ಕೊಹ್ಲಿಗೆ ಪಂದ್ಯಶ್ರೇಷ್ಠ ಕೊಟ್ಟಿದ್ದೇ ತಪ್ಪಾ? – KING ಆಟಕ್ಕೆ ಸ್ಟ್ರೈಕ್ ರೇಟ್ ವಿವಾದ
ವಿರಾಟ್ ಕಂಡ್ರೆ ಕ್ರಿಕೆಟರ್ಸ್ಗೆ ದ್ವೇಷನಾ?
ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದಾರೆ. ಜಗತ್ತನ್ನೇ ಗೆದ್ದ ಚಾಂಪಿಯನ್ನರಿಗೆ ಗ್ರ್ಯಾಂಡ್ ವೆಲ್ಕಂ ಕೂಡ ಸಿಕ್ಕಿದೆ. ಆದ್ರೆ ಗೆಲುವನ್ನ ಸಂಭ್ರಮಿಸಬೇಕಿದ್ದ ಕೆಲವ್ರು ಮೊಸರಲ್ಲೂ ಕಲ್ಲು ಹುಡ್ಕೋ ಕೆಲ್ಸ ಮಾಡ್ತಿದ್ದಾರೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿಯವ್ರನ್ನ ಕಂಡ್ರೆ ಕೆಲವ್ರಿಗೆ ಅದ್ಯಾಕೆ ಅಷ್ಟೊಂದು ಹೊಟ್ಟೆ ಉರಿಯೋ ಗೊತ್ತಿಲ್ಲ. ರನ್ ಹೊಡೆದ್ರೂ ಮಾತಾಡ್ತಾರೆ, ಹೊಡ್ದಿಲ್ಲ ಅಂದ್ರಂತೂ ಇವ್ರಿಗೆಲ್ಲ ಹಬ್ಬ. ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ಹೀರೋ ಆಗಿದ್ರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ರೂ ಕ್ರೀಸ್ ಕಚ್ಚಿ ನಿಂತು ಲಾಸ್ಟ್ ಮೂಮೆಂಟ್ವರೆಗೂ ಹೋರಾಡಿದ್ರು. ಇದೇ ಕಾರಣಕ್ಕೆ ಕೊಹ್ಲಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯೂ ಸಿಕ್ಕಿತ್ತು. ಆದ್ರೀಗ ಇದೇ ಪಂದ್ಯಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದೇ ತಪ್ಪಂತೆ. ಕೊಹ್ಲಿ ಒಬ್ರಿಂದ ಇಂಡಿಯಾ ಗೆದ್ದಿಲ್ವಂತೆ. ಅಷ್ಟಕ್ಕೂ ವಿರಾಟ್ ಮೇಲೆ ಉರಿದು ಬೀಳ್ತಿರೋರು ಯಾರು? ಇವರ ವಾದ ಏನು? ವಿರಾಟ್ ರನ್ನ ದ್ವೇಷಿಸೋರ ಅಜೆಂಡಾ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹೆಂಡ್ತಿಗಾಗಿ ಅಪ್ಪನ ದೂರ ಮಾಡಿದ್ರಾ ಜಡ್ಡು? – ಬಡತನದಲ್ಲಿದ್ದಾಗ ಅಕ್ಕನ ಬೆಂಬಲ ಹೇಗಿತ್ತು?
