HSRP ನಂಬರ್‌ ಪ್ಲೇಟ್‌ ಕಡ್ಡಾಯವೇಕೆ? – HSRP ಅಳವಡಿಸೋದ್ರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ?

HSRP ನಂಬರ್‌ ಪ್ಲೇಟ್‌ ಕಡ್ಡಾಯವೇಕೆ? – HSRP ಅಳವಡಿಸೋದ್ರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ?

ಹೆಚ್‌ಎಸ್‌ಆರ್‌ಪಿ.. ಈ ನಂಬರ್‌ ಪ್ಲೇಟ್‌ ಕಡ್ಡಾಯಗೊಳಿಸುವ ಡೆಡ್‌ಲೈನ್‌ ಹತ್ತಿರವಾಗುತ್ತಿದ್ದಂತೆ ಸರ್ಕಾರ ಮತ್ತೆ ಅದನ್ನು ಮೂರು ತಿಂಗಳು ಮುಂದೂಡಿದೆ.. ಹಾಗಿದ್ದರೂ ಇನ್ನು ಮೂರು ತಿಂಗಳೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಕೊಳ್ಳಲೇಬೇಕು.  ಹೆಚ್‌ಎಸ್‌ಆರ್‌ಪಿ ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಂತ ಅರ್ಥ.

ಈ ಹಿಂದೆ ರಾಜ್ಯ ಸರ್ಕಾರ ಫೆಬ್ರವರಿ 17ರೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಸಲೇಬೇಕು ಎಂಬ ಡೆಡ್ ಲೈನ್ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಗಡುವನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಿದ್ದಾರೆ. ಅಂದರೆ ಮೇ ತಿಂಗಳವರೆಗೂ ಹೆಚ್‌ಎಸ್‌ಆರ್‌ಪಿ ತಲೆಬಿಸಿಯಿಲ್ಲ ಅಂದ್ಕೊಳ್ಳಬೇಡಿ. ಇವತ್ತಲ್ಲ ನಾಳೆ ಈ ನಂಬರ್‌ ಪ್ಲೇಟ್‌ ಹಾಕಿಕೊಳ್ಳಬೇಕಾಗದ ಅನಿವಾರ್ಯತೆಯೂ ಇದರಲ್ಲಿ ಅಡಗಿದೆ.

ಇದನ್ನೂ ಓದಿ:ಭಾರತೀಯರ ಹತ್ಯೆ ಕೇಸ್‌ – ಕಡೆಗೂ ಮೌನ ಮುರಿದ ಅಮೆರಿಕ ಸರ್ಕಾರ 

ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನಿಂದಾಗಿ ನಂಬರ್‌ಗಳನ್ನು ತಿದ್ದಲು ಆಗೋದಿಲ್ಲ ಮತ್ತು ಒಮ್ಮೆ ಹಾಕಿದ ನಂತರ ನಂಬರ್‌ ಪ್ಲೇಟ್‌ ಅನ್ನು ಮರುಬಳಕೆ ಮಾಡಲು ಸಾಧ್ಯವಾಗದ ಲಾಕ್‌ ಸಿಸ್ಟಂ ಅದರಲ್ಲಿದೆ. ಸಾಮಾನ್ಯವಾಗಿ ಬಳಕೆ ಮಾಡುವ ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ನಂಬರ್‌ಗಳನ್ನು ಡಿಸೈನ್‌ ಡಿಸೈನ್‌ ಆಗಿ ಸ್ಟಿಕ್ಕರಿಂಗ್‌ ಮಾಡಿರುತ್ತಾರೆ. ಅಥವಾ ಫಾಂಟ್‌ಗಳನ್ನು ಸಣ್ಣದು ಮಾಡಿರುತ್ತಾರೆ. ಇದರಿಂದಾಗಿ ಸಡನ್ನಾಗಿ ವಾಹನದ ಸಂಖ್ಯೆ ಓದೋದು ಕಷ್ಟವಾಗಿಬಿಡುತ್ತದೆ.

ಇನ್ನು 8055 ಎನ್ನು ಫ್ಯಾನ್ಸಿ ನಂಬರ್‌ ಪಡೆದುಕೊಂಡು ಅದನ್ನು BOSS ಅಂತ ಸ್ಟೈಲಾಗಿ ಬರೆಯುವವರೂ ಇದ್ದಾರೆ. ಆದ್ರೆ ಈ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳಲ್ಲಿ ಹೀಗೆಲ್ಲಾ ವಿಧವಿಧವಾಗಿ ನಂಬರ್‌ ಬರೆಯಲು ಅವಕಾಶವಿಲ್ಲ.  ಏಕರೂಪದಲ್ಲಿ ನಂಬರ್‌ ಪ್ಲೇಟ್‌ಗಳು ಇರುತ್ತವೆ.. ಮತ್ತು ನಂಬರ್‌ ಪ್ಲೇಟ್‌ನಿಂದಲೇ ನಂಬರ್‌ಗಳ ಅಚ್ಚುಹಾಕಿ ತೆಗೆಯುವುದರಿಂದ, ನಂಬರ್‌ಗಳನ್ನು ತಿದ್ದಲು ಆಗಲ್ಲ. ಟ್ರಾಫಿಕ್‌ ರೂಲ್ಸ್‌ ಉಲ್ಲಂಘನೆ ಮಾಡಿದವರು ಅಥವಾ ಸರಗಳ್ಳರು ಸಾಮಾನ್ಯವಾಗಿ ನಂಬರ್‌ ಪ್ಲೇಟ್‌ ಬದಲಿಸುವ ಸಾಧ್ಯತೆಯಿರುತ್ತೆ. ಆದ್ರೆ ಹೆಚ್‌ಎಸ್‌ಆರ್‌ಪಿಯಿಂದ ಇದಕ್ಕೆ ಸಂಪೂರ್ಣ ತಡೆ ಬೀಳಲಿದೆ.

ನಂಬರ್‌ ಪ್ಲೇಟ್‌ಗಳನ್ನು ಹೆಚ್‌ಎಸ್‌ಆರ್‌ಪಿಯಾಗಿ ಬದಲಿಸಬೇಕು ಎನ್ನುವ ನಿಯಮ 1989ರ ಕೇಂದ್ರ ಮೋಟಾರ್‌ ವೆಹಿಕಲ್‌ ನಿಯಮದಲ್ಲಿಯೇ ಇದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ಕಾನೂನು ಅಷ್ಟು ಸುಲಭವಾಗಿ ಜಾರಿಯಾಗೋದಿಲ್ಲ ಎನ್ನುವುದಕ್ಕೆ ಈ ಹೆಚ್‌ಎಸ್‌ಆರ್‌ಪಿ ಜಾರಿಗೆ ಈಗಲೂ ಗಡುವು ವಿಸ್ತರಣೆಯಾಗುತ್ತಿರುವುದೇ ಸಾಕ್ಷಿ. ಹಾಗಿದ್ದರೂ ಸರ್ಕಾರ ಸಾರ್ವಜನಿಕರ ಒಳಿತಿನ ದೃಷ್ಟಿಯಿಂದ ಮಾಡುವ ಇಂತಹ ನಿಯಮಗಳನ್ನು ಜನರೂ ಸರಿಯಾಗಿ ಪಾಲಿಸಿದರೆ ಅನಾವಶ್ಯಕವಾಗಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳಿಂದಾಗಿ ವಾಹನದ ಮೂಲಕ ಆಗುವ ಅಪರಾಧಗಳನ್ನು ತಡೆಯುವ ಕ್ರಮದಲ್ಲಿ ಜನಸಾಮಾನ್ಯರೂ ಕೈ ಜೋಡಿಸಲು ಅವಕಾಶವಿದೆ.

Shwetha M