ಭಾರತವನ್ನ ನೋಡಿ ಕಲಿಯಬೇಕು ಎಂದು ಸೌದಿ ಅರೇಬಿಯಾದ ರಾಜಕುಮಾರ ಹೇಳಿದ್ದು ಯಾಕೆ?
ಯುದ್ಧದಾಹಿಗಳ ಕಿವಿ ಹಿಂಡಿದ ಸೌದಿ ಅರೇಬಿಯಾದ ರಾಜಕುಮಾರ

ಭಾರತವನ್ನ ನೋಡಿ ಕಲಿಯಬೇಕು ಎಂದು ಸೌದಿ ಅರೇಬಿಯಾದ ರಾಜಕುಮಾರ ಹೇಳಿದ್ದು ಯಾಕೆ?ಯುದ್ಧದಾಹಿಗಳ ಕಿವಿ ಹಿಂಡಿದ ಸೌದಿ ಅರೇಬಿಯಾದ ರಾಜಕುಮಾರ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇಡೀ ವಿಶ್ವವನ್ನೇ ಇಬ್ಭಾಗ ಮಾಡುತ್ತಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನ್​ನಂಥ ದೊಡ್ಡ ದೊಡ್ಡ ರಾಷ್ಟ್ರಗಳು ಇಸ್ರೇಲ್ ಬೆನ್ನಿಗೆ ನಿಂತಿವೆ. ಮತ್ತೊಂದೆಡೆ ರಷ್ಯಾ, ಚೀನಾ, ಇರಾನ್, ಈಜಿಪ್ಟ್, ಉತ್ತರಕೊರಿಯಾದಂಥ ದೇಶಗಳು ಪ್ಯಾಲೆಸ್ತೀನ್​ಗೆ ಬೆಂಬಲ ಸೂಚಿಸಿವೆ. ಎರಡು ರಾಷ್ಟ್ರಗಳ ನಡುವಿನ ಯುದ್ಧ ಈಗ ಇಡೀ ವಿಶ್ವಕ್ಕೆ ಹಬ್ಬುವ ಆತಂಕ ಎದುರಾಗಿದೆ. ಈ ಆತಂಕದ ನಡುವೆ ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಅಲ್-ಫೈಸಲ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಭಾರತವನ್ನ ನೋಡಿ ಕಲಿಯಬೇಕು ಎಂದು ಯುದ್ಧದಾಹಿಗಳ ಕಿವಿ ಹಿಂಡಿದ್ದಾರೆ. ಈ ಬಗ್ಗೆ ವಿಸ್ತ್ರತ ವರದಿ ಇಲ್ಲಿದೆ.

ಇದನ್ನೂ ಓದಿ:ಚಂದ್ರನತ್ತ ಜನರನ್ನ ಕಳುಹಿಸಲು ಮತ್ತೊಂದು ಹೆಜ್ಜೆ ಇಟ್ಟ ಚೀನಾ – ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಹಾರಿದ ಮಿಷನ್

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ರಾಕೆಟ್ ದಾಳಿ ನಡೆಸುವ ಮೂಲಕ  ಯುದ್ಧ ಶುರುವಾಗಿತ್ತು. ಅಂದಿನಿಂದ ಇಂದಿನವರೆಗೂ 6 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಪ್ಯಾಲೆಸ್ತೀನ್​ನ ಗಾಜಾಪಟ್ಟಿಯ ಕಟ್ಟಡಗಳೆಲ್ಲಾ ಧ್ವಂಸವಾಗಿ ಸ್ಮಶಾನದಂತಾಗಿದೆ. ಪುಟ್ಟ ಪುಟ್ಟ ಮಕ್ಕಳ ಮಾರಣಹೋಮ ನಡೆಯುತ್ತಿದ್ದು ಇಡೀ ವಿಶ್ವವೇ ಕದನವಿರಾಮಕ್ಕೆ ಒತ್ತಾಯಿಸುತ್ತಿವೆ. ಯುದ್ಧ ಮುಂದುವರಿದಿದ್ದೇ ಆದಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಪರ ನಾವಿದ್ದೇವೆ ಎಂದು ಹಲವು ರಾಷ್ಟ್ರಗಳು ಬಣಗಳಾಗಿ ಬೆಂಬಲಕ್ಕೆ ನಿಂತಿವೆ. ಆದ್ರೆ ಇಷ್ಟಾದ್ರೂ ಎರಡೂ ಕಡೆ ಯುದ್ಧದಾಹ ತೀರಿಲ್ಲ. ಇಡೀ ವಿಶ್ವವೇ ಇಬ್ಭಾಗವಾಗುತ್ತಿರುವಾಗ್ಲೇ ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಅಲ್-ಫೈಸಲ್ ನೀಡಿರುವ ಹೇಳಿಕೆ ಹಲ್​ಚಲ್ ಸೃಷ್ಟಿಸಿದೆ. ಭಾರತವನ್ನ ಉದಾಹರಣೆಯಾಗಿ ಕೊಟ್ಟು ಎರಡೂ ರಾಷ್ಟ್ರಗಳಿಗೆ ಬುದ್ಧಿ ಹೇಳಿದ್ದಾರೆ. ಸೌದಿ ದೊರೆಯ ಮಾತು ವಿಶ್ವಾದ್ಯಂತ ಭಾರೀ ಸದ್ದು ಮಾಡ್ತಿದೆ. ಭಾರತದ ಬಗ್ಗೆ ಚರ್ಚೆಯಾಗುತ್ತಿದೆ.

ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷದ ಕುರಿತು ಸೌದಿ ಅರೇಬಿಯಾ ರಾಜಕುಮಾರನ ಹೇಳಿಕೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಸೌದಿ ಅರೇಬಿಯಾ ಪ್ಯಾಲೆಸ್ತೀನ್​ಗೆ ಬೆಂಬಲ ನೀಡಬಹುದು, ಹಮಾಸ್ ಪರ ನಿಲ್ಲಬಹುದು ಎಂದು ಅಂದಾಜಿಸುತ್ತಿರುವಾಗಲೇ ಸೌದಿ ದೊರೆಯ ಹೇಳಿಕೆ ಸಂಚಲನ ಮೂಡಿಸಿದೆ. ಎರಡೂ ಕಡೆಯ ದಾಳಿಯನ್ನ ವಿರೋಧಿಸಿ ಜಗತ್ತಿಗೆ ಸ್ಪಷ್ಟ ಸಂದೇಶವೊಂದನ್ನ ಸಾರಿದ್ದಾರೆ. ಯುದ್ಧ ಎಂದಿಗೂ ಪರಿಹಾರವಲ್ಲ, ಇಲ್ಲಿ ಯಾರೂ ಗೆಲ್ಲೋದಿಲ್ಲ ಯಾರೂ ಸೋಲೋದಿಲ್ಲ. ಮುಗ್ಧ ಜನರು ಮಾತ್ರ ಬಲಿಯಾಗುತ್ತಾರೆ ಎನ್ನುವ ಮೂಲಕ ಯುದ್ಧದಿಂದಾಗುವ ಪರಿಣಾಮವನ್ನ ಜಗತ್ತಿನ ಮುಂದಿಟ್ಟಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯವನ್ನು ಉರುಳಿಸಿದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ಯಾಲೆಸ್ತೀನ್ ಮಾದರಿಯಾಗಿ ತೆಗೆದುಕೊಳ್ಳಬೇಕು. ಎಲ್ಲಾ ರಾಷ್ಟ್ರದ ಜನರು ಮಿಲಿಟರಿ ದಾಳಿಗೆ ಪ್ರತಿರೋಧ ಒಡ್ಡುವ ಹಕ್ಕು ಹೊಂದಿದ್ದಾರೆ. ಆದರೆ ಪ್ಯಾಲೆಸ್ತೀನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ನಾನು ಬೆಂಬಲಿಸುವುದಿಲ್ಲ. ಇದಕ್ಕೆ ಪರ್ಯಾಯ ಹೋರಾಟದ ಮಾರ್ಗಗಳನ್ನು ಕಂಡುಕೊಳ್ಳಬೇಕು. ಭಾರತ ಬ್ರಿಟಿಷರ ವಿರುದ್ಧ ಮತ್ತು ಪೂರ್ವ ಯುರೋಪಿನಲ್ಲಿ ಸೋವಿಯತ್ ಸಾಮ್ರಾಜ್ಯದ ವಿರುದ್ಧ ನಡೆದ ಹೋರಾಟಗಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಯನ್ನೂ ಖಂಡಿಸಿರುವ ಸೌದಿ ಪ್ರಿನ್ಸ್, ಗಾಜಾದ ಜನತೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಇತ್ತ ಹಮಾಸ್ ಕೂಡ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವುದನ್ನು ನಾನು ಖಂಡಿಸುತ್ತೇನೆ. ಮುಗ್ಧ ಮಕ್ಕಳು, ಮಹಿಳೆಯರು ಮತ್ತು ಹಿರಿಯರನ್ನು ಕೊಲ್ಲುವುದನ್ನು ಇಸ್ಲಾಮ್ ಒಪ್ಪಿವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದರ ವಿರುದ್ಧವೂ ಕಿಡಿಕಾರಿದ ಅವರು ಇಸ್ರೇಲ್-ಹಮಾಸ್ ಸಂಘರ್ಷವನ್ನು ಖಂಡಿಸಿದ್ದಾರೆ.