ಈ ಜಗತ್ತಲ್ಲಿ ಎಂಥಾ ಕಾಯಿಲೆ ಇದ್ರೂ ವಾಸಿ ಮಾಡ್ಬೋದು. ಬಟ್ ಈ ದ್ವೇಷ, ಅಸೂಯೆ, ಮತ್ಸರ, ಅಂತಾರಲ್ಲ ಇದಕ್ಕೆ ಮದ್ದೇ ಇಲ್ಲ. ಇನ್ನೂ ಕೆಲವ್ರು ಇರ್ತಾರೆ ತಾವು ಬೆಳೆಯೋಕೆ ಆಗಿಲ್ಲ ಅಂದ್ರೂ ಪರ್ವಾಗಿಲ್ಲ. ಇನ್ನೊಬ್ಬರ ಸಕ್ಸಸ್ ನೋಡಿ ಉರ್ಕೊಳ್ಳೋದು. ಹೇ ಅದ್ಯಾವ ಸಾಧನೆ ಅಂತಾ ಹೀಯಾಳಿಸೋದು. ಸದ್ಯ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ವಿಚಾರದಲ್ಲೂ ಇದೇ ಆಗ್ತಿದೆ. ಜಗತ್ತಿನ ಯಾವ ಮೂಲೆಗೆ ಹೋದ್ರೂ ವಿರಾಟ್ ಕೊಹ್ಲಿಯವ್ರನ್ನ ಆರಾಧಿಸೋ ಕೋಟಿ ಕೋಟಿ ಜನ್ರಿದ್ದಾರೆ. ಆದ್ರೆ ಅವ್ರನ್ನ ಕಂಡ್ರೆ ಕೆಂಡ ಕಾರುವವರೂ ಇದ್ದಾರೆ. ಇತ್ತೀಚೆಗೆ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ಮ್ಯಾಚ್ನಲ್ಲಿ ಗೆದ್ದು ಬೀಗಿದೆ. ಆದ್ರೆ ಆ ಗೆಲುವು ಅಷ್ಟು ಸುಲಭಕ್ಕೆ ಧಕ್ಕಿದ್ದಲ್ಲ. ಕೈ ತಪ್ಪಿ ಹೋಗ್ತಿದ್ದ ಟ್ರೋಫಿಯನ್ನ ಎತ್ತಿ ಹಿಡಿದಿದ್ದೇ ರಣರೋಚಕ. ಫಸ್ಟ್ ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಅನುಭವಿಸಿದ್ದು ದೊಡ್ಡ ಫೇಲ್ಯೂರ್. ಬ್ಯಾಕ್ ಟು ಬ್ಯಾಕ್ ವಿಕೆಟ್. ಬಟ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಇನ್ನಿಂಗ್ಸ್’ಗೆ ಇಡೀ ಜಗತ್ತೇ ಬೆರಗಾಗಿದೆ. ಕ್ರಿಕೆಟ್ ಲೆಜೆಂಡ್ಸ್ ಕೂಡ ಕಿಂಗ್ ಕೊಹ್ಲಿಯ ಆಟವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಮನಸ್ಸು ತುಂಬಾ ನಂಜು ತುಂಬಿಕೊಂಡಿರೋ ಈ ಸಂಜಯ್ ಮಾಂಜ್ರೇಕರ್ ಹಾಗೇ ಅಂಬಾಟಿ ರಾಯುಡು ಇಬ್ರನ್ನ ಬಿಟ್ಟು.
ಫೈನಲ್ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೊಟ್ಟದ್ದು ಸಂಜಯ್ ಮಾಂಜ್ರೇಕರ್ಗೆ ಸರಿ ಇಲ್ವಂತೆ. ಕಾರಣ, ಸ್ಟ್ರೈಕ್’ರೇಟ್. ಕೊಹ್ಲಿ 19ನೇ ಓವರ್ವರೆಗೆ ಆಡಿದ್ದರಿಂದ ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಬೀಸಲು ಸಿಕ್ಕಿದ್ದು ಕೇವಲ ಎರಡು