ನೀಲಿ ಪಕ್ಷಿ ಹಾರಿಸಿ ಟ್ವಿಟರ್ ಗೆ ನಾಯಿಯನ್ನು ಕರೆತಂದ ಎಲಾನ್ ಮಸ್ಕ್ – ಕಾರಣವೇನು ಗೊತ್ತಾ?
ವಾಷಿಂಗ್ಟನ್: ವಿಶ್ವದ ಬಿಲಿಯನೇರ್ಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದಾಗಿಂದಲೂ ಅಪ್ಲಿಕೇಶನ್ನಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲೇ ಇದೆ. ಕಳೆದ ಕೆಲವು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ವಿಟರ್ ಅಪ್ಲಿಕೇಶನ್ ಬಹಳಷ್ಟು ಚರ್ಚೆಯಲ್ಲಿತ್ತು. ಏಕೆಂದರೆ ಟ್ವಿಟರ್ನ ಬ್ಲೂಟಿಕ್ ಫೀಚರ್, ಉದ್ಯೋಗಿಗಳ ವಜಾ, ಹೊಸ ಸಿಇಒ ಹುಡುಕಾಟ ಹೀಗೆ ಸಾಕಷ್ಟು ಬದಲಾವಣೆಗಳಾಗುತ್ತಿತ್ತು. ಇದೀಗ ಟ್ವಿಟರ್ ಮತ್ತೊಂದು ಅಪ್ಡೇಟ್ ನೊಂದಿಗೆ ಸುದ್ದಿಯಾಗಿದೆ.
ಇದನ್ನೂ ಓದಿ: ಟ್ವಿಟರ್ ಸಾಮ್ರಾಜ್ಯಕ್ಕೆ ಹೊಸ ಸಿಇಒ! – ನಾಯಿ ಫೋಟೋ ಹಾಕಿ ಮಸ್ಕ್ ಕಾಲೆಳೆದಿದ್ದು ಯಾರಿಗೆ?
ಟ್ವಿಟರ್ ಆರಂಭವಾದಾಗಿನಿಂದ ಬಹುತೇಕ ಜನರು ಅದನ್ನು ಗುರುತಿಸುವುದು ಅದರ ಜನಪ್ರಿಯ ನೀಲಿ ಪಕ್ಷಿಯ ಲೋಗೋದಿಂದ. ಆದರೆ ಆ ಲೋಗೋವನ್ನೇ ಎಲಾನ್ ಮಸ್ಕ್ ಬದಲಾಯಿಸಿದ್ದಾರೆ.
ಸೋಮವಾರ ತಡರಾತ್ರಿ ಕೆಲ ಬಳಕೆದಾರರು ಟ್ವಟಿರ್ ನಲ್ಲಿ ಟ್ವಿಟರ್ ಲಾಗಿನ್ ಆಗುವ ವೇಳೆ ಪಕ್ಷಿಯ ಲೋಗೋದ ಬದಲಾಗಿ ನಾಯಿಯೊಂದರ ಲೋಗೋ ಕಾಣಿಸಿದೆ. ಮಂಗಳವಾರ ಬೆಳಗ್ಗೆ ಇದು ಟ್ವಿಟರ್ ನ ಹೊಸ ಲೋಗೋ ಎನ್ನುವುದು ಗೊತ್ತಾಗಿದೆ.
ಕ್ರಿಪ್ಟೋಕರೆನ್ಸಿಯ ಮಿಮ್ ಗಾಗಿ ಬಳಕೆ ಆಗುತ್ತಿದ್ದ ಡಾಗಿ ಕಾಯಿನ್ ಚಿತ್ರವನ್ನು ಅಂದರೆ ಶಿಬಾ ಇನು ನಾಯಿಯ ಚಿತ್ರವನ್ನೇ ಟ್ವಿಟರ್ ನ ಹೊಸ ಲೋಗೋವಾಗಿ ಎಲಾನ್ ಮಸ್ಕ್ ಬಳಸಿಕೊಂಡಿದ್ದಾರೆ. ಲೋಗೋ ಬದಲಾದ ಕುರಿತ ವಿಚಾರವನ್ನು ಡಾಗಿ ಮಿಮ್ ಮೂಲಕ ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ. ಈ ಹಿಂದೆ ವ್ಯಕ್ತಿಯೊಬ್ಬರು ಲೋಗೋವನ್ನು ಬದಲಾಯಿಸಿ ಎಂದು ಹೇಳಿದ ವಿಚಾರವನ್ನೂ ಮಸ್ಕ್ ಹಂಚಿಕೊಂಡಿದ್ದಾರೆ. ಅಂದ ಹಾಗೆ ಟ್ವಿಟರ್ ನ ವೆಬ್ ವರ್ಷನ್ ನಲ್ಲಿ ಮಾತ್ರ ಲೋಗೋ ಬದಲಾಗಿದ್ದು, ಮೊಬೈಲ್ ವರ್ಷನ್ ನಲ್ಲಿ ನೀಲಿ ಪಕ್ಷಿಯ ಲೋಗೋವೇ ಇದೆ.
ಕಳೆದ ಫೆಬ್ರವರಿಯಲ್ಲಿ ಎಲಾನ್ ಮಸ್ಕ್ ತಮ್ಮ ಸಾಕು ನಾಯಿಯನ್ನು ಸಿಇಒ ಕುರ್ಚಿ ಮೇಲೆ ಕೂರಿಸಿದ್ದರು. ಅಲ್ಲದೇ ನಾಯಿಯ ಮುಂದೆ ಹಲವು ಫೈಲ್ ಗಳನ್ನು ಇಟ್ಟು, ಈತನೇ ಹೊಸ ಸಿಇಒ, ಇತರ ವ್ಯಕ್ತಿಗಳಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಟ್ವಿಟರ್ ನಲ್ಲಿ ಪಕ್ಷಿಯ ಲೋಗೋ ಬದಲಾಗಿ ನಾಯಿಯ ಲೋಗೋ ಹಾಕಿ ಸುದ್ದಿಯಲ್ಲಿದ್ದಾರೆ.
— Elon Musk (@elonmusk) April 3, 2023