ಸೌದಿ ದೊರೆಯ ಈ ಹೇಳಿಕೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಅಲ್ ಫೈಸಲ್ ಸೌದಿ ದೊರೆ ಆಗುವ ಮುನ್ನ 24 ವರ್ಷಗಳ ಕಾಲ ಸೌದಿ ಗುಪ್ತಚರ ಸಂಸ್ಥೆ ಅಲ್ ಮುಖಬಾರತ್ ಅಲ್ ಅಮ್ಮಾವನ್ನು ಮುನ್ನಡೆಸಿದರು. ಹಾಗೇ ಲಂಡನ್ ಮತ್ತು ಯುಎಸ್‌ ದೇಶಗಳ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದವರು. ಹೂಸ್ಟನ್‌ನಲ್ಲಿರುವ ಯುಎಸ್ ರೈಸ್ ವಿಶ್ವವಿದ್ಯಾಲಯದಲ್ಲಿ ಯುದ್ಧದ ಬಗ್ಗೆ ಮಾತನಾಡುವಾಗ ತಮ್ಮ ಈ ಹೇಳಿಕೆಯನ್ನ ನೀಡಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಉದಾಹರಣೆಯನ್ನು ಉಲ್ಲೇಖಿಸಿದ್ದು, ಅವರ ಈ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಶೇರ್ ಆಗ್ತಿದೆ. ಭಾರತದ ಮಾಧ್ಯಮಗಳಲ್ಲೂ ಸೌದಿ ದೊರೆಯ ಹೇಳಿಕೆ ಬಗ್ಗೆ ಸುದ್ದಿಯಾಗಿದೆ. ರಾಷ್ಟ್ರೀಯ ಪತ್ರಿಕೆಗಳಾದ ಹಿಂದೂಸ್ತಾನ್ ಟೈಮ್ಸ್​, ದಿ ಟೈಮ್ಸ್ ಆಫ್ ಇಂಡಿಯಾ, ಮಿಂಟ್, ಎನ್​ಡಿ ಟಿವಿ ಸೇರಿದಂತೆ ಬಹುತೇಕ ವೆಬ್​ಸೈಟ್​ಗಳಲ್ಲಿ ಈ ಬಗ್ಗೆ ಸುದ್ದಿ ಮಾಡಲಾಗಿದೆ. ಹಿಂದೂಸ್ತಾನ್ ಟೈಮ್ಸ್​​ನಲ್ಲಿ ಸೌದಿ ರಾಜಕುಮಾರನ ಹೇಳಿಕೆಯನ್ನ ವಿಶ್ಲೇಷಿಸಲಾಗಿದೆ. ದಾಳಿಗೊಳಗಾದ ಎಲ್ಲಾ ರಾಷ್ಟ್ರದ ಜನರಿಗೂ ದಾಳಿಯನ್ನ ವಿರೋಧಿಸುವ ಹಕ್ಕಿದೆ. ಹಮಾಸ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ಯಾರೂ ವೀರಲಿಲ್ಲ. ಆದರೆ ಬಲಿಪಶುಗಳು ಮಾತ್ರ ಎನ್ನುವ ಮೂಲಕ ಯುದ್ಧದ ಕಟುಸತ್ಯವನ್ನ ತೆರೆದಿಟ್ಟಿದ್ದಾರೆ.

ಯುದ್ಧದ ನಂತರ ಸೌದಿ ಅರೇಬಿಯಾ ಹಮಾಸ್ ಪರ ನಿಲ್ಲುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದ್ರೆ ಸೌದಿ ಪ್ರಿನ್ಸ್, ಹಮಾಸ್​ ಬಂಡುಕೋರರ ದಾಳಿಯನ್ನೂ ತೀವ್ರವಾಗಿ ಖಂಡಿಸಿದ್ದಾರೆ. ಹಮಾಸ್‌ನ ಕೃತ್ಯಗಳು ನಾಗರಿಕರಿಗೆ ಹಾನಿಯುಂಟು ಮಾಡಿದ್ದು ಇಸ್ಲಾಮಿಕ್ ಆದೇಶಗಳಿಗೆ ವಿರುದ್ಧವಾಗಿವೆ. ಅವರ ದಾಳಿಯಲ್ಲಿ ಹಲವರು ಕೊಲ್ಲಲ್ಪಟ್ಟಿದ್ದಾರೆ. ನೂರಾರು ನಾಗರಿಕರು ಅಪಹರಣಕ್ಕೆ ಒಳಗಾಗಿದ್ದಾರೆ. ಹಾಗೂ ಇಸ್ರೇಲ್ ಸೇನೆ  ಗಾಜಾದಲ್ಲಿ ಮುಗ್ಧ ಪ್ಯಾಲೇಸ್ತೀನಿಯನ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿ ಕೊಲ್ಲುತ್ತಿದೆ. ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ತೀನ್​ಯನ್ ಮಕ್ಕಳು, ಮಹಿಳೆಯರು ಮತ್ತು ಪುರುಷರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಇಸ್ರೇಲ್ ಪರ ನಿಂತಿರುವ ಅಮೆರಿಕವನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು ಅಮೆರಿಕದ ಮಾಧ್ಯಮಗಳು ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯನ್ನ ಪ್ರಚೋದಿತ ದಾಳಿ ಎನ್ನುತ್ತಿವೆ. ಆದರೆ ಮುಕ್ಕಾಲು ಶತಮಾನದಿಂದ ಪ್ಯಾಲೆಸ್ತೀನ್ ಜನತೆಗೆ ಇಸ್ರೇಲ್ ಮಾಡಿದ್ದಕ್ಕಿಂತ ಇನ್ನೇನು ಪ್ರಚೋದನೆ ಬೇಕು ಎನ್ನುವ ಮೂಲಕ ಇಸ್ರೇಲ್ ನಡೆಯನ್ನೂ ಖಂಡಿಸಿದ್ದಾರೆ. ಎಲ್ಲಾ ಮಿಲಿಟರಿ ಆಕ್ರಮಿತ ಜನರಿಗೆ ಆಕ್ರಮಣವನ್ನು ವಿರೋಧಿಸುವ ಹಕ್ಕಿದೆ. ಇಸ್ರೇಲಿಗಳು ಪ್ಯಾಲೆಸ್ತೀನಿಯಾದವರಿಂದ ಕೊಲ್ಲಲ್ಪಟ್ಟಾಗ ಪಾಶ್ಚಿಮಾತ್ಯ ರಾಜಕಾರಣಿಗಳು ಕಣ್ಣೀರು ಹಾಕಿ ದಾಳಿಯನ್ನ ಖಂಡಿಸಿದರು. ಆದರೆ ಇಸ್ರೇಲಿಗಳು ಪ್ಯಾಲೆಸ್ತೀನಿಯಾದವರನ್ನು ಕೊಂದಾಗ ದುಃಖವನ್ನು ವ್ಯಕ್ತಪಡಿಸಲು ನಿರಾಕರಿಸಿದರು ಎನ್ನುವ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳನ್ನೂ ಟೀಕಿಸಿದ್ದಾರೆ.

ಇನ್ನೊಂದು ವಿಶೇಷ ಅಂದ್ರೆ ಮಧ್ಯಪ್ರಾಚ್ಯದಿಂದ ಬಂದ ರಾಜಮನೆತನದ ಯಾವುದೇ ಸದಸ್ಯರು ರಾಜಕುಮಾರ ತುರ್ಕಿ ಅಲ್ ಫೈಜಲ್​ರ ರೀತಿ ಬಹಿರಂಗವಾಗಿ ಯುದ್ಧದ ಬಗ್ಗೆ ಮಾತನಾಡಿಲ್ಲ. ಇದರ ಹೊರತಾಗಿ ಫೈಜಲ್ ಅವರ ಹೇಳಿಕೆಯನ್ನ ವಿಮರ್ಷಿಸಿ ನೋಡಿದ್ರೆ ಕಲಿಯಬೇಕಾದ್ದು ಇತರೆ ರಾಷ್ಟ್ರಗಳು ಕಲಿಯಬೇಕಾದ್ದು ಬಹಳಷ್ಟಿದೆ. ಯುದ್ಧ ನಡೆದಾಗ ನಿಮ್ಮ ಪರ ನಾವಿದ್ದೇವೆ ಎನ್ನುವ ಮೂಲಕ ಯುದ್ಧದಾಹಕ್ಕೆ ಬೆಂಬಲ ನೀಡಬಾರದು. ಯುದ್ಧ ನಡೆಯುತ್ತಿರೋದು ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆಯೇ ಆದ್ರೂ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಸಾವನ್ನಪ್ಪಿದೆ. ಲೆಕ್ಕವಿಲ್ಲದಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ. ಕೊನೆಗೊಂದು ದಿನ ಯುದ್ಧ ನಿಂತರೂ ಅದರಿಂದಾದ ಪರಿಣಾಮಗಳು ಇನ್ನೆಂದೂ ಸರಿಹೋಗಲಾರದು. ಹೀಗಾಗಿ ಸೌದಿ ಅರೇಬಿಯಾದ ರಾಜಕುಮಾರನ ಮಾತಿನ ಅರ್ಥವನ್ನ ಎಲ್ಲಾ ರಾಷ್ಟ್ರಗಳು ಅರ್ಥೈಸಿಕೊಳ್ಳಬೇಕಿದೆ.

Sulekha