ಟಿಎಂಸಿ ಅಧಿನಾಯಕಿ ಮೈತ್ರಿಯಿಂದ ಹಿಂದೆ ಸರಿದಿದ್ದೇಕೆ..? – ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಹೋರಾಡುವ ನಿರ್ಧಾರಕ್ಕೆ ಬಂದಿದ್ದೇಕೆ..?
ಹೊಂದಾಣಿಕೆ ಮಂತ್ರದ ಮೂಲಕ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದ ಇಂಡಿಯಾ ಹೆಸರಿನ ಮಹಾಮೈತ್ರಿ ಕೂಟಕ್ಕೆ ಬರಸಿಡಿಲು ಬಡಿದಿದೆ. ಕ್ಷೇತ್ರಗಳ ಹಂಚಿಕೆ ಹೊತ್ತಲ್ಲೇ ವಿಪಕ್ಷಗಳ ಒಗ್ಗಟ್ಟು ಒಡೆದು ಹೋಳಾಗಿದೆ. ಬಲಿಷ್ಠ ಪಕ್ಷಗಳಾದ ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಸಿಂಗಲ್ಲಾಗೇ ಸಮರಕ್ಕೆ ಇಳಿಯೋದಾಗಿ ಘೋಷಣೆ ಮಾಡಿವೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಲಯನ್ಸ್ಗೆ ಆರಂಭದಲ್ಲೇ ಹಾರ್ಟ್ ಅಟ್ಯಾಕ್ ಆದಂತಾಗಿದೆ. ಚುನಾವಣೆ ಮೇಲೆ ಈ ಬೆಳವಣಿಗೆ ಪರಿಣಾಮ ಬೀರುತ್ತಾ..? ಬಿಜೆಪಿಗೆ ಲಾಭವಾಗುತ್ತಾ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಮೈತ್ರಿ ಠುಸ್ –ಲೋಕ ಸಮರದಲ್ಲಿ ಏಕಾಂಗಿ ಸ್ಪರ್ಧೆ ಎಂದ ಮಮತಾ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಭಾರತದ ಎರಡು ಬಲಿಷ್ಠ ಪ್ರಾದೇಶಿಕ ಪಕ್ಷಗಳು. ಪಶ್ಚಿಮ ಬಂಗಾಳದಲ್ಲಿ ಭದ್ರವಾಗಿ ಬೇರೂರಿರುವ ಟಿಎಂಸಿಯೇ ಅಧಿಕಾರದಲ್ಲಿದೆ. ಪ್ರಭಾವಿ ನಾಯಕಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ದೆಹಲಿಯಲ್ಲೇ ಹುಟ್ಟಿ ವಿಜಯಯಾತ್ರೆ ಆರಂಭಿಸಿದ್ದ ಆಮ್ ಆದ್ಮಿ ಪಕ್ಷ ಈಗ ಪಂಜಾಬ್ ನಲ್ಲೂ ಗೆಲುವಿನ ಕೇಕೆ ಹಾಕಿ ಅಲ್ಲಿಯೂ ರಾಜ್ಯದ ಚುಕ್ಕಾಣಿ ಹಿಡಿದಿದೆ. ಇದೀಗ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ. ಈ ಬಗ್ಗೆ ಖುದ್ದು ಪಂಜಾಬ್ ಸಿಎಂ ಭಗವಂತ ಮಾನ್ ಘೋಷಿಸಿದ್ದಾರೆ.
‘ಕೈ’ ಬಿಟ್ಟ ಮಮತಾ ಬ್ಯಾನರ್ಜಿ!
ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಪ್ಯಾನ್ ಇಂಡಿಯಾ ಮೈತ್ರಿಯನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ 2019ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ 22 ಕ್ಷೇತ್ರ ಹಾಗೂ ಬಿಜೆಪಿ ಪಕ್ಷ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಮ್ಯುನಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಿದ್ರೂ ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 10 ರಿಂದ 12 ಲೋಸಕಭೆ ಸೀಟುಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಮಮತಾ ಬ್ಯಾನರ್ಜಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಆದ್ರೆ ಮಮತಾ ಬ್ಯಾನರ್ಜಿ ಮಾತ್ರ ಕಾಂಗ್ರೆಸ್ಗೆ ತಮ್ಮ ರಾಜ್ಯದಲ್ಲಿ ಅಸ್ತಿತ್ವ ಇಲ್ಲ. 2 ಕ್ಷೇತ್ರಗಳನ್ನ ಮಾತ್ರ ಬಿಟ್ಟುಕೊಡಬಹುದು ಎಂದಿದ್ದರು. ಇದೇ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಸಾಕಷ್ಟು ಚರ್ಚೆಯೂ ಆಗಿತ್ತು.
ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಂಡಿರುವ ಮಮತಾ ಬ್ಯಾನರ್ಜಿ ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ನನಗೂ ಕಾಂಗ್ರೆಸ್ಗೂ ಯಾವ ಸಂಬಂಧವೂ ಇಲ್ಲ. ನಾನು ಅವರಿಗೆ ಏನೆಲ್ಲಾ ಪ್ರಸ್ತಾವನೆಗಳನ್ನು ನೀಡಿದ್ದೇನೋ, ಅವರು ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ಒಂಟಿಯಾಗಿ ಹೋರಾಡಲಿದ್ದೇವೆ. ಚುನಾವಣೆ ಬಳಿಕ ರಾಷ್ಟ್ರ ಮಟ್ಟದ ಮೈತ್ರಿಯನ್ನು ನಿರ್ಧರಿಸಲಿದ್ದೇವೆ ಎಂದಿದ್ದಾರೆ. ಹಾಗೇ ಗುರುವಾರ ಬಂಗಾಳವನ್ನು ಪ್ರವೇಶಿಸಲಿರುವ ಕಾಂಗ್ರೆಸ್ನ ಭಾರತ ಜೋಡೋ ನ್ಯಾಯ ಯಾತ್ರೆ ಮತ್ತು ಸಂಸದ ರಾಹುಲ್ ಗಾಂಧಿ ವಿರುದ್ಧ ಕೂಡ ಕಿಡಿ ಕಾರಿದ್ದಾರೆ. ಜೋಡೋ ಯಾತ್ರೆ ಮೂಲಕ ನನ್ನ ರಾಜ್ಯಕ್ಕೆ ಬರುತ್ತಿದ್ದಾರೆ. ಆದರೆ ನನಗೆ ಮಾಹಿತಿ ನೀಡುವ ಸೌಜನ್ಯವೂ ಅವರಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಪಂಜಾಬ್ ನಲ್ಲೂ ಬಿಗ್ ಶಾಕ್ ತಟ್ಟಿದೆ.
ಪಂಜಾಬ್ ನಲ್ಲೂ ‘ಕೈ’ಕೊಟ್ಟ AAP!
ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಎಎಪಿ ಘೋಷಣೆ ಮಾಡಿದೆ. ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲಾ 13 ಲೋಕಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಈಗಾಗಲೇ ಚುನಾವಣೆ ಕಣಕ್ಕಿಳಿಸಲು 40 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲು ಸಮೀಕ್ಷೆಯನ್ನು ನಡೆಸುತ್ತೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಪಂಜಾಬ್ ಎಎಪಿಯ ಪ್ರಸ್ತಾವನೆಗೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಮಹಾಮೈತ್ರಿ ಕೂಟ ರಚನೆ ವೇಳೆಯೇ ವಿಪಕ್ಷಗಳ ನಡುವೆ ಹಲವು ವಿಚಾರಗಳಲ್ಲಿ ಬಿರುಕು ಮೂಡಿತ್ತು. ಅಧ್ಯಕ್ಷರು, ಸಂಚಾಲಕರ ಆಯ್ಕೆ ವೇಳೆಯೂ ಅಸಮಾಧಾನ ತಲೆದೋರಿತ್ತು. ಇದೀಗ ಸೀಟು ಹಂಚಿಕೆ ಹೊತ್ತಿಗೆ ದೊಡ್ಡ ಕಂದಕವೇ ಸೃಷ್ಟಿಯಾಗಿದೆ. ಎರಡು ಪ್ರಬಲ ಪಕ್ಷಗಳೇ ಮೈತ್ರಿಯಿಂದ ಹಿಂದೆ ಸರಿದಿವೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮೊದಲೇ ಇಂಡಿಯಾ ಒಕ್ಕೂಟ ಅಲುಗಾಡುತ್ತಿದೆ. ಕಾಂಗ್ರೆಸ್ ನಂಬಿ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ಆತಂಕ ಶುರುವಾಗಿದೆ. ಅತ್ತ ಸ್ಪರ್ಧಿಸಲು ಸ್ಥಾನಗಳೂ ಇಲ್ಲ, ಇತ್ತ ಮೈತ್ರಿ ಇಲ್ಲದಂತಾಗುವ ಆತಂಕ ಶುರುವಾಗಿದೆ.