‘ಮೋದಿ ಮುಖ ನೋಡಿಕೊಂಡು ಸುಮ್ಮನಿದ್ದೇವೆ’ – ಬಿಜೆಪಿ ನಾಯಕರ ವಿರುದ್ಧ ಹಿಂದೂ ಮಹಾಸಭಾ ಕೆರಳಿದ್ದೇಕೆ?
ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿಗೆ ಹೊಡೆತದ ಮೇಲೆ ಹೊಡೆತ ಬೀಳ್ತಿದೆ. ಹಿಂದುತ್ವವನ್ನೇ ಅಜೆಂಡಾವಾಗಿ ಬಳಸಿ ಅಖಾಡಕ್ಕೆ ಧುಮುಕಿದ್ದ ಕೇಸರಿ ಪಡೆ ಈಗ ಹಿಂದೂ ಮಹಾಸಭಾ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿಯ ಜಿಲ್ಲೆಯಲ್ಲಿ ಇದೇ ಹಿಂದುತ್ವವೇ ಶತ್ರುವಾಗಿ ಕಾಡಲಾರಂಭಿಸಿದೆ.
ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅರುಣ್ ಪುತ್ತಿಲಗೆ ಟಿಕೆಟ್ ಕೊಡದೆ ಆಶಾ ತಿಮ್ಮಪ್ಪಗೆ ಟಿಕೆಟ್ ಕೊಟ್ಟು ಬಿಜೆಪಿ ಕೈ ಸುಟ್ಟುಕೊಂಡಿತ್ತು. ಹಿಂದುತ್ವ ವರ್ಸಸ್ ಬಿಜೆಪಿ ಎಂಬಂತೆಯೇ ಚುನಾವಣೆ ನಡೆದು ಕೊನೆಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರು. ಈ ಸೋಲಿನ ಬೆನ್ನಲ್ಲೇ ಹಿಂದು ಮುಖಂಡ ಅರುಣ್ ಪುತ್ತಿಲ ತಮ್ಮದೇ ಆದ ಪುತ್ತಿಲ ಪರಿವಾರ ಆರಂಭಿಸಿದ್ರು. ಇದೀಗ ಪ್ರವೀಣ್ ನೆಟ್ಟಾರು ವಿಚಾರವಾಗಿ ಹಿಂದೂ ಮಹಾಸಭಾ ಬಿಜೆಪಿ ವಿರುದ್ಧ ಕೆಂಡ ಕಾರಿದೆ. ಹತ್ಯೆಯಾದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಹಾಯ ಮಾಡಿದ್ದು, ಈ ಸಹಾಯವನ್ನ ಮಾಡಿದ್ದು ಹಿಂದೂ ಸಂಘಟನೆ ಕಾರ್ಯಕರ್ತರೇ ಹೊರತು ಬಿಜೆಪಿಗರಲ್ಲ ಎಂದಿದ್ದಾರೆ.
ಇದನ್ನೂ ಓದಿ : ಡಿಕೆಶಿಯನ್ನ ಕಂಪ್ಲೀಟ್ ‘ಡಿಸ್ಟರ್ಬ್’ ಮಾಡಿದ ಎಂ.ಬಿ ಪಾಟೀಲ್ – ‘ಕೈ’ ಮನೆಯಲ್ಲಿ ಮತ್ತೆ ಸಿಎಂ ಕಿಚ್ಚು!
ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ನಳಿನ್ ಕುಮಾರ್ ಕಟೀಲ್ ಗೆ ನೇರಾನೇರ ಸವಾಲು ಹಾಕಿದ್ದಾರೆ. ಮೋದಿ, ಯೋಗಿ ಹೆಸರು ಎತ್ತದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ. ಅರುಣ್ ಪುತ್ತಿಲ ಪಡೆದ 10ಪರ್ಸೆಂಟ್ ಮತಗಳನ್ನ ಪಡೆದು ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧವೂ ಕಿಡಿ ಕಾರಿದ್ದು, ಬಾಯಿಗೆ ಬಂದ ಹಾಗೇ ಮಾತಾಡಿದ್ರೆ ಎಲ್ಲಾ ಹಿಂದೂ ಸಂಘಟನೆಗಳನ್ನ ಸೇರಿಸಿಕೊಂಡು ಬಿಜೆಪಿ ವಿರುದ್ಧವೇ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ಮತ್ತು ಮೋದಿ ಮುಖ ನೋಡಿಕೊಂಡು ಸುಮ್ಮನಿರೋದಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವೇಳೆ ನಮ್ಮ ತತ್ವ ಸಿದ್ಧಾಂತ ವೀರ ಸಾವರ್ಕರ್, ನಾಥೂರಾಂ ಗೋಡ್ಸೆ ಅವರದ್ದು. ನಾನು ಎದೆತಟ್ಟಿ ಹೇಳ್ತೆನೆ ನಾನು ಗಾಂಧಿವಾದಿ ಅಲ್ಲ, ಗೋಡ್ಸೆವಾದಿ. ಅಖಂಡ ಭಾರತದ ಹಿಂದೂ ರಾಷ್ಟ್ರದ ಮುನ್ನುಡಿ ಬರೆದವರೇ ಗೋಡ್ಸೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.