ಕೆಎಲ್ ರಾಹುಲ್‌ಗೆ ಕ್ಯಾಪ್ಟನ್ ಯೋಗ ಸಿಕ್ಕಿಲ್ಲ ಯಾಕೆ? – ಕನ್ನಡಿಗನ ದುರಾದೃಷ್ಟನಾ.. ಅಜಾತಶತ್ರುವಾಗಿದ್ದೇ ತಪ್ಪಾಯ್ತಾ?

ಕೆಎಲ್ ರಾಹುಲ್‌ಗೆ ಕ್ಯಾಪ್ಟನ್ ಯೋಗ ಸಿಕ್ಕಿಲ್ಲ ಯಾಕೆ? – ಕನ್ನಡಿಗನ ದುರಾದೃಷ್ಟನಾ.. ಅಜಾತಶತ್ರುವಾಗಿದ್ದೇ ತಪ್ಪಾಯ್ತಾ?

ಕೆಎಲ್ ರಾಹುಲ್.. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್. ಒಬ್ಬ ಕ್ರಿಕೆಟರ್​ಗೆ ಬೇಕಿರೋ ಎಲ್ಲಾ ಕ್ವಾಲಿಟೀಸ್ ಕೂಡ ರಾಹುಲ್​ರಲ್ಲಿದೆ.. ಓಪನಿಂಗ್ ಟು ನಂಬರ್ 6, 7, 8 ಹೀಗೆ ಯಾವ ಸ್ಲಾಟ್​ನಲ್ಲಿ ಕಳ್ಸಿದ್ರೂ ಬ್ಯಾಟ್ ಬೀಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಭಾರತ ತಂಡದ ಟೆಸ್ಟ್ ಕ್ರಿಕೆಟ್​ನ ಮೇನ್ ಬ್ಯಾಟರ್. ಇತ್ತೀಚೆಗೆ ಇಂಗ್ಲೆಂಡ್ ಸರಣಿಯಲ್ಲಿ ಎರಡು ಶತಕ ಸಿಡಿಸಿದ್ದ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೂ ಸೆಂಚುರಿ ಸಿಡಿಸಿದ್ರು. ಹೀಗೆ ಟೀಂ ಇಂಡಿಯಾ ಪಾಲಿಗೆ ಆಪತ್ಪಾಂಧವನಾಗಿ ಆಟಗಾರರ ಪಾಲಿಗೆ ಅಜಾತಶತ್ರುವಾಗಿರೋ ರಾಹುಲ್​ಗೆ ಅದ್ಯಾಕೋ ಏನೋ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಕಂಪ್ಲೀಟ್ ನಾಯಕತ್ವ ಸಿಗಲೇ ಇಲ್ಲ. ಬೆರಳೆಣಿಕೆ ಪಂದ್ಯಗಳಿಗೆ ಮಾತ್ರವೇ ನಾಯಕನಾಗಿ ತಂಡವನ್ನ ಮುನ್ನಡೆಸೋ ಅವಕಾಶ ಸಿಕ್ಕಿತು. ನಾಯಕನಾಗಿ ರಾಹುಲ್ ರೆಕಾರ್ಡ್ಸ್ ಹೇಗಿದೆ ಅನ್ನೋ ವಿವರಣೆ ಇಲ್ಲಿದೆ.

ಇದನ್ನೂ ಓದಿ:BCCI ಕೆಣಕಿ ಕೆಟ್ಟ ಕಿಶನ್.. ಭಾರತದ ಬಾಗಿಲು ಶಾಶ್ವತ ಬಂದ್! – ಬಂದಷ್ಟೇ ಸ್ಪೀಡಾಗಿ ಹೋದವರೆಷ್ಟು?

ಟೀಂ ಇಂಡಿಯಾದಲ್ಲಿ ಸದ್ಯ ಹೊಸಬರ ಪರ್ವ ಶುರುವಾಗಿದೆ. ದಿಗ್ಗಜ ಆಟಗಾರರ ಯುಗಾಂತ್ಯವಾಗ್ತಿದ್ದು ಶುಭ್​ಮನ್ ಗಿಲ್​ಗೆ ನಾಯಕತ್ವದ ಹೊಣೆ ನೀಡಲಾಗ್ತಿದೆ. ಟೆಸ್ಟ್ ಬಳಿಕ ಈಗ ಏಕದಿನ ಮಾದರಿ ಕ್ಯಾಪ್ಟನ್ಸಿಯೂ ಸಿಕ್ಕಿದೆ. ಹೀಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಬೇಕು ಅನ್ನೋದು ಎಷ್ಟೋ ಕ್ರಿಕೆಟಿಗರ ಕನಸು. ಹಾಗೇ ನಾಯಕನಾಗಿ ತಂಡವನ್ನ ಲೀಡ್ ಮಾಡ್ಬೇಕು ಅನ್ನೋದು ಪ್ರತಿಷ್ಠೆ. ಈ ಅವಕಾಶ ಎಲ್ರಿಗೂ ಸಿಗೋಲ್ಲ. ಭಾರತ ತಂಡಕ್ಕಾಗಿ ಅದೆಷ್ಟೇ ಪವರ್​ಫುಲ್ ಪ್ರದರ್ಶನ ನೀಡಿದ್ರೂ ನಾಯಕನಾಗಿ ಮುನ್ನಡೆಸೋಕೆ ಅವಕಾಶ ಗಿಟ್ಟಿಸಿಕೊಂಡವ್ರು ಕೆಲವೇ ಕೆಲ ಆಟಗಾರರಷ್ಟೇ. ಬ್ಯಾಡ್​ಲಕ್ ನಮ್ಮ ರಾಹುಲ್​ಗೂ ಈ ಅದೃಷ್ಟ ಒಲೀಲಿಲ್ಲ. ಹೀಗಿದ್ರೂ ಮೂರೂ ಮಾದರಿಯಲ್ಲೂ ನಾಯಕನಾಗಿ ಮುನ್ನಡೆಸಿರೋ ಅನುಭವವಂತೂ ಇದೆ.

