ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ ಅಥವಾ ಕೈ ಮೇಲಾಗುತ್ತಾ ? – ಕರಾವಳಿಯಲ್ಲಿ ಬಿಜೆಪಿಗೆ ಭಯ ಯಾಕೆ?
ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರೋ ಲೋಕಸಭಾ ಕ್ಷೇತ್ರ. ಸತತ ಮೂರು ಬಾರಿ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಶತಾಗತಯ ಬಿಜೆಪಿಯ ಭದ್ರಕೋಟೆ ಮೇಲೆ ಹಸ್ತದ ಬಾವುಟ ಹಾರಿಸಲು ಸಿದ್ಧತೆ ನಡೆಸುತ್ತಿದೆ. ಇನ್ನು ಜೆಡಿಎಸ್ ಇಲ್ಲಿ ಯಾವುದೇ ಪ್ರಾಬಲ್ಯ ಹೊಂದಿರದ ಕಾರಣ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯಲಿದೆ. ಹಿಂದುತ್ವದ ನೆಲೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದು ಬೀಗೋಕೆ ಬಿಜೆಪಿ ಸಿದ್ಧವಾಗ್ತಿದ್ರೆ ಸಣ್ಣ ಆತಂಕವೂ ಶುರುವಾಗಿದೆ. ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದ್ದು, ಭಿನ್ನಮತ ಸ್ಫೋಟವಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ:ಬಿಜೆಪಿಗೆ ಬಿಸಿತುಪ್ಪವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರ – ಕಾರ್ಯಕರ್ತರ ಬೆಂಬಲ ಶೋಭಾಗೋ..? ಸಿಟಿ ರವಿಗೋ..?
ರಾಜ್ಯದ ಬೇರೆ ಕಡೆಯ ಚುನಾವಣೆ ಒಂದು ರೀತಿಯಾದರೆ ಕರಾವಳಿಯ ಭಾಗದ ಚುನಾವಣೆ ಇನ್ನೊಂದು ರೀತಿ. ಇಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಕೋಮು ಲೆಕ್ಕಾಚಾರವೇ ನಡೆಯುವುದು. ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಪುತ್ತೂರು ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ತಂದಿದ್ದು ಸಂಘ ಪರಿವಾರದ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ. ತಾನು ಗೆಲ್ಲದಿದ್ದರೂ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಪುತ್ತಿಲ ಯಶಸ್ವಿಯಾಗಿದ್ದರು. ಜೊತೆಗೆ, ಜಿಲ್ಲೆಯಲ್ಲಿ ಸಂಘ ಪರಿವಾರದ ಪ್ರಮುಖ ನಾಯಕರಾಗಿ ಇವರು ಹೊರಹೊಮ್ಮಿದ್ದರು. ಇದೇ ರೀತಿಯ ಭಿನ್ನಮತ ಮತ್ತೆ ಲೋಕಸಭಾ ಚುನಾವಣೆಯ ವೇಳೆ ಎದುರಾಗುತ್ತದೆಯೋ ಎನ್ನುವ ಭಯ ಬಿಜೆಪಿಗೆ ಕಾಡುತ್ತಿದೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ಸಿನ ಮಿಥುನ್ ರೈ ವಿರುದ್ದ ಸುಮಾರು 2.75ಲಕ್ಷಗಳ ಭಾರೀ ಅಂತರದಿಂದ ಗೆದ್ದಿದ್ದರು. ಆದರೆ, ಈಗಿನ ಬದಲಾದ ಸನ್ನಿವೇಶದಲ್ಲಿ ಸ್ವಕ್ಷೇತ್ರದಲ್ಲೇ ಕಟೀಲ್ ವಿರೋಧವನ್ನು ಎದುರಿಸುತ್ತಿದ್ದಾರೆ. ಕಟೀಲ್ ಅವರು ರಾಜ್ಯಾಧ್ಯಕ್ಷರಾದ ವೇಳೆ ಪಕ್ಷ ಅಸೆಂಬ್ಲಿ ಚುನಾವಣೆಯಲ್ಲಿ ದಯನೀಯವಾಗಿ ಸೋತಿತ್ತು.
ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಆರರಲ್ಲಿ ಬಿಜೆಪಿ ಮತ್ತು ಎರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದ್ರೆ ಪುತ್ತೂರಿನಲ್ಲಿ ಸಂಘ ಪರಿವಾರದ ಮುಖಂಡರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆದ್ದಿದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನೊಂದು ಸ್ಪೀಕರ್ ಯು.ಟಿ.ಖಾದರ್ ಪ್ರಾಬಲ್ಯದ ಮಂಗಳೂರು ಕ್ಷೇತ್ರ. ಈ ಎರಡು ಕ್ಷೇತ್ರ ಬಿಟ್ರೆ ಉಳಿದೆಡೆ ಬಿಜೆಪಿಯ ಶಾಸಕರೇ ಇದ್ದಾರೆ. ಹೀಗಿದ್ರೂ ಬಿಜೆಪಿಗೆ ಈ ಬಾರಿ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಅಭ್ಯರ್ಥಿಗಳ ರೇಸ್. ಈಗಾಗಲೇ ಐವರು ಆಕಾಂಕ್ಷಿಗಳು ಕಮಲದ ಚಿಹ್ನೆಯಡಿ ಚುನಾವಣೆ ಎದುರಿಸೋಕೆ ಸಿದ್ಧತೆ ನಡೆಸಿದ್ದಾರೆ.
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ ಕಟೀಲ್ ಸ್ಪರ್ಧೆಗೆ ಅಪಸ್ವರ ಇದ್ದು, ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ. ಇನ್ನು ಅರುಣ್ ಪುತ್ತಿಲ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಮೀರಿ ಚುನಾವಣೆಗೆ ಸ್ಪರ್ಧಿಸಿ, ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ರು. ಹೀಗಾಗಿ ಇವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎನ್ನುವ ಕೂಗು ಇದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಿಲ್ಲೆಯ ಪ್ರಭಾವಿ ಮುಖಂಡ ಮತ್ತು ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್ ಅವರ ಹೆಸರೂ ಕೇಳಿ ಬರ್ತಿದೆ. ಸತ್ಯಜಿತ್ ಅವರಿಗೆ ಟಿಕೆಟ್ ನೀಡಬೇಕೆಂದು ಈಗಾಗಲೇ ಸಭೆ ನಡೆಸಿ ಕೆಲ ಕಾರ್ಯಕರ್ತರು ಒತ್ತಾಯ ಕೂಡ ಮಾಡಿದ್ದಾರೆ. ಫೆಬ್ರವರಿ 25ರಂದು ಬೃಹತ್ ಸಭೆ ನಡೆಸಲು ನಿರ್ಧರಿಸಲಾಗಿದೆ. ಇವ್ರಿಷ್ಟೇ ಅಲ್ಲದೆ ಬಂಟ್ಸ್ ಸಮುದಾಯ್ಕಕೆ ಸೇರಿದ ಬೃಜೇಶ್ ಚೌಟ ಮತ್ತು ಹಿರಿಯ ವಕೀಲ ಮತ್ತು ಬ್ರಾಹ್ಮಣ ಸಮುದಾಯದ ಅರುಣಾ ಶ್ಯಾಮ್ ಅವರ ಹೆಸರೂ ಕೇಳಿ ಬರ್ತಿದೆ.
ಸದ್ಯ ಟಿಕೆಟ್ ರೇಸ್ನಲ್ಲಿ ಐವರ ಹೆಸರು ಕೇಳಿ ಬರ್ತಿದ್ದು, ಬಿಜೆಪಿ ವರಿಷ್ಠರಿಗೆ ಈ ಬಾರಿ ದಕ್ಷಿಣ ಕನ್ನಡದಲ್ಲಿ ಟಿಕೆಟ್ ಅಂತಿಮಗೊಳಿಸುವುದು ಸವಾಲಾಗಲಿದೆ. ರಾಜ್ಯ ಬಿಜೆಪಿಯ ಹಿರಿಯ ನಾಯಕರು ಏನೇ ಶಿಫಾರಸು ಮಾಡಿ ಅಭ್ಯರ್ಥಿಯ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದರೂ, ಕೊನೆಗೆ ಈ ಭಾಗದಲ್ಲಿ ನಡೆಯುವುದು ಪಕ್ಷದ ಮಾತೃಸಂಘಟನೆಯೇ ಮಾತೇ. ಹೀಗಾಗಿ ಕಟೀಲ್ಗೆ ಮತ್ತೆ ಮಣೆ ಹಾಕ್ತಾರೋ ಅಥವಾ ಹೊಸ ಮುಖಕ್ಕೆ ಅವಕಾಶ ಕೊಡ್ತಾರೋ..? ಈ ಸಲವೂ ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ ಅಥವಾ ಕೈ ಮೇಲಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.