ಬಿಲಿಯನೇರ್‌ಗಳು ತಮಗೆ ಬೇಕಾಗಿ ಬಂಕರ್‌ಗಳನ್ನು ನಿರ್ಮಿಸ್ತಾ ಇರೋದ್ಯಾಕೆ? – ಅನಾಹುತದ ಮುನ್ಸೂಚನೆ ಸಿಕ್ಕಿದೆಯಾ?

ಬಿಲಿಯನೇರ್‌ಗಳು ತಮಗೆ ಬೇಕಾಗಿ ಬಂಕರ್‌ಗಳನ್ನು ನಿರ್ಮಿಸ್ತಾ ಇರೋದ್ಯಾಕೆ? – ಅನಾಹುತದ ಮುನ್ಸೂಚನೆ ಸಿಕ್ಕಿದೆಯಾ?

ಎಲಾನ್ ಮಸ್ಕ್, ಜೆಫ್ ಬಿಯಾಸ್, ಬಿಲ್​ ಗೇಟ್ಸ್, ಮಾರ್ಕ್ ಝುಕೆರ್​ಬರ್ಗ್ ಹೀಗೆ ಜಗತ್ತಿನಲ್ಲಿರೋ ಕೆಲ ಬಿಲಿಯನೇರ್​​ಗಳು ಒಂದಲ್ಲಾ ಒಂದು ಕ್ರೇಜ್ ಹೊಂದಿದ್ದಾರೆ. ಸೂಪರ್​ ಕಾರ್​ಗಳ ಕಲೆಕ್ಷನ್, ದೊಡ್ಡ ದೊಡ್ಡ ಬಂಗಲೆಗಳು, ದ್ವೀಪಗಳನ್ನ ಖರೀದಿಸೋದು. ಸಮುದ್ರದಾಳಕ್ಕೆ ಟೂರ್​ ಮಾಡೋದು. ಇನ್ನು ರಿಚರ್ಡ್ ಬ್ರ್ಯಾನ್ಸನ್, ಜೆಫ್ ಬಿಯಾಸ್​ನಂತವರು ಬಾಹ್ಯಾಕಾಶಕ್ಕೂ ಹೋಗಿ ಬಂದಿದ್ದಾರೆ. ಎಲಾನ್​ ಮಸ್ಕ್ ಅಂತೂ ಮಂಗಳ ಗ್ರಹಕ್ಕೆ ತೆರಳೋ ಟಾರ್ಗೆಟ್ ಇಟ್ಕೊಂಡಿದ್ದಾರೆ. ಈ ರೀತಿ ಬಿಲಿಯನೇರ್​​ಗಳೆದ್ದೆಲ್ಲಾ ಕ್ರೇಜಿ ಪ್ಯಾಶನ್​ಗಳು. ಇವೆಲ್ಲದರ ಮಧ್ಯೆಯೇ, ಈಗ ಕೆಲ ಬಿಲಿಯನೇರ್​​ಗಳು ಜಗತ್ತಿನ ವಿವಿಧೆಡೆ ಬಂಕರ್​​ಗಳನ್ನ ನಿರ್ಮಿಸ್ತಾ ಇದ್ದಾರೆ. ಸೈನಿಕರಿಗಾಗಿ, ರಕ್ಷಣೆಗಾಗಿ, ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸಿಡೋದಕ್ಕಾಗಿ ಬಂಕರ್​​ಗಳನ್ನ ನಿರ್ಮಾಣ ಮಾಡಿರೋದನ್ನ ಕೇಳಿದ್ವಿ. ಆದ್ರೆ ಈ ಬಿಲಿಯನೇರ್​ಗಳು ತಮಗೆ ಬೇಕಾಗಿ ಬಂಕರ್​​ಗಳನ್ನ ನಿರ್ಮಿಸ್ತಾ ಇರೋದ್ಯಾಕೆ ಅನ್ನೋದೆ ಇಲ್ಲಿರೋ ಬಿಲಿಯನ್ ಡಾಲರ್ ಪ್ರಶ್ನೆ.

