ಪ್ರಜ್ವಲ್ ಇಲ್ಲದೇ ಪ್ರಚಾರ ಮಾಡಿದ್ರಾ ಕರಾವಳಿ ಸಿನಿಮಾ ತಂಡ? – ವಿವಾದಕ್ಕೆ ರಾಜ್ ಬಿ ಶೆಟ್ಟಿ ಕ್ಷಮೆ ಕೇಳಿದ್ದೇಕೆ?

ಕರಾವಳಿ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಆದರೆ, ಸಿನಿಮಾ ತಂಡದ ಒಳಗೆ ಯಾವುದೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸುದ್ದಿ ಆಗುತ್ತಿದೆ. ಅತ್ತ ನಾಯಕ ಪ್ರಜ್ವಲ್ ದೇವರಾಜ್ ಒಂಟಿಯಾಗಿಯೇ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಸಿನಿಮಾ ತಂಡ ಕೂಡಾ ನಾಯಕನನ್ನೇ ಹೊರಗಿಟ್ಟು ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇದರ ಮಧ್ಯೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ ರಾಜ್ ಬಿ ಶೆಟ್ಟಿ ಚಿತ್ರದ ವಿವಾದದ ಕುರಿತು ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ:ಕರಾವಳಿ ಚಿತ್ರದ ಕಾಂಟ್ರವರ್ಸಿಗೆ ಫುಲ್‌ಸ್ಟಾಪ್ – ಪ್ರಚಾರದಲ್ಲಿ ಬ್ಯುಸಿಯಾದ ಪ್ರಜ್ವಲ್ ದೇವರಾಜ್
ಸ್ಯಾಂಡಲ್‌ವುಡ್‌ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಕರಾವಳಿ ಸಿನಿಮಾ ಜುಲೈ 24ರಂದು ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಇದರ ಜೊತೆಗೆ ಸಿನಿಮಾ ನಿರ್ದೇಶಕ ಮತ್ತು ಸಿನಿಮಾ ನಾಯಕನ ನಡುವಿನ ವಿವಾದ ಸದ್ಯಕ್ಕೆ ತಣ್ಣಗಾದರೂ ಒಳಗೊಳಗೆ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಬಂದು ಗಲಾಟೆ ಮಾಡಿದ್ದರು. ನಿರ್ದೇಶಕ ಹಾಗೂ ಗುರುದತ್ ಗಾಣಿಗಾ ನಡುವೆ ಇದ್ದ ಮನಸ್ಥಾಪ ಬಹಿರಂಗವಾಗಿದ್ದು, ಪರಸ್ಪರರು ಆರೋಪ-ಪ್ರತ್ಯಾರೋಪಗಳನ್ನು ಸಹ ಮಾಡಿಕೊಂಡಿದ್ದಾರೆ. ಇದರ ನಡುವೆ ಪ್ರಜ್ವಲ್ ದೇವರಾಜ್ ಶುಕ್ರವಾರ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದರು. ಕರಾವಳಿ ಸಿನಿಮಾದ ಯಶಸ್ಸಿಗಾಗಿ ಹಾಗೂ ಡಬ್ಬಿಂಗ್ ವಿವಾದಗಳ ನಂತರ ಶೃಂಗೇರಿ ಶ್ರೀ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಆಷಾಢದ ಮೊದಲ ಶುಕ್ರವಾರದ ವಿಶೇಷ ದಿನದಂದು ಅವರು ದೇವಾಲಯಕ್ಕೆ ಭೇಟಿ ನೀಡಿದ್ದು, ಭಕ್ತರೊಂದಿಗೆ ಖುಷಿ ಖುಷಿಯಾಗಿ ಬೆರೆತಿದ್ದರು. ಮತ್ತೊಂದೆಡೆ ರಾಜ್ ಬಿ ಶೆಟ್ಟಿ, ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಗಿರುವ ವಿವಾದಕ್ಕೆ ಕ್ಷಮೆ ಕೋರಿದ್ದಾರೆ. ವಿಡಿಯೋನಲ್ಲಿ ಮಾತನಾಡಿರುವ ರಾಜ್ ಬಿ ಶೆಟ್ಟಿ, ಕೆಜಿಎಫ್, ಕಾಂತಾರ ಅಂಥಹಾ ಸಿನಿಮಾಗಳು ಯಶಸ್ವಿಯಾದಾಗ ನಮ್ಮ ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಹಾಗೆಯೇ ಈ ರೀತಿ ವಿವಾದಗಳು ನಡೆದಾಗಲೂ ಸಹ ಮನಸ್ಸಿಗೆ ಬಹಳ ಬೇಸರ ಆಗುತ್ತದೆ, ನೋವನ್ನು ಅನುಭವಿಸುತ್ತೇವೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಮುಖ್ಯವಲ್ಲ, ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ನಾವು ಹೀಗೆ ನಡೆದುಕೊಳ್ಳುತ್ತಿದ್ದೇವಲ್ಲ ಎಂಬುದು ಬೇಜಾರು ಕೊಡುವ ಸಂಗತಿ. ಚಿತ್ರರಂಗದವನಾಗಿ ನಾನು ಇಡೀ ಪ್ರೇಕ್ಷಕರ ವರ್ಗಕ್ಕೆ ದೊಡ್ಡ ಕ್ಷಮೆ ಕೇಳುತ್ತೇನೆ. ಮುಂದೆ ಹೀಗೆ ನಡೆಯದಂತೆ ನೋಡಿಕೊಳ್ಳುವ, ವರ್ತಿಸುವ ಪ್ರಯತ್ನ ಮಾಡುತ್ತೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಅವರು ನಾಯಕ, ನನ್ನದು ಅತಿಥಿ ಪಾತ್ರ. ಆದರೆ ಬಹಳ ಮುಖ್ಯವಾದ ಅತಿಥಿ ಪಾತ್ರ. ನಾವು ಮಾತ್ರವೇ ಅಲ್ಲದೆ ಹಲವು ಪ್ರತಿಭಾವಂತ ನಟ-ನಟಿಯರು ಸಿನಿಮಾದಲ್ಲಿ ಇದ್ದಾರೆ. ಸಂಪದಾ, ಮಿತ್ರ, ರಮೇಶ್ ಇಂದಿರಾ ಇನ್ನೂ ಕೆಲವರು ಸಿನಿಮಾನಲ್ಲಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕ ಗುರುದತ್ ಗಾಣಿಗಾ ಮಾಡಿದ್ದಾರೆ ಎಂದು ರಾಜ್ ಬಿ ಶೆಟ್ಟಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನೋಡಿರಿ

