ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಮಾತುಗಳೇ ಬಿಸಿತುಪ್ಪವಾಗ್ತಿದೆಯಾ..? ಡಿಸಿಎಂ ಡಿಕೆಶಿ ಕೆರಳಿದ್ದೇಕೆ..?

ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಮಾತುಗಳೇ ಬಿಸಿತುಪ್ಪವಾಗ್ತಿದೆಯಾ..?  ಡಿಸಿಎಂ ಡಿಕೆಶಿ ಕೆರಳಿದ್ದೇಕೆ..?

ಸಿದ್ದರಾಮಯ್ಯ ಕರ್ನಾಟಕದ ಪವರ್​ಫುಲ್ ಲೀಡರ್. ಅಹಿಂದ ಸಮಾಜದ ಬಹುದೊಡ್ಡ ನಾಯಕ. ದೇಶಾದ್ಯಂತ ಜನಪ್ರಿಯತೆ ಹೊಂದಿರುವ ಬಲಿಷ್ಠ ರಾಜಕಾರಣಿ. ಕರ್ನಾಟಕದಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದು ಐದು ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ರಾಷ್ಟ್ರಾದ್ಯಂತ ಸದ್ದು ಮಾಡ್ತಿದ್ದಾರೆ. ಆದ್ರೆ ಇಂತಹ ಸಿದ್ದರಾಮಯ್ಯಗೆ ತಮ್ಮ ಪುತ್ರನಿಂದಲೇ ಸಂಕಷ್ಟ ಎದುರಾಗ್ತಿದೆ. ಪದೇಪದೆ ವಿಪಕ್ಷಗಳ ಹಾಗೂ ಸಪಕ್ಷ ನಾಯಕರ ಬಾಯಿಗೆ ಆಹಾರವಾಗ್ತಿದ್ದಾರೆ. ಸಿಎಂ ಕುರ್ಚಿ ವಿಚಾರವಾಗಿ ಯಾರೂ ತುಟಿ ಬಿಚ್ಚದಂತೆ ಹೈಕಮಾಂಡ್ ಕಟ್ಟಪ್ಪಣೆ ಹೊರಡಿಸಿದೆ. ಇಷ್ಟಾದ್ರೂ ಯತೀಂದ್ರ ತಮ್ಮ ತಂದೆಯ ಪರ ಬ್ಯಾಟ್ ಬೀಸಿರೋದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಸ್ವಪಕ್ಷನಾಯಕರೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ಯತೀಂದ್ರ ಹೇಳಿದ್ದೇನು..? ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಮಾತುಗಳೇ ಬಿಸಿತುಪ್ಪವಾಗ್ತಿದೆಯಾ..? ಡಿಸಿಎಂ ಡಿಕೆಶಿ ಕೆರಳಿದ್ದೇಕೆ..? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ:

ಯತೀಂದ್ರ ಸಿದ್ದರಾಮಯ್ಯ ಸಿಎಂ ಪುತ್ರ ಅನ್ನೋದಕ್ಕಿಂದ ಅವ್ರೇ 5 ವರ್ಷ ಶಾಸಕರಾಗಿದ್ದವರು. ಇದೀಗ ಲೋಕಸಭಾ ಚುನಾವಣೆಗೆ ಮೈಸೂರು ಕೊಡಗು ಕ್ಷೇತ್ರದಲ್ಲಿ ಅವ್ರ ಹೆಸ್ರು ಕೇಳಿ ಬರ್ತಿದೆ. ಇಷ್ಟಾದ್ರೂ ಎಲ್ಲಿ ಏನು ಮಾತಾಡ್ಬೇಕು ಅನ್ನೋ ಬಗ್ಗೆ ಬಹುಶಃ ಅವ್ರಿಗೆ ಅರಿವಿಲ್ಲ ಅನ್ಸುತ್ತೆ. ಈ ಸಲ ಅಂತೂ ತಮ್ಮ ತಂದೆಯ ಸಿಎಂ ಕುರ್ಚಿಯ ಭವಿಷ್ಯ ಹೇಳಿ ಸ್ವಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿದ್ದರಾಮಯ್ಯ 5 ವರ್ಷ ಸಿಎಂ! 

ಹಾಸನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತೀಂದ್ರ ತಮ್ಮ ತಂದೆ ಸಿದ್ದರಾಮಯ್ಯರ ಸಿಎಂ ಕುರ್ಚಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಚುನಾವಣೆಗೂ ಮೊದಲು ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದಾರೆ. ಹಾಗೇ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತೆ. ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತೆ. ಆಗ ಸಿದ್ದರಾಮಯ್ಯನವರ ಬಲ ಹೆಚ್ಚಲಿದ್ದು ಮುಂದಿನ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ. ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ 5 ವರ್ಷ ಮುಂದುವರಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ರಚನೆಯಾದಗಿನಿಂದ್ಲೂ ಸಿಎಂ ಕುರ್ಚಿ ಕಾಳಗ ನಡೆಯುತ್ತಲೇ ಇದೆ. ಹೀಗಾಗಿ ಖುದ್ದು ಹೈಕಮಾಂಡ್ ರಾಜ್ಯದ ನಾಯಕರಿಗೆ ಈ ಬಗ್ಗೆ ಮಾತಾಡದಂತೆ ಕಟ್ಟಪ್ಪಣೆ ಹೊರಡಿಸಿತ್ತು. ಇದೀಗ ಯತೀಂದ್ರ ಇದೇ ವಿಚಾರವಾಗಿ ಮಾತನಾಡಿದ್ದಾರೆ. ಯತೀಂದ್ರ ಹೇಳಿಕೆಗೆ ಡಿಸಿಎಂ ಡಿಕೆಶಿ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲೇ ಲೋಕಸಭಾ ಚುನಾವಣೆ ನಡೆಯುತ್ತೆ. ಅನುಮಾನವೇ ಬೇಡ ಎಂದಿದ್ದಾರೆ. ಇನ್ನು ಗೃಹ ಸಚಿವ ಪರಮೇಶ್ವರ್ ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಅಂತಾ ಉತ್ತರಿಸಿದ್ದಾರೆ. ಆದ್ರೆ ಸಚಿವ  ಸತೀಶ್ ಜಾರಕಿಹೊಳಿ ಮಾತ್ರ ನೋ ಕಮೆಂಟ್ಸ್ ಅಂತಾ ಸೈಲೆಂಟ್ ಆಗಿದ್ದಾರೆ. ಹಾಗಂತ ಯತೀಂದ್ರ ಇಂತಹ ಹೇಳಿಕೆಗಳನ್ನ ನೀಡ್ತಿರೋದು ಇದೇ ಮೊದಲೇನಲ್ಲ. ಸಿದ್ದರಾಮಯ್ಯ ಸಿಎಂ ಆದ ಬಳಿಕವೇ ಸಾಕಷ್ಟು ವಿಚಾರವಾಗಿ ಟೀಕೆಗೆ ಗುರಿಯಾಗಿದ್ದಾರೆ.

ಯತೀಂದ್ರ ಮತ್ತು ವಿವಾದ! 

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲಲು ಸಾವಿರಾರು ಜನರನ್ನು ಸೇರಿಸಿ ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಲಾಗಿತ್ತು. ಎರಡು ಮೂರು ಬಾರಿ ಡೇಟ್ ಕ್ಯಾನ್ಸಲ್ ಆದ್ರೂ, ಪಟ್ಟು ಬಿಡದೆ ತಂದೆಯವರ ಕೈಯಲ್ಲೇ ಕೊಡಿಸಿದ್ರು. ಆ ಕಾರ್ಯಕ್ರಮ ಯಶಸ್ವಿಯಾಯಿತು, ದೊಡ್ಡ ಪ್ರಮಾಣದಲ್ಲಿ ಮತ ಪಡೆದರು ಎಂದಿದ್ದರು. ಅಂದ್ರೆ ಸಿದ್ದರಾಮಯ್ಯ ಗೆಲ್ಲಲು ಗಿಫ್ಟ್ ಪಾಲಿಟಿಕ್ಸ್ ಕಾರಣವಾಯ್ತು ಅನ್ನೋ ರೀತಿಯಲ್ಲಿ ಹೇಳಿದ್ದರು. ಹಾಗೇ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವೈಎಸ್​ಟಿ ಕಲೆಕ್ಷನ್ ಆರೋಪ ಮಾಡಿದ್ದರು. ಇದರ ನಡುವೆಯೇ ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿದ್ದವ್ರಿಗೆ ಯತೀಂದ್ರ ಆವಾಜ್ ಹಾಕಿದ್ದರು. ನಾನು ಕೊಟ್ಟಿದ್ದ ಲಿಸ್ಟನ್ನೇ ಕೊಡಿ. ನಾನು ಕೊಟ್ಟಿದ್ದ ಲಿಸ್ಟ್ ನಲ್ಲಿ ಕೇವಲ ನಾಲ್ಕೈದು ಇವೆ. ಇದೇ ಲಿಸ್ಟನ್ನೇ ಕೊಡಿ. ಬೇರೆ ಏನನ್ನೋ ಕೊಡಬೇಡಿ ಎಂದಿದ್ದರು. ಈ ವಿಡಿಯೋ ವೈರಲ್ ಆಗಿ ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಶ್ಯಾಡೋ ಸಿಎಂ ಎಂದೆಲ್ಲಾ ಲೇವಡಿ ಮಾಡಿದ್ದರು. ಇತ್ತೀಚೆಗೆ ರಾಮಮಂದಿರ ವಿಚಾರವಾಗಿಯೂ ಮಾತನಾಡಿದ್ದ ಯತೀಂದ್ರ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ನಮ್ಮ ದೇಶ ಹಿಂದೂ ರಾಷ್ಟ್ರ ಆಗಬಾರದು, ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ನಮ್ಮ ದೇಶ ಕೂಡ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಂತೆ ದಿವಾಳಿಯಾಗುತ್ತದೆ ಎಂದಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಯತೀಂದ್ರ ಹೀಗೆ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಾ ವಿಪಕ್ಷಗಳಿಗೆ ತಾವೇ ಅಸ್ತ್ರ ಕೊಡುತ್ತಿದ್ದಾರೆ. ಇದೀಗ ಸಿಎಂ ಹುದ್ದೆಯ ಅನಿಶ್ಚಿತತೆಯ ಸುಳಿವು ನೀಡಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಇತ್ತ ಸಿದ್ದರಾಮಯ್ಯರಿಗೆ ಪುತ್ರನ ಹೇಳಿಕೆಗಳಿಂದಲೇ ಸಂಕಷ್ಟ ಎದುರಾಗ್ತಿದ್ದು ತಾವೂ ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ.

Sulekha