ಇದನ್ನೂ ಓದಿ: ಕೇವಲ 100 ರೂಪಾಯಿಗೆ ಕ್ಯಾನ್ಸರ್‌ ಮಾತ್ರೆ! – ಟಾಟಾ ಸಂಸ್ಥೆ ಆವಿಷ್ಕಾರ

ಜಗತ್ತಿನ ಟಾಪ್ 1 ಪರ್ಸೆಂಟ್​​ನಷ್ಟು ಬಿಲಿಯನೇರ್​ಗಳು ಈಗ ಬಂಕರ್​​ಗಳನ್ನ ನಿರ್ಮಿಸ್ತಾ ಇದ್ದಾರೆ. ಫೇಸ್​ಬುಕ್ ಒಡೆಯ ಮಾರ್ಕ್ ಝುಕೆರ್​ಬರ್ಗ್ ಅಮೆರಿಕದ ಹವಾಯಿಯಲ್ಲಿ 270 ಮಿಲಿಯನ್ ಡಾಲರ್ ಮೊತ್ತದ ಬಂಕರ್​​ನ್ನ ನಿರ್ಮಾಣ ಮಾಡ್ತಿದ್ದಾರೆ. ಪೇ ಪಾಲ್​ ಕಂಪನಿಯ ಮಾಜಿ ಸಿಇಒ ಪೀಟರ್ ಥೀಲ್ ನ್ಯೂಜಿಲ್ಯಾಂಡ್​ನಲ್ಲಿ ಬಂಕರ್​​ ನಿರ್ಮಿಸೋದಕ್ಕೆ ಮುಂದಾಗಿದ್ದಾರೆ. ಮೈಕ್ರೋಸ್ಟಾಫ್​ನ ಬಿಲ್​​ ಗೇಟ್ಸ್ ಅಂತೂ ಈಗಾಗ್ಲೇ ಹಲವು ಸೆಕ್ಯೂರಿಟಿ ಬಂಕರ್​​ಗಳನ್ನ ರೆಡಿ ಮಾಡಿ ಇಟ್ಕೊಂಡಿದ್ದಾರೆ. ಈ ಬಂಕರ್ ಹೇಗಿದೆ ಅನ್ನೋದನ್ನ ಮುಂದೆಕ್ಕೆ ಹೇಳ್ತೀನಿ. ಆದ್ರೆ ಬಿಲಿಯನೇರ್​ಗಳು ಇಂಥಾ ಬಂಕರ್​​ಗಳನ್ನ ನಿರ್ಮಾಣ ಮಾಡ್ತಿರೋದ್ಯಾಕೆ ಅನ್ನೋದೆ ಅತ್ಯಂತ ಕುತೂಹಲದ ಸಂಗತಿ. ಇಲ್ಲಿ ಒಂದು ವಿಚಾರ ಅಂತೂ ಸ್ಪಷ್ಟ. ನಮಗೆ ಯಾರಿಗೂ ಗೊತ್ತಿಲ್ಲದ ಜಗತ್ತಿನ ಕೆಲ ಸೂಪರ್​​ ಸೀಕ್ರೆಟ್​ ಸಂಗತಿಗಳ ಬಗ್ಗೆ ಈ ಬಿಲಿಯನೇರ್​ಗಳಿಗೆ ಮಾಹಿತಿ ಇದೆ. ಭವಿಷ್ಯದಲ್ಲಿ ಏನಾಗಬಹುದು? ಯುದ್ಧ ಸಂಭವಿಸಬಹುದಾ? ಏನೆಲ್ಲಾ ಪ್ರಾಕೃತಿಕ ವಿಕೋಪಗಳಾಗಬಹುದು? ಜಾಗತಿಕ ಆರ್ಥಿಕ ವ್ಯವಸ್ಥೆ ಏನಾಗಬಹುದು? ದೇಶ ದೇಶಗಳ ನಡುವಿನ ಸಂಬಂಧದಲ್ಲಿ ಏನೆಲ್ಲಾ ಬೆಳವಣಿಗೆಗಳಾಗಬಹುದು? ಯಾಱರ ಮಧ್ಯೆ ಬಿರುಕು ಬೀಳಬಹುದು? ಈ ಎಲ್ಲಾ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಬಿಲಿಯನೇರ್​ಗೆ ಮಾಹಿತಿ ಸಂಗ್ರಹಿಸಿರ್ತಾರೆ. ಇದಕ್ಕೆ ಅಂತಾನೆ ಅವರ ಬಳಿ ಎಕ್ಸ್​​ಪರ್ಟ್​​ಗಳ ತಂಡಗಳಿವೆ. ಕೊರೊನಾದಂಥಾ ಮಹಾ ವೈರಸ್ ಅಟ್ಯಾಕ್ ಆಗುತ್ತೆ ಅಂತಾ ಕೆಲ ವರ್ಷಗಳ ಹಿಂದೆಯೇ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್​ಗೇಟ್ಸ್ ಭವಿಷ್ಯ ನುಡಿದಿದ್ರು. ಅದು ನಿಜವೂ ಆಯ್ತು. ಮುಂದಿನ ಪ್ಯಾಂಡಮಿಕ್ ಹೇಗಿರಬಹುದು? ಏನಾಗಿರಬಹುದು ಅನ್ನೋ ಬಗ್ಗೆಯೂ ಕೆಲ ಬಿಲಿಯನೇರ್​​ಗಳು ಈಗಾಗ್ಲೇ ಅಂದಾಜಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಲೇ ತಮ್ಮ ಜೀವ ಉಳಿಸಿಕೊಳ್ಳೋಕೆ ಬೇಕಾದ ಎಲ್ಲಾ ತಯಾರಿಗಳನ್ನ ಕೂಡ ಬಿಲಿಯನೇರ್​ಗಳು ಮಾಡಿಕೊಂಡಿದ್ದಾರೆ.

2019ರ ಬಳಿಕ ಜಗತ್ತು ಕಂಪ್ಲೀಟ್ ಬದಲಾಗಿ ಹೋಗಿದೆ. ಕೊರೊನಾ, ಯುದ್ಧ, ಆಂತರಿಕ ಸಂಘರ್ಷ, ಆರ್ಥಿಕ ಕುಸಿತ, ಭೂಕಂಪ, ಕಾಡ್ಗಿಚ್ಚು ಹೀಗೆ ಜಗತ್ತಿನ ಒಂದಲ್ಲಾ ಒಂದು ಕಡೆ ಅವಾಂತರಗಳು ನಡೀತಾನೆ ಇದೆ. ಕೊರೊನಾ ಅಂತೂ ಇಡೀ ಜಗತ್ತನ್ನೇ ಆವರಿಸಿತ್ತು. ಇನ್ನೂ ಮುಗಿಯದ ರಷ್ಯಾ-ಉಕ್ರೇನ್ ಯುದ್ಧ ಅರ್ಥಿಕತೆಯನ್ನೇ ಅಡಿಮೇಲು ಮಾಡಿದೆ. ಇಸ್ರೇಲ್-ಗಾಜಾ ಕದನವೂ ಮುಂದುವರಿದಿದೆ. ಉತ್ತರ ಕೊರಿಯಾದ ಹುಚ್ಚಪ್ಪ ಕಿಮ್ ಜಾಂಗ್ ಉನ್ ಮಿಸೈಲ್​ಗಳ ಮೇಲೆ ಮಿಸೈಲ್ ಉಡಾಯಿಸ್ತಾನೆ ಇದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆಯನ್ನ ಹಲವು ಬಾರಿ ನೀಡಿಯಾಗಿದೆ. ಮೂರನೇ ಮಹಾಯುದ್ಧ ಅನ್ನೋದು ಯಾವಾಗ, ಹೇಗೆ ಬೇಕಾದ್ರೂ ಸಂಭವಿಸಬಹುದು. ನಿಮಗೆ ಗೊತ್ತಿರ್ಲಿ, ಈ ಭೂಮಿಯಲ್ಲಿ 15,000 ಕ್ಕೂ ಅಧಿಕ ಅಣುಬಾಂಬ್​​ಗಳನ್ನ ಸಂಗ್ರಹಿಸಿಡಲಾಗಿದೆ. ಇವೆಲ್ಲವನ್ನೂ ಅಂಡರ್​​ಗ್ರೌಂಡ್​​ನಲ್ಲೇ ಸಂರಕ್ಷಿಸಿಡಲಾಗಿದೆ. ಈ ಪೈಕಿ 10% ನಷ್ಟು ಅಣುಬಾಂಬ್ ಭಾರತ, ಪಾಕಿಸ್ತಾನ, ಫ್ರಾನ್ಸ್, ಬ್ರಿಟನ್, ಇಸ್ರೇಲ್, ಚೀನಾದಲ್ಲಿವೆ. ಉಳಿದ 90% ಅಣ್ವಸ್ತ್ರ ಅಮೆರಿಕ ಮತ್ತು ರಷ್ಯಾ ಬಳಿ ಇವೆ. ಅಂದ್ರೆ ಅಣ್ವಸ್ತ್ರ ಸಮರ ನಡೀಬಹುದಾ? ಇಲ್ವಾ? ಅನ್ನೋದನ್ನ ಅಮೆರಿಕ ಮತ್ತು ರಷ್ಯಾವೇ ನಿರ್ಧರಿಸಬಹುದು. ಒಂದು ವೇಳೆ ಅಣ್ವಸ್ತ್ರ ಸಮರ ನಡೆದ್ರೆ ಇಡೀ ಜಗತ್ತೇ ಸರ್ವನಾಶವಾಗಬಹುದಾ? ಮೋಸ್ಟ್ ಪ್ರಾಬಬ್ಲಿ..ಆದ್ರೆ ಕೆಲ ಬಿಲಿಯನೇರ್​ಗಳು ಬದುಕುಳಿಯಬಹುದೋ ಏನೋ. ಆ ಕಾರಣಕ್ಕಾಗಿಯೇ ಕೆಲ ಬಿಲಿಯನೇರ್​ಗಳು ಈಗ ಅಂಡರ್​​ಗ್ರೌಂಡ್ ಬಂಕರ್​ಗಳನ್ನ ನಿರ್ಮಿಸ್ತಾ ಇರೋದು. ಇದು ಡೂಮ್​​ಸ್ಡೇ ಹೆಸರಿನ ಬಂಕರ್​​ಗಳಾಗಿದ್ದು ಸರ್ವೈವಲ್​​ಗೆ ಅಂತಾನೆ ಇರೋ ಬಂಕರ್​​ಗಳಿವು. ಇಂಥಾ ಬಂಕರ್​ಗಳನ್ನ ಬಹುತೇಕ ಬೆಟ್ಟಗಳ ಕೆಳಭಾಗದಲ್ಲೇ ನಿರ್ಮಿಸಲಾಗುತ್ತೆ. ಜಗತ್ತಿನಲ್ಲೇ ಎಂಥದ್ದೇ ಪರಿಸ್ಥಿತಿ ನಿರ್ಮಾಣವಾದ್ರೂ ಈ ಬಂಕರ್​​ನೊಳಗಿದ್ರೆ ಬಚಾವಾಗಬಹುದಂತೆ. ಅಮೆರಿಕ-ರಷ್ಯಾ ನಡುವಿನ ಕೋಲ್ಡ್ ವಾರ್​ ಸಂದರ್ಭದಲ್ಲಿ ಎರಡೂ ದೇಶಗಳ ಮಧ್ಯೆ ಅಣ್ವಸ್ತ್ರ ತಯಾರಿಕೆ ವಿಚಾರವಾಗಿ ಭಾರಿ ರೇಸ್ ನಡೆದಿತ್ತು. ಅಮೆರಿಕಕ್ಕಿಂತ ಹೆಚ್ಚು ಅಣುಬಾಂಬ್ ನಮ್ಮ ಬಳಿ ಇರಬೇಕು ಅಂತಾ ರಷ್ಯಾ ಜಿದ್ದಿಗೆ ಬಿದ್ರೆ, ರಷ್ಯಾಗಿಂತ ಹೆಚ್ಚು