ಎಸೆತ. ಕೊಹ್ಲಿಯ ನಿಧಾನಗತಿಯ ಆಟದಿಂದಲೇ ಭಾರತ 90% ಸೋಲುವ ಹಂತ ತಲುಪಿತ್ತು. ಸೋ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಯಾರಾದರೂ ಬೌಲರ್’ಗೆ ಕೊಡಬೇಕಿತ್ತು ಎಂದಿದ್ದಾರೆ ಸಂಜಯ್ ಮಾಂಜ್ರೇಕರ್. ಌಕ್ಚುಲಿ ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಭಾರತದ ಮಡಿಲಿಗೆ ಎಳೆದ ತಂದಿದ್ದೇ ನಮ್ಮ ಬೌಲರ್ಗಳು. ಅದರಲ್ಲಿ ಎರಡು ಮಾತೇ ಇಲ್ಲ. ಅದನ್ನ ನಾವು ಕೂಡ ಒಪ್ಪಿಕೊಳ್ತೇವೆ. ಹಾಗಂತ ವಿರಾಟ್ ಕೊಹ್ಲಿ ಆಟವನ್ನು ಟೀಕಿಸೋದು ಶುದ್ಧ ಮೂರ್ಖತನ. ಆವತ್ತು ಕೊಹ್ಲಿ ಏನಾದರೂ ನೆಲ ಕಚ್ಚಿ ನಿಂತು ಆಡದೇ ಇದ್ದಿದ್ದರೆ, ಬಹುಶಃ ಭಾರತ ತಂಡ ಫೈನಲ್’ನಲ್ಲಿ 140 ರಿಂದ 150 ರನ್ನಿಗೆ ಪ್ಯಾಕಪ್ ಆಗುತ್ತಿತ್ತೇನೋ.. ಆಗ ತಂಡವನ್ನು ಗೆಲ್ಲಿಸೋಕೆ ನಮ್ಮ ಬೌಲರ್ಗಳಿಗಳೂ ಕಷ್ಟವಾಗ್ತಿತ್ತು. ಇನ್ನು ಅಂಬಾಟಿ ರಾಯುಡು ಬಗ್ಗೆ ಹೇಳೋದೇ ಬೇಡ ಬಿಡಿ. ಸಿಎಸ್ಕೆಯ ಈ ಮಾಜಿ ಆಟಗಾರನಿಗೆ ಕೊಹ್ಲಿ ಕಂಡ್ರೆ ಉರಿಯೋದು ಅಷ್ಟಿಷ್ಟಲ್ಲ. ಈಗ ವಿಶ್ವಕಪ್ ಗೆದ್ರೂ ಈ ಕಿಡಿ ಮಾತ್ರ ಕಮ್ಮಿ ಆಗಿಲ್ಲ. ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ದು ಬಹಳ ಖುಷಿ ವಿಚಾರ. ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರೂ ಟೀಮ್ ಇಂಡಿಯಾ ಗೆಲುವಿಗೆ ಇವರೊಬ್ಬರೇ ಕಾರಣ ಅಲ್ಲ. ಬದಲಿಗೆ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಮತ್ತು ಕ್ಲಾಸೆನ್ ವಿಕೆಟ್ ತೆಗೆದ ಹಾರ್ದಿಕ್ ಪಾಂಡ್ಯ ಅವರದ್ದು ಪಾತ್ರ ಇದೆ. ಈ ಪಂದ್ಯ ಗೆಲ್ಲಲು ಕೇವಲ ಕೊಹ್ಲಿ ಮಾತ್ರ ಕಾರಣ ಅಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಸೂರ್ಯ, ಪಾಂಡ್ಯ ಅಷ್ಟೇ ಅಲ್ಲ. ಭಾರತ ತಂಡದ ಪ್ರತಿಯೊಬ್ಬ ಆಟಗಾರರ ಕೊಡುಗೆಯೂ ಇದೆ ಅನ್ನೋದನ್ನ ನಾವೂ ಒಪ್ಪಿಕೊಳ್ತೇನೆ. ಹಾಗಂತ ಇನ್ನೊಬ್ಬರನ್ನ ಟೀಕಿಸೋದು ಇದ್ಯಲ್ಲ ಅದು ತಪ್ಪು.
ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿದ 76 ರನ್ಗಳೇ ಭಾರತದ ಗೆಲುವಿಗೆ ಅಡಿಪಾಯ ಅನ್ನೋದು ಎಲ್ರಿಗೂ ಗೊತ್ತಿದೆ. ಸೆಮಿಫೈನಲ್ ಪಂದ್ಯದವರೆಗೆ ಭಯಂಕರ ಫಾರ್ಮ್’ನಲ್ಲಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲೋಕೆ ಆಗ್ಲೇ ಇಲ್ಲ. 2ನೇ ಓವರ್ನಲ್ಲೇ ವಿಕೆಟ್ ಒಪ್ಪಿಸಿದ್ರು. ನೆಕ್ಸ್ಟ್ ಬಂದ ಪಂತ್ ಅಂತೂ ಇದು ಫೈನಲ್ ಮ್ಯಾಚ್ ಅನ್ನೋದನ್ನೇ ಮರೆತವ್ರಂತೆ ಸೊನ್ನೆ ಸುತ್ತಿ ಸೀದಾ ಪೆವಿಲಿಯನ್ ಸೇರಿದ್ರು. ಇನ್ನು ಜಗತ್ತಿನ ನಂ.2 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ 3 ರನ್ ಗಳಿಸಿ ಟಾಟಾ ಬೈ ಬೈ ಅಂದಿದ್ರು. ಜಸ್ಟ್ 4.3 ಓವರ್.. 34 ರನ್.. 3 ವಿಕೆಟ್.. ಇದನ್ನ ನೋಡಿದ ಕೋಟಿ ಕೋಟಿ ಭಾರತೀಯ ಅಭಿಮಾನಿಗಳು ಟೆನ್ಷನ್ ಆಗಿದ್ರು. ಹೋ ಟಾರ್ಗೆಟ್ 150 ಕೂಡ ದಾಟಲ್ಲ ಬಿಡು ಅಂತಾ ಫಿಕ್ಸ್ ಆಗಿದ್ರು. ಬಟ್ ಮತ್ತೊಂದು ತುದಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಇಡೀ ತಂಡದ ಜವಾಬ್ದಾರಿಯನ್ನ ಹೊತ್ತುಕೊಂಡಿದ್ರು. ಸತತ ಆರು ಪಂದ್ಯಗಳಿಂದ ಫೇಲ್ಯೂರ್ ಆಗಿದ್ರೂ ಕ್ರೀಸ್ ಕಚ್ಚಿ ನಿಂತಿದ್ರು. ಅಲ್ಲಿ ಸ್ಟ್ರೈಕ್ ರೇಟ್ಗಿಂತ ವಿಕೆಟ್ ಉಳಿಸಿಕೊಳ್ಳೋದು ಮೇನ್ ಇಂಪಾರ್ಟೆಂಟ್ ಆಗಿತ್ತು. ಯಾಕಂದ್ರೆ ಅಷ್ಟ್ರಲ್ಲಾಗ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ಬಲವೆಲ್ಲಾ ಪೆವಿಲಿಯನ್ ಸೇರಿ ಆಗಿತ್ತು. ಹಾಗೇನಾದ್ರೂ ವಿರಾಟ್ ಕೂಡ ಹೊಡಿಬಡಿ ಆಟಕ್ಕೆ ಮುಂದಾಗಿದ್ರೆ ಕೊಹ್ಲಿ ಕೂಡ ಔಟಾಗೋ ಚಾನ್ಸ್ ಇತ್ತು. ಸೋ ಅಪಾಯಕಾರಿಯಾಗಿದ್ದ ದಕ್ಷಿಣ ಆಫ್ರಿಕಾ ಬೌಲರ್’ಗಳಿಗೆ ಸೆಡ್ಡು ಹೊಡೆದು ನಿಂತಿದ್ರು. ಒಂದು ತುದಿಯಲ್ಲಿ ವಿರಾಟ್ ಕೊಹ್ಲಿ ಇದ್ದಾರೆ ಎಂಬ ಧೈರ್ಯವೇ, ಅಕ್ಷರ್ ಪಟೇಲ್’ಗೆ ಬಿಡು ಬೀಸಾಗಿ ಬ್ಯಾಟ್ ಬೀಸಲು ಸಾಧ್ಯವಾಗಿದ್ದು. ಹಾಗೇ ಶಿವಂ ದುಬೆ ಅಬ್ಬರಿಸೋಕೆ ಕಾರಣವಾಗಿದ್ದು. ಕೊನೆಯಲ್ಲಿ 59 ಎಸೆತಗಳಲ್ಲಿ 128.81ರ ಸ್ಟ್ರೈಕ್’ರೇಟ್’ನಲ್ಲಿ 76 ರನ್. ಇಡೀ ತಂಡ ಗಳಿಸಿದ 176 ರನ್’ಗಳಲ್ಲಿ 43% ಕೊಡುಗೆ ವಿರಾಟ್ ಕೊಹ್ಲಿಯದ್ದೇ. ಅದೂ ಎಂಥಾ ಸಿಚುಯೇಶನ್ನಲ್ಲಿ. ಟಾಪ್ ಆರ್ಡರ್ ಕಂಪ್ಲೀಟ್ collapse ಆದಾಗ. ಹೀಗಾಗಿ ಕೊಹ್ಲಿಯ ಇನ್ನಿಂಗ್ಸ್ priceless. ಆ ದಿನ ಕೊಹ್ಲಿ ಆಡಿದ ಆಟವನ್ನು ನೋಡಿ ಆವ್ರನ್ನ ದ್ವೇಷಿಸುವವರೂ ಪ್ರೀತಿಸೋಕೆ ಶುರು ಮಾಡಿದ್ರು. ಆದರೆ ಮುಂಬೈನ ಮಾಜಿ ಕ್ರಿಕೆಟಿಗ, ಕ್ರಿಕೆಟ್ ಪಂಡಿತ ಅಂತಾ ಕರೆಸಿಕೊಳ್ಳೋ ಸಂಜಯ್ ಮಾಂಜ್ರೇಕರ್ ಮತ್ತು ಅಂಬಾಟಿ ರಾಯುಡು ಅವ್ರನ್ನ ಬಿಟ್ಟು.
ನಿಜ ಹೇಳ್ಬೇಕಿಂದ್ರೆ ವಿರಾಟ್ ಕೊಹ್ಲಿಯವ್ರನ್ನ ವಿರೋಧಿಸುವವರು, ಟೀಕಿಸುವವರು ಎಷ್ಟು ಜನರಿದ್ದಾರೋ ಅವ್ರನ್ನ ಇಷ್ಟ ಪಡೋರು ನೂರು ಪಟ್ಟಿದ್ದಾರೆ. ನೀವು ಕೊಹ್ಲಿ ಆಟವನ್ನ ಒಂದು ಸಲ ಇಮ್ಯಾಜಿನ್ ಮಾಡ್ಕೊಳ್ಳಿ. ಯಾವುದಾದ್ರೂ ಇಂಟರ್ ನ್ಯಾಷನಲ್ ಪಂದ್ಯದಲ್ಲಿ ಎದುರಾಳಿ ತಂಡ ಎಷ್ಟೇ ಬೃಹತ್ ಮೊತ್ತ ಗಳಿಸಿದ್ರೂ ಕೂಡ ವಿರಾಟ್ ಕೊಹ್ಲಿ ಇನ್ನೂ ಕ್ರೀಸಿನಲ್ಲಿ ಉಳಿದಿದ್ದಾರೆ ಅಂದ್ರೆ ಎಂಥಾ ಮನಸ್ಥಿತಿ ಇರುತ್ತೆ. ಎದುರಾಳಿ ಆಟಗಾರರಿಗೆ ಮಾನಸಿಕವಾಗಿ ಸೋಲಿನ ಫೀಲ್ ಶುರುವಾಗಿ ಬಿಡುತ್ತೆ. ಅದ್ರಲ್ಲೂ ಕೆಲವೊಂದು ಮ್ಯಾಚುಗಳು ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇದ್ದಾಗ ಆಟಗಾರರು ಕೂಡ ಸೈಕೊಲಾಜಿಕಲಿ ಫಿಯರ್ ಌಂಡ್ ನರ್ವಸ್ಗೆ ಒಳಗಾಗ್ತಾರೆ. ಲಕ್ಷಗಟ್ಟಲೆ ಕಿಕ್ಕಿರಿದ ಜನಸ್ತೋಮದ ನಡುವೆ ಕೂಗು ಚೀರಾಟದ ಶಬ್ಧದಲ್ಲಿ ಬೌಲರ್ ಕೈಯ್ಯಿಂದ ಚಿಮ್ಮುವ ಬಾಲ್ ಫೇಸ್ ಮಾಡ್ಬೇಕು. ಅಭಿಮಾನಿಗಳ ಅಷ್ಟೂ ಶಬ್ದವನ್ನು ಮಾನಸಿಕವಾಗಿ ಮ್ಯೂಟ್ ಮಾಡಿಕೊಂಡು ಕೈಯಲ್ಲಿ ಮುಷ್ಟಿ ಬಿಗಿ ಹಿಡಿದ ಬ್ಯಾಟ್ನಿಂದ ಚೇಸಿಂಗ್ ಗೆ ಅಥವಾ ರನ್ ಪೇರಿಂಗ್ ಗೆ ನಿಲ್ಲುವ ತಾಕತ್ತು ಸುಲಭದ್ದಲ್ಲ. ಪಾಕಿಸ್ತಾನ ವಿರುದ್ಧ ಈ ಹಿಂದಿನ ಎಷ್ಟೋ ಪಂದ್ಯಗಳಲ್ಲಿ ವಿರಾಟ್ ಏಕಾಂಗಿಯಾಗಿ ನಿಂತು ಗೆಲ್ಲಿಸಿರೋದನ್ನ ಮರೆಯೋಕೆ ಸಾಧ್ಯನೇ ಇಲ್ಲ.
ಟೀಂ ಇಂಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳ್ತಿದ್ರೂ ಕೊಹ್ಲಿ ತಮ್ಮ ಕೈಯಲ್ಲಿ ಬ್ಯಾಟ್ ಹಿಡಿದು ಇನ್ನೂ ಅಂಗಳದಲ್ಲಿಯೇ ನಿಂತಿದ್ದಾರೆ ಅನ್ನೋ ಸಣ್ಣ ಧೈರ್ಯ ಸಾಕು. ಕ್ರಿಕೆಟ್ ನೋಡುತ್ತಿದ್ದವ್ರು ವಿರಾಟ್ ಕೊಹ್ಲಿಯ ವಿರೋಧಿಯೇ ಆಗಿದ್ದರೂ ಕೂಡ ಆತನಿಗೆ ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಮೂಡಿ ಬಿಡುತ್ತೆ. ಅಂಥಾದ್ದೊಂದು ಪ್ರಚಂಡ ಭರವಸೆಯ ಆಟಗಾರ ವಿರಾಟ್. ಮೈದಾನದಲ್ಲಿ ಅಗ್ರೆಶನ್ನಿಂದಲೇ ಇರೋ ವಿರಾಟ್ ನಿಜಕ್ಕೂ ಎದುರಾಳಿ ತಂಡದ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಿ ಬಿಡ್ತಾರೆ. ಟೀಂ ಇಂಡಿಯಾದ ಯಾವುದೇ ಆಟಗಾರನನ್ನ ಯಾರಾದ್ರೂ ಕಿಚಾಯಿಸಿದ್ರೆ ಫಸ್ಟ್ ಎದುರು ನಿಲ್ಲೋದೇ ವಿರಾಟ್. ಕಣ್ಣಲ್ಲೇ ಬೆಂಕಿ ಉಗುಳುತ್ತಾ ಸಿಂಹದಂತೆ ಗರ್ಜಿಸುತ್ತಾ ಎದೆಯುಬ್ಬಿಸಿ ಎದುರಾಳಿಗೆ ಎದುರಾಗ್ತಾರೆ. ಈತನನ್ನ ಕಿಚಾಯಿಸಿದರೆ ಎಲ್ಲಿ ಬ್ಯಾಟ್ ತೆಗ್ದು ಮುಖಕ್ಕೆ ಬಡಿದುಬಿಡುತ್ತಾನೋ ಎಂಬ ಎಕ್ಸ್ಪ್ರೆಶನ್ ಅದು. ಇದೇ ಕಾರಣಕ್ಕೆ ಕ್ರೀಸ್ ನಲ್ಲಿ ನಿಂತಿದ್ದಾಗ ಕೊಹ್ಲಿಯವ್ರನ್ನ ಕಿಚಾಯಿಸಿದವರು ಅತ್ಯಂತ ಬೆರಳೆಣಿಕೆಷ್ಟು. ಕಿಚಾಯಿಸಿದ್ರೂ ಕೂಡ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಅದೇ ಅಂಗಳದಲ್ಲೇ ವಾಪಸ್ ಕೊಟ್ಟೇ ಕೊಹ್ಲಿ ವಾಪಸ್ ಬರೋದು ಬಿಡಿ. ಆದ್ರೆ ಇದೇ ಕಿಂಗ್ ಔಟ್ ಆಫ್ ಕ್ರೀಸ್ನಲ್ಲಿ ಅಕ್ಷರಶಃ ಮಗುವಿನಂತೆ ಇರ್ತಾರೆ. ಎದುರಾಳಿ ಟೀಮ್ ನ ಯಾರ ಜೊತೆಗಾರರೂ ಬೆರೆತು ಹೋಗ್ತಾರೆ.
ವಿರಾಟ್ ಎಷ್ಟು ಸಿಂಪಲ್ ಅನ್ನೋದಕ್ಕೆ ಮತ್ತೊಂದು ಎಕ್ಸಾಂಪಲ್ ಕೊಡ್ತೇನೆ. ಟಿ-20 ವಿಶ್ವಕಪ್ ಗೆದ್ದ ಬಳಿಕ ಆ ಫಾರ್ಮೆಟ್ಗೆ ಗುಡ್ ಬೈ ಹೇಳಿದ ವಿರಾಟ್ ಅವ್ರ ನಡೆ-ನುಡಿ ತುಂಬಾನೇ ಡಿಫರೆಂಟ್ ಆಗಿತ್ತು. ಕಣ್ಣಾಲಿಗಳು ತೇವಗೊಂಡಿದ್ವು.. ಮನಸ್ಸು ಭಾವುಕವಾಗಿತ್ತು. ಮಾತು ಮಾತಿಗೂ ಕೊಹ್ಲಿ ದೇವರ ಜಪ ಮಾಡಿದ್ರು. ಅಗ್ರೆಸ್ಸಿವ್ ವಿರಾಟ್ ಬದಲಾಗಿ ಹಂಬಲ್ ಕೊಹ್ಲಿಯ ದರ್ಶನವಾಗಿತ್ತು. 2011 ಏಕದಿನ ವಿಶ್ವಕಪ್ ಗೆದ್ದ ಸಂಭ್ರಮಾಚರಣೆಯ ವೇಳೆ ಕೊಹ್ಲಿ ಒಂದು ಮಾತನ್ನ ಹೇಳಿದ್ರು. ದೇಶದ ಜನರ ನೀರಿಕ್ಷೆಯ ಭಾರವನ್ನ ಇಷ್ಟು ವರ್ಷಗಳ ಕಾಲ ಸಚಿನ್ ತೆಂಡುಲ್ಕರ್ ಹೊತ್ತುಕೊಂಡಿದ್ರು. ಅದನ್ನ ಸಾಕಾರಗೊಳಿಸಿದ ಅವರನ್ನು ಎತ್ತಿ ಮೆರೆಸಬೇಕಿದೆ ಎಂದು. ಇದೀಗ ಟಿ20 ವಿಶ್ವಕಪ್ ಗೆದ್ದ ಬಳಿಕ ನಿಮ್ಮನ್ನ ಎತ್ತಿ ಮೆರೆಸಬೇಕಾ ಎಂದು ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಕೊಹ್ಲಿ ಹೇಳ್ತಾರೆ. ನನ್ನನ್ನಲ್ಲ.. ರೋಹಿತ್ ರನ್ನ ಅನ್ನೋ ವಿನ್ರಮ ಉತ್ತರ ನೀಡ್ತಾರೆ. ಹಾಗೇ ಸೆಲೆಬ್ರೇಷನ್ ವೇಳೆಯೂ ಕಪ್ ಕೈಗೆ ಸಿಕ್ಕ ಬಳಿಕ ಇಡೀ ತಂಡ ಟ್ರೋಫಿ ಸೆಲೆಬ್ರೇಷನ್ನಲ್ಲಿ ಮುಳುಗಿತ್ತು. ಆದ್ರೆ ಈ ಸಂಭ್ರಮದ ನಡುವೆ ಕೋಚ್ ರಾಹುಲ್ ದ್ರಾವಿಡ್ರನ್ನು ಕೊಹ್ಲಿ ಮರೆಯಲಿಲ್ಲ. ಪೋಡಿಯಂಗೆ ದ್ರಾವಿಡ್ ಎಂಟ್ರಿ ನೀಡ್ತಿದ್ದಂತೆ ತಾವೇ ಕೈಯಾರೆ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ನೀಡಿದ್ರು. ಆ ಬಳಿಕ ದ್ರಾವಿಡ್ ಸಂಭ್ರಮಿಸಿದ ಪರಿಯನ್ನು ಯಾರೂ ಮರೆಯೋಕೆ ಸಾಧ್ಯವಿಲ್ಲ ಬಿಡಿ. ಕೊಹ್ಲಿ ಯಾವತ್ತೂ ಕೂಡ ತನ್ನ ಗೆಲುವನ್ನ ಮಾತ್ರ ಸಂಭ್ರಮಿಸಿಲ್ಲ. ಯಾವುದೇ ತಮ್ಮ ತಂಡದ ಯಾವುದೇ ಬೌಲರ್ ವಿಕೆಟ್ ತೆಗೆದ್ರೆ ಬೌಲರ್ಗಿಂತ ಜಾಸ್ತಿ ಸೆಲೆಬ್ರೇಟ್ ಮಾಡೋದು ಕೊಹ್ಲಿನೇ.
ಏನೇ ಹೇಳಿ. ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿಯನ್ನ ದ್ವೇಷ ಮಾಡ್ತಿದ್ದವ್ರೂ ಕೂಡ ಈಗ ಪ್ರೀತಿಸೋಕೆ ಶುರು ಮಾಡಿದ್ದಾರೆ. ಅಷ್ಟೇ ಯಾಕೆ ಗೌತಮ್ ಗಂಭೀರ್ ಕೂಡ ಕೊಹ್ಲಿ ಬಗ್ಗೆ ಒಂದು ಮಾತು ಹೇಳ್ತಾರೆ. ಗಾಡ್ ಆಫ್ ಕ್ರಿಕೆಟ್ ಅಂತಾ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಲೆಜೆಂಡ್ ಧೋನಿ ಕ್ರಿಕೆಟ್ನಿಂದ ಫೇಮಸ್ ಆದ್ರು. ಬಟ್ ವಿರಾಟ್ ಕೊಹ್ಲಿಯಿಂದ ಕ್ರಿಕೆಟ್ ಫೇಮಸ್ ಆಯ್ತು. ಇಷ್ಟು ಸಾಕಲ್ವಾ ವಿರಾಟ್ ಎಂಥಾ ಆಟಗಾರ ಅನ್ನೋಕೆ. ಫೈನಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ತಾಕತ್ತಿನಿಂದ ಹಾಗೇ ಬೌಲರ್ಸ್ ಬೆಂಕಿಯಾಟದಿಂದ ಭಾರತ ವಿಶ್ವಕಪ್ ಗೆದ್ದಿದೆ ಅನ್ನೋದು ಸತ್ಯ. ಹೀಗಿದ್ರೂ ಈ ಸ್ಟ್ರೈಕ್’ರೇಟ್ ತೆಗೆದುಕೊಂಡು ಏನಾಗ್ಬೇಕು? ಬಟ್ ವಿರಾಟ್ ವಿರೋಧಿಗಳಿಗೆ ಮಾತ್ರ ಇದನ್ನ ಅರಗಿಸಿಕೊಳ್ಳೋಕೆ ಆಗಲ್ಲ ಅಷ್ಟೇ.