ಕೆಎಲ್ ರಾಹುಲ್ ಟೆಸ್ಟ್ ತಂಡದ ನಾಯಕನಾಗಿ 3 ಪಂದ್ಯಗಳಲ್ಲಿ ಲೀಡ್ ಮಾಡಿದ್ದಾರೆ. 2022 ರ ಜನವರಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್‌ಗಳಿಂದ ಸೋಲು ಕಂಡಿತ್ತು. 2022 ರ ಡಿಸೆಂಬರ್​ನಲ್ಲಿ ಭಾರತ ಬಾಂಗ್ಲಾದೇಶ ಪ್ರವಾಸ ಮಾಡಿದಾಗ ರಾಹುಲ್ ನಾಯಕರಾಗಿದ್ದರು. ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ಭಾರತ 188 ರನ್‌ಗಳಿಂದ ಗೆದ್ದಿತು ಮತ್ತು ಮಿರ್ಪುರದ ಶೇರ್-ಎ-ಬಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಅನ್ನು ಮೂರು ವಿಕೆಟ್‌ಗಳಿಂದ ಗೆದ್ದಿತು. 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದಿತು. ಹೀಗೆ ಮೂರು ಪಂದ್ಯಗಳಲ್ಲಿ ತಂಡವನ್ನ ಲೀಡ್ ಮಾಡಿದ್ದು ಎರಡರಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಏಕದಿನ ಮಾದರಿ ರೆಕಾರ್ಡ್ಸ್ ನೋಡೋದಾದ್ರೆ 7 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಜನವರಿ 2022 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರು. ಟೀಮ್ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಸೋತಿತ್ತು. 2022 ರ ಆಗಸ್ಟ್ ನಲ್ಲಿ ಜಿಂಬಾಬ್ವೆ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದರು. ಅದೇ ವರ್ಷ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು. ಏಕದಿನ ನಾಯಕನಾಗಿ ಅವರ ಗೆಲುವಿನ ಶೇಕಡಾವಾರು 57% ಇದೆ. ಇನ್ನು ಟಿ20ಐನಲ್ಲಿ   ಒಮ್ಮೆ ಮಾತ್ರ ತಂಡವನ್ನ ಮುನ್ನಡೆಸಿದ್ದರು. 2022ರ ಏಷ್ಯಾಕಪ್‌ನಲ್ಲಿ ಅಬುಧಾಬಿಯಲ್ಲಿ ಯುಎಇ ವಿರುದ್ಧ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಡೆದ ಪಂದ್ಯದಲ್ಲಿ ನಾಯಕರಾಗಿದ್ದರು. ಆ ಪಂದ್ಯವನ್ನು ಭಾರತ 101 ರನ್‌ಗಳಿಂದ ಗೆದ್ದುಕೊಂಡಿತು.

ಇನ್ನು ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೇಂಟ್ಸ್ ಕ್ಯಾಪ್ಟನ್ ಆಗಿ ರಾಹುಲ್ ತಂಡವನ್ನ ಮುನ್ನಡೆಸಿದ್ದಾರೆ. ಇಲ್ಲಿಯವರೆಗೆ ಐಪಿಎಲ್‌ನಲ್ಲಿ ನಾಯಕರಾಗಿ 51 ಪಂದ್ಯಗಳಲ್ಲಿ 26 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 24 ಪಂದ್ಯಗಳನ್ನು ಸೋತಿದ್ದಾರೆ, ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಐಪಿಎಲ್‌ನಲ್ಲಿ ನಾಯಕನಾಗಿ ಅವರ ಗೆಲುವಿನ ಶೇಕಡಾವಾರು 50.98% ಇದೆ. ಒಬ್ಬ ಕ್ಯಾಪ್ಟನ್ ಆಗಿ ಲಾಂಗ್ ಟೈಂ ಸರ್ವೈವ್ ಆಗೋಕೆ ಆಗದೇ ಇದ್ರೂ ಕೂಡ ರಾಹುಲ್​ ಆಲ್​ರೌಂಡ್ ಪ್ಲೇಯರ್. ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಹಾಗೇ ಕ್ಯಾಪ್ಟನ್ಸಿ ಕ್ವಾಲಿಟೀಸ್ ಅಂತೂ ಇದ್ದೇ ಇದೆ. ಬಹುಶಃ ರಾಹುಲ್​ರಲ್ಲಿ ಕೇಳಿ ಪಡೆಯೋ ಗುಣ ಇಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅನ್ನುವಂತ ವ್ಯಕ್ತಿತ್ವ. ಹೀಗಾಗಿಯೇ ಏನೋ ಭಾರತ ತಂಡದಲ್ಲಿ ನಾಯಕನಾಗಿ ಬೆಳೆಯೋ ಅವಕಾಶ ಸಿಗ್ಲಿಲ್ಲ. ಬಟ್ ಐಪಿಎಲ್​ನಲ್ಲಿ ಅದನ್ನ ಪ್ರೂವ್ ಮಾಡಿಕೊಳ್ಳೋಕೆ ಇನ್ನೊಂದು ಚಾನ್ಸ್ ಬೇಕಿದೆ.

Sulekha