ಅಣ್ವಸ್ತ್ರ ತನ್ನ ಬಳಿ ಇರ್ಬೇಕು ಅಂತಾ ಅಮೆರಿಕ ಹಠಕ್ಕೆ ಬಿದ್ದಿತ್ತು. ಈ ಮೂಲಕ ಮಿಲಿಟರಿ ಪವರ್​ ಜಾಸ್ತಿಯಾಗಿ ಪೊಲಿಟಿಕಲೀ ಇನ್ನಷ್ಟು ಬಲಿಷ್ಠವಾಗಬೇಕು. ಈ ಮೂಲಕ ಜಗತ್ತನ್ನೇ ಡಾಮಿನೇಟ್ ಮಾಡಬೇಕು ಅನ್ನೋದು ಎರಡೂ ದೇಶಗಳ ಟಾರ್ಗೆಟ್ ಆಗಿತ್ತು. 1960ರ ಸಂದರ್ಭದಲ್ಲಿ ಅಮೆರಿಕದ ಶೇಕಡಾ 70ರಷ್ಟು ಜನರು ರಷ್ಯಾ ಯಾವಾಗ ಬೇಕಿದ್ರೆ ನಮ್ಮ ಮೇಲೆ ನ್ಯೂಕ್ಲಿಯರ್ ಅಟ್ಯಾಕ್ ಮಾಡಬಹುದು ಅಂದುಕೊಂಡಿದ್ರು. ಅದೇ ರೀತಿ ರಷ್ಯಾ ಜನರು ಕೂಡ ಅಮೆರಿಕ ಯಾವಾಗ ಬೇಕಿದ್ರೂ ಅಣ್ವಸ್ತ್ರ ಅಟ್ಯಾಕ್ ಮಾಡಬಹುದು ಅಂದುಕೊಂಡಿದ್ರು. ಹೀಗಾಗಿ ಎರಡೂ ದೇಶಗಳ ಜನರು ತಮ್ಮ ತಮ್ಮ ಮನೆಗಳ ಕೆಳ ಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಸುರಂಗ ತೋಡಿ ಅಂಡರ್​ಗ್ರೌಂಡ್​​ ಬಂಕರ್​ಗಳನ್ನ ನಿರ್ಮಾಣ ಮಾಡಿಕೊಂಡಿದ್ರು. ಒಂದು ವೇಳೆ ಅಣ್ವಸ್ತ್ರ ಸಮರದಂಥಾ ಪರಿಸ್ಥಿತಿ ಬಂದ್ರೆ ಅಂಡರ್​​ಗ್ರೌಂಡ್​​ನಲ್ಲಿ ಆಶ್ರಯ ಪಡೆಯೋಕೆ ಜನರು ಮೊದಲೇ ಸಿದ್ಧತೆ ಮಾಡಿಕೊಂಡಿದ್ರು. ಹಾಗೆಯೇ ಅಲ್ಲಿನ ಸರ್ಕಾರಗಳು ದೇಶದ ವಿವಿಧೆಡೆ ಬೆಟ್ಟ ಪ್ರದೇಶಗಳಲ್ಲಿ, ರಿಮೋಟ್ ಏರಿಯಾಗಳಲ್ಲಿ ಅಂಡರ್​ಗ್ರೌಂಡ್ ಬಂಕರ್​​ಗಳನ್ನ ನಿರ್ಮಿಸಿ ಅದ್ರೊಳಗೆ ಅಗತ್ಯ ವಸ್ತುಗಳನ್ನ ಸಂಗ್ರಹಿಸಿಟ್ಟುಕೊಳ್ತಾರೆ. ಆದ್ರೆ ಅಣ್ವಸ್ತ್ರ ಯುದ್ಧವಂತೂ ಆಗಿಲ್ಲ. ಹೀಗಾಗಿ 2000ನೇ ಇಸವಿ ಬಳಿಕ ಕೆಲ ಬಂಕರ್​ಗಳನ್ನ ನಾಶ ಮಾಡಲಾಗುತ್ತೆ. ಇನ್ನೂ ಕೆಲ ಬಂಕರ್​ಗಳನ್ನ ಇತರೆ ಕೆಲಸಗಳಿಗೆ ಬಳಸಲಾಗುತ್ತೆ. ಮತ್ತೊಂದಷ್ಟನ್ನ ಹಾಗೆಯೇ ಖಾಲಿ ಬಿಡಲಾಗುತ್ತೆ. ಅಂದ್ರೆ ಈ ಬಂಕರ್​​ ಕಾನ್ಸೆಪ್ಟ್​ ಆಲ್​​ಮೋಸ್ಟ್ ಫೇಲ್ ಆಗುತ್ತೆ. ಈ ಬಂಕರ್​ಗಳಿಂದ ಏನೂ ಯೂಸ್ ಇಲ್ಲ ಅಂತಾ ಅನ್ನಿಸಿಬಿಡುತ್ತೆ. ಆದ್ರೆ ಕೆಲ ಪ್ರೈವೇಟ್ ಕಂಪನಿಗಳು ಇದೇ ಪಾಳು ಬಿದ್ದ ಬಂಕರ್​ಗಳನ್ನ ಪರ್ಚೇಸ್ ಮಾಡ್ತಾವೆ. ಬಳಿಕ ತಮ್ಮದೇ ಶೈಲಿಯನ್ನ ಆ ಬಂಕರ್​ಗಳನ್ನ ಡೆವಲಪ್ ಮಾಡ್ತಾರೆ. ಸದ್ಯ ಜಗತ್ತಿನಾದ್ಯಂತ ನ್ಯೂಕ್ಲಿಯರ್ ವಾರ್ ಜೊತೆಗೆ ಗ್ಲೋಬಲ್ ಪ್ಯಾಂಡೆಮಿಕ್, ಬಯೋ ವಾರ್, ಭಯೋತ್ಪಾದನೆ, ಸುನಾಮಿಯ ಭೀತಿ ಇದ್ದೇ ಇದೆ. ಹೀಗಾಗಿ ಜನರ ರಕ್ಷಣೆಗೆ ಮತ್ತೊಮ್ಮೆ ಇದೇ ಅಂಡರ್​ಗ್ರೌಂಡ್ ಬಂಕರ್​ಗಳು ಅನಿವಾರ್ಯವಾಗಬಹುದು. ಈಗಾಗ್ಲೇ ಉಕ್ರೇನ್ ಮತ್ತು ಇಸ್ರೇಲ್ ಯುದ್ಧದಲ್ಲಿ ನಾವಿದನ್ನ ನೋಡಿದ್ದೀವಿ. ಉಕ್ರೇನ್ ಮತ್ತು ಇಸ್ರೇಲಿಗರು ರಾಕೆಟ್ ಅಟ್ಯಾಕ್ ಆಗೋವಾಗ ಈಗಲೂ ಅಂಡರ್​​ಗ್ರೌಂಡ್​ ಬಂಕರ್​ಗಳಲ್ಲೇ ಆಶ್ರಯ ಪಡೆದುಕೊಳ್ತಾ ಇರೋದು.

ಅಂಡರ್​ಗ್ರೌಂಡ್ ಬಂಕರ್ ಎಂದ ತಕ್ಷಣ ಸಾಮಾನ್ಯವಾಗಿ ನಮಗೆ ನೆನಪಾಗೋದು ಇಡೀ ಕತ್ತಲಾಗಿರುತ್ತೆ. ಅಲ್ಲಲ್ಲಿ ಒಂದಷ್ಟು ಬಲ್ಬ್​​ಗಳಿರುತ್ತೆ. ಮತ್ತೊಂದಷ್ಟು ಆಹಾರದ ಡಬ್ಬಿಗಳಿರುತ್ತೆ. ಇದೇ ತಲೆಗೆ ಬರೋದು. ಆದ್ರೆ ಈ ಬಂಕರ್​ಗಳನ್ನ ಖರೀದಿಸಿರೋ ಪ್ರೈವೇಟ್ ಕಂಪನಿಗಳ ಕಾನ್ಸ್​​ಪ್ಟೇ ಬೇರೆ ಇದೆ. ಭೂತದ ಬಂಗಲೆಯಂತಿದ್ದ ಈ ಬಂಕರ್​ಗಳನ್ನ ಕಂಪ್ಲೀಟ್ ಲಕ್ಸೂರಿಯಸ್ ಬಂಕರ್​ಗಳನ್ನಾಗಿ ಕನ್ವರ್ಟ್ ಮಾಡ್ತಾರೆ. ಈಗ ಅವುಗಳನ್ನ ಕೋಟಿ ಕೋಟಿ ರೂಪಾಯಿಗೆ ಸೇಲ್ ಮಾಡ್ತಾ ಇವೆ. ಕೆಲ ಬಿಲಿಯನೇರ್​ಗಳು ಇದೇ ಐಷಾರಾಮಿ ಬಂಕರ್​​ಗಳನ್ನ ಖರೀದಿಸ್ತಿದ್ದಾರೆ. ಇನ್ನೂ ಕೆಲ ಬಿಲಿಯನೇರ್ಸ್​ಗಳು ತಾವೇ ಜಾಗವನ್ನ ಸೆಲೆಕ್ಟ್ ಮಾಡಿ ಅಲ್ಲಿ ಇಂಥದ್ದೇ ಹೈಫೈ ಅಂಡರ್​ಗ್ರೌಂಡ್​ ಬಂಕರ್​​ಗಳನ್ನ ಕಟ್ಟಿಸ್ತಿದ್ದಾರೆ. ಅದ್ರಲ್ಲೂ ಅಮೆರಿಕದ ವೋಸ್ ಗ್ರೂಪ್ ಮತ್ತು ರೈಸಿಂಗ್ ಎಸ್ ಕಂಪನಿ ಬಂಕರ್​ ನಿರ್ಮಾಣದಲ್ಲಿ ಎಕ್ಸ್​​ಪರ್ಟ್​ಗಳಾಗಿವೆ. ಈ ಕಂಪನಿಗಳು ಹೇಳಿಕೊಳ್ತಿರೋ ಪ್ರಕಾರ ಸೂರ್ಯನ ಜ್ವಾಲೆಯಿಂದ ಹಿಡಿದು ಬಯೋ ವಾರ್, ಕೊರೊನಾದಂಥಾ ಸಾಂಕ್ರಾಮಿಕ ವೈರಸ್ ಹಾಗೆಯೇ ನ್ಯೂಕ್ಲಿಯರ್​ ವಾರ್ ಸಂದರ್ಭದಲ್ಲೂ ರಕ್ಷಣೆ ಮಾಡೋ ಕೆಪಾಸಿಟಿ ಈ ಬಂಕರ್​ಗಳಿಗೆ ಇವೆಯಂತೆ.

ಈ ಬಂಕರ್​ಗಳು ಯಾವುದೇ ಫೈವ್​ ಸ್ಟಾರ್​​ ಹೋಟೆಲ್, ಐಷಾರಾಮಿ ಬಂಗಲೆಗಳಿಗೂ ಕಡಿಮೆ ಇರೋದಿಲ್ಲ. ಸೇಮ್​​ ಫೆಸಿಲಿಟಿ ಈ ಅಂಡರ್​ಗ್ರೌಂಡ್ ಬಂಕರ್​​ನ ಒಳಗೂ ಇರುತ್ತೆ. ನೀರು, ಕರೆಂಟ್ ಇವೆಲ್ಲವೂ ಹೇಗೂ ಇದ್ದೇ ಇರುತ್ತೆ ಬಿಡಿ. ಗ್ರೀನ್​ ಹೌಸ್ ಅನ್ನೋ ಕಾಂಪ್ಲೆಕ್ಸ್​​ನ್ನ ಕೂಡ ಈ ಬಂಕರ್​​ನೊಳಗೆ ನಿರ್ಮಿಸ್ತಾರೆ. ಅಗತ್ಯ ಆಹಾರ ಬೆಳೆಗಳನ್ನ, ತರಕಾರಿಗಳನ್ನ ಬೆಳೆಯೋ ವ್ಯವಸ್ಥೆ ಇದ್ರಲ್ಲಿರುತ್ತೆ. ಹಾಗೆಯೇ ಬೆಳೆಗಳಿಗೆ ನೀರು ಸಪ್ಲೈ ಸಿಸ್ಟಮ್ ಕೂಡ ಇರುತ್ತೆ. ಇನ್ನು ಸ್ವಿಮ್ಮಿಂಗ್​ಪೂಲ್, ಜಿಮ್, ವಾಹನಗಳನ್ನ ಪಾರ್ಕ್ ಮಾಡೋಕೆ ಗ್ಯಾರೇಜ್ ಇವೆಲ್ಲವೂ ಇದ್ದೇ ಇರುತ್ತೆ. ಏಕಕಾಲಕ್ಕೆ ಇದ್ರ ಒಳಗೆ 50ಕ್ಕೂ ಹೆಚ್ಚು ಮಂದಿ ಉಳಿದುಕೊಳ್ಳಬಹುದು.

