾಡುತ್ತೆ. ಅವ್ರಿಗೇನು ಎಂದು ಪ್ರಶ್ನಿಸಿದ್ರು.

ಸಂಸದೆ ಸುಮಲತಾ ಮತ್ತು ಸಚಿವ ಚಲುವರಾಯಸ್ವಾಮಿ ನಡುವಿನ ಫೈಟ್ ಇದೇ ಮೊದಲೇನಲ್ಲ. ಹಿಂದೆಯೂ ಕೂಡ ಮಂಡ್ಯ ವಿಚಾರವಾಗಿ ಸಾಕಷ್ಟು ವಾಗ್ದಾಳಿಗಳು ನಡೆದಿದ್ದವು. ಹಾಗೆಯೇ ಕಾಂಗ್ರೆಸ್ ಶಾಸಕ ರವಿ ಗಣಿಗ, ಹೆಚ್.ಎನ್ ರವೀಂದ್ರ ವಿರುದ್ಧವೂ ಸಂಸದೆ ಕಿಡಿ ಕಾರಿದ್ದರು. ಈ ಮೂಲಕ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸುಮಲತಾ ನಡುವಿನ ಕಿಡಿ ಹೆಚ್ಚುತ್ತಲೇ ಇದೆ. ಇದರ ನಡುವೆ ಸುಮಲತಾ ಎಷ್ಟೇ ಕಾನ್ಫಿಡೆಂಟ್ ಆಗಿದ್ರೂ ಮಂಡ್ಯದ ಬಿಜೆಪಿ ಟಿಕೆಟ್ ಸಿಗುತ್ತೋ ಸಿಗಲ್ವಾ ಎಂಬ ಅನುಮಾನವೂ ಅವ್ರಿಗಿದೆ. ಯಾಕಂದ್ರೆ ಮೂಲಗಳ ಪ್ರಕಾರ ಈಗಾಗ್ಲೇ ಮಂಡ್ಯದ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದೆ ಎನ್ನಲಾಗ್ತಿದೆ. ಹೀಗಾಗೇ ಕ್ಷೇತ್ರದಲ್ಲಿ ಸಿಂಗಲ್ಲಾಗಿ ಸೆಣಸಾಡಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ.

ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್?  

ಮಂಡ್ಯದ ಬಿಜೆಪಿ ಟಿಕೆಟ್ ವಿಚಾರವಾಗಿ ಸುಮಲತಾ ಅಂಬರೀಶ್ ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ. ಟಿಕೆಟ್ ನನಗೇ ಸಿಗುತ್ತದೆ ನೋಡಿ ಎನ್ನುವ ಸುಮಲತಾ ಟಿಕೆಟ್ ಸಿಗದಿದ್ದರೆ ಹೇಗೆ ಅಂದ್ರೆ ಉತ್ತರ ನೀಡದೆ ಮೌನಕ್ಕೆ ಜಾರುತ್ತಾರೆ. ಗುರುವಾರ ಕೂಡ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ಮೈತ್ರಿ ಧರ್ಮ ಪಾಲನೆಗೆ ಜೆಡಿಎಸ್‌ಗೆ ಸ್ವಾಗತ ಎಂದಿದ್ದಾರೆ. ನಿಮಗೆ ಟಿಕೆಟ್ ಸಿಗದೇ ಇದ್ದರೆ ಮೈತ್ರಿ ಪಾಲಿಸುತ್ತೀರಾ ಎಂದು ವರದಿಗಾರರು ಪ್ರಶ್ನಿಸಿದಾಗ ಸುಮಲತಾ ಮೌನವಾಗಿದ್ದಾರೆ. ನನ್ನನ್ನು ಒಂದು ಪಕ್ಷಕ್ಕೆ ಕಂಪೇರ್ ಮಾಡಬೇಡಿ ಎಂದು ಹೇಳುವ ಮೂಲಕ ಸುಮಲತಾ ಅವರು ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಹೊಂದಾಣಿಕೆ ಸೀಟು ಹಂಚಿಕೆ‌ ಇರುವುದು ಬಿಜೆಪಿ ಜೆಡಿಎಸ್ ನಡುವೆ. ಇಡೀ ರಾಜ್ಯದಲ್ಲಿ ಸೀಟು ಹಂಚಿಕೆಯ ಬಗ್ಗೆ ಅವರು ಸಭೆ ಮಾಡುತ್ತಾರೆ. ಮಂಡ್ಯ ಟಿಕೆಟ್ ಯಾರಿಗೆ ಎಂದು ಹೈಕಮಾಂಡ್ ಹೇಳಬೇಕು. ನಾನು ಮಂಡ್ಯವನ್ನು ಬಿಟ್ಟು ಹೋಗಲ್ಲ. ಕೆಲವೇ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದಿದ್ದಾರೆ. ಹಾಗೇ ಮೈತ್ರಿ ಧರ್ಮ ಎನ್ನೋದು ಎರಡು ಪಕ್ಷಗಳ ನಡುವೆ ಇರುವ ಮಾತು. ನಾನು ಈಗ ಬಿಜೆಪಿ ಎಂಪಿ ಆಗೋಕೆ ಆಸೆ ಪಡುತ್ತಿದ್ದೇನೆ. ಏನು ಬೇಕಾದರೂ ಆಗಲಿ ನೋಡೋಣ. ಬಿಜೆಪಿ ಟಿಕೆಟ್ ಆಗಲಿಲ್ಲ ಅಂದರೆ, ಮುಂದೆ ನೋಡೋಣ ಎಂದು ಮತ್ತೊಮ್ಮೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಬಿಜೆಪಿ ಟಿಕೆಟ್ ಗೊಂದಲದ ನಡುವೆಯೂ ಸುಮಲತಾ ಮಂಡ್ಯ ಕ್ಷೇತ್ರ ಬಿಟ್ಟುಕೊಡಲ್ಲ ಅಂತಿದ್ದಾರೆ. ಈ ಮೂಲಕ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸೂಚನೆ ನೀಡಿದ್ದಾರೆ. ಹಾಗೇ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ಮುಂದುವರಿಸಿದ್ದಾರೆ. ಈ ಮೂಲಕ ಮಂಡ್ಯ ಅಖಾಡ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಹೋಗ್ತಿದೆ.

 

 

Sulekha