ಯುರೋಪ್​ನ ಚೆಕ್​ ರಿಪಬ್ಲಿಕ್​ನಲ್ಲಿರೋ ಬೆಟ್ಟವೊಂದರ ಕೆಳ ಭಾಗದಲ್ಲಿ ದಿ ಒಪೀಡಮ್ ಹೆಸರಿನ ಜಗತ್ತಿನ ಅತೀ ದೊಡ್ಡ ಬಂಕರ್ ಇದೆ. 1984ರಲ್ಲಿ ಇದನ್ನ ರಷ್ಯಾ ಈ ಬಂಕರ್​ನ್ನ ನಿರ್ಮಿಸಿತ್ತು. ಅದ್ರೊಳಗೆ 10 ವರ್ಷಗಳಿಗೆ ಆಗುವಷ್ಟು ಆಹಾರ, ನೀರು, ಔಷಧಗಳನ್ನ ಸಂಗ್ರಹಿಸಿಡಲಾಗಿತ್ತು. ​​ಇನ್ನು ಇಂಥದ್ದೇ ಬಂಕರ್​ಗಳ ನಿರ್ಮಾಣಕ್ಕಾಗಿ ಬಿಲ್ ಗೇಟ್ಸ್, ಕಿಮ್ ಕರ್ದಾಶಿಯನ್, ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಸೇರಿದಂತೆ ಹಲವು ಬಿಲಿಯನೇರ್ಸ್​ಗಳು ಈಗಾಗ್ಲೇ ಜಾಗ ಬುಕ್ ಮಾಡಿದ್ದಾರೆ. ಇನ್ನೂ ಕೆಲವರು ರೆಡಿಯಾಗಿರೋ ಬಂಕರ್​ಗಳನ್ನ ಖರೀದಿಸಿದ್ದಾರೆ. ಆದ್ರೆ ಇಂಥಾ ಬಂಕರ್​ಗಳ ನಿರ್ಮಾಣಕ್ಕೆ ಕಂಪನಿಗಳು ಮತ್ತು ಬಿಲಿಯನೇರ್​​ಗಳು ಹೆಚ್ಚು ಪ್ರಿಫರ್ ಮಾಡ್ತಾ ಇರೋ ದೇಶ ಅಂದ್ರೆ ಅದು ನ್ಯೂಜಿಲ್ಯಾಂಡ್. ಹೇಳಿಕೇಳಿ ನ್ಯೂಜಿಲ್ಯಾಂಡ್ ಒಂದು ದ್ವೀಪ ರಾಷ್ಟ್ರ. ಸುತ್ತಲೂ ಸಮುದ್ರ ಆವರಿಸಿದೆ. ಅಲ್ಲಿನ ಎತ್ತರದ ಪ್ರದೇಶಗಳಲ್ಲೇ ಅತೀ ಹೆಚ್ಚು ಐಷಾರಾಮಿ ಅಂಡರ್​​ಗ್ರೌಂಡ್ ಬಂಕರ್​ಗಳ ನಿರ್ಮಾಣವಾಗ್ತಾ ಇದೆ. ಅಂತೂ ಈ ಹಣವಂತರಿಗೆ ಇರೋವಷ್ಟು ಜೀವ ಭಯ ಇನ್ಯಾರಿಗೂ ಇಲ್ಲ. ಜೀವ ಉಳಿಸಿಕೊಳ್ಳೋದಕ್ಕೋಸ್ಕರವೇ ಈಗ ಅಂಡರ್​ಗ್ರೌಂಡ್ ಬಂಕರ್​ಗಳ ಮೊರೆ ಹೋಗಿದ್ದಾರೆ. ನೆಲದ ಮೇಲೆ ಮುಗಿಲೆತ್ತರದ ಕಟ್ಟಡಗಳನ್ನ ಕಟ್ಟಿರೋದಲ್ದೆ, ಈಗ ನೆಲದ ಆಳದಲ್ಲೂ ಕೋಟೆ ಕಟ್ಟೋಕೆ ಶುರು ಮಾಡಿದ್ದಾರೆ.